ಹಾಪ್‌ಕಾಮ್ಸ್‌ಗೆ ಆಗಬೇಕಿದೆ ಮೇಜರ್ ಸರ್ಜರಿ
ಭಾರತ ದೇಶದ ತೋಟಗಾರಿಕೆ ಕ್ಷೇತ್ರದ ಪಿತಾಮಹ ದಿವಂಗತ ಎಂ.ಹೆಚ್. ಮರಿಗೌಡರವರ ಕನಸಿನ ಕೂಸಾದ ಹಾಪ್‌ಕಾಮ್ಸ್ ಇಂದು ಅವ್ಯವಸ್ಥೆಯ ಆಗರವಾಗಿರುವುದು ಬೇಸರದ ಸಂಗತಿ. ಸಹಕಾರಿ ತತ್ವದ ಅಡಿಯಲ್ಲಿ ಈ ಸಂಸ್ಥೆ ಸ್ಥಾಪನೆಯಾಗಿದ್ದು, ಇಂದು ಇದರ ಮೂಲ ಆಶಯವೇ ಹಾಳಾಗಿರುತ್ತದೆ. ರೈತರ ಬೆಳೆಗಳಿಗೆ ಉತ್ತಮವಾದಂತಹ ಮಾರುಕಟ್ಟೆ ಮತ್ತು ಗ್ರಾಹಕರಿಗೆ ಉತ್ತಮ ರೀತಿಯ ಬೆಲೆಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ದೊರಕಿಸಿ ಕೊಡುವಂತಹ ಇದರ ಪ್ರಮುಖವಾದಂತಹ ಉದ್ದೇಶವೇ ಇಂದು ಮಾಯವಾಗಿರುತ್ತದೆ. ಇದಕ್ಕೆ ಇಲಾಖೆಯಲ್ಲಿನ ಅಧಿಕಾರಿಗಳು ಮತ್ತು ನೌಕರರ ನಡುವೆ ಸಮನ್ವಯದ ಕೊರತೆಯೂ ಪ್ರಮುಖ ಕಾರಣವಾಗಿರುತ್ತದೆ. ಆರಂಭದಲ್ಲಿ ಸಹಕಾರಿ ಕ್ಷೇತ್ರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ ಈಗ ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಇತ್ತೀಚೆಗೆ ದೃಶ್ಯ ಮಾಧ್ಯಮಗಳಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಸಾರ್ವಜನಿಕರ ಮತ್ತು ಸರ್ಕಾರದ ಗಮನವನ್ನು ಸೆಳೆದಿರುತ್ತಾರೆ. ಇಲ್ಲಿನ ಅಧಿಕಾರಿವರ್ಗ ಸರಿಯಾದಂತಹ ರೀತಿಯಲ್ಲಿ ಕರ್ತವ್ಯವನ್ನು ನಿರ್ವಹಿಸುವುದರಲ್ಲಿ ವಿಫಲರಾಗಿರುವುದು ಕಂಡು ಬರುತ್ತದೆ. ಇವರಲ್ಲಿ ವಿಜಿಲೆನ್ಸ್ ಸೆಲ್ ಇದ್ದರೂ ಸಹ ಇವರುಗಳು ಸಕ್ರಿಯವಾಗಿಲ್ಲದ ಕಾರಣ ಅವ್ಯವಹಾರಗಳು ನಡೆಯುತ್ತಲೇ ಇದೆ. ಎಲ್ಲಾ ತಪ್ಪುಗಳಿಗೆ ಕೇವಲ ನೌಕರರನ್ನು ದೂರುವುದರ ಬದಲಿಗೆ ಇಲಾಖೆಯಲ್ಲಿನ ವ್ಯವಸ್ಥೆ ಬಗ್ಗೆ ಸರ್ಕಾರ ಪ್ರಮುಖವಾಗಿ ಗಮನವನ್ನು ಹರಿಸಿ ಇದಕ್ಕೆ ಸರ್ಜರಿ ನಡೆಸಬಹುದಾಗಿದೆ. ಇಲಾಖೆಗೆ ನಿರ್ದೇಶಕರನ್ನಾಗಿ ಕೇವಲ ಸಾಮಾನ್ಯ ಪದವೀಧರರನ್ನು ನೇಮಕ ಮಾಡುವುದರ ಬದಲಿಗೆ ಒಬ್ಬ ಐಎಎಸ್ ಶ್ರೇಣಿಯ ಅಧಿಕಾರಿಯನ್ನು ನಿಯೋಜಿಸಿದರೆ ಆಡಳಿತ ವ್ಯವಸ್ಥೆ ಬಿಗಿಯಾಗುತ್ತದೆ. ರೈತರ ಬೆಳೆಗಳನ್ನು ಖರೀದಿಸಬೇಕೆಂಬ ನಿಯಮವಿದ್ದರೂ, ಮಾರುಕಟ್ಟೆಯಿಂದ ಪ್ರತಿದಿನ ಖರೀದಿ ನಡೆಯುತ್ತಿರುವುದೂ ಸಹ ರೈತರಿಗೆ ಆಗುತ್ತಿರುವ ಅನ್ಯಾಯವಾಗಿದೆ. ಇಲ್ಲಿ ನೌಕರರ ಅನೇಕ ಸಮಸ್ಯೆಗಳ ಬಗ್ಗೆಯೂ ಮಾನವೀಯತೆಯ ಆಧಾರದ ಮೇಲೆ ಗಮನ ಹರಿಸಬೇಕಾಗಿದೆ. ರಿಲಯನ್ಸ್ ಫ್ರೆಷ್, ವಾಲ್‌ಮಾರ್ಟ್, ಹೀಗೆ ಅನೇಕ ವ್ಯವಸ್ಥೆಗಳು ಮಾರುಕಟ್ಟೆಯಲ್ಲಿರುವುದರಿಂದ ಹಾಪ್ ಕಾಮ್ಸ್ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿ ಗ್ರಾಹಕರ ಹಿತವನ್ನು ಸರಿಯಾಗಿ ಕಾಪಾಡದಿದ್ದರೆ ಇಲಾಖೆಯನ್ನೇ ಮುಚ್ಚುವಂತಹ ಸ್ಥಿತಿ ಬರುತ್ತದೆ. ಅನೇಕ ಹಾಪ್‌ಕಾಮ್ಸ್ ಮಳಿಗೆಗಳು ಓಬಿರಾಯನ ಕಾಲದ ಕಟ್ಟಡಗಳಂತಿವೆ. ನಗರದಲ್ಲಿರುವ ಎಲ್ಲ ಹಾಪ್‌ಕಾಮ್ಸ್ ಮಳಿಗೆಗಳು ಕನಿಷ್ಟ ಮಟ್ಟದ ಸೌಲಭ್ಯಗಳನ್ನು ಹೊಂದಬೇಕು. ಹಣ್ಣು ಮತ್ತು ತರಕಾರಿಗಳನ್ನು ಕೆಡದಂತೆ ಸಂರಕ್ಷಿಸಲು ಸಂಸ್ಕರಣೆಯ ವ್ಯವಸ್ಥೆಗಳಿರಬೇಕು. ಎಲೆಕ್ಟ್ರಾನಿಕ್ ತೂಕದ ಯಂತ್ರಗಳಿರಬೇಕು. ಪ್ರತಿದಿನ ದರದ ಪಟ್ಟಿ ಪ್ರಕಟವಾಗಬೇಕು. ಒಬ್ಬ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ನೇಮಿಸಿ ಗ್ರಾಹಕರ ಮತ್ತು ನೌಕರರ ದೂರುಗಳನ್ನು ಆಲಿಸುವ ವ್ಯವಸ್ಥೆಯಾಗಬೇಕು. ಇವರಿಗೆ ನೀಡುತ್ತಿರುವ ಸಂಬಳದ ಬಗ್ಗೆಯೂ ಮತ್ತೊಮ್ಮೆ ಮರುಚಿಂತನೆ ನಡೆಯಬೇಕು. ಈ ನಿಟ್ಟಿನಲ್ಲಿ ಮಾನ್ಯ ತೋಟಗಾರಿಕಾ ಸಚಿವರು ಗಮನ ಹರಿಸಿ ಕೂಡಲೇ ಅಧಿಕಾರಿಗಳ ಮತ್ತು ನೌಕರರ ಸಂಘದ ಪ್ರಮುಖರ ಸಭೆಯನ್ನು ನಡೆಸಿ ಸರ್ಜರಿ ನಡೆಸದಿದ್ದರೆ, ಗ್ರಾಹಕ ಸ್ನೇಹಿ ಹಾಪ್‌ಕಾಮ್ಸ್ ಅಸ್ತಿತ್ವವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
-ಕೆ.ಎಸ್. ನಾಗರಾಜ್, ಬೆಂಗಳೂರು
ಇವರೆಂಥ ಅಧಿಕಾರಿಗಳು!
ಬಾಗೇಪಲ್ಲಿಯಲ್ಲಿ ವೈದ್ಯರ ನೇತೃತ್ವದಲ್ಲೇ ಕಾರ್ಮಿಕರ ತಲೆ ಮೇಲೆ ಮಲ ಹೊರಿಸಿದ ಸುದ್ದಿ ಓದಿ ಆಘಾತವಾಯಿತು. ಸಮಾಜದ ಇಂಥಾ ಅನಿಷ್ಟ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸಬೇಕಾದಂತಹ ಸರ್ಕಾರಿ ಅಧಿಕಾರಿಗಳೇ ಇಂತಹ ಹೇಯ ಕಾರ್ಯ ಮಾಡಿಸಿದ್ದು ಮಾನ್ಯ ರಾಷ್ಟ್ರೀಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಶಿವಣ್ಣನವರು ಈ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಶಿಕ್ಷಿಸದಿದ್ದಲ್ಲಿ ಇಂತಹ ಕೃತ್ಯಗಳು ಮತ್ತೆ ನಡೆಯುವುದರಲ್ಲಿ ಅನುಮಾನವಿಲ್ಲ.
-ನಾಗೇಂದ್ರಮೂರ್ತಿ ಸೋಸಲೆ, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

