ನೈತಿಕ ಹೊಣೆಗೆ ಅರ್ಥವಿಲ್ಲವಾಯಿತೇ?
ಗುಜರಾತದ, ವಡೋದರದಲ್ಲಿ ಸ್ಥಾಪಿತವಾಗಿರುವ ಭಾರತೀಯ ವಿದ್ಯಾಭವನದ ಪಬ್ಲಿಕ್ ಸ್ಕೂಲಿನ ಆವರಣದಲ್ಲಿ ಎರಡನೆಯ ಕಕ್ಷೆಯಲ್ಲಿ ಕಲಿಯುತ್ತಿದ್ದ ಹುಡುಗಿಗೆ ಬಿಡಾಡಿ ನಾಯಿಗಳಿಂದ ಆದ ಹಲ್ಲೆಯನ್ನು ಪಾಲಕರು ವಿರೋಧಿಸಿದಾಗ, ಆ ಶಾಲೆಯ ಪ್ರಾಂಶುಪಾಲರು ಹಾಗೂ ಉಪ ಪ್ರಾಂಶುಪಾಲರು ನೈತಿಕ ಜವಾಬ್ದಾರಿ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸುದ್ದಿ ಒಂದೆಡೆಯಾದರೆ, ಬೆಂಗಳೂರಿನ ಹೊರವಲಯದ ತೂಬರಹಳ್ಳಿಯ ಪ್ರತಿಷ್ಠಿತ ವಿಬ್ಗ್ಯೋರ್ ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಹೊಣೆ ಹೊರಲು ಆ ಶಾಲೆಯ ಆಡಳಿತ ವರ್ಗ ತಯಾರಿಲ್ಲದಿರುವುದು ನಾಚಿಕೆಗೇಡು ಹಾಗೂ ತೀವ್ರ ಖಂಡನೀಯ. ಮಕ್ಕಳ ರಕ್ಷಣೆ ಕುರಿತು ಮಾತನಾಡಲು ಶಾಲಾ ಮುಖ್ಯಸ್ಥರು ನಿರಾಕರಿಸಿರುವುದು ಅವರ ಉದ್ಧಟತನದ ಪರಮಾವಧಿ ಅಂತ ಅನಿಸುತ್ತಿಲ್ಲವೇ? ಮಕ್ಕಳ ರಕ್ಷಣೆ ಪೋಷಕರದ್ದೇ. ಈ ವಿಷಯದಲ್ಲಿ ಅಡ್ಮಿಷನ್ ಪೂರ್ವದಲ್ಲೇ ಅರ್ಜಿ ಫಾರಂನಲ್ಲಿ ನಮೂದಿಸಲಾಗಿದೆ ಎಂಬ ನುಣುಚಿಕೊಳ್ಳುವ ಮಾತು ಬೇರೆ. ಇದು ಶಾಲಾ ಆಡಳಿತ ವರ್ಗದ ಬೇಜವಾಬ್ದಾರಿ ಹಾಗೂ ನಿಷ್ಕಾಳಜಿ ವರ್ತನೆ. ಫಾರಂನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ನಮೂದಿಸಿರುವ ವಿಷಯಗಳನ್ನೆಲ್ಲ ಯಾವ ಪೋಷಕರು ಅಷ್ಟೊಂದು ಗಹನವಾಗಿ ವೀಕ್ಷಿಸಿರುತ್ತಾರೆ. ಇದೊಂದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಾಹಸವಲ್ಲದೇ ಮತ್ತೇನೂ ಅಲ್ಲ. ಶಾಲಾ ಆವರಣದಲ್ಲಿ ಶಾಲಾ ಕೊಠಡಿಯಲ್ಲೇ ನಡೆದಿರುವ ಈ ದುಷ್ಕೃತ್ಯದ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯ ಚುರುಕಾಗಿದೆ ಎಂದು ಹೇಳಿಕೆ ಕೊಡುವ ನಮ್ಮ ಗೃಹಮಂತ್ರಿಗಳಿಗೇನೆನ್ನಬೇಕು? ಆರೋಪಿಗಳು ಇನ್ನೆಲ್ಲಿಂದ ಬಂದಾರು? ಅಂದು ಆ ಹೊತ್ತಿಗೆ ಬಾಲಕಿಯನ್ನು ಕತ್ತಲೆ ಕೋಣೆಗೆ ನುಗ್ಗಿ ಅವಳ ತುಂಟತನಕ್ಕೆ ಶಿಕ್ಷೆ ಕೊಡುವ ನೆಪದಲ್ಲಿ ಯಾರೆಲ್ಲ ಇದ್ದರೂ ಅವರೇ ಆರೋಪಿಗಳಲ್ಲವೇ? ಅವರನ್ನು ಪತ್ತೆ ಹಚ್ಚುವುದು ಅಂದರೇನು? ಅಲ್ಲಾ ಸ್ವಾಮಿ, ತುಂಟತನ ಮಾಡುವ ಬಾಲಕ-ಬಾಲಕಿಯರನ್ನು ಕತ್ತಲು ಕೋಣೆಗೆ ದಬ್ಬುವ ಆವಶ್ಯ ಇತ್ತೇ? ಅಷ್ಟಕ್ಕೂ ಮಕ್ಕಳು ತುಂಟತನ ಮಾಡದೇ ಶಾಲಾ ಶಿಕ್ಷಕರು, ಪ್ರಾಂಶುಪಾಲರು ಮಾಡುವರೆ? ಈ ರೀತಿಯ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಯಾವ ರೀತಿಯ ಅಘಾತ ತರಬಹುದೆಂಬ ಸಾಮಾನ್ಯ ತಿಳಿವಳಿಕೆಯೂ ಶಿಕ್ಷಕರಿಗಿಲ್ಲದೇ ಹೋಯಿತೇ?
ಮಂಡಳಿ ಅಥವಾ ವ್ಯಕ್ತಿ ಎಷ್ಟೇ ಪ್ರಭಾವಶಾಲಿಯಾಗಲೀ, ತಪ್ಪಿತಸ್ಥರನ್ನು ಶಿಕ್ಷಿಸಲೇಬೇಕು. ಶಾಲಾ ಸಮಯದಲ್ಲಿ ಶಾಲಾ ಆವರಣದಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗೂ ಆಡಳಿತ ವರ್ಗ ಸಂಪೂರ್ಣ ಜವಾಬ್ದಾರರಾಗಿರಲೇಬೇಕು. ಇದರಿಂದ ತಪ್ಪಿಸಿಕೊಳ್ಳುವ ಯಾವುದೇ ಅವಕಾಶಕ್ಕೆ ಆಸ್ಪದ ನೀಡಬಾರದು. ಲಕ್ಷಗಟ್ಟಲೆ ಫೀ ಭರಿಸಿ ಏನೋ ಶಾಲೆಯ ಹೆಸರಿದೆ ಎಂದು ಪಾಲಕರು ಇಟ್ಟ ಭರವಸೆಗೆ ಸಿಗುವ ಪ್ರತಿಫಲ ಇದೇನಾ? ಅಹಂಕಾರದಿಂದ ಕೊಬ್ಬುತ್ತಿರುವ ಶಾಲಾ ಆಡಳಿತ ಮಂಡಳಿಗೆ ತಕ್ಕ ಶಿಕ್ಷೆ ಎಂದರೆ ಶಾಲೆಯ ಪರವಾನಗಿಯನ್ನೇ ರದ್ದುಪಡಿಸುವುದು. ಈ ರೀತಿಯ ಕಠಿಣ, ನಿರ್ದಾಕ್ಷಿಣ್ಯ ನಿರ್ಧಾರವೊಂದೇ ಈ ರೀತಿಯ ಘಟನೆಗಳು ಮುಂದಾಗದಂತೆ ತಡೆಯಬಲ್ಲದು.
-ಶಂಕರನಾರಾಯಣ ಭಟ್, ಮಾಡಗೇರಿ
ಕನ್ನಡ ಶಾಲೆಗಳಾಗಿ ಪರಿವರ್ತನೆ
ರಾಜಕೀಯ ಕಾರಣಗಳಿಗಾಗಿ, ಮತ ಬ್ಯಾಂಕಿಗಾಗಿ ಹಿಂದಿನ ಸರ್ಕಾರಗಳು ಹೆಜ್ಜೆ ಹೆಜ್ಜೆಗೆ ಉರ್ದು ಶಾಲೆಗಳನ್ನು ತೆರೆದು ಮುಸ್ಲಿಂ ಸಮಾಜವನ್ನು ಮುಖ್ಯವಾಹಿನಿಯಿಂದ ದೂರವಿಡುತ್ತ ಬಂದಿವೆ. ಆದರೆ ಈಗ ಮುಸ್ಲಿಂ ಸಮಾಜದವರೇ ಇದನ್ನು ವಿರೋಧಿಸುತ್ತ ಉರ್ದು ಶಾಲೆಗಳನ್ನು ಕನ್ನಡ ಶಾಲೆಗಳಾಗಿ ಪರಿವರ್ತಿಸಬೇಕೆಂದು ಬೇಡಿಕೆ ಇಟ್ಟಿರುವುದು ಸಂತಸಕರ ಸಂಗತಿಯಾಗಿದೆ. ಕರ್ನಾಟಕ ಸರ್ಕಾರ ಇತ್ತ ಗಮನ ಹರಿಸುವರೆ?
-ಆರ್.ಎಸ್. ಚಾಪಗಾವಿ, ಬೆಳಗಾವಿ.
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

