ಅಪಾಯಕಾರಿ ಬಾಯ್ಚಪಲ
ದಶಕಗಳ ಹಿಂದೆ ಹೊರಗಿನ ತಿಂಡಿ ತಿನಿಸುಗಳನ್ನು ಜನ ತಿನ್ನುವ ಪ್ರಮಾಣ ಕಡಿಮೆ ಇತ್ತು. ಆದರೆ ಈಚಿನ ದಿನಗಳಲ್ಲಿ ಮನೆಯಲ್ಲಿ ತಿನ್ನುವುದೇ ಅಪರೂಪವಾಗಿ ಬಿಟ್ಟಿದೆ. ಅಷ್ಟರಮಟ್ಟಿಗೆ ಹೊರ ತಿಂಡಿ ಪ್ರಪಂಚ ಬೆಳೆದು ಬಿಟ್ಟಿದೆ. ಪಾನಿಪೂರಿ, ಗೋಬಿ ಮಂಚೂರಿ, ಫ್ರೈಡ್‌ರೈಸ್, ಕಬಾಬ್ ಹೀಗೆ ಹತ್ತು ಹಲವಾರು ರುಚಿಗಳನ್ನು ಹೊಂದಿರುವ ತಿನಿಸುಗಳು. ಮೊದಲು ಬೋಂಡಾ, ಮಸಾಲೆ ಮಂಡಕ್ಕಿಗಳಿಗಷ್ಟೇ ಸೀಮಿತವಾಗಿತ್ತು. ಆದರೆ ತಿನ್ನುವವರಾಗಲೀ, ಮಾರುವವರಾಗಲೀ ಸ್ವಚ್ಛತೆಗೆ ಗಮನ ಕೊಡುವುದು ಅಷ್ಟರಲ್ಲೇ ಇದೆ. ಮೊದಲು ಹೊರಗೇನಾದರೂ ತಿಂಡಿ ತಿಂದರೆ ಅನಾರೋಗ್ಯ ಉಂಟಾದೀತೆಂಬ ಭಯ ತುಸು ಹೆಚ್ಚೇ ಇತ್ತು. ಆದರೆ ಈಗ ಭಯ ಏನೂ ಇಲ್ಲ. ಹಸಿವು-ತಿನ್ನು ಅಷ್ಟೇ. ಈ ಗೀಳಿನಿಂದ ವ್ಯಾಪಾರಸ್ಥರಿಗೆ ಚೆನ್ನಾಗಿ ವ್ಯಾಪಾರವಾಗುತ್ತಿರುವುದು, ಜೀವನ ನಿರ್ವಹಣೆ ನಡೆಯುತ್ತಿರುವುದು ನಿಜ. ಆದರೆ ಸ್ವಚ್ಛತೆ, ಒಳ್ಳೆಯ ನೀರಿನ ಬಳಕೆ ಇವೆಲ್ಲದರ ಬಗ್ಗೆ ಗಮನ ಮುಖ್ಯ. ತಿನ್ನುವವರೂ ಸಹ ಈ ಬಗ್ಗೆ ವ್ಯಾಪಾರಸ್ಥರಿಗೆ ಹೇಳುವುದು -ಕೇಳುವುದು ಬಹುಮುಖ್ಯ. ಇಂತಹ ವಿಚಾರಣೆ ನಿಗಾ ಇದ್ದರೆ ಬಹುಶಃ ಒಂದು ಹಂತಕ್ಕೆ ಅವರೂ ಸ್ವಚ್ಛತೆಯ ಬಗ್ಗೆ ಗಮನ ಕೊಡಬಹುದೇನೋ ಎನ್ನುವ ಅನಿಸಿಕೆ. ಎಲ್ಲರೂ ಒಂದೇ ತೆರನಾಗಿರುವುದಿಲ್ಲ. ಕೆಲವರು ವ್ಯಾಪಾರದ ಜೊತೆ ಶುಚಿ-ರುಚಿಯ ಬಗ್ಗೆಯೂ ಗಮನ ಹರಿಸುವರು. ಅಲ್ಲಿ ಯಾವುದೇ ಅನುಮಾನಿಲ್ಲದೆ ಆರಾಮಾಗಿ ಆಹಾರ ಸೇವನೆ ಸಾಧ್ಯ. ಈ ಬಗ್ಗೆ ಎಲ್ಲಾ ವ್ಯಾಪಾರಸ್ಥರೂ ಗಮನ ಕೊಟ್ಟರೆ, ಕಾಲರ, ಮಲೇರಿಯಾದಂತಹ ಕೆಟ್ಟ ಕಾಯಿಲೆಗಳು ಬಾರದಂತೆ ತಡೆಯಬಹುದು ಮತ್ತು ನಂಬಿಕೆಯಿಂದ ಗ್ರಾಹಕರು ಅವರಲ್ಲಿ ವ್ಯವಹರಿಸಬಹುದು.
-ಅಂಬಿಕಾ ಮಂಜುನಾಥ ಸ್ವಾಮಿ, ಭದ್ರಾವತಿ.
ಒಳಗೆ ಸಲ್ಲದವರ ಬೀದಿ ನಾಟಕ
ಆಮ್ ಆದ್ಮಿ ಪಕ್ಷವೆಂಬುದೊಂದು ಹುಟ್ಟಿದಾಗ, ಒಂದು ರಾಜ್ಯವನ್ನು ಅಥವಾ ಸ್ಪಷ್ಟತೆಯಿಲ್ಲದೊಂದು ನಗರವನ್ನು ಆಳಬಹುದೆಂಬ ನಿರೀಕ್ಷೆ ಅದಕ್ಕೇ ಇರಲಿಲ್ಲ! ರಾಜಕೀಯವನ್ನು ನಾರುವಿಕೆಯಿಂದ ಪಾರು ಮಾಡಲು, ಅಣ್ಣಾ ಹಜಾರೆಯವರು ಕೈಗೊಂಡ ಜನಾಂದೋಲನದ ರಾಜಕೀಯ ಕವಲಾಗಿ ಬೇರ್ಪಟ್ಟಿದ್ದು, ಈ ಪಕ್ಷ. ಆದ್ದರಿಂದಲೇ ಇದು ರಾಜದಂಡದ ಮಟ್ಟಕ್ಕೆ ಆಲೋಚಿಸದೆ, ಕೇವಲ ಕಸಪೊರಕೆಯನ್ನು ಚಿಹ್ನೆಯಾಗಿ ಆರಿಸಿತು. ಅದನ್ನು ಮೆಚ್ಚಿದ ಬುದ್ಧಿವಂತ ಜನ, ಆಮ್ ಆದಿ ಪಕ್ಷವನ್ನು ಈ ಮಟ್ಟಕ್ಕೆ ಆರಿಸಿದ್ದು ಸಮರ್ಥ, ಪ್ರಾಮಾಣಿಕ ಪ್ರತಿಪಕ್ಷವಾಗಿ ಕೆಲಸ ಮಾಡಲೆಂದೇ ಹೊರತು ಬೀದಿ ರಂಪಕ್ಕಾಗಿ ಅಲ್ಲ. ಜನ ಹೆಚ್ಚಾಗಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಆಮ್ ಆದ್ಮಿ ಕಡೆ ವಾಲಿದರೇ ಹೊರತು, ಹೆಚ್ಚು-ಕಮ್ಮಿ ಗೆದ್ದೇ ಬಿಟ್ಟಿದ್ದ ಬಿಜೆಪಿ ವಿರುದ್ಧ ಅಲ್ಲ ಎನ್ನುವುದು ಸುಸ್ಪಷ್ಟ. ಆ ಗೋಡೆ ಬರಹವನ್ನೇ ಓದದೇ, ಬಲವಿಲ್ಲದಿದ್ದರೂ ಬೆಂಬಲ ಸರ್ಕಾರ ಮಾಡಲು ಹೊರಟಿದ್ದೇ ಕ್ರೇಜಿವಾಲರ ಮೊದಲ ಅವಿವೇಕ. ಅದಾದ ಮೇಲೆ ಕೇಂದ್ರದೊಡನೆ ಕಾನೂನು ಸಂಬಂಧಿ ತಕರಾರುಗಳನ್ನು, ಶಾಸನಾತ್ಮಕ ಕ್ರಮಗಳಿಂದ ಬಗೆಹರಿಸಿಕೊಳ್ಳಬೇಕಾಗಿತ್ತೇ ಹೊರತು, ಬೀದಿ ನಾಟಕವೇ ಬೇಕಿತ್ತು? ಏಕೆ ಬೇಕಿತ್ತೆಂದರೆ ಆಮ್ ಆದ್ಮಿ ಸರ್ಕಾರಕ್ಕೆ ಶಾಸನ ಸಭೆಯಲ್ಲಿ ತಲೆಗಳ ಸಂಖ್ಯೆ ಇರಲಿಲ್ಲ. ಈಗೇನಾಯಿತು? ನಾಗರಿಕ ಜನಜೀವನವನ್ನು ಒತ್ತೆ ಹಿಡಿದು, ಜನರನ್ನು ಗೋಳುಗುಟ್ಟಿಸಿ, ಒಂದಿಬ್ಬರು ನೌಕರರನ್ನು ಬಲವಂತ ರಜೆಯ ಮೇಲೆ ಕಳಿಸಲಾಯಿತು. ಇದು ಪಕ್ಷದ ಮಹತ್ವದ ಸಾಂವಿಧಾನಿಕ ಸಾಧನೆಯೇ?
-ಆರ್. ಕೆ. ದಿವಾಕರ, ಬೆಂಗಳೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

