ಸಂಪಾದಕೀಯ

ಪ್ರಧಾನಿ ಮೋದಿ ಕಲ್ಪನೆ 23 ವರ್ಷಗಳ ಕೆಲಸ

Published On :

ಇನ್ನು ಕೆಲವೇ ವಾರಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆಯಾಗಲಿದೆ. ಆ ಸಂಬಂಧದ ಚಟುವಟಿಕೆ ವಿತ್ತ ಮಂತ್ರಾಲಯದ ಬಜೆಟ್ ವಿಭಾಗದಲ್ಲಿ ಸಾಂಪ್ರದಾಯಿಕವಾಗಿ ಆರಂಭವಾಗಿ ಹಲವಾರು ತಿಂಗಳು ಕಳೆದಿದೆ. ಪ್ರತಿ ವರ್ಷ ಸೆಪ್ಟೆಂಬರ್ ಕೊನೆಯ ವಾರದಲ್ಲೇ ಈ ಚಟುವಟಿಕೆಗೆ ಚಾಲನೆ ದೊರೆಯುವುದು ಅನಿವಾರ್ಯ.
ಆದರೆ ಈ ವರ್ಷ ತಾತ್ಕಾಲಿಕ ಬಜೆಟ್ ಮಂಡಿಸಿದ್ದ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರ ಲೋಕಸಭೆ ಚುನಾವಣೆಯ ಅನಂತರ ಅಧಿಕಾರವನ್ನು ಕಳೆದುಕೊಂಡಿರುವುದರಿಂದ ಆ ಬಜೆಟ್‌ನ ದುರಸ್ತಿಯಲ್ಲೇ ತೃಪ್ತರಾಗುವುದು ಬಿಜೆಪಿ ಸರ್ಕಾರಕ್ಕೆ ಬೇಕಾಗಿಲ್ಲ. ಕಡುಬಡವರ ಕ್ಷೇಮಾಭಿವೃದ್ಧಿಯ ಯೋಜನೆಗಳನ್ನು ಉಳಿಸಿಕೊಂಡು, ಉಳಿದ ಕಾರ್ಯಕ್ರಮಗಳನ್ನು ಸರಿಯಾದ ರೀತಿಯಲ್ಲಿ ಬಳಸಿ, ಸಾಧ್ಯವಿರುವಷ್ಟೂ ಆರ್ಥಿಕ ಸುಧಾರಣೆ ತರುವುದು ಸಾಧ್ಯ ಎನ್ನುವುದು ಬಿಜೆಪಿ ನಾಯಕರ ಅಭಿಪ್ರಾಯ. ಅದು ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲೂ ಪ್ರಕಟವಾಗಿತ್ತು.
ಕೆಲವು ದಿನಗಳ ಹಿಂದೆ, ಪ್ರಧಾನಿ ಮೋದಿ ಅವರು ಒಂದು ಭಾಷಣದಲ್ಲಿ, ಪ್ರಸ್ತುತ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಗಮನ ಕೊಟ್ಟು, ಅನಂತರದ ಮೂರು ವರ್ಷಗಳನ್ನು ಅಭ್ಯುದಯದ ವೇಗವನ್ನು ಹೆಚ್ಚಿಸುವುದಕ್ಕೆ ಮೀಸಲಾಗಿಡುವ ಉದ್ದೇಶವನ್ನು ಪ್ರಕಟಿಸಿದ್ದು. ಆದರೆ ಆ ವಿಚಾರದಲ್ಲಿ ದೇಶದಲ್ಲಿ ವ್ಯಾಪಕವಾದ, ಅಧ್ಯಯನ ಆಧರಿತ, ಗಂಭೀರ ವಾದ- ವಿವಾದ, ಚರ್ಚೆ ನಡೆಯಲೇ ಇಲ್ಲ.
ಸರ್ಕಾರಕ್ಕೆ ಜನಾಭಿಪ್ರಾಯ ಕುರಿತಂತೆ ತೃಪ್ತಿಕರವಾದ ರೀತಿಯ ವರದಿಗಳು ಸಿಕ್ಕಿರುವಂತೆ ಕಂಡು ಬಂದಿಲ್ಲ. ಆ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಧಾನಿ ಮೋದಿ ಶನಿವಾರ ಗೋವಾದಲ್ಲಿ ಇನ್ನಷ್ಟು ಸ್ಪಷ್ಟವಾಗಿ ತಮ್ಮ ಚಿಂತನೆಯನ್ನು ಮಂಡಿಸಿದ್ದಾರೆ.
ಈ ಕೆಲಸಕ್ಕೆ ಅವರು ಆರಿಸಿಕೊಂಡ ವೇದಿಕೆ ಗೋವಾದ ಬಿಜೆಪಿ ಕಾರ್ಯಕರ್ತರ ಸಭೆ. ಅಲ್ಲಿ ಅವರು ಸ್ಪಷ್ಟವಾಗಿ ಹೇಳಿದ್ದು ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟಿದೆ ಎಂದು. ಅದನ್ನು ಸುಧಾರಿಸಲು ಕಠಿಣ ಕ್ರಮಗಳು ಅನಿವಾರ್‌ಯವಾಗಬಹುದು. ಆ ಕಾಲದಲ್ಲಿ ಜನರಿಗೆ ಸೂಕ್ತ ರೀತಿಯ ತಿಳುವಳಿಕೆ ನೀಡುವ ಹೊಣೆಗಾರಿಕೆಯನ್ನು ಪ್ರಧಾನಿ, ಪಕ್ಷದ ಕಾರ್ಯಕರ್ತರ ಮೇಲೇ ಹಾಕಿದ್ದಾರೆ.
ಈ ವಿಚಾರದಲ್ಲಿ, ತಪ್ಪಾಗಿ ಅರ್ಥ ಮಾಡಿಕೊಂಡ ವರದಿಗಾಗಲೀ, ಕುಚೇಷ್ಟೆಯ ವರದಿಗಳಿಗೇ ಆಗಲಿ ಅವಕಾಶವಿರಬಾರದೆಂದು ಪ್ರಧಾನಿಯ ಹೇಳಿಕೆಗೊಂದು ಟಿಪ್ಪಣಿಯನ್ನು ಬಿಜೆಪಿ, ಅವರ ಮೌಖಿಕ ಹೇಳಿಕೆಯ ಜೊತೆ ಬಿಜೆಪಿಯ ಅಧಿಕೃತ ಟಿಪ್ಪಣಿಯನ್ನು ಗಮನಿಸಿದರೆ, ಸರ್ಕಾರ ವೆಚ್ಚವನ್ನು ಆದಷ್ಟು ಮಟ್ಟಿಗೂ ತಗ್ಗಿಸಿ, ಕೊರತೆಯನ್ನು ಸಾಕಷ್ಟು ಸುಧಾರಿಸಿದೆ, ಹಣದ ಅತಿಪ್ರಸರಣದ ವೇಗ (ಇನ್‌ಫ್ಲೇಷನ್) ಹೆಚ್ಚಲಿಕ್ಕಿಲ್ಲ ಎಂದು ಸರ್ಕಾರ ಭಾವಿಸಿರುವುದು ಸ್ಪಷ್ಟವಾಗಿ ಗೋಚರ.
ಇಂತಹ ಕ್ರಮಗಳಿಂದ ನೂತನ ಸರ್ಕಾರದ ಜನಪ್ರಿಯತೆ ಕಡಿಮೆಯಾಗಬಹುದೆನ್ನುವ ಅರಿವು ಪ್ರಧಾನಿಗೂ ಇದೆ, ಸರ್ಕಾರಕ್ಕೂ ಇದೆ. ಆದರೆ ಅದು ದೇಶದ ಆರ್ಥಿಕ ವ್ಯವಸ್ಥೆಯ, ಸಾಮಾನ್ಯ ಜನರ ದೀರ್ಘಾವಧಿ ಹಿತರಕ್ಷಣೆಯ ದೃಷ್ಟಿಯಿಂದ ಅನಿವಾರ್ಯ.
ಈ ಚಿಂತನೆಯಲ್ಲಿ ವೈಯಕ್ತಿಕವಾಗಿ ಪ್ರಧಾನಿ ಮೋದಿ ಅವರಿಗೆ, ಸಮುದಾಯ ಸಂಘಟನೆಯಾಗಿ ಭಾರತೀಯ ಜನತಾ ಪಾರ್ಟಿಗೆ ಅನುಕೂಲಕರವಾದ ವಾತಾವರಣ ಮೂಡುತ್ತದೆ ಎನ್ನುವ ಆಸೆಯನ್ನೇನೂ ಸರ್ಕಾರದ ನಾಯಕರು ಇಟ್ಟುಕೊಂಡಂತೆ ಇಲ್ಲ. ಆದರೆ ಈಗಾಗಲೇ ಇಂತಹ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ತಡವಾಗಿದೆ ಎನ್ನುವ ಭಾವನೆ ಇದೆ.
ಎಗ್ಗು ಸಿಗ್ಗಿಲ್ಲದ ಸಬ್ಸಿಡಿಗಳ ಅವಾಂತರ, ಹಾಗೂ ಎಲ್ಲ ಹಂತಳಲ್ಲೂ ಸರ್ಕಾರದ ದುಂದು ವೆಚ್ಚ, ಸರ್ಕಾರದ ಹಣದ ಚೀಲವನ್ನು ಬರಿದನ್ನಾಗಿ ಮಾಡಿರುವ ಸ್ಥಿತಿಯಲ್ಲಿ ಸರ್ಕಾರದ ಜತೆಗೇ ದೇಶದ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಕೆಲಸ ಆಗಲೇ ಬೇಕಾಗಿದೆ.
ಸರ್ಕಾರದ ಇಂತಹ ಚಿಂತನೆಯನ್ನು ಬೆಂಬಲಿಸುವ ಅರ್ಥಶಾಸ್ತ್ರ ಪಂಡಿತರು ಹಾಗೂ ಆಡಳಿತಗಾರರ ದಂಡೇ ದೇಶದಲ್ಲಿದೆ. ಆದರೆ ಆ ಚಿಂತನೆಯನ್ನು ಅದರ ನಿಜವಾದ ಸ್ವರೂಪದಲ್ಲಿ ಜನರ ಮಧ್ಯೆ ಪ್ರಚಾರ ಮಾಡುವ ಕಾರ್ಯಕರ್ತರ ತಂಡ ಈಗ ಇಲ್ಲ.
ಸರ್ಕಾರದ ನೆರವು ಸತ್ಪಾತ್ರರಿಗೆ ಮಾತ್ರ ಸಲ್ಲಬೇಕು, ಬಡವರಿಗೆ ನೀಡಿರುವ ಭರವಸೆಗಳು ಈಡೇರ ಬೇಕಾದರೆ, ಅಪಾತ್ರರಿಗೆ ನೆರವು ಸಿಗಬಾರದು. ನೆರವಿನ ವಿತರಣೆಯ ಜಾಲದ ಭ್ರಷ್ಟಾಚಾರ ನಿರ್ಮೂಲವಾಗಬೇಕು. ಇದೆಲ್ಲವನ್ನೂ ಸಾಧಿಸಬೇಕಾಗಿದೆ. ಆಡಳಿತ ಯಂತ್ರದ ಶುದ್ಧೀಕರಣ ಅಗತ್ಯ.
ಅದು ಒಂದೆರಡು ದಿನಗಳಲ್ಲಿ ಆಗುವ ಕೆಲಸವಲ್ಲ, ಇಂತಹ ಕ್ರಮಗಳ ಪರಿಣಾಮ ಕಣ್ಣಿಗೆ ಕಾಣಬೇಕಾದರೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಈ ಕಷ್ಟದ ಎರಡು ವರ್ಷಗಳನ್ನು ದಾಟಿದರೆ ಭವಿಷ್ಯದಲ್ಲಿ ಆರ್ಥಿಕ ಚಟುವಟಿಕೆಯ ಚೇತರಿಕೆಯ ಫಲ ಎಲ್ಲ ಜನವರ್ಗಗಳಿಗೂ ಸಿಗುವಂತೆ ವ್ಯವಸ್ಥೆ ಮಾಡುವುದು ಸಾಧ್ಯ.
ಸರ್ಕಾರಕ್ಕೆ ಬರಬೇಕಾದ ಆದಾಯದ ಸಂಗ್ರಹದಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆಯಾಗಬೇಕು. ಈ ವಿಚಾರದಲ್ಲಿ ನರೇಂದ್ರ ಮೋದಿ ಸರ್ಕಾರದ ಚಿಂತನೆಯ ದಿಕ್ಕು ಸರಿಯಾಗಿದೆ. ಆದರೆ ಅದು ಕಾರ್ಯರೂಪಕ್ಕೆ ಇಳಿಯಬೇಕಾದರೆ, ಜನಪರ ಕರ್ತವ್ಯ ನಿಷ್ಠ, ಉತ್ಸಾಹಿ ಸಿಬ್ಬಂದಿ ಬೇಕು. ಈಗಿನ ಸಿಬ್ಬಂದಿಯಲ್ಲಿ ಆ ಗುಣಗಳನ್ನು ಮೂಡಿಸಲು ಸರ್ಕಾರ ಸೂಕ್ತ ಯೋಜನೆಗಳನ್ನು, ಕಾರ್ಯಕ್ರಮವನ್ನು ರೂಪಿಸಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.