ಬಡಗನಾಡು ಬ್ರಾಹ್ಮಣರು- ಇನ್ನಷ್ಟು ಮಾಹಿತಿ
'ಜಾತಿ ಜ್ಯೋತಿ' ಅಂಕಣದಲ್ಲಿ ಕೆ.ವಿ. ಪ್ರಭಾಕರ್ ಅವರು ಬರೆದಿರುವ ಬಡಗನಾಡು ಬ್ರಾಹ್ಮಣರ ಕುರಿತಾದ ಲೇಖನ (11.1.2014) ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನೀಡಲು ಬಯಸುತ್ತೇನೆ.
ಈ ಹಿಂದೆ ಬಡಗನಾಡು ಬ್ರಾಹ್ಮಣರ ಕುರಿತಂತೆ ಕರ್ಲಮಂಗಲ ಶ್ರೀಕಂಠಯ್ಯ, ಟಿ.ಎಸ್. ನಾಗಭೂಷಣರಾವ್ ಹಾಗೂ ಬಿ.ವಿ. ಗೋಪಾಲಕೃಷ್ಣ ಸಾಕಷ್ಟು ವಿಷಯ ಸಂಗ್ರಹಣೆ ಮಾಡಿ ಪುಸ್ತಕಗಳನ್ನು ಬರೆದಿದ್ದಾರೆ. ಪ್ರಾಯಶಃ ಇದೇ ಪುಸ್ತಕಗಳನ್ನು, ಹಾಲಿ ಬಡಗನಾಡು ಸಂಘದ ಅಧ್ಯಕ್ಷರಾಗಿರುವ ಬಿ.ಎಸ್. ರವಿಶಂಕರ ಅವರ ಹೇಳಿಕೆಗಳನ್ನು ಆಧರಿಸಿ ಕೆ.ವಿ. ಪ್ರಭಾಕರ ಅವರು ಲೇಖನ ಬರೆದಿದ್ದಾರೆ. ಆದರೆ ಮೇಲೆ ಕಾಣಿಸಿದ ಲೇಖಕರು ಬಡಗನಾಡು ವೈಷ್ಣವ ಸಂಪ್ರದಾಯಸ್ಥರ ವಿಷಯವನ್ನು ವಿಸ್ತೃತವಾಗಿ ತಿಳಿಸುವ ಪ್ರಯತ್ನವನ್ನೇ ಮಾಡಿಲ್ಲವೆನ್ನಬಹುದು. ಬಡಗನಾಡು ಬ್ರಾಹ್ಮಣರೆಂದರೆ ಸಾರಾಸಗಟಾಗಿ ಶೈವ ಸಂಪ್ರದಾಯಸ್ಥರು - ಎಂಬುದು ಲೇಖನದಲ್ಲಿ ಕಾಣಿಸಿರುವ ಸ್ಪಷ್ಟ ಅಭಿಪ್ರಾಯ, ಇದು ಸರಿಯಲ್ಲ.
ಬಡಗನಾಡು ವೈಷ್ಣವರು ಅಥವಾ ಮಾಧ್ವರು, ಸೋಸಲೆ ವ್ಯಾಸರಾಜ ಮಠ ಇಲ್ಲವೇ ಮುಳಬಾಗಿಲು ಶ್ರೀಪಾದರಾಜ ಮಠಕ್ಕೆ ನಡೆದುಕೊಳ್ಳುವವರಾಗಿದ್ದು, ಇವರಲ್ಲಿ ಹೆಚ್ಚಿನ ಸಂಖ್ಯೆಯವರು ಮೈಸೂರು, ನಂಜನಗೂಡು, ಚಿತ್ರದುರ್ಗ, ಬಳ್ಳಾರಿ, ಮಧುಗಿರಿ, ಕೊರಟಗೆರೆ, ಗೌರಿಬಿದನೂರು, ದೊಡ್ಡಬಳ್ಳಾಪುರ ಗಳಲ್ಲದೆ, ಆಂಧ್ರ ಪ್ರದೇಶದ ಅನಂತಪುರ, ಕಡಪ, ಕರ್ನೂಲು- ಜಿಲ್ಲೆಗಳಲ್ಲೂ ಕಾಣಸಿಗುತ್ತಾರೆ. ಯುವಜನಾಂಗದವರು ದೊಡ್ಡ ದೊಡ್ಡ ನಗರಗಳನ್ನು ಸೇರಿರಬಹುದು, ವ್ಯಾಸರಾಜ ಮಠಕ್ಕೆ ನಡೆದುಕೊಳ್ಳುವ ಕೆಲವರು ಮಾತ್ರ ನಂಜನಗೂಡಿನ ಶ್ರೀಕಂಠೇಶ್ವರನ ಒಕ್ಕಲಿನವರು. ಉಳಿದಂತೆ ಬಹುಮಂದಿ ಶಿವನನ್ನು ಕುಲದೇವನಾಗಿ ಉಳ್ಳವರಲ್ಲ. ಇವರ ಆರಾಧ್ಯ ದೈವ - ತಿರುಪತಿ ಶ್ರೀನಿವಾಸ, ಲಕ್ಷ್ಮೀನರಸಿಂಹ ಇಲ್ಲವೆ ಆಂಜನೇಯ. ಬಡಗನಾಡು ವೈಷ್ಣವರು ಶಿವರಾತ್ರಿಯಲ್ಲಿ ಉಪವಾಸ ಆಚರಿಸುವುದಿಲ್ಲ. ಆದರೆ ಅಂದು ಶಿವಾಲಯಕ್ಕೆ ಹೋಗಿಬರುವುದು ಕಡ್ಡಾಯ. ಮದುವೆಯಾದ ಹೆಣ್ಣು ಮಕ್ಕಳಿಗೆ ಸಂಕ್ರಾಂತಿ ಹಾಗೂ ಗೌರಿ ವಿಶೇಷ ಹಬ್ಬಗಳು. ಇಂಥ ಕೆಲವೊಂದು ಸಂಪ್ರದಾಯ ಭೇದಗಳಿದ್ದರೂ ಸ್ಮಾರ್ಥ ಮತ್ತು ಮಾಧ್ವ ಸಂಪ್ರದಾಯಸ್ಥ ಬಡಗನಾಡು ಬ್ರಾಹ್ಮಣರಲ್ಲಿ ಪರಸ್ಪರ ವೈವಾಹಿಕ ಸಂಬಂಧಗಳು ಬಹು ಹಿಂದಿನಿಂದಲೂ ನಡೆದುಕೊಂಡು ಬಂದಿವೆ.
ಪಾರಂಪರಿಕ ಕಸುಬಿನ ವಿಚಾರಕ್ಕೆ ಬರುವುದಾದರೆ ಹೆಚ್ಚಿನ ಬಡಗನಾಡು ಬ್ರಾಹ್ಮಣರು ವ್ಯವಸಾಯವನ್ನು ಅವಲಂಬಿಸಿದ್ದವರೆಂಬುದೂ, ಶ್ಯಾನುಭೋಗಿಕೆ ಹಿಡಿದಿದ್ದವರೆಂಬುದೂ ಸರಿಯಾಗಿದೆ. ಆದರೆ ಪೌರೋಹಿತ್ಯ ಹಿಡಿದ ಉದಾಹರಣೆ ಇಲ್ಲವೇ ಇಲ್ಲವೆನ್ನಬಹುದು.
ಲೇಖನದಲ್ಲಿ ಬನವಾಸಿಯ ಕದಂಬರ, ತಲಕಾಡಿನ ಗಂಗರಸರ ಮೂಲವನ್ನು ಬಡಗನಾಡು ಬ್ರಾಹ್ಮಣರೊಂದಿಗೆ ತಳಕು ಹಾಕಿಕೊಳ್ಳುವುದಕ್ಕೆ ನೀಡಿರುವ ಐತಿಹಾಸಿಕ ಸ್ಪಷ್ಟೀಕರಣ ಸಾಲದು. ಹಾಗೆಯೇ ಈ ಸಮುದಾಯದ ಪೂರ್ವಜರು ದೇವಾಲಯ ಕಟ್ಟಡಗಳ ರೂಪು ರೇಷೆ ಸಿದ್ಧಮಾಡುತ್ತಿದ್ದವರೆಂಬುದಕ್ಕೆ ಶಿವಮೊಗ್ಗೆಗೆ ಆ ಹೆಸರು ಬರಲು ಇದೇ ಸಮುದಾಯದವರು ಕಾರಣ - ಎಂಬುದಕ್ಕೆ ಸಾಕಷ್ಟು ಸಮರ್ಥನೆ ನೀಡುವ ಅವಶ್ಯಕತೆಯಿದೆ.
ಇವೆಲ್ಲ ಅಂಶಗಳನ್ನೂ ಗಮನದಲ್ಲಿರಿಸಿಕೊಂಡು ಬಡಗನಾಡು ಬ್ರಾಹ್ಮಣರ ಎಲ್ಲ ಒಳಪಂಗಡಗಳನ್ನು ಕುರಿತ ವಿಸ್ತೃತ ವಿವರಗಳ ಕೃತಿಯೊಂದು ಮುಂದೆ ಪ್ರಕಟಗೊಳ್ಳಲೆಂದು ಆಶಿಸುತ್ತೇನೆ.
-ಕೆ.ಎನ್. ಭಗವಾನ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

