ಮುಖ್ಯ ನ್ಯಾಯಾಧೀಶರಿಗೆ ಗದರಿದ ವಕೀಲ

Updated on: 

ಮಹಾನ್ ದೇಶಭಕ್ತರಾಗಿದ್ದ ಟಿ.ಪ್ರಕಾಶಂ ಆಂಧ್ರ ಪ್ರದೇಶದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಭಾಗವಹಿಸಿದ್ದರಿಂದ ಜೈಲು ಶಿಕ್ಷೆಗೆ ಒಳಗಾಗಬೇಕಾಯಿತು. ಧ್ಯೆರ್ಯದಲ್ಲಿ ಅವರನ್ನು ಮೀರಿಸುವವರೇ ಇರಲಿಲ್ಲ. ಹಾಗಾಗಿ ಅವರನ್ನು ಆಂಧ್ರ ಕೇಸರಿ ಎಂದು ಜನ ಕರೆಯುತ್ತಿದ್ದರು. ಮದ್ರಾಸ್ ಸಂಸ್ಥಾನದ ಮುಖ್ಯಮಂತ್ರಿಯಾಗಿಯೂ ಕೆಲಕಾಲ ಸೇವೆ ಸಲ್ಲಿಸಿದವರು. ಅವರು ಬ್ಯಾರಿಸ್ಟರ್ ಆಗಿದ್ದಾಗ ಆಗಿನ ಕಾಲಕ್ಕೇ ಅವರ ವಾರ್ಷಿಕ ವರಮಾನ ಒಂದು ಲಕ್ಷಕ್ಕೂ ಹೆಚ್ಚಿತ್ತು. ನಂತರ ಗಾಂಧೀಜಿಯವರ ಕರೆಗೆ ಓಗೊಟ್ಟು ತಮ್ಮ ವಕೀಲಿ ವೃತ್ತಿಯನ್ನು ಬಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಒಮ್ಮೆ ಅವರು ಮದ್ರಾಸು ಉಚ್ಚ ನ್ಯಾಯಾಲಯದಲ್ಲಿ ಒಂದು ದಾವೆಯಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾಗ ಮುಖ್ಯ ನ್ಯಾಯಾಧೀಶರಾಗಿದ್ದ ಸರ್.ವಿ.ಎಂ.ಕೌಟ್ಸ್ ಟ್ಸಾಟರ್ ಎಂಬುವವರು ಪ್ರಕಾಶಂ ಅವರನ್ನುದ್ದೇಶಿಸಿ, ನಿಮ್ಮ ಕಕ್ಷಿದಾರ ಹಣಕೊಟ್ಟಿದ್ದಾನೆಂದು ನೀವು ನನ್ನ ಕಾಲವನ್ನು ವ್ಯರ್ಥ ಮಾಡುತ್ತಿದ್ದೀರಿ ಎಂದು ಎತ್ತರಿಸಿದ ಧ್ವನಿಯಲ್ಲಿ ಆಕ್ಷೇಪಿಸಿದರು. ಇಡೀ ನ್ಯಾಯಾಲಯ ಒಂದರೆಕ್ಷಣ ಸ್ಥಬ್ದವಾಯಿತು. ಒಬ್ಬ ಹಿರಿಯ ವಕೀಲರೂ, ಆಗಿನ ಕಾಲದ ಒಬ್ಬ ಜನಪ್ರಿಯ ನ್ಯಾಯವಾದಿಗೆ ನ್ಯಾಯಾಧೀಶರು ಹಾಗೆ ಮಾತನಾಡಿದ್ದು ಅಚ್ಚರಿಯನ್ನುಂಟು ಮಾಡಿತ್ತು. ಸಾಧಾರಣ ವಕೀಲರಾಗಿದ್ದರೆ ಸುಮ್ಮನಾಗುತ್ತಿದ್ದರೋ ಏನೋ, ಆದರೆ ಪ್ರಕಾಶಂ ಅವರು ತೆಪ್ಪಗಾಗಲಿಲ್ಲ. ಬದಲಾಗಿ ನ್ಯಾಯಾಧೀಶರನ್ನು ಕೆಂಗಣ್ಣಿನಿಂದ ನೋಡಿ, ತೆರಿಗೆದಾರರ ಹಣದಿಂದ ನಿಮಗೆ ಸಂಬಳ ಕೊಡುತ್ತಿರುವುದು ನನ್ನ ವಾದವನ್ನು ಆಲಿಸುವುದಕ್ಕಾಗಿ ಎಂದು ಅಂದೇಬಿಟ್ಟರು. ಆಗ ಹಿರಿಯ ವಕೀಲರೊಬ್ಬರು ಮಧ್ಯ ಪ್ರವೇಶಿಸಿ, ಮುಖ್ಯ ನ್ಯಾಯಾಧೀಶರು ಹಾಗೆ ವಕೀಲರನ್ನು ಒರಟಾಗಿ ಮಾತನಾಡಬಾರದೆಂದೂ, ಅದಕ್ಕಾಗಿ ಕ್ಷಮೆ ಕೋರಬೇಕೆಂದೂ ತಾಕೀತು ಮಾಡಿದರು. ಪರಿಸ್ಥಿತಿ ಸ್ವಲ್ಪ ತಿಳಿಯಾದ ಮೇಲೆ ಮುಖ್ಯ ನ್ಯಾಯಾಧೀಶರಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಅವರು ಪ್ರಕಾಶಂ ಅವರ ಕ್ಷಮೆ ಕೋರಿದರು. ಕೊನೆಗೆ ಪ್ರಕಾಶಂ ಅವರು ಆ ಪ್ರಸಂಗವನ್ನು ಅಲ್ಲಿಯೇ ಬಿಟ್ಟು ತಮ್ಮ ವಾದವನ್ನು ಮುಂದುವರೆಸಿದರು.

- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com