ಎಂ.ಆರ್. ರಾಮಯ್ಯನವರು ಶಿಕ್ಷಕರಾಗಿ, ಶಿಕ್ಷಣಾಧಿಕಾರಿಯಾಗಿ, ಮುಖ್ಯ ಶಿಕ್ಷಕರಾಗಿ ಅನೇಕ ಹುದ್ದೆಗಳನ್ನಲಂಕರಿಸಿ, ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಸಾಹಿತಿ, ಕವಿಯಾದ ರಾಮಯ್ಯನವರು ನಿವೃತ್ತರಾದ ಮೇಲೆ ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರೆಸುವ ನಿರ್ಧಾರ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಇದ್ದಕ್ಕಿದ್ದ ಹಾಗೆ 1969ರಲ್ಲಿ ದೃಷ್ಟಿ ಕಳೆದುಕೊಂಡು ಅಂಧರಾದರು. ಆದರೆ ಅವರಿಗಾದ ಈ ಅಘಾತ ಅವರನ್ನೆಂದಿಗೂ ಧೃತಿಗೆಡಲು ಬಿಡಲಿಲ್ಲ. ಏಕೆಂದರೆ ಅಂಧರ ಸೇವೆ ಮಾಡಲು ದೇವರು ನೀಡಿದ ಸಂದೇಶವಿದು ಎಂದೇ ಅವರು ಭಾವಿಸಿದರು. ಬ್ರೈಲ್ ಲಿಪಿಯನ್ನು ಕಲಿತು ತಮ್ಮ ಸಾಹಿತ್ಯ ಸೇವೆ ಮುಂದುವರೆಸಲು ನಿರ್ಧರಿಸಿದರು. ಅದಕ್ಕಾಗಿ ಮನೆಯಿಂದ ಸಾಕಷ್ಟು ದೂರದಲ್ಲಿದ್ದ ವೈಟ್‌ಫೀಲ್ಡ್‌ನ ಅಂಧರ ಶಾಲೆಗೆ ಸೇರಿದಾಗ ಅವರಿಗಾಗಲೇ ಅರವತ್ತು ವರ್ಷ ದಾಟಿತ್ತು! ಆದರೂ ಆಸಕ್ತಿಯಿಂದ ಬ್ರೈಲ್ ಲಿಪಿಯ ಅಭ್ಯಾಸ ಮಾಡಿ ಪರಿಣತಿ ಪಡೆದರು. ಅಲ್ಲದೆ ಅಂಧ ಮಕ್ಕಳಿಗೆ ಅನುಕೂಲವಾಗುವಂತೆ ಬ್ರೈಲ್ ಲಿಪಿಯಲ್ಲಿಯೇ ಕನ್ನಡದಲ್ಲಿ ಪುಟ್ಟ, ಸರಳ ಪುಸ್ತಕಗಳನ್ನು ಬರೆದುಕೊಟ್ಟರು. ಕರ್ನಾಟಕ ಅಂಧ ಮಕ್ಕಳ ಹಿತರಕ್ಷಣ ಸಮಿತಿಯ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸಿದರು. ಅಂಧರಿಗಾಗಿ ಕನ್ನಡ ಸಾಹಿತ್ಯ ಎಂಬ ಮಾಲಿಕೆಯನ್ನು ಪ್ರಾರಂಭಿಸಿ, ಹದಿನಾರು ಪುಸ್ತಕಗಳನ್ನು ರಚಿಸಿದರು. ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ, ರಾಜನೀತಿ ಮತ್ತು ಪೌರಧರ್ಮ ವಿಷಯವಾಗಿ ಆರು ಪುಸ್ತಕಗಳನ್ನು ಬ್ರೈಲ್ ಲಿಪಿಯಲ್ಲಿ ಸಿದ್ಧಗೊಳಿಸಿದರು. ಅವರ ಸೇವೆಯನ್ನು ಮನಗಂಡ ರಾಜ್ಯ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಅಂಧ ವಿದ್ಯಾರ್ಥಿಗಳಿಗೆ ಕೆಲವು ಪಠ್ಯ ಪುಸ್ತಕಗಳನ್ನು ರಚಿಸಲು ಲಿಪಿ ಸಂಪರ್ಕಾಧಿಕಾರಿಯನ್ನಾಗಿ ನೇಮಿಸಿದರು. ಆ ಹುದ್ದೆಯನ್ನೂ ದಕ್ಷತೆಯಿಂದ ನಿರ್ವಹಿಸಿ ಎಲ್ಲರ ಆದರಕ್ಕೆ ಪಾತ್ರರಾದರು. ಹೆಲೆನ್ ಕೆಲರ್ ಇವರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಹೀಗಾಗಿ ಅವರ ವ್ಯಕ್ತಿಚಿತ್ರವನ್ನೊಳಗೊಂಡ ಪುಸ್ತಕವನ್ನೂ ಬ್ರೈಲ್ ಲಿಪಿಯಲ್ಲಿ ಬರೆದರು. ಯೋಗಿರಾವ್ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಪುಸ್ತಕಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ರಾಜ್ಯ ಅಂಧ ಮಕ್ಕಳ ಕಲ್ಯಾಣ ಸಂಸ್ಥೆಯ ಕಟ್ಟಡ ನಿರ್ಮಾಣದಲ್ಲಿ ಇವರ ಪಾತ್ರ ತುಂಬ ಹಿರಿದು. ಹೀಗೆ ತಮ್ಮ ಜೀವನದಲ್ಲಿ ಒದಗಿದ ದುರಂತವನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡ ಅಪರೂಪದ ವ್ಯಕ್ತಿ ರಾಮಯ್ಯ. ಈ ಕಾರಣಕ್ಕಾಗೇ ಅವರನ್ನು ಕರ್ನಾಟಕದ ಲೂಯಿ ಬ್ರೈಲ್ ಎಂದೇ ಕರೆಯಲಾಗುತ್ತದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ