ಜಗತ್ತಿನ ಏಕೈಕ ಪರಿಪೂರ್ಣ ಪತ್ರಕರ್ತ (ಎಂದು ಭಾವಿಸಿರುವವ)
ಪ್ಯಾನೆಲ್ ಚರ್ಚೆಯನ್ನು ಹೇಗೆ ನಡೆಸಬಾರದು ಎಂಬುದಕ್ಕೆ ಈತ ಉತ್ತಮ ಉದಾಹರಣೆ
ಸ್ಟುಡಿಯೋವನ್ನೇ ಲೋಕಸಭೆಯಾಗಿಸಿಕೊಳ್ಳುವುದರಿಂದ ಈತನಿಗೆ ಸಂಸದನಾಗುವ ಪ್ರತ್ಯೇಕ ಇಚ್ಛೆ ಇಲ್ಲವಂತೆ
ಈತ ನಿಮಗೆ ಪ್ರಶ್ನೆ ಕೇಳುತ್ತಾನೆ ಮತ್ತು ನಿಮ್ಮ ಉತ್ತರ ಈತನಿಗೆ ಬೇಕಿಲ್ಲ
ತೊದಲು ಮಾತನಾಡುವ ಒಬ್ಬ ಟಾಫಿ ಕಂದನ ಸಂದರ್ಶನದ ಮೂಲಕ ದೇಶಕ್ಕೆ ದೇಶವನ್ನೇ ನಗೆಗಡಲಲ್ಲಿ ತೇಲಿಸಿದಾತ
ಹಲವರನ್ನು ಕುಳ್ಳಿರಿಸಿಕೊಂಡು ಈತ ಮಾತನಾಡುತ್ತಾನೆ. ಈತನೇ ಮಾತನಾಡುತ್ತಾನೆ ಮತ್ತು ಈತನೊಬ್ಬನೇ ಮಾತನಾಡುತ್ತಾನೆ
ಯಾರನ್ನು ಬೇಕಾದರೂ ಪ್ರಶ್ನಿಸುವ ಅವಕಾಶವನ್ನು ಸಂವಿಧಾನ ಈತನಿಗೆ ಕೊಟ್ಟಿದೆ. ಆದರೆ ಉತ್ತರವನ್ನು ಮಾತ್ರ ಹೇಳಲು ಈತ ನಿಮಗೆ ಅವಕಾಶ ಕೊಡುವುದಿಲ್ಲ
ಸ್ಫುಟವಾದ ಇಂಗ್ಲಿಷ್ ಒಂದಿದ್ದರೆ ಸಾಕು, ತಾಳ್ಮೆ ಬೇಕಿಲ್ಲ ಎಂದುಕೊಳ್ಳುವ ಗಡಿಬಿಡಿ ಪತ್ರಕರ್ತರ ಆದರ್ಶ
ಯಾವುದೇ ವಿಷಯದ ಮೇಲೆ ಯಾರು ಬೇಕಾದರೂ ಚರ್ಚಿಸಬಹುದು. ಆದರೆ ತೀರ್ಮಾನ ಮಾತ್ರ ಇವನಲ್ಲೇ ಕೇಳಬೇಕು
ಇಡೀ ದೇಶದ ಜವಾಬ್ದಾರಿಯನ್ನೇ ತಲೆಮೇಲೆ ಇರಿಸಿಕೊಂಡವರಂತೆ (ಮಾತು) ಆಡುವವ
ಮೊಂಡು ಹಠ, ಭಂಡ ಧೈರ್ಯದ ಸಮಾನಾರ್ಥಕ
ಈತ ಹೆಸರಿನಲ್ಲಷ್ಟೇ ಸ್ವಾಮಿ, ಕಿಂಚಿತ್ತೂ ಸಹನೆ ಇಲ್ಲ ಸ್ವಾಮೀ...
ಭಾರತದ ನೂರಿಪ್ಪತ್ತು ಕೋಟಿ ಜನತೆ ಅಂದುಕೊಂಡಿದ್ದೆಲ್ಲವನ್ನೂ ಕೇಳಿಸಿಕೊಳ್ಳುವ ಅಗೋಚರ ಶಕ್ತಿ ಉಳ್ಳವ (people are saying....)
ಇವನ ಮೂಲಕ ದೇಶವೇ ತಿಳಿಯಲು ಬಯಸುತ್ತದೆ (Nation wants to know)
ಶ್ರೋತೃಗಳನ್ನು ಅಪೇಕ್ಷಿಸದ ರಾಷ್ಟ್ರದ ವಕ್ತಾರ.
ಈತ ನಿಜಕ್ಕೂ "ಮೂಕಂ ಕರೋತಿ ವಾಚಾಲಮ್..."
-ವಿಶ್ವನಾಥ ಸುಂಕಸಾಳ
vishwasunkasal@yahoo.com