ಆಧುನಿಕ ಏಕಲವ್ಯ

Updated on: 

ಮೂವತ್ತರ ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಅತಿ ಉನ್ನತ ಮಟ್ಟಕ್ಕೇರಿದ ಸಂಗೀತಗಾರರಲ್ಲಿ ಉಸ್ತಾದ್ ಕರೀಂ ಖಾನರೂ ಒಬ್ಬರು. ಅವರಿಗೆ ಅತ್ಯಂತ ಪ್ರಿಯವಾಗಿದ್ದ ರಾಗವೆಂದರೆ ಝಿಂಝೋಟಿ. ಆ ರಾಗದಲ್ಲಿ  "ಪಿಯಾ ಬಿನ ನಹಿ ಆವತ ಚೈನ" ಹಾಡು ತುಂಬಾ ಪ್ರಸಿದ್ಧವಾಗಿತ್ತು. ಒಮ್ಮೆ ಅವರ ಗಾಯನ ಮೊರಾದಾಬಾದ್ನಲ್ಲಿ ಏರ್ಪಾಟಾಗಿತ್ತು. ಕಿಕ್ಕಿರಿದು ಸೇರಿದ್ದ ಜನರೆಲ್ಲ ಸಂಗೀತವನ್ನಾಸ್ವಾದಿಸಿ ಮನೆಗೆ ತೆರಳಿದರೂ ಒಬ್ಬ ತರುಣ ಮಾತ್ರ ಇನ್ನೂ ಅಲ್ಲಿಯೇ ಕುಳಿತು ಭಾವನಾ ಲೋಕದಲ್ಲಿ ವಿಹರಿಸುತ್ತಿದ್ದ.
ಕರೀಂ ಖಾನರಿಗೆ ಸಾಥಿ ನೀಡುತ್ತಿದ್ದ ಇಮ್ತಿಯಾಜ್ ಅಹಮ್ಮದರು ಆ ತರುಣನನ್ನು ಹಲವು ಬಾರಿ ಮೊರಾದಾಬಾದ್ನ ರೈಲು ನಿಲ್ದಾಣದಲ್ಲಿ ನೋಡಿದರು. ಒಮ್ಮೆ ಅದೇ ಪ್ಲಾಟ್ಫಾರಂನಲ್ಲಿ ಇಮ್ತಿಯಾಜರಿಗೆ ರೈಲಿಗಾಗಿ ಕಾಯುತ್ತಿದ್ದಾಗ ಮಧುರವಾದ ಹಾಡು ಕೇಳಿಸಿತು.
ಅದು ಥೇಟ್ ಕರೀಂ ಖಾನರ ಧ್ವನಿಯಂತೆಯೇ ಇತ್ತು. ಧ್ವನಿಯನ್ನು ಹಿಂಬಾಲಿಸಿ ಹೋದಾಗ ಅದೇ ತರುಣ ಭಾವಪೂರ್ಣವಾಗಿ ಹಾಡುತ್ತಿದ್ದ. ಕೂಡಲೇ ಅವರು ತಮ್ಮ ಸಾರಂಗಿಯನ್ನು ತೆಗೆದು ಹಾಡಿಗೆ ಸಾಥ್ ನೀಡತೊಡಗಿದರು. ಭಜನೆ, ಗಜಲ್ಗಳೂ ಸಹ ಆತನ ಕಂಠದಿಂದ ಸುಮಧುರವಾಗಿ ಹರಿದು ಬಂದವು. ನಂತರ ಅವನನ್ನು ವಿಚಾರಿಸಿದಾಗ ಆ ತರುಣ ಕರೀಂಖಾನರ ಹಾಡುಗಳೆಲ್ಲವನ್ನೂ ಕಂಠಸ್ಥ ಮಾಡಿಕೊಂಡಿರುವುದನ್ನು ತಿಳಿಸಿದ. ಒಂದು ದಿನ ಇಮ್ತಿಯಾಜ್ ಅಹಮ್ಮದರು ಉಸ್ತಾದ್ ಕರೀಂ ಖಾನರಿಗೆ ಆ ತರುಣನನ್ನು ಪರಿಚಯಿಸಿದರು. ಆತನ ಗಾಯನವನ್ನು ಕೇಳಿ ಕರೀಂ ಖಾನರಿಗೆ ತುಂಬಾ ಸಂತೋಷವಾಯಿತು.
"ನಿನ್ನ ಗುರು ಯಾರು?" ಎಂದವರು ಪ್ರಶ್ನಿಸಿದಾಗ ಅವನು ಹೇಳಿದ, "ನನ್ನ ಗುರು ಉಸ್ತಾದ್ ಖಾನ್ ಸಾಹೇಬ್ ಅಬ್ದುಲ್ ಕರೀಂ ಖಾನರು" ಎಂದು! ಅದನ್ನು ಕೇಳಿ ಅವರಿಗೆ ಆಶ್ಚರ್ಯವಾಯಿತು. ನಾನು ನಿನಿಗೆ ಸಂಗೀತವನ್ನೇ ಕಲಿಸಿಲ್ಲವಲ್ಲಾ ಎಂದರು. ಅದಕ್ಕವನು ಅವರು ತನ್ನ ಅಪ್ರತ್ಯಕ್ಷ ಗುರುಗಳೆಂದೂ, ಅವರ ಧ್ವನಿಮುದ್ರಿಕೆಗಳ ಮೂಲಕ ಸಂಗೀತಾಭ್ಯಾಸ ಮಾಡಿರುವುದಾಗಿಯೂ ತಿಳಿಸಿ ಅವರ ಆಶೀರ್ವಾದವನ್ನು ಬೇಡಿದ. ಖಾನ್ ಸಾಹೇಬರಿಗೆ ತುಂಬಾ ಸಂತೋಷವಾಯಿತು.
ಆಧುನಿಕ ಏಕಲವ್ಯನಂತೆ ವಿದ್ಯೆ ಕಲಿತ ಅವನಿಗೆ ಮನಸಾರೆ ಹರಸಿದರು. ಆ ತರುಣನೇ ಮುಂದೆ ಚಲನಚಿತ್ರ ಪ್ರಪಂಚದಲ್ಲಿ ಹಿನ್ನಲೆ ಗಾಯಕನಾಗಿ, ತಾನ್ ಸೇನ್ ಚಿತ್ರದ ನಾಯಕನಾಗಿ ಅಭಿನಯಿಸಿದ ಕುಂದನ್ಲಾಲ್ ಸೈಗಲ್!
 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com