ಚುನಾವಣೆ ಸಮೀಕ್ಷೆಗಳ ಭವಿಷ್ಯ
ಭಾರತೀಯರ ವ್ಯವಹಾರಗಳಲ್ಲಿ ಸಾರ್ವಭೌಮಾಧಿಕಾರಿವನ್ನು ಪಡೆಯಲಿರುವ ಹದಿನಾರನೇ ಲೋಕಸಭೆಗೆ ಸದಸ್ಯರ ಚುನಾವಣೆಯ ಮಹಾಪ್ರಗಾಧ ಅಧಿಕೃತವಾಗಿ ಈ ವಾರದಲ್ಲೇ ಪ್ರಾರಂಭವಾಗುವ ಸಂಭವವಿದೆ.
ಚುನಾವಣೆ ಕುರಿತಂತೆ ರಾಷ್ಟ್ರಪತಿಯ ಪ್ರಕಟಣೆ, ಅದನ್ನು ಆಧರಿಸಿ ಚುನಾವಣೆ ಆಯೋಗದ ವೇಳಾಪಟ್ಟಿಯ ಪ್ರಕಟಣೆಯಾದ ಅನಂತರ ಸಂಬಂಧಪಟ್ಟವರಿಗೆಲ್ಲ ಆಚಾರ ಸಂಹಿತೆಯ ನಿಯಮಗಳ ಬಂಧನ ಜಾರಿಯಾಗಲಿರುವುದರಿಂದ, ಎಲ್ಲ ಪ್ರಕ್ರಿಯೆ- ಪ್ರತಿಕ್ರಿಯೆಗಳೂ ಆ ಸಂಹಿತೆಯ ಚೌಕಟ್ಟಿನಲ್ಲೇ ನಡೆಯಬೇಕು.
ಕಳೆದ ಎರಡು ಚುನಾವಣೆಗಳಿಂದಲೂ ಕೇಳಿ ಬರುತ್ತಿರುವ ದೂರುಗಳಲ್ಲಿ ಬಹಳ ಪ್ರಾಮುಖ್ಯವಾದದ್ದು ಚುನಾವಣೆ ಪೂರ್ವದ ಸಮೀಕ್ಷೆಗಳ ಫಲಿತಾಂಶವನ್ನು ಮಾಧ್ಯಮ ಪ್ರಪಂಚದಲ್ಲಿ ಪ್ರಚಾರ ಮಾಡುವುದರಿಂದ ಮತದಾರರ ಮನಸ್ಸಿನ ಮೇಲೆ ಅನಗತ್ಯವಾಗಿ ಹೆಚ್ಚು ಒತ್ತಡವನ್ನು ಹೇರಿದಂತಾಗಿ, ಸಾಮಾನ್ಯ ಜನರ ಅಂತಿಮ ಆಯ್ಕೆಯ ಸ್ವರೂಪ ಕುರೂಪಗೊಳ್ಳುವ ಸಂಭವವಿದೆ ಎನ್ನುವುದು.
ಆ ದೂರಿನ ಹಿಂದೆಯೇ ಕೇಳಿಬರುವುದು ಜನರ ಮನಸ್ಸಿನ ಓಘದ ದಿಕ್ಸೂಚಿಯನ್ನು ತಿಳಿಯಲು, ಆಧುನಿಕ ಸಂಖ್ಯಾ ಶಾಸ್ತ್ರದ ವೈಜ್ಞಾನಿಕ ಸಾಧನಗಳಿರುವುದರಿಂದ ಅದರ ಮುಕ್ತ ಫಲದಿಂದ ಜನರನ್ನು ವಂಚಿಸುವ ಸಂಭವವಿರುವುದರಿಂದ ಮಾಧ್ಯಮ ಪ್ರಪಂಚದ ಸ್ವಾತಂತ್ರ್ಯಕ್ಕೆ ಯಾರೂ ಅಡ್ಡಿ ಬರಬಾರದು ಎನ್ನುವ ಅಭಿಪ್ರಾಯ.
ನಿಜ. ಈ ಎರಡು ವಾದಗಳಲ್ಲೂ ಹುರುಳಿರುವಂತಿದೆ. ಎರಡನ್ನೂ ಯಾರೂ ಸಾರಾಸಗಟು ತಿರಸ್ಕರಿಸುವಂತಿಲ್ಲ. ಪೂರ್ತಿಯಾಗಿ ಪುರಸ್ಕರಿಸುವುದೂ ಕಷ್ಟ. ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನದ ಅಗತ್ಯವಿದೆ.
ಈಚಿನ ಕೆಲವು ಸಮೀಕ್ಷಾ ವರದಿಗಳ ಫಲಿತಾಂಶವನ್ನು, ಅದು ಪ್ರಕಟವಾದ ರೀತಿ ಹಾಗೂ ಆ ಅಂಕಿ-ಅಂಶಗಳ ಆಧರಿತ ವಿಶ್ಲೇಷಣೆ- ವ್ಯಾಖ್ಯಾನಗಳ ಪರಿಣಾಮವಾಗಿ ಮೂಡಿ ಬಂದ ಸಮೂಹಸನ್ನಿ ತನ್ನ ಸ್ವರೂಪದ ವರ್ತನೆಯನ್ನು ಗಮನಿಸಿದಾಗ, ಇಂತಹ ಸಮೀಕ್ಷೆಗಳು ಬೇಕೆ, ಬೇಡವೇ ಎನ್ನುವ ವಿಚಾರದಲ್ಲಿ ಖಚಿತವಾದ ಅಭಿಪ್ರಾಯವನ್ನು ಪ್ರಕಟಿಸಲು ಪಂಡಿತರ ಸಮುದಾಯಗಳೂ ಸಿದ್ಧವಾಗಿಲ್ಲ. ಇನ್ನು ಪಾಮರರ ಮಾತನ್ನು ಯಾರು ಕೇಳಬೇಕು.
ಈ ಬಾರಿ, ಈ ಸಮಸ್ಯೆಯನ್ನು ಒಂದು ಬಿಕ್ಕಟ್ಟಿನ ಸ್ವರೂಪಕ್ಕೇ ಪರಿವರ್ತಿಸಿದ ಇನ್ನೊಂದು ಬೆಳವಣಿಗೆ ಎಂದರೆ, ಸಮೀಕ್ಷೆಗಳ ಫಲಿತಾಂಶವನ್ನು ತಿರುಚಬಹುದೆಂದು ಒಂದು ಸಂಸ್ಥೆಯ ಕುಟುಕು ಕಾರ್ಯಾಚರಣೆಯ ವರದಿ ತಿಳಿಸಿರುವುದು.
ಆ ವರದಿ ಪ್ರಕಟವಾದ ಸಮಯದಲ್ಲಿ ಮಾಧ್ಯಮ ಪ್ರಪಂಚದಲ್ಲಿ ಅಲ್ಲಕಲ್ಲೋಲದ ವಾತಾವರಣ ಮಾನಸಿಕವಾಗಿ ನಿರ್ಮಾಣವಾಗಿದ್ದು ನಿಜ. ಆದರೆ ಅದು ಕೆಲವೇ ದಿನಗಳಲ್ಲಿ ಮಾಯವಾಯಿತು. ಕೆಲವರು ಚುನಾವಣೆ ಆಯೋಗವೇ ಈ ವಿಚಾರದಲ್ಲಿ ತೀರ್ಮಾನ ಪ್ರಕಟಿಸಬೇಕೆಂದು ಹೇಳಿ ತಮ್ಮ ಕೈ ತೊಳೆದುಕೊಂಡಿದ್ದಾಯಿತು. ಚುನಾವಣೆ ಆಯೋಗ ಮಾಧ್ಯಮ ಪ್ರಪಂಚದ ಹಕ್ಕುಗಳಿಗೆ ಸಂಬಂಧಿಸಿದ ವಿಚಾರ ತನ್ನ ವ್ಯಾಪ್ತಿಯೊಳಗೆ ಬರುವುದಿಲ್ಲವೆಂದು ಹೇಳಿ ತೀರ್ಮಾನದ ಹೊಣೆಯನ್ನು ಸರ್ಕಾರದ ಮೇಲೇ ಹೇರಿತು.
ಆದರೆ ಆಯೋಗ, ಈ ವಿಚಾರದಲ್ಲಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಚುನಾವಣೆಯ ಅಧಿಕೃತ ಪ್ರಕಟಣೆ ಹೊರಬಿದ್ದ ಅನಂತರ, ಅಂತಿಮ ಹಂತದ ಮತದಾನ ಮುಗಿದು 48 ಗಂಟೆಗಳು ಕಳೆಯುವವರೆಗೆ ಸಮೀಕ್ಷಾ ಫಲಿತಾಂಶಗಳನ್ನು, ಪ್ರಚಾರ ಮಾಡುವುದನ್ನು ಸರ್ಕಾರ ನಿಷೇಧಿಸಬೇಕು ಎಂದೂ ಹೇಳಿದೆ.
ಅದನ್ನು ಸರ್ಕಾರ ಚುನಾವಣೆ ಆಯೋಗದ ಆದೇಶವೆಂದು ಭಾವಿಸಬೇಕೋ ಅಥವಾ ಅದು ಒಂದು "ಸಲಹೆ ಮಾತ್ರ" ಎನ್ನುವಂತೆ ಪರಿಗಣಿಸಬೇಕೋ ಎನ್ನುವುದರ ಚರ್ಚೆಯೂ ನಡೆದಿಲ್ಲ.
ಚುನಾವಣೆ ಆಯೋಗ ಇಂತಹ ಸಲಹೆಯನ್ನು 2004ರ ಚುನಾವಣೆಯ ಸಮಯದಲ್ಲೇ ನೀಡಿದ್ದರೂ, ಆ ವಿಚಾರದಲ್ಲಿ ಅರ್ಥಪೂರ್ಣವಾದ ವ್ಯಾಪಕ ಚರ್ಚೆ ನಡೆದಿಲ್ಲ. ಒಂದು ವೇಳೆ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸುವುದನ್ನು ನಿಷೇಧಿಸುವುದು ಅಸಾಧ್ಯವಾದರೂ, ಅಂತಹ ಪ್ರಕಟಣೆಗಳನ್ನು ಕುರಿತು, ಸರ್ವ ಸಮ್ಮತವಾಗುವಂತಹ ನಿಯಂತ್ರಣದ ಚೌಕಟ್ಟನ್ನು ರೂಪಿಸುವ ಸಲಹೆಯನ್ನೂ ಚುನಾವಣೆ ಆಯೋಗ ಪತ್ರಿಕಾ ಮಂಡಳಿಯ ಮುಂದೆ ಇಟ್ಟಿದೆ.
ಪತ್ರಿಕಾ ಮಂಡಳಿಯ ವ್ಯಾಪ್ತಿ ದೃಶ್ಯ ಮಾಧ್ಯಮ, ಅಂತರ್ಜಾಲ ಮಾಧ್ಯಮವನ್ನು ಇನ್ನೂ ಆವರಿಸಿಲ್ಲ. ಆ ವಲಯಗಳ ಮೇಲೆ ಸದ್ಯದಲ್ಲಿ ಯಾವ ನಿಯಂತ್ರಣವೂ ಇಲ್ಲ. ಆದ್ದರಿಂದಲೇ ಸಮೀಕ್ಷಾ ಸಂಸ್ಥೆಗಳ, ಅದರ ಅಧ್ಯಯನ ಆಧರಿತ ವರದಿ, ವಿಶ್ಲೇಷಣೆ, ವ್ಯಾಖ್ಯಾನಗಳನ್ನು ಪ್ರಕಟಿಸುವ, ಪ್ರಚಾರ ಮಾಡುವ ಸಂಸ್ಥೆಗಳ ಮೇಲೆ ಈಗ ಹೆಚ್ಚಿನ ಹೊಣೆಗಾರಿಕೆ ಬಿದ್ದಿದೆ.
ಬಹುತೇಕವಾಗಿ ಟಿ.ವಿ. ವಾಹಿನಿಗಳಲ್ಲಿ ಈಗ ಪ್ರಸಾರವಾಗುತ್ತಿರುವ ವಿವರಣೆ, ವಿಶ್ಲೇಷಣೆ, ವ್ಯಾಖ್ಯಾನಗಳೆಲ್ಲವೂ ನಿಲಯದ ಕಲಾವಿದರಿಂದಲೇ ನಡೆಯುತ್ತಿದೆ. ಅನೇಕ ಸಂದರ್ಭಗಳಲ್ಲಿ ಇಲ್ಲಿ ಪ್ರಾಂಜಲವಾದ ಮನೋಧರ್ಮ ಪ್ರಕಟವಾಗುತ್ತಿಲ್ಲ.
ಸರ್ಕಾರ, ಚುನಾವಣೆ ಆಯೋಗ ಅಥವಾ ಸುಪ್ರೀಮ್ ಕೋರ್ಟಿನ ಅಭಿಪ್ರಾಯ ಏನಾದರೂ ಇರಲಿ. ಈಗ ಮಾಧ್ಯಮ ಪ್ರಪಂಚ ತನ್ನ ವೃತ್ತಿನಿಷ್ಠೆ, ಪಾರದರ್ಶಕತೆಯ ಪ್ರದರ್ಶನಕ್ಕೆ ಮುಂದಾಗಬೇಕು. ವಿಶ್ಲೇಷಣೆಗಳಲ್ಲಿ ಜಾತಿಗಳ ವಿಚಾರವೂ ಪ್ರಸ್ತಾಪವಾಗುತ್ತಿರುವುದರಿಂದ ಮಾಧ್ಯಮ ಪ್ರಪಂಚದ ಜವಾಬ್ದಾರಿ ಈಗ ಹಿಂದಿಗಿಂತ ಹೆಚ್ಚಾಗಿದೆ. ಅದನ್ನು ನಿಭಾಯಿಸುವ ಮಟ್ಟಕ್ಕೆ ಮಾಧ್ಯಮದ ಪ್ರಮುಖರು ಏರುವಂತಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

