ಒಬ್ಬ ಆದರ್ಶ ರಾಜಕಾರಣಿಯಾಗಿಯಾಗಿದ್ದ ಗೋಪಾಲಗೌಡರು ತತ್ವನಿಷ್ಠೆಯ ವಿಷಯದಲ್ಲಿ ಯಾರೊಡನೆಯೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಒಮ್ಮೆ ಬೆಂಗಳೂರಿನ ಸುದರ್ಶನ ಅತಿಥಿಗೃಹದಲ್ಲಿ ಕೆಲವು ಶಾಸಕರು ತ.ರಾ.ಸು ಅವರೊಡನೆ ಹರಟುತ್ತಾ ಕುಳಿತಿದ್ದರು. ಅಲ್ಲಿಗೆ ಗೋಪಾಲಗೌಡರು ಪಿ.ಕಾಳಿಂಗರಾಯರೊಡನೆ ಆಗಮಿಸಿದರು. ತ.ರಾ.ಸು ಮತ್ತು ಗೌಡರು ಆತ್ಮೀಯ ಸ್ನೇಹಿತರಾಗಿದ್ದರು. ಅವರ ನಡುವಿನ ಸ್ನೇಹ ಇತರರು ಅಸೂಯೆಪಡುವಷ್ಟಿತ್ತು. ಮಾತು ಎತ್ತೆತ್ತಲೋ ಸಾಗಿ ತ.ರಾ.ಸು ಅವರು ಗತಿಸಿದ ಮಹಾರಾಜರ ಸಂಗೀತ ಪ್ರೀತಿಯ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದರು. ಅದನ್ನು ಕೇಳಿ ಗೌಡರಿಗೆ ತುಂಬ ಸಿಟ್ಟು ಬಂತು. ಎಲ್ಲ ಹಂಗು ಬಿಟ್ಟು ತ.ರಾ.ಸು. ಅವರನ್ನು ಮೂದಲಿಸಿ, "ನೀನೊಬ್ಬ ಹಿಪಾಕ್ರಿಟ್" ಎಂದು ಬೈದುಬಿಟ್ಟರು.
ಜಗಳ ಕೈಕೈ ಮಿಲಾಯಿಸುವರೆಗೂ ಹೋಯಿತು. ಅಲ್ಲಿದ್ದವರೇ ಇಬ್ಬರನ್ನೂ ಸಮಾಧಾನ ಪಡಿಸಿದರು. ಗೌಡರು ಕೋಪಮಾಡಿಕೊಂಡೇ, ತಾವು ವಾಸಿಸುತ್ತಿದ್ದ ಶಾಸಕರ ಭವನದ ಕೋಣೆಗೆ ಹೊರಟು ಹೋದರು.
ಸಣ್ಣದೊಂದು ಮಾತಿಗೆ ಆಪ್ತರಾಗಿದ್ದ ಗೋಪಾಲಗೌಡರು ವಿರೋಧಿಯಾದರಲ್ಲಾ ಎಂದು ತ.ರಾ.ಸು ಮನಸ್ಸಿಗೆ ನೋವಾಯಿತು. ಅದೇ ಚಿಂತೆಯಲ್ಲಿ ಮುಳುಗಿ ಮಲಗಿದವರನ್ನು ಬೆಳಿಗ್ಗೆ ಎಚ್ಚರಿಸಿದ್ದು ಅದೇ ಗೋಪಾಲಗೌಡರು.
"ನಿನ್ನೆ ರಾತ್ರಿ ನಡೆದ ಘಟನೆಯನ್ನು ಮರೆತುಬಿಡು. ನೀನು ಆಡುತ್ತಿದ್ದ ಮಾತನ್ನು ಯೋಚಿಸಿ ತೂಗುವಷ್ಟು ತಾಳ್ಮೆ ನನಗಿರಲಿಲ್ಲ" ಎಂದು ಗೌಡರು ಹೇಳಿದಾಗ ತ.ರಾ.ಸು ಅವರೂ ಸಹ ಅದನ್ನಾಗಲೇ ತಾವು ಮರೆತಿರುವುದಾಗಿಯೂ, ಆ ಮಾತು ತಮ್ಮಿಬ್ಬರ ನಡುವಿನ ಸ್ನೇಹಕ್ಕಿಂತ ದೊಡ್ಡದಲ್ಲವೆಂದೂ ತಿಳಿಸಿದರು. ಆಗ ಎಂದಿನಂತೆ ತಮ್ಮ ನಿರ್ಮಲವಾದ ನಗೆಯನ್ನು ಹೊರಸೂಸಿ, "ನೀವು ಸಾಹಿತಿಗಳು ಭಾರೀ ಅಪಾಯದ ಜನ. ಅಷ್ಟೇ ಹುಂಬತನವೂ ನಿಮ್ಮಲ್ಲಿದೆ. ಅದಕ್ಕೇ ನಿಮ್ಮನ್ನು ಕಂಡರೆ ಎಷ್ಟು ಪ್ರೀತಿಯೋ ಅಷ್ಟೇ ಭಯ" ಎಂದರು!
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com