ಲಾಲ್ ಬಹಾದ್ದೂರರನ್ನು ನೆನಪಿಸುವ, ಅಷ್ಟೇ ಪ್ರಾಮಾಣಿಕರಾದ ವ್ಯಕ್ತಿಯೆಂದರೆ ಜಯಸುಖಲಾಲ್ ಹಾತಿಯವರು. ವೃತ್ತಿಯಲ್ಲಿ ವಕೀಲರಾದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ನಾನಾ ದೇಶೀಯ ಸಂಸ್ಥಾನಗಳಲ್ಲಿ ಉನ್ನತ ಹುದ್ದೆಯನ್ನಲಂಕರಿಸಿ, ಸ್ವಾತಂತ್ರ್ಯಾನಂತರ ಸುಮಾರು 35 ವರ್ಷಗಳ ಕಾಲ ಕೇಂದ್ರ ಸರ್ಕಾರದ ವಿವಿಧ ಇಲಾಖೆಯಲ್ಲಿ ಸಂಪುಟ ದರ್ಜೆ ಸಚಿವರಾಗಿ, ಎರಡು ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ಸಂಪಾದಿಸಿದ್ದು ಹಣವನ್ನಲ್ಲ, ಜನಪ್ರೀತಿಯನ್ನು. ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ದಕ್ಷತೆಯಿಂದಾಗಿ ಅವರೆಂದೂ ಹಣದ ದಾಸರಾಗಲಿಲ್ಲ. ತಮ್ಮ ಪಾರದರ್ಶಕ ನಡವಳಿಕೆಯಿಂದಾಗಿ ಎಲ್ಲ ವರ್ಗದ ಜನರ ಪ್ರೀತಿ ಮತ್ತು ಗೌರವವನ್ನು ಸಂಪಾದಿಸಿದ್ದರು. ಅವರೆಷ್ಟು ಸರಳರಾಗಿದ್ದರೆಂದರೆ, ಒಮ್ಮೆ ಕೇಂದ್ರ ಸಚಿವರಾದ ಹಾತಿಯವರು ಬ್ರಿಟನ್ನಿನ ಮಾಜಿ ಪ್ರಧಾನಿ ಜೇಮ್ಸ್ ಕಲಘನ್ ಮತ್ತವರ ಪತ್ನಿಯನ್ನು ಹೈದರಾಬಾದಿಗೆ ಕರೆದೊಯ್ಯುವ ಜವಾಬ್ದಾರಿ ಅವರದಾಗಿತ್ತು. ಅಲ್ಲಿ ರಾಜ್ಯಪಾಲರ ಭವನದಲ್ಲಿ ಅತಿಥಿಗಳನ್ನು ಉಳಿಸಿದರು. ತಮಗೂ ರಾಜ್ಯಪಾಲರ ಭವ್ಯ ಮಹಲಿನಲ್ಲಿ ಉಳಿಯುವ ಏರ್ಪಾಡು ಮಾಡಿದ್ದರೂ ಸಹ ಅವರು ಅದನ್ನು ನಿರಾಕರಿಸಿ, ರಾಮಕೃಷ್ಣಾಶ್ರಮಕ್ಕೆ ಹೋಗಿ ಸ್ವಾಮಿ ರಂಗನಾಥಾನಂದರೊಡನೆ ಉಳಿದರು. ಭಾರತೀಯ ವಿದ್ಯಾಭವನದ ಸ್ಥಾಪಕರಾಗಿದ್ದ ಕೆ.ಎಂ.ಮುನ್ಷಿಯವರ ನಿಧನದಿಂದ ತೆರವಾದ ಸ್ಥಾನಕ್ಕೆ ಸೂಕ್ತವ್ಯಕ್ತಿ ಹಾತಿ ಎಂದು ಆಗಲೇ ನಿರ್ಧಾರ ಆಗಿತ್ತು. ಆಗ ಭವನದ ಕಾರ್ಯದರ್ಶಿ ರಾಮಕೃಷ್ಣನ್, ಹಾತಿಯವರನ್ನು ಭೇಟಿಯಾಗಿ ಭವನದ ಜವಾಬ್ದಾರಿ ಹೊರಲು ಆಗಮಿಸಬೇಕೆಂದು ವಿನಂತಿಸಿದರು. ಆಗ ಹಾತಿಯವರು ತಾವು ಪ್ರಾಮಾಣಿಕವಾಗಿ ಬದುಕಲು ಬಯಸುವುದಾಗಿಯೂ, ಆದರೆ ತಮ್ಮ ಬಳಿ ಯಾವುದೇ ಉಳಿತಾಯದ ಹಣ ಇಲ್ಲದಿರುವುದರಿಂದಲೂ, ಭವನದಿಂದ ಸಂಭಾವನೆ ಪಡೆಯಲು ಇಚ್ಛೆಯಿಲ್ಲದಿರುವುದರಿಂದ ಎರಡು ವರ್ಷ ಕಾಲಾವಕಾಶ ಬೇಡಿದರು. ಏಕೆ ಎರಡುವರ್ಷ ಎಂಬ ಪ್ರಶ್ನೆಗೆ, ಅವರು ಹೇಳಿದ್ದು ಹೀಗೆ, "ಎರಡುವರ್ಷ ಆದಮೇಲೆ ತಮ್ಮ ಜೀವವಿಮೆ ಪಕ್ವವಾಗುವುದಾಗಿಯೂ, ಆಗ ಬರುವ ಎರಡು ಲಕ್ಷ ರೂಪಾಯಿಗಳಿಂದ ಬರುವ ಬಡ್ಡಿಯಿಂದ ತನ್ನ ಮತ್ತು ತನ್ನ ಪತ್ನಿಯ ಜೀವನ ಸಾಗಿಸಲು ಸಾಧ್ಯವಾಗುವುದು. ಆಗ ಭವನದ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳುವೆ" ಇದು ಹಾತಿಯವರ ಸರಳ ವ್ಯಕ್ತಿತ್ವವನ್ನು ಸೂಚಿಸುವುದಲ್ಲದೆ, ಅವರ ಪಾರದರ್ಶಕ ನಡವಳಿಕೆಯನ್ನು ತೋರಿಸಿಕೊಡುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ