ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ನಾಮನಿರ್ದೇಶನ
ಕೆಲವು ವರ್ಷಗಳ ಹಿಂದೆ ಅಂದಿನ ಬಿಜೆಪಿ ಸರ್ಕಾರ ಕರ್ನಾಟಕ ವಿಧಾನ ಪರಿಷತ್ಗೆ ಇಬ್ಬರು ಪೂರ್ಣಾವಧಿ ರಾಜಕಾರಣಿಗಳ ಹೆಸರುಗಳನ್ನು ಸೂಚಿಸಿದ್ದನ್ನು ನಾನು ವಿರೋಧಿಸಿದ್ದೆ. ಅಲ್ಲದೆ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಿಜೆಪಿ ಸರ್ಕಾರ ಮುಂದಿಟ್ಟಿದ್ದ ಮಾಜಿ ಸಚಿವ ವಿ. ಸೋಮಣ್ಣ ಅವರ ಹೆಸರನ್ನು ತಿರಸ್ಕರಿಸಿದ ವಿಷಯ ಅನೇಕರಿಗೆ ನೆನಪಿರಬಹುದು. ಅದಕ್ಕೂ ಹಿಂದೆ, ರಾಜ್ಯಪಾಲ ಟಿ.ಎನ್. ಚತುರ್ವೇದಿ ಅಂದಿನ ಸರ್ಕಾರ ಮಾಡಿದ್ದ ನಾಮನಿರ್ದೇಶನಗಳನ್ನು ತಿರಸ್ಕರಿಸಿದ್ದರು. ಅಧಿಕಾರದಲ್ಲಿ ಯಾವುದೇ ಪಕ್ಷವಿರಲಿ, ದೇಶಾದ್ಯಂತ ರಾಜ್ಯಪಾಲರು ಇಂಥ ದೃಢ ಹೆಜ್ಜೆಯನ್ನಿಡುತ್ತಾ ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುತ್ತಾ ಬಂದಿದ್ದಾರೆ.
ವಿಧಾನ ಪರಿಷತ್ಗೆ ನಾಮನಿರ್ದೇಶನ, ರಾಷ್ಟ್ರಪತಿಗಳು ರಾಜ್ಯಸಭೆಗೆ ಮಾಡುವ ನಾಮ ನಿರ್ದೇಶನದ ಮಾದರಿಯಲ್ಲೇ ಇರುತ್ತದೆ. (ಅಂದರೆ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಸೇವೆಯಲ್ಲಿ ಪರಿಣತಿ ಅಥವಾ ಪ್ರಾಯೋಗಿಕ ಅನುಭವವಿರುವ ವ್ಯಕ್ತಿಗಳಾಗಿರಬೇಕು).
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರಧಾನಿಗಳಾಗಿದ್ದಾಗ, ಆರ್.ಕೆ. ನಾರಾಯಣ್, ಪಂಡಿತ್ ರವಿಶಂಕರ್, ಶಬಾನಾ ಆಜ್ಮಿ, ಜಾವೇದ್ ಅಖ್ತರ್ರಂಥ ಅತ್ಯುತ್ತಮ ವ್ಯಕ್ತಿಗಳ ನಾಮನಿರ್ದೇಶನವನ್ನು ಅಂದಿನ ರಾಷ್ಟ್ರಪತಿಗಳು ಮಾಡಿದ್ದರು. ಅಟಲ್ ಬಿಹಾರಿ ವಾಜಪೇಯಿಯವರೂ ಕೂಡ ಸಂವಿಧಾನಕ್ಕೆ ತಕ್ಕಂತೆಯೇ ನಡೆದುಕೊಂಡರು.
ಈ ಬಾರಿ ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಲು(ಪರಿಚ್ಛೇದ 171(5)ರ ಅಡಿ) ಅನೇಕ ಹೆಸರುಗಳನ್ನು ಪರಿಗಣಿಸಲಾಗುತ್ತಿದೆ ಎನ್ನುವುದನ್ನು ಇತ್ತೀಚಿನ ಮಾಧ್ಯಮ ವರದಿಗಳಲ್ಲಿ ಓದಿದ್ದೇನೆ. ಇದು ಊಹೆಯಾಗಿರಲೂಬಹುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಆಕಾಂಕ್ಷಿಗಳಿಂದ(ನಾನು ಅವರಲ್ಲಿ ಒಬ್ಬನಲ್ಲ) ಭಾರೀ ಒತ್ತಡ ಅನುಭವಿಸುತ್ತಿರುವುದು ಬೇಸರದ ಸಂಗತಿ. ಆದರೆ ಇದು ಸಾಂವಿಧಾನಿಕ ಔಚಿತ್ಯಕ್ಕೆ ಸಂಬಂಧಪಟ್ಟ ವಿಷಯವಾದ್ದರಿಂದ ಮುಖ್ಯಮಂತ್ರಿಗಳಾಗಲಿ ಅಥವಾ ರಾಜ್ಯಪಾಲರಾಗಲಿ ಇದನ್ನು ಹಗುರವಾಗಿ ಪರಿಗಣಿಸಬಾರದು. ಕೆಳಮನೆಯಲ್ಲಿ ಸ್ಥಾನ ಪಡೆಯಬೇಕಾದರೆ ಸಾರ್ವತ್ರಿಕ ಚುನಾವಣೆಯ ಗಡಿಬಿಡಿ, ಗದ್ದಲವನ್ನು ಎದುರಿಸಲೇಬೇಕಾದ ಅನಿವಾರ್ಯತೆಯಿರುತ್ತದೆ. ಆದರೆ ಮೇಲ್ಮನೆಯನ್ನು ಇಷ್ಟೆಲ್ಲ ಪರಿಪಾಟಲು ಪಡದೇ ಜಾಗ ಪಡೆಯುವ ಅನುಭವಿಗಳ ವೇದಿಕೆಯೆಂದು ನೋಡಲಾಗುತ್ತದೆ. ಹಾಗಾಗೇ ಮೇಲ್ಮನೆಯೆನ್ನುವುದರ ಮೌಲ್ಯವಿರುವುದು ದೇಶದ ಸೇವೆಗೆ ಸಾಧನವಾಗಬಲ್ಲ ಪ್ರತಿಭೆ, ಅನುಭವ ಮತ್ತು ಜ್ಞಾನದಲ್ಲಿ. ಪೂರ್ಣಾವಧಿ ರಾಜಕಾರಣಿಗಳಿಗೆ ವಿಧಾನಸಭೆಯ ಮೂಲಕ ವಿಧಾನ ಪರಿಷತ್ಗೆ ಆಯ್ಕೆಯಾಗುವ ಅವಕಾಶವಂತೂ ಇರುತ್ತದೆ. ಆದರೆ ಆ ದಾರಿಯೂ ಕೂಡ ತಾನು ಅಸ್ತಿತ್ವಕ್ಕೆ ಬಂದ ಮೂಲ ಕಾರಣವನ್ನು(ಚಿಂತಕರ ಮತ್ತು ಚರ್ಚೆಯ ಚಾವಡಿ) ಬದಲಿಸಿಕೊಳ್ಳಬಾರದು. ಅದು ಕೆಳಮನೆಯ ಜೆರಾಕ್ಸ್ ಕಾಪಿ ಆಗಿ ಬದಲಾಗುವುದು ಬೇಡ.
ಒಂದು ವೇಳೆ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳದಿದ್ದರೆ, ಸಾಂವಿಧಾನಿಕ ಮೌಲ್ಯವನ್ನು ರಾಜ್ಯಪಾಲರು ದೃಢವಾಗಿ ಹೇಳಬೇಕು. 'ಉತ್ತಮ ಆಡಳಿತ'ಕ್ಕೆ ಆಗ್ರಹಿಸುವ ಯುವ ಮತದಾರರು (ಲೋಕಸಭಾ ಚುನಾವಣೆಯಲ್ಲಿ ನೋಡಿದ್ದೇವೆ) ನಮ್ಮನ್ನು ಗಮನಿಸುತ್ತಿದ್ದಾರೆ.
-ಬಿ.ಕೆ. ಚಂದ್ರಶೇಖರ್, ಕಾಂಗ್ರೆಸ್ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

