ವಿಧವಾ ವಿವಾಹಕ್ಕೆ ವಿರೋಧ ಬಂದಾಗ

Updated on: 

ಈಶ್ವರ ಚಂದ್ರ ವಿದ್ಯಾಸಾಗರರು ಕೇವಲ ಶಿಕ್ಷಣ ತಜ್ಞ ಮತ್ತು ತತ್ವಜ್ಞನಿಯಾಗಿರದೆ, ಪ್ರಗತಿಪರರೂ, ಸಮಾಜದಲ್ಲಿದ್ದ  ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟಮಾಡುವ ಸಮಾಜ ಸುಧಾರಕರೂ ಆಗಿದ್ದರು. 1829ರಲ್ಲಿ ಸರ್ಕಾರ ಸತಿ ಪದ್ಧತಿಯನ್ನು ನಿಷೇಧಿಸಿದ ಮೇಲೆ, ವಿಧವಾ ಸಮಸ್ಯೆಯ ಬಗ್ಗೆ ಚಿಂತನೆ ನಡೆಸಿದವರು ವಿದ್ಯಾಸಾಗರರು. ಬಾಲ್ಯ ವಿವಾಹ ಪದ್ಧತಿ ಸಾಮಾನ್ಯವಾಗಿದ್ದ ಆ ಕಾಲದಲ್ಲಿ ತೀರಾ ಚಿಕ್ಕವಯಸ್ಸಿಗೇ ಗಂಡನನ್ನು ಕಳೆದುಕೊಂಡ ಹೆಣ್ಣುಮಕ್ಕಳು ಇಡೀ ಜೀವನವನ್ನು ಒಂಟಿಯಾಗಿ ಕಳೆಯಬೇಕಾಗಿತ್ತು.
ಅಂದಿನ ಸಂಪ್ರದಾಯಸ್ಥ ಸಮಾಜದಲ್ಲಿ ವಿಧವಾ ವಿವಾಹಕ್ಕೆ ಅಪಾರ ವಿರೋಧವಿತ್ತು. ಸ್ವತಃ ಬಂಕಿಂ ಚಂದ್ರರು ವಿಧವಾ ವಿವಾಹಕ್ಕೆ ಬೆಂಬಲಿಸಲಿಲ್ಲ. ಆದರೆ ವಿದ್ಯಾಸಾಗರರ ನಿರ್ಧಾರ ಅಚಲವಾಗಿತ್ತು. ಸಹಸ್ರಾರು ಕರಪತ್ರಗಳನ್ನು ಮುದ್ರಿಸಿ ಜನಸಾಮಾನ್ಯರಲ್ಲಿ ಜಾಗೃತಿಯನ್ನುಂಟುಮಾಡಿದರು. ಪತ್ರಿಕೆಗಳಲ್ಲಿ ಪರ ಮತ್ತು ವಿರೋಧದ ಸುದ್ದಿಗಳು ಪ್ರಕಟವಾದವು. ವಿದ್ಯಾಸಾಗರರನ್ನು ಅವಮಾನಿಸಲಾಯಿತು. ಕೆಲವರು ಗೇಲಿಮಾಡಿದರು. ಅವರನ್ನು ಮಣಿಸಲು ಕೊಲೆಯ ಬೆದರಿಕೆಯನ್ನೂ ಹಾಕಲಾಯಿತು.
ಒಬ್ಬ ಶ್ರೀಮಂತನಂತೂ ಬಹಿರಂಗವಾಗಿಯೇ ವಿದ್ಯಾಸಾಗರರನ್ನು ಹೊಡೆಸಲು ಸಂಚುಮಾಡಿದ. ಅದನ್ನು ತಿಳಿದು ಶ್ರೀಮಂತನ ಬಳಿಗೆ ಒಂಟಿಯಾಗಿಯೇ ಹೋಗಿ, "ನನಗೆ ಹೊಡೆಸಲು ಜನರನ್ನು ಸಿದ್ಧಗೊಳಿಸಿದ್ದೀಯೆಂದು ತಿಳಿದು ಬಂತು. ಈಗ ನಾನು ನಿನ್ನೆದುರು ಬಂದಿದ್ದೇನೆ. ನಿನಗೆ ತೃಪ್ತಿಯಾಗುವಷ್ಟು ಹೊಡೆದು ನಿನ್ನ ಬಯಕೆಯನ್ನು ತೀರಿಸಿಕೊಳ್ಳಬಹುದು" ಎಂದು ಧೈರ್ಯವಾಗಿ ಹೇಳಿದರು. ಆ ಶ್ರೀಮಂತ ನಾಚಿ ವಿದ್ಯಾಸಾಗರರ ಕ್ಷಮೆ ಕೋರಿದ. ಎಷ್ಟೇ ವಿರೋಧವಿದ್ದರೂ ತಮ್ಮ ಹೋರಾಟ ಬಿಡದ ವಿದ್ಯಾಸಾಗರರು, ಮತ್ತೊಂದು ಕರಪತ್ರವನ್ನು ಹೊರಡಿಸಿದರು.
ಅದಕ್ಕೆ ದೇವೇಂದ್ರನಾಥ ಠಾಕೂರರು, ನ್ಯಾಯಮೂರ್ತಿ ದ್ವಾರಕಾನಾಥ ಮಿಶ್ರ ಮುಂತಾದ ಗಣ್ಯರೆಲ್ಲಾ ಸಹಿ ಮಾಡಿದ್ದರು. ಕೆಲ ಉನ್ನತ ಆಂಗ್ಲ ಅಧಿಕಾರಿಗಳೂ ಸಹ ಬೆಂಬಲಕ್ಕೆ ನಿಂತರು. 1855 ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅದನ್ನು ಲೆಜಿಸ್ಲೇಟಿವ್ ಕೌನ್ಸಿಲ್‌ನಲ್ಲಿಟ್ಟು ಕಾನೂನು ಮಾಡಲು ಒತ್ತಾಯಿಸಲಾಯಿತು. ವಿದ್ಯಾಸಾಗರ ಮತ್ತು ಕೆಲ ಪ್ರಗತಿಪರರ ಅಭೀಷ್ಟೆಯಂತೆ ಶಾಸನ ಸಭೆಯಲ್ಲಿ ವಿಧವಾ ವಿವಾಹಕ್ಕೆ ಅನುಮತಿಸುವ ಮಸೂದೆ ಅಂಗೀಕಾರವಾಗಿ ಕಾನೂನು ಆಯಿತು.
ವಿದ್ಯಾಸಾಗರರು ಕೇವಲ ಸೈದ್ಧಾಂತಿಕವಾಗಿ ವಿಧವಾ ವಿವಾಹಕ್ಕೆ ಹೋರಾಡದೆ ಅದನ್ನು ತಮ್ಮ ಜೀವನದಲ್ಲಿಯೂ ಕಾರ್ಯರೂಪಕ್ಕೆ ತಂದು ಎಲ್ಲರ ಆದರಕ್ಕೆ ಪಾತ್ರರಾದರು. ತಮ್ಮ ಏಕಮಾತ್ರ ಪುತ್ರ ನಾರಾಯಣ್ ಚಂದ್ರನಿಗೆ ಒಬ್ಬ ವಿಧವೆಯನ್ನು ತಂದು ವಿವಾಹ ಮಾಡಿದರು. ಮುಂದೆ ಅವರ ಮೊಮ್ಮಗನೂ ಸಹ ಒಬ್ಬ ವಿಧವೆಯನ್ನು ವಿವಾಹವಾಗಿ ಆದರ್ಶ ಮೆರೆದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com