ಅಹಿಂದ ಹೋರಾಟ ಪ್ರಜ್ಞೆ ಸಿದ್ದರಾಮಯ್ಯ ಪ್ರಣಾಳಿಕೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಇನ್ನೂ ತನ್ನ ಚುನಾವಣೆ ಪ್ರಣಾಳಿಕೆಯನ್ನು ಸಿದ್ಧಪಡಿಸಿಲ್ಲ. ಸಾಮಾನ್ಯವಾಗಿ ಕಾಂಗ್ರೆಸ್ಸಿನಲ್ಲಿ ರಾಷ್ಟ್ರೀಯ ಪ್ರಣಾಳಿಕೆಯ ಜತೆಯಲ್ಲೇ ಸ್ಥಳೀಯ ಪರಿಸ್ಥಿತಿಯನ್ನು ಗಮನಿಸಿ, ಪಕ್ಷದ ನೀತಿ, ಸಿದ್ಧಾಂತಕ್ಕೆ ಧಕ್ಕೆ ಬಾರದಂತೆ ಪ್ರಾದೇಶಿಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಬಹುದು. ಅದಕ್ಕೆ ಅವಕಾಶವಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅವರ ಪಕ್ಷದ ಒಂದು ಬಹಿರಂಗ ಸಭೆಯಲ್ಲಿ ಕರ್ನಾಟಕದಲ್ಲಿ ಚುನಾವಣೆ ಹೋರಾಟಕ್ಕೆ ತಮಗೆ ಅಹಿಂದ ಪ್ರಜ್ಞೆಯೇ ಬುನಾದಿ ಎಂದು ಸ್ಪಷ್ಟಪಡಿಸಿರುವಂತಿದೆ. ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಇಂದಿರಾಗಾಂಧಿ ಅವರ ಕಾಲದಿಂದಲೂ (1971 ರ ಗರೀಬಿ ಹಟಾವೋ) ಕಾಂಗ್ರೆಸ್ ಹಿಂದುಳಿದ ಜಾತಿ ಪಂಗಡಗಳಿಗೆ ಸಾಮಾಜಿಕ ನ್ಯಾಯ ವಿತರಣೆಯ ಫಲವನ್ನು ದೊರಕಿಸಿ ಕೊಡುವ ಭರವಸೆಯನ್ನು ಮುಂದಿಟ್ಟು ಚುನಾವಣೆಯಲ್ಲಿ ಗೆದ್ದಿರುವುದೂ ನಿಜ.
ಹಿಂದುಳಿದ ಜಾತಿ ಪಂಗಡಗಳಿಗೆ ಶಿಕ್ಷಣ, ಉದ್ಯೋಗ ವಲಯದಲ್ಲಿ ಲಭ್ಯವಾಗಿರುವಂತೆಯೇ ರಾಜಕೀಯ ವಲಯದಲ್ಲಿ ಮೀಸಲು ಸ್ಥಾನಗಳಿರಬೇಕೆನ್ನುವ ಬೇಡಿಕೆಯನ್ನು ಬೆಂಬಲಿಸಿ ಅನೇಕ ಕಡೆಗಳಲ್ಲಿ ಚಳವಳಿಗಳೇ ನಡೆದಿವೆ. ಕೆಲವು ರಾಜ್ಯಗಳಲ್ಲಿ ಕೆಲವು ಜಾತಿಗಳಿಗೆ ಸೇರಿದವರು ಅನಧಿಕೃತವಾಗಿ, ಜನಸಂಖ್ಯೆಯ ಸ್ವರೂಪದ ಆಧಾರದ ಮೇಲೆ, ಮೀಸಲು ಸ್ಥಾನಗಳ ಸೌಲಭ್ಯವನ್ನು ಪಡೆದಿರುವಂತೆಯೇ ಆಗಿರುವುದೂ ನಿಜ.
ಈ ಮಾತಿಗೆ ಉತ್ತರಪ್ರದೇಶ, ಬಿಹಾರ, ತಮಿಳುನಾಡುಗಳು ಒಳ್ಳೆಯ ಉದಾಹರಣೆ. ಈಗ ಸಿದ್ದರಾಮಯ್ಯ ಅವರು ಕರ್ನಾಟಕದಲ್ಲೂ ಅದೇ ಪ್ರಯೋಗವನ್ನು ಯಶಸ್ವಿಗೊಳಿಸುವ ಚಿಂತನೆಯನ್ನು ಬಹಿರಂಗವಾಗಿ ಪ್ರಕಟಿಸಿದ್ದಾರೆ. ಭಾನುವಾರದ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಸಹಕಾರ ಸಂಘಗಳಲ್ಲಿ, ವಸತಿ ನಿರ್ಮಾಣ ಯೋಜನೆಗಳಲ್ಲೂ ಸಾಮಾಜಿಕ ನ್ಯಾಯ ಆಧರಿತ ಮೀಸಲು ನಿಯಮದ ಜಾರಿಯ ಪರವಾಗಿ ಮಾತಾಡಿದ್ದಾರೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ರೂಪಗೊಂಡ, ಭೂ ಸುಧಾರಣೆ ನೀತಿ, ಸರಿಯಾದ ರೀತಿಯಲ್ಲಿ, ಯಶಸ್ವಿಯಾಗಿ ಜಾರಿಗೆ ಬಂದಿದ್ದರೆ, ಈ ವೇಳೆಗೆ ಭೂಮಾಲಿಕರ ವರ್ಗದಲ್ಲಿ ಇತರೆ ಹಿಂದುಳಿದ ಜಾತಿಗಳಿಗೆ ಸೇರಿದ ಜನರೇ ಬಹು ಸಂಖ್ಯಾತರಾಗಬಹುದಾಗಿತ್ತು. ನಾಲ್ಕು ದಶಕಗಳ ಕಾಲದ ಭೂ ಸುಧಾರಣೆ ಕಾರ್ಯಕ್ರಮ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ನ್ಯಾಯ ನೀಡಿಕೆಯ ವಿಚಾರದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸನ್ನು ಗಳಿಸಲಿಲ್ಲ.
ದೇಶದಲ್ಲಿ ಈಗ, ಒಂದು ಹಂತದವರೆಗೆ ಮೀಸಲು ನೀತಿಯನ್ನು ಹೆಚ್ಚು ಕಡಿಮೆ ಎಲ್ಲ ಪಕ್ಷಗಳೂ, ನಂಬಿಕೆಯಿಂದಲೋ ಅಥವಾ ಪರಿಸ್ಥಿತಿಯ ಒತ್ತಡದ ಪರಿಣಾಮವಾಗಿಯೋ ಒಪ್ಪಿದ್ದೂ ಆಗಿದೆ. ಆ ನೀತಿಯನ್ನು ಇನ್ನೊಂದು ಆಯಾಮಕ್ಕೆ ಕೊಂಡೊಯ್ಯುವುದು ಅಷ್ಟು ಸುಲಭವಲ್ಲ. ಅನೇಕ ರಾಜ್ಯಗಳಲ್ಲಿ ಹಿಂದೆ ಶೋಷಿತ ಸಮಾಜಕ್ಕೆ ಸೇರಿದ್ದ ಸಮುದಾಯಗಳು ಈಗ ರಾಜಕೀಯ ಅಧಿಕಾರವನ್ನು ಭದ್ರವಾಗಿ ಹಿಡಿದುಕೊಂಡಿರುವುದೂ ನಿಜ. ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಡು ಕಷ್ಟ. ಇದರ ಜತೆಯಲ್ಲೇ, ಸಾಮಾನ್ಯವಾಗಿ ಮೀಸಲು ನೀತಿಯಲ್ಲಿ ಮೀಸಲು ಸ್ಥಾನಗಳು ಒಟ್ಟು ಸ್ಥಾನಗಳಲ್ಲಿ ಅರ್ಧಕ್ಕಿಂತ ಹೆಚ್ಚಿರಬಾರದು ಎನ್ನುವ ನಿಯಮವೂ ಇದೆ. ಈಗಿನ ಸಂವಿಧಾನದಂತೆ, ಪರಿಶಿಷ್ಟ ಜಾತಿ ಪಂಗಡಗಳ ಜನರಿಗೆ, ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಸ್ಥಾನಗಳಿರಲೇ ಬೇಕು. ಅದರ ಜತೆಗೆ ಮೀಸಲು ಸ್ಥಾನಗಳಿಗೆ ಅರ್ಹತೆ ಪಡೆಯಲು ಹೊಸ ವರ್ಗಗಳ ಒತ್ತಡವೂ ಮುಂದೆ ಬಂದಾಗ, ಅದನ್ನು ನಿಭಾಯಿಸುವುದಾದರೂ ಹೇಗೆ ? ಸಂವಿಧಾನದ ನಿಯಮಗಳನ್ನೇ ಬದಲಾಯಿಸುವುದು ಸರಿಯೇ ? ಸಾಧ್ಯವೇ ?
ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಎಷ್ಟು ಆಳವಾಗಿ ಅಧ್ಯಯನ ನಡೆಸಿ, ತಮ್ಮ ಚಿಂತನೆಯನ್ನು ರೂಪಿಸಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಚುನಾವಣೆ ಗೆಲ್ಲುವುದಕ್ಕೆ ಅಹಿಂದ ಶಕ್ತಿಗಳ ಬೆಂಬಲವಷ್ಟೇ ಸಾಕು ಎನ್ನುವ ಸ್ಥಿತಿ ಇಲ್ಲ. ಕೆಲವು ಪ್ರದೇಶಗಳಲ್ಲಿ ಅಹಿಂದ ಘೋಷಣೆ ಬೇಕಾಗಬಹುದು. ಕೆಲವು ಕಡೆಗಳಲ್ಲಿ ಅದು ಜಾತೀಯತೆಯ ಪ್ರದರ್ಶನವೂ ಆಗಬಹುದು. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ಪ್ರದೇಶಕ್ಕೆ ಸಿದ್ದರಾಮಯ್ಯ ಕಾಲಿಟ್ಟಿದ್ದಾರೆ ಎನ್ನುವುದಂತೂ ನಿಜ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

