ವಂಚಕನಿಗೆ ಊಟ ಹಾಕಿದ ರಾಜಗೋಪಾಲಾಚಾರಿ
ಭಾರತ ರತ್ನ ಚಕ್ರವರ್ತಿ ರಾಜಗೋಪಾಲಾಚಾರಿಯವರು ನಮ್ಮ ಸ್ವತಂತ್ರ ಭಾರತದ ಗವರ್ನರ್ ಜನರಲ್ ಆಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಲೇಖಕರಾಗಿ ಮತ್ತು ನ್ಯಾಯವಾದಿಗಳಾಗಿ ಹೆಸರು ಗಳಿಸಿದ್ದರು. ನಂತರದ ದಿನಗಳಲ್ಲಿ ರಾಜ್ಯಪಾಲರು, ಮದ್ರಾಸಿನ ಮುಖ್ಯಮಂತ್ರಿಗಳೂ ಆದರು. ನಂತರ ತಮ್ಮದೇ ಆದ ಸ್ವತಂತ್ರ ಪಕ್ಷವನ್ನು ಕಟ್ಟಿದರು. ಗಾಂಧೀಜಿಯ ಅನುಯಾಯಿಗಳಾದ ರಾಜಾಜಿ ತಮ್ಮ ಮಗಳು ಲಕ್ಷ್ಮಿಯನ್ನು ಗಾಂಧೀಜಿಯವರ ಮಗ ದೇವದಾಸ ಗಾಂಧಿಗೆ ಕೊಟ್ಟು ಸಂಬಂಧವನ್ನೂ ಬೆಳೆಸಿದರು. ಅವರು ಒಮ್ಮೆ ಸೇಲಂನಲ್ಲಿ ವಕೀಲ ವೃತ್ತಿಯನ್ನವಲಂಬಿಸಿಕೊಂಡು ಇದ್ದಾಗ ಅವರ ಕಚೇರಿಗೆ ಆಗಂತುಕನೊಬ್ಬ ಬಂದು, ತಾನು ಪಾಲ್‌ಘಾಟಿನ ಶಾಲೆಯೊಂದರ ಅಧ್ಯಾಪಕನಾಗಿದ್ದು, ತಿರುಪತಿಯಾತ್ರೆ ಮುಗಿಸಿಕೊಂಡು ಸಂಸಾರ ಸಮೇತ ಹಿಂದಿರುಗುವಾಗ ಹಣ ಕಳೆದುಕೊಂಡಿರುವುದಾಗಿಯೂ, ಆದ್ದರಿಂದ ತನಗೆ ಊರಿಗೆ ಹೋಗಲು ಹಣಸಹಾಯ ಮಾಡಬೇಕೆಂದು ಅಂಗಲಾಚಿ ಕೇಳಿಕೊಂಡ. ಅವನ ಪೂರ್ವಾಪರಗಳನ್ನೆಲ್ಲಾ ವಿಚಾರಿಸಿಕೊಂಡು, ಆತನ ಕುಟುಂಬವರ್ಗದವರಿಗೆಲ್ಲಾ ಸ್ನಾನ, ಊಟಕ್ಕೆ ವ್ಯವಸ್ಥೆ ಮಾಡಿ ನ್ಯಾಯಾಲಯಕ್ಕೆ ತೆರಳಿದರು. ಪಾಲ್‌ಘಾಟಿನ ತಮ್ಮ ಗೆಳೆಯರೊಬ್ಬರಿಗೆ ತಂತಿ ಕಳುಹಿಸಿ, ಅವನ ಪೂರ್ವಾಪರವನ್ನೆಲ್ಲಾ ವಿಚಾರಿಸಿದಾಗ ಆತ ಅಲ್ಲಿ ಯಾವ ಶಾಲೆಯಲ್ಲಿಯೂ ಅಧ್ಯಾಪಕನಾಗಿರದೆ, ಅವನೊಬ್ಬ ಮೋಸಗಾರ ಎಂದು ತಿಳಿಯಿತು. ತಕ್ಷಣ ಈ ಬಗ್ಗೆ ಪೊಲೀಸರಿಗೆ ದೂರುನೀಡಿದರು. ಪೊಲೀಸು ಅಧಿಕಾರಿ ಬಂದು ಆ ನಕಲಿ ಅಧ್ಯಾಪಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶರು ವಿಚಾರಣೆ ನಡೆಸಿ, ಆತ ದೋಷಿಯೆಂದು ತೀರ್ಪು ನೀಡಿದ್ದಲ್ಲದೆ, ಇನ್ನೂರು ರುಪಾಯಿ ದಂಡವನ್ನೂ ವಿಧಿಸಿದರು. ನ್ಯಾಯಾಲಯದಲ್ಲಿಯೇ ಇದ್ದ ರಾಜಾಜಿಯವರು ಆತ ಇನ್ನೂರು ರುಪಾಯಿ ಜುಲ್ಮಾನೆ ನೀಡಲು ಅಸಮರ್ಥನಾಗಿರುವುದರಿಂದ ಆತನ ಮೇಲೆ ದಯೆತೋರಬೇಕು ಎಂದು ವಿನಂತಿಸಿದರು. ನ್ಯಾಯಾಧೀಶರು ಜುಲ್ಮಾನೆಯ ಹಣವನ್ನು ಐವತ್ತು ರುಪಾಯಿಗಳಿಗೆ ತಗ್ಗಿಸಿದರು. ಮತ್ತೆ ರಾಜಾಜಿಯವರು ಅಷ್ಟು ಹಣವನ್ನು ನೀಡಲೂ ಸಹ ಅತನಿಗೆ ಸಾಧ್ಯವಾಗಲಿಕ್ಕಿಲ್ಲವೆಂದು ಕೋರಿಕೊಂಡಾಗ ಕೊನೆಗೆ ನ್ಯಾಯಾಧೀಶರು ದಂಡವನ್ನು ಹತ್ತು ರುಪಾಯಿಗಳಿಗೆ ಇಳಿಸಿದರು. ಆಗ ರಾಜಾಜಿಯವರೇ ಆ ಹತ್ತು ರುಪಾಯಿಗಳನ್ನು ನ್ಯಾಯಾಲಯಕ್ಕೆ ತುಂಬಿ ಆ ವ್ಯಕ್ತಿಯನ್ನು ಕರೆದೊಯ್ದರು. ಮನೆಯಲ್ಲಿ ಆತನಿಗೂ ಮತ್ತು ಆತನ ಕುಟುಂಬವರ್ಗದವರಿಗೂ ಒಳ್ಳೆಯ ಭೋಜನ ಮಾಡಿಸಿ, ದಾರಿ ಖರ್ಚಿಗೂ ಹಣ ನೀಡಿ ಕಳುಹಿಸಿಕೊಟ್ಟರು. ಹಾಗೆ ಕಳುಹಿಸುವಾಗ ಆ ರೀತಿ ಮತ್ತೆಂದೂ ವರ್ತಿಸಬಾರದೆಂಬ ಎಚ್ಚರಿಕೆಯ ಮಾತನ್ನೂ ಹೇಳಿ ಕಳುಹಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
ajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

