ಯಶ್, ದರ್ಶನ್ 'ಜೋಡೆತ್ತುಗಳಲ್ಲ, ಕಳ್ಳೆತ್ತುಗಳು': ಸಿಎಂ ಕುಮಾರಸ್ವಾಮಿ

ಲೋಕಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
Updated on: 
ಮಂಡ್ಯ: ಲೋಕಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಲು ಮುಂದೆ ಬಂದಿರುವ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಸಿಎಂ ಕುಮಾರಸ್ವಾಮಿ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುಮಲತಾ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುಮಲತಾ ಅವರಿಗೆ ಬೆಂಬಲ ನೀಡಿ ಯಶ್ ಮತ್ತು ದರ್ಶನ್ ಮುಂದೆ ಬಂದಾಗ, ನಾವಿಬ್ಬರೂ ಉಳುಮೆ ಮಾಡುವ ಜೋಡೆತ್ತುಗಳಂತೆ ಸುಮಲತಾ ಅವರಿಗೆ ಚುನಾವಣೆಯಲ್ಲಿ ಬೆಂಬಲ ನೀಡಲಿದ್ದೇವೆ ಎಂದು ನಟ ದರ್ಶನ್ ಹೇಳಿದ್ದರು. 
ಈ ಕುರಿತಂತೆ ನಿನ್ನೆ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಜೋಡೆತ್ತು ಪದಕ್ಕೆ ವ್ಯಂಗ್ಯವಾಡಿದ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅವರಿಬ್ಬರೂ ಉಳುಮೆ ಮಾಡುವ ಜೋಡೆತ್ತುಗಳಲ್ಲ, ಪೈರನ್ನು ಕದ್ದು ತಿನ್ನಲು ಬಂದಿರುವ ಕಳ್ಳೆತ್ತುಗಳು, ಹೊಲದಲ್ಲಿ ಉತ್ತು ಬಿತ್ತಿ ಪೈರು ಬೆಳೆಯುವವರ ಕಷ್ಟ ಇವರಿಗೇನು ಗೊತ್ತಿದೆ, ಇವರು ಬೆಳೆದ ಪೈರನ್ನು ಅರ್ಧರಾತ್ರಿಯಲ್ಲಿ ಹೋಗಿ ಕಿತ್ತುಕೊಂಡು ಹೋಗುವ ಕಳ್ಳೆತ್ತುಗಳು ಎಂದು ಟೀಕಿಸಿದ್ದಾರೆ.
ದರ್ಶನ್​ ಬಳಸಿರುವ ಪದಗಳನ್ನು ಕೆಲವರು ಕೇಳಿರಬಹುದು. ಎಲ್ಲರೂ ಕೇಳಿದರೆ ಅವರಿಗೆ ಮಂಡ್ಯ ಜಿಲ್ಲೆಗೆ ಕಾಲಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಹಲವು ದುರಂತಗಳು ನಡೆದಾಗ ಇವರಿಬ್ಬರೂ ಎಲ್ಲಿದ್ದರು. ಈಗ ಇವರಿಬ್ಬರೂ ಅಮ್ಮನನ್ನು ಉಳಿಸಲು ಬಂದಿದ್ದಾರಲ್ಲ, ಆಗ ನೀರಿನಲ್ಲಿದ್ದ ಬಿದ್ದಿದ್ದ ಶವಗಳನ್ನು ಎತ್ತಲು ಇವರು ಬಂದಿದ್ದರಾ? ಮಾತನಾಡಿದರೆ ತುಂಬಾ ವಿಷಯಗಳಿವೆ. ಇಂದಿನ ಸಾರ್ವಜನಿಕ ಸಭೆಯಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಛಾಲೆಂಜಿಂಗ್ ಸ್ಟಾರ್, ಡಿ ಬಾಸ್ ಎಂದು ಹೇಳಿಕೊಳ್ಳುತ್ತಾರೆ, ಅವೆಲ್ಲ ಸಿನಿಮಾದಲ್ಲಿ ಮಾತ್ರ ಸಾಧ್ಯ, ನಿಜ ಜೀವನದಲ್ಲಿ ರೈತರಿಗೆ, ಜನರಿಗೆ ಇವರೆಂದೂ ಡಿ ಬಾಸ್, ಛಾಲೆಂಜಿಂಗ್ ಸ್ಟಾರ್ ಆಗಲು ಸಾಧ್ಯವಿಲ್ಲ. ಮಂಡ್ಯ ಜಿಲ್ಲೆಯ ಮಹಿಳೆಯರ ಬಗ್ಗೆ ಇವರು ಆಡಿರುವ ಮಾತುಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಅವನ್ನು ಮಂಡ್ಯ ಜಿಲ್ಲೆಯ ಜನ ಕೇಳಿಬಿಟ್ಟರೆ ಅಲ್ಲಿಗೆ ಕಾಲಿಡಲು ಸಾಧ್ಯವಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com