ಬಿ.ಎಂ.ಶ್ರೀಕಂಠಯ್ಯ ಎಂದಾಕ್ಷಣ ನಮಗೆ ನೆನಪಾಗುವುದು ಅವರ 'ಕರುಣಾಳು ಬಾ ಬೆಳಕೆ' ಕವನ. ಗದಾಯುದ್ಧ ನಾಟಕಂ, ಅಶ್ವತ್ಥಾಮನ್, ಕನ್ನಡ ಛಂದಸ್ಸಿನ ಚರಿತ್ರೆ ಮುಂತಾದ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟ ಕೀರ್ತಿಯೂ ಶ್ರೀ ಅವರಿಗೆ ಸಲ್ಲುತ್ತದೆ. ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಸಹ ಕನ್ನಡದ ಮೇಲೆ ಅತಿಯಾದ ಪ್ರೀತಿ. ಸಿರಿಗನ್ನಡಂ ಗೆಲ್ಗೆ ಎಂಬ ಧ್ಯೇಯವಾಕ್ಯವನ್ನು ನೀಡಿದವರು ಅವರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿದ್ದಾಗ ಒಮ್ಮೆ ಒಂದು ಘಟನೆ ನಡೆಯಿತು. ವಿಶ್ವವಿದ್ಯಾನಿಲಯದಲ್ಲಿ ಅದುವರೆಗೆ ಕನ್ನಡದಲ್ಲಿ ಎಂ.ಎ.ತರಗತಿಗಳನ್ನು ಪ್ರಾರಂಭಿಸಿರಲಿಲ್ಲ. ಎಂ.ಎ.ಪರೀಕ್ಷೆಗೆ ಓದುವಂಥ ಗ್ರಂಥ ಕನ್ನಡದಲ್ಲಿ ಎಲ್ಲಿದೆ ಎಂದು ಮೂಗು ಮುರಿದವರೂ ಇದ್ದರು. ಆದರೆ ಬಿ.ಎಂ.ಶ್ರೀ ಯವರಿಗೆ ಕನ್ನಡದಲ್ಲಿ ಎಂ.ಎ.ಪ್ರಾರಂಭಿಸುವ ಉತ್ಕಟಾಕಾಂಕ್ಷೆ ಇತ್ತು. ಹೀಗಾಗಿ ಅವರು ಉಪಕುಲಪತಿಗಳಾಗಿದ್ದ ಬೃಜೇಂದ್ರನಾಥ ನೀಲರೊಡನೆ ಸಮಾಲೋ ಚಿಸಿ, ಕನ್ನಡದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸುವ ಪ್ರಾಮುಖ್ಯವನ್ನು ಮನವರಿಕೆಮಾಡಿಕೊಟ್ಟರು. ಅದಕ್ಕೆ ಅವರ ಒಪ್ಪಿಗೆಯೂ ದೊರೆ ಯಿತು. ಅವರ ನೆರವಿನಿಂದ ಕನ್ನಡದಲ್ಲಿ ಎಂ.ಎ.ತರಗತಿ ಪ್ರಾರಂಭಿಸಲು ಸಿದ್ಧತೆ ನಡೆಸಿದರು. ಅದಕ್ಕೆ ಹೆಚ್ಚಿನ ಸಿಬ್ಬಂದಿ ಬೇಕೆಂದು ಕೇಳಿದರೆ ಎಲ್ಲಿ ಸರ್ಕಾರ ಒಪ್ಪುವುದಿಲ್ಲವೋ ಎಂದು ಭಾವಿಸಿ ಕೇವಲ ಒಂದೇ ಒಂದು ಉಪ ಪ್ರಾಧ್ಯಾಪಕರ ಹುದ್ದೆಯನ್ನು ಮಾತ್ರ ಸೃಷ್ಟಿಸಬೇಕೆಂದು ಶಿಫಾರಸು ಮಾಡಲು ನಿರ್ಧರಿಸಿದರು. ಆದರೆ ಆ ಸಮಿತಿಯ ಅಧ್ಯಕ್ಷರಾಗಿದ್ದ, ಸಂಸ್ಕೃತ ಪ್ರಾಧ್ಯಾಪಕ ಎಂ.ಹಿರಣ್ಣಯ್ಯನವರಿಗೆ ಅದು ಸರಿಕಾಣಲಿಲ್ಲ. ಸ್ನಾತಕೋತ್ತರ ಕೋರ್ಸ್ಗೆ ಒಬ್ಬರು ಪೂರ್ಣ ಪ್ರಮಾಣದ ಪ್ರೊಫೆಸರರೇ ಇರಬೇಕೆಂದು ವಾದಿಸಿದರು. ಅಲ್ಲದೆ ಹಠ ಹಿಡಿದು ಅದಕ್ಕೆ ಪ್ರಾಧ್ಯಾಪಕ ಹುದ್ದೆಯೇ ಇರಬೇಕೆಂದು ಶಿಫಾರಸು ಮಾಡಿದರು. ಅವರ ಶಿಫಾರಸ್ಸನ್ನು ಒಪ್ಪಿದ ವಿಶ್ವವಿದ್ಯಾನಿಲಯ ಮೊದಲ ಕನ್ನಡದ ಪ್ರೊಫೆಸರ್ ಆಗಿ ಟಿ.ಎಸ್.ವೆಂಕಣ್ಣಯ್ಯನವರನ್ನು ನೇಮಿಸಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com