ಕೋಟ್ಯಧಿಪತಿಯಾದರೂಕೊಳೆಗೇರಿಯಲ್ಲಿರುವ ಶರತ್
ಏಳುಮಲೈ ಶರತ್ ಬಾಬು ಅವರ ಕಥೆ ಒಂದು ಸಿನಿಮಾದಂತಿದೆ. ಹುಟ್ಟಿದ್ದು ಚೆನ್ನೈ ಹೊರವಲಯದ ಮಡಿಪಕ್ಕಂ ಎಂಬ ಕೊಳೆಗೇರಿಯಲ್ಲಿ. ಇವರ ತಾಯಿಗೆ ಐದು ಮಕ್ಕಳನ್ನು ಸಾಕುವ ಜವಾಬ್ದಾರಿ. ಆಕೆಯ ಕೆಲಸ ಅಂಗನವಾಡಿಯಲ್ಲಿ, ತಿಂಗಳಿಗೆ ಮೂವತ್ತು ರುಪಾಯಿ ಸಂಬಳ. ಜೀವನ ನಿರ್ವಹಣೆ ದುರ್ಭರವಾದಾಗ, ಬೆಳಿಗ್ಗೆ ಇಡ್ಲಿ ಮಾಡಿ ಮಾರಿ, ಸಂಜೆ ಹೊತ್ತು ರಾತ್ರಿ ಶಾಲೆ ನಡೆಸಿ ಅಲ್ಪ ಸ್ವಲ್ಪ ಗಳಿಸಿ ಮಕ್ಕಳನ್ನು ಓದಿಸಿದರು. ಅದೆಷ್ಟೋ ದಿನ ತಾವು ನೀರು ಕುಡಿದು ಹೊಟ್ಟೆ ತುಂಬಿಸಿಕೊಂಡು ಮಕ್ಕಳನ್ನು ಸಾಕಿದರು. ತುಂಬಾ ಚುರುಕಾಗಿದ್ದ ಶರತ್ ಪ್ರತಿದಿನ ಬೆಳಗ್ಗೆ ತಾಯಿ ಮಾಡಿದ ಇಡ್ಲಿಗಳನ್ನು ಮನೆಮನೆಗೆ ಹೊತ್ತೊಯ್ದು ಮಾರುತ್ತಿದ್ದರು. ತರಗತಿಯಲ್ಲಿಯೂ ಹೆಚ್ಚು ಅಂಕಗಳಿಸಿ, ಎಸ್ಸೆಸ್ಸೆಲ್ಸಿ ಪಾಸುಮಾಡಿಕೊಂಡರು. ನಂತರ ಪಿಯುಸಿ ಓದಲು ಬೇಕಾಗಿದ್ದ ಹಣವನ್ನು ಬೇಸಿಗೆ ರಜೆಯಲ್ಲಿ ಪುಸ್ತಕಗಳಿಗೆ ರಕ್ಷಾಕವಚ ಹಾಕಿ ಸಂಪಾದಿಸಿದರು. ಆಗಲೇ ತಮ್ಮಂತಹ 20 ಜನರನ್ನು ನೇಮಕ ಮಾಡಿಕೊಂಡಿದ್ದ. ನಂತರ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದಾಗ ಅಹಮದಾಬಾದಿನ ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನಲ್ಲಿ ಓದಲು ಅವಕಾಶ ದೊರೆಯಿತು. ಸರ್ಕಾರದ ವಿದ್ಯಾರ್ಥಿವೇತನವೂ ದೊರೆತಾಗ ಅಲ್ಲಿ ಓದು ಮುಂದುವರೆಸಲು ಸಾಧ್ಯವಾಯಿತು. ಉತ್ತಮ ಅಂಕ ಗಳಿಸಿ ಎಂಬಿಎ ಪದವೀಧರನಾದ ಶರತ್ ಬಾಬುವಿಗೆ ಅನೇಕ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡಿದವು. ಲಕ್ಷಗಟ್ಟಲೆ ಗಳಿಸಬಹುದಾದ ನೌಕರಿ ದೊರೆತರೂ ಆಸೆ ಪಡದೆ, ತಾವೇ ಒಂದು ಸ್ವಂತ ಉದ್ಯಮ ಸ್ಥಾಪಿಸಬೇಕೆಂದು ನಿರ್ಧರಿಸಿದರು. ಆದರೆ ಅವರ ಬಳಿ ಕೇವಲ 2000 ರುಪಾಯಿ ಮಾತ್ರ ಇತ್ತು. ಬ್ಯಾಂಕ್ನಿಂದ ಒಂದು ಲಕ್ಷ ಸಾಲ ಪಡೆದು "ಫುಡ್ಕಿಂಗ್ ಕೇಟರಿಂಗ್ ಸರ್ವೀಸಸ್" ಎಂಬ ಕಂಪನಿಯನ್ನು ಸ್ಥಾಪಿಸಿದರು. ಆಗ ಈ ಸಂಸ್ಥೆಯಲ್ಲಿ ಮೂವರು ಕೆಲಸಗಾರರಿದ್ದರು. ಫುಡ್ಕಿಂಗ್ ಕೇಟರಿಂಗ್ ಸರ್ವೀಸಸ್ ಉದ್ಯಮವನ್ನು ಉದ್ಘಾಟಿಸಿದ ಇನ್ಫೋಸಿಸ್ನ ನಾರಾಯಣ ಮೂರ್ತಿಯವರು ಶರತ್ ಅವರಿಗೆ ಶುಭ ಹಾರೈಸಿದರು. ಇಂದು ಶರತ್ರ ದೂರದೃಷ್ಟಿ, ಪರಿಶ್ರಮ ಮತ್ತು ಉತ್ತಮ ಸೇವೆಯಿಂದಾಗಿ ಈ ಸಂಸ್ಥೆ ಹೆಮ್ಮರವಾಗಿ ಬೆಳೆದು ತನ್ನ ಶಾಖೆಗಳನ್ನು ಚೆನ್ನೈ, ಗೋವಾ, ಹೈದರಾಬಾದ್ ಮತ್ತು ರಾಜಾಸ್ಥಾನದ ಎಂಟುಕಡೆ ಸ್ಥಾಪಿಸಿದೆ. ಈಗ ಇದರ ವಹಿವಾಟು ವರ್ಷಕ್ಕೆ ಎಂಟು ಕೋಟಿ ದಾಟಿದೆ. 250ಕ್ಕೂ ಹೆಚ್ಚು ಯುವಕರಿಗೆ ನೇರವಾಗಿ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಕೋಟ್ಯಧೀಶನಾದರೂ ಸಹ ಇಂದಿಗೂ ಅದೇ ಕೊಳೆಗೇರಿಯ ತನ್ನ ಮನೆಯಲ್ಲಿ ತನ್ನ ತಾಯಿ, ಪತ್ನಿ ಮತ್ತು ತಮ್ಮಂದಿರ ಜೊತೆಗೆ ವಾಸಿಸುವ ಶರತ್ ಸರಳ ಜೀವನವನ್ನೇ ಇಷ್ಟಪಡುತ್ತಾರೆ. ಇದೀಗ ಭಾರತವನ್ನು ಹಸಿವು ಮುಕ್ತ ರಾಷ್ಟ್ರವನ್ನಾಗಿ ಮಾಡಲು ಪಣತೊಟ್ಟು ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಪ್ರತಿವರ್ಷ 150ಕ್ಕೂ ಹೆಚ್ಚು ಸಂಘ ಸಂಸ್ಥೆಗಳಲ್ಲಿ ಇವರು ಪ್ರೇರಕ ಮಾತುಗಳನ್ನಾಡಿ, ಯುವಕರು ಸ್ವಂತ ಉದ್ಯೋಗ ಸೃಷ್ಟಿಸಲು ಪ್ರೇರಣೆ ನೀಡುತ್ತಾರೆ. ಅದೃಷ್ಟ ಬರುತ್ತದೆ, ಹೋಗುತ್ತದೆ. ಆದರೆ ಜೀವನ ಸಂಗ್ರಾಮಕ್ಕೆ ನಾವು ಸದಾ ಸಿದ್ಧರಾಗಿರಬೇಕು, ವೈಫಲ್ಯಕ್ಕೆ ಕುಗ್ಗಬಾರದು ಎಂಬ ನಿಲುವನ್ನು ಹೊಂದಿರುವ ಶರತ್, ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ, 2008ರ ಪೆಪ್ಸಿ-ಎಂಟಿವಿ ಪ್ರಶಸ್ತಿ, ರೋಟರಿ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಮುಡಿಗೇರಿವೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

