ಪದ್ಮಭೂಷಣ ನಂದಾಲಾಲ್ ಬಸು ಕಳೆದ ಶತಮಾನದ ಕೊನೆಯಲ್ಲಿ ಜನಿಸಿ ತಮ್ಮ ಕಲಾಪ್ರೌಢಿಮೆಯಿಂದ ಜಗತ್ತಿನ ಗಮನ ಸೆಳೆದ ಚಿತ್ರಕಾರರಾಗಿದ್ದರು. ರವೀಂದ್ರನಾಥ ಟಾಗೂರ್ ಅವರ ಶಿಷ್ಯರಾಗಿ ಶಾಂತಿನಿಕೇತನದ ಕಲಾಭವನದ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. ಭಾರತದ ಪೌರಾಣಿಕ ಘಟನೆಗಳ ಮತ್ತು ಅಜಂತಾ ಚಿತ್ರಗಳನ್ನು ಬಿಡಿಸುವುದರಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಅವರ ಚಿತ್ರಗಳನ್ನೀಗ ಸಂರಕ್ಷಿಸಿಡಲಾಗಿದೆ. ಇಂಥ ಅದ್ಭುತ ಕಲಾವಿದರಿಂದ ಚಿತ್ರಕಲೆ ಕಲಿಯಲು ವಿದೇಶದಿಂದ ಅನೇಕರು ಶಾಂತಿನಿಕೇತನಕ್ಕೆ ಬರುತ್ತಿದ್ದರು. ಒಮ್ಮೆ ಹೀಗೆ ಬಂದ ಒಂದು ತಂಡ, ನಂದಾಲಾಲ್ ಬಸು ಅವರ ಬಳಿ "ಒಂದು ವರ್ಷದಲ್ಲಿ ತಮಗೆ ಭಾರತೀಯ ಚಿತ್ರಕಲೆಯನ್ನು ಕಲಿಸಬೇಕೆಂದು" ಮನವಿ ಮಾಡಿತು. ಚಿತ್ರಕಲೆಯನ್ನು ಕಲಿಯುವ ಮೊದಲು ದೇಶದ ಸಾಹಿತ್ಯ, ಸಂಸ್ಕೃತಿ, ಜೀವನ ಶ್ರದ್ಧೆ, ನಂಬಿಕೆಗಳನ್ನು ಅಧ್ಯಯನ ಮಾಡಬೇಕೆಂದು ಬಸು ಸೂಚಿಸಿದರು. ಅದಕ್ಕೂ ಚಿತ್ರಕಲೆಗೂ ಏನು ಸಂಬಂಧ ಎಂಬ ವಿದ್ಯಾರ್ಥಿಗಳ ಮಾತಿಗೆ ಒಂದು ದೇಶದ ಸಂಸ್ಕೃತಿಯ ಅರಿವು ಹೇಗೆ ಅವಶ್ಯಕ ಎಂದು ಒಂದು ಪ್ರಯೋಗವನ್ನು ಅವರೆದುರಿನಲ್ಲಿಯೇ ಮಾಡಿದರು. ರಾಧೆ ಯಮುನಾ ತೀರಕ್ಕೆ ಹೋದಳು ಎಂಬ ವಾಕ್ಯವನ್ನು ಹೇಳಿ, ಅದರ ಅರ್ಥವನ್ನು ವಿವರಿಸಿ ಎಂದು ಕೇಳಿದರು. ಅದಕ್ಕೆ ಸಮಂಜಸವಾದ ವಿವರಣೆ ನೀಡಿದರೆ, ಅವರು ಚಿತ್ರಕಲೆ ಕಲಿಯಲು ಅರ್ಹರಾಗುವುದಾಗಿ ತಿಳಿಸಿದರು. ವಿದ್ಯಾರ್ಥಿಗಳಿಗೆ ತುಂಬ ಸಂತೋಷವಾಯಿತು. ಬಹುಶಃ ರಾಧೆ ಎಂಬ ಮಹಿಳೆ ಯುಮುನಾ ನದಿಗೆ ನೀರು ತರಲು ಹೋಗಿರಬಹುದು ಎಂದು ಒಬ್ಬ ವಿವರಿಸಿದರೆ, ಮತ್ತೊಬ್ಬ, ಸ್ನಾನಕ್ಕೆ ಹೋಗಿರಬಹುದು ಎಂದು ವಿವರಣೆ ಕೊಟ್ಟ. ಕೆಲವರು ಪ್ರಕೃತಿಯ ಆಸ್ವಾದನೆಗಾಗಿ ಹೋಗಿರಬಹುದೆಂಬ ಅಭಿಪ್ರಾಯ ನೀಡಿದರು. ಅಷ್ಟರಲ್ಲಿ ಹಾಲು ಮಾರುವವನೊಬ್ಬ ದಾರಿಯಲ್ಲಿ ಹೋಗುತ್ತಿದ್ದುದನ್ನು ನೋಡಿದ ನಂದಾಲಾಲರು ಅವನ್ನು ತಮ್ಮ ಬಳಿ ಕರೆದು, ರಾಧೆ ಯಮುನಾ ತೀರಕ್ಕೆ ಹೋದಳು ಎಂಬ ವಾಕ್ಯ ಹೇಳಿ ಅವನಿಗನ್ನಿಸಿದ್ದನ್ನು ತಿಳಿಸಲು ಹೇಳಿದರು. ಆಗವನು ತನ್ನೆರಡು ಕೆನ್ನೆಗಳನ್ನೂ ಮುಟ್ಟಿಕೊಂಡು, ಭೂಮಿಗೆ ಬಗ್ಗಿ ನಮಸ್ಕರಿಸಿ, "ಯಮುನೆ, ಬೆಳುದಿಂಗಳು, ರಾಧೆ-ಕೃಷ್ಣ ಅವರ ಪ್ರೇಮ ಒಂದೇ ಎರಡೇ? ಎಷ್ಟೊಂದು ವಿಷಯಗಳಿವೆ ಅದನ್ನು ಹೇಗೆ ಹೇಳಲಿ?" ಎಂದು ಹೇಳಿ ತನಗೆ ಗೊತ್ತಿರುವ ಕೆಲ ಪ್ರಸಂಗಗಳನ್ನು ವಿವರಿಸಿದ. ಅದನ್ನವರು ಇಂಗ್ಲಿಷಿನಲ್ಲಿ ಅನುವಾದಿಸಿ ವಿದೇಶಿ ವಿದ್ಯಾರ್ಥಿಗಳಿಗೆ ವಿವರಿಸಿ ಕೊನೆಗೆ ಹೇಳಿದರು, "ಒಂದು ದೇಶವನ್ನು ತಿಳಿಯುವುದೆಂದರೆ, ಆ ದೇಶದ ಸಂಸ್ಕೃತಿ, ಪರಂಪರೆಯನ್ನು ತಿಳಿಯುವುದು ಎಂದರ್ಥ. ಚಿತ್ರಕಲೆ ಗೆರೆಗಳಿಂದ, ಬಣ್ಣಗಳಿಂದಷ್ಟೆ ಸಿದ್ಧಿಸದು. ಅದಕ್ಕೆ ಜೀವನದ ಪರಿಪೂರ್ಣತೆಯೂ ಬೇಕು"
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com