ಗೋಧ್ರಾ ವಿವಾದದ ತೀರ್ಪು ಇನ್ನೂ ಬಾಕಿ ಇದೆ
ಇದ್ದಕ್ಕಿದ್ದಂತೆ, ಕಾಂಗ್ರೆಸ್ ಪ್ರಚಾರಕರು 2002ರ ಫೆಬ್ರವರಿಯ ಅನಂತರ ಗುಜರಾತ್‌ನಲ್ಲಿ ನಡೆದ ಭೀಕರ ಹಿಂಸಾಚಾರ- ಹತ್ಯಾಕಾಂಡದ ಪ್ರಕರಣಗಳ ಹೊಣೆಗಾರಿಕೆಯ ಪ್ರಶ್ನೆಯನ್ನು ಮತ್ತೆ ಎತ್ತಿದ್ದಾರೆ. ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿ ಅವರೇ ಒಂದು ಸಂದರ್ಶನದಲ್ಲಿ ಆ ಹಿಂಸಾಚಾರದ ಕಾಯಿದೆ ಬದ್ಧ ಹೊಣೆಗಾರಿಕೆಯ ಪ್ರಶ್ನೆ ಇನ್ನೂ ಹಾಗೇ ಉಳಿದಿದೆ ಎಂದಿದ್ದಾರೆ.
ಇದು ಸ್ಪಷ್ಟವಾಗಿ ಮತ್ತೆ ಗೋಧ್ರಾ ಅನಂತರದ ಪ್ರಕರಣಗಳ ಹೊಣೆಗಾರಿಕೆಯನ್ನು ಸಾರ್ವಜನಿಕರ ಮುಂದೆ ಚುನಾವಣೆ ಪ್ರಚಾರ ಸಮರದ ಅಂಗವಾಗಿ, ಪ್ರಶ್ನೆಯ ರೂಪದಲ್ಲಿ ಮಂಡಿಸುವ ಪ್ರಯತ್ನ. ಕಾಯಿದೆಯ ವಿಧಿ ನಿಯಮಗಳಂತೆ, ಅದರಲ್ಲಿ ತಪ್ಪೇನೂ ಇಲ್ಲ. ಆ ಪ್ರಕರಣಗಳು ನಡೆದು ಎರಡು ದಶಕಗಳೇ ಕಳೆದಿವೆ. ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಕಾಯಿದೆಯ ನಿಯಮಗಳಂತೆ ವಿಚಾರಣೆಯೂ ನಡೆದು ಕೆಲವು ಅಪರಾಧಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಆಗಿನ ಹಿಂಸಾಚಾರವನ್ನು ತಡೆಯುವುದರಲ್ಲಿ ವಿಫಲವಾದ ಗುಜರಾತ್ ರಾಜ್ಯ ಸರ್ಕಾರದಲ್ಲಿ ವೈಯಕ್ತಿಕವಾಗಿ ಯಾರ ಮೇಲೆ ಹೊಣೆಗಾರಿಕೆಯನ್ನು ಹೇರಬೇಕೆನ್ನುವುದು ಇತ್ಯರ್ಥವಾಗಿಲ್ಲ.
ಈ ವಿಚಾರದಲ್ಲಿ ಸುಪ್ರೀಮ್ ಕೋರ್ಟ್, ಒಂದು ವಿಶೇಷ ತನಿಖಾ ತಂಡವನ್ನು ರಚಿಸಿ, ತನಿಖೆಯ ಉಸ್ತುವಾರಿಯ ಹೊಣೆಯನ್ನು ತಾನೇ ಹೊತ್ತುಕೊಂಡಿತ್ತು. ಆ ತಂಡ ನೀಡಿದ ವರದಿಯಲ್ಲಿ ಎಲ್ಲೂ ಹಿಂಸೆಯ ಪ್ರಕರಣಗಳಿಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಹೊಣೆಗಾರಿಕೆಯನ್ನು ಹೊರಿಸಲು ಯಾವ ಸಾಕ್ಷ್ಯ ಆಧಾರವೂ ಇಲ್ಲ ಎಂದು ತಿಳಿಸಲಾಗಿದೆ. ಆ ವರದಿಯನ್ನು ಅಹಮದಾಬಾದ್‌ನ ಒಂದು ನ್ಯಾಯಾಲಯ ಒಪ್ಪಿಕೊಂಡಿದ್ದೂ ಆಗಿದೆ. ಅಲ್ಲಿಗೇ ಗೋಧ್ರಾ ಪ್ರಕರಣದ ತನಿಖೆಯ ಅಂತ್ಯವಾಯಿತು ಎನ್ನುವ ಭಾವನೆ ಜನರಲ್ಲಿ ಮೂಡಿದ್ದರೂ, ಅದು ಕಾಯಿದೆಯ ದೃಷ್ಟಿಯಲ್ಲಿ ಸರಿಯಲ್ಲ. ತನಿಖಾ ತಂಡದ ವರದಿ ಬಹಿರಂಗವಾದ ಅನಂತರ ಮಾಧ್ಯಮ ಪ್ರಪಂಚದಲ್ಲಿ ಬೇಕಾದಷ್ಟು ಚರ್ಚೆಯಾಯಿತು. ಗುಜರಾತ್‌ನಲ್ಲಿ ಕೆಲವು ಪುಸ್ತಕಗಳೂ ಪ್ರಕಟವಾದವು. ಅದರಲ್ಲಿ ಕೆಲವರು ತನಿಖೆಯೇ ದೋಷಪೂರ್ಣವಾಗಿತ್ತು ಎಂದು ಅಭಿಪ್ರಾಯಪಟ್ಟಿರುವುದೂ ಉಂಟು. ಪ್ರಮುಖ ಅಪರಾಧಗಳ ತನಿಖೆಯ ವಿಚಾರದಲ್ಲಿ ಇಂತಹ ಭಿನ್ನಾಭಿಪ್ರಾಯ ಸಹಜವೇ.
ಮುಂದೆ, ಕಾಲಕ್ರಮದಲ್ಲಿ ತನಿಖಾ ತಂಡದ ವರದಿಯೇ ಹೈಕೋರ್ಟ್- ಸುಪ್ರೀಮ್ ಕೋರ್ಟ್‌ಗಳಲ್ಲಿ ಪರಿಶೀಲನೆಗೆ ಬರಲೂಬಹುದು. ಅದು ಭವಿಷ್ಯದ ಮಾತು. ಆದರೆ ಸದ್ಯದ ಸ್ಥಿತಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧ ಯಾವ ನ್ಯಾಯಾಲಯದಲ್ಲೂ, ಯಾವ ಆರೋಪವೂ "ಜೀವಂತವಾಗಿಲ್ಲ". ಅಹಮದಾಬಾದ್‌ನ ನ್ಯಾಯಾಲಯ ತನ್ನ ಕೆಲಸವನ್ನು ಮಾಡಿದೆ. ಉಳಿದಿದ್ದು ಸರ್ಕಾರ ಹಾಗೂ ಸಮಾಜಕ್ಕೆ ಬಿಟ್ಟಿದ್ದು. ಮುಂದೆ ಆಗಬಹುದಾದ ಘಟನೆಗಳನ್ನು ಊಹಿಸಿಕೊಂಡು, ಈಗಿನ ಚುನಾವಣೆ ಸಮಯದಲ್ಲಿ ಹಿಂದೆ ಹೇಳಿದ್ದ ವಿಚಾರಗಳನ್ನೇ ಮತ್ತೆ ಮತ್ತೆ ಪ್ರಸ್ತಾಪಿಸುವುದು ಕೇವಲ ಒಂದು ಪ್ರಚಾರದ ಸಾಧನವಷ್ಟೇ. ಅದಕ್ಕೆ ಅದಕ್ಕಿಂತ ಹೆಚ್ಚಿನ ಮೌಲ್ಯವೇನೂ ಇಲ್ಲ. ಚುನಾವಣೆ ಸಮಯದಲ್ಲಿ ಇಂತಹ ಪ್ರಚೋದಕವಾದ ವಿಷಯಗಳನ್ನು ಬಳಸುವುದು ಸರಿಯೇ ಎನ್ನುವುದು ಚುನಾವಣೆ ಆಯೋಗಕ್ಕೆ ಬಿಟ್ಟ ವಿಚಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

