ದೇಶ

ಅಮಿತ್ ಶಾ ಫ್ಯಾಸಿಸ್ಟ್, ಡಿಕ್ಟೇಟರ್

ಅಮಿತ್ ಶಾ ಫ್ಯಾಸಿಸ್ಟ್, ಡಿಕ್ಟೇಟರ್
Published On :

ಬಿಜ್ನೋರ್/ನವದೆಹಲಿ: ನಮ್ಮ ಸಮುದಾಯಕ್ಕೆ ಅವಮಾನ ಮಾಡಿದವರ ವಿರುದ್ಧ ಬಿಜೆಪಿಗೆ ಮತ ಹಾಕುವ ಮೂಲಕ ಪ್ರತೀಕಾರ ತೀರಿಸಿ ಎಂಬ ಅಮಿತ್ ಶಾ ಹೇಳಿಕೆ ಈಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈಗಾಗಲೇ ಹಿಂಸಾಚಾರದಿಂದ ತತ್ತರಿಸಿ ಹೋಗಿರುವ ಪ್ರದೇಶದಲ್ಲಿ ಕೋಮುಭಾವನೆ ಕೆರಳಿಸುವ ಮಾತುಗಳನ್ನಾಡಿ ಅಮಿತ್ ಶಾ ಅಲ್ಲಿನ ಶಾಂತಿಕೆಡಿಸುತ್ತಿದ್ದಾರೆ ಎಂದು ಆರೋಪಿಸಿವೆ.
ಅಮಿತ್ ಶಾ ಹೇಳಿದ್ದೇನು?
'ಉತ್ತರಪ್ರದೇಶದಲ್ಲಿ, ಅದರಲ್ಲೂ ಪಶ್ಚಿಮ ಉ.ಪ್ರದೇಶದಲ್ಲಿ ಈ ಬಾರಿಯದ್ದು ಸ್ವಾಭಿಮಾನದ ಚುನಾವಣೆಯಾಗಿದೆ.ಅವಮಾನಕ್ಕೆ ಪ್ರತೀಕಾರ ತೀರಿಸಲು ಇದೊಂದು ಅವಕಾಶ. ಅನ್ಯಾಯ ಮಾಡಿದವರಿಗೆ ಬುದ್ಧಿ ಕಲಿಸಲು ಸಿಕ್ಕಿರುವ ಅವಕಾಶ. ಒಬ್ಬ ವ್ಯಕ್ತಿಯು ಆಹಾರ, ನಿದ್ರೆಯಿಲ್ಲದೆ ಬದುಕಬಹುದು. ಬಾಯಾರಿಕೆ, ಹಸಿವಿದ್ದರೂ ಜೀವಿಸಬಹುದು. ಆದರೆ, ಅವಮಾನವನ್ನು ಎದುರಿಸಿ ಬದುಕಲಾಗದು. ಆ ಅವಮಾನಕ್ಕೆ ಪ್ರತೀಕಾರ ತೀರಿಸಲೇಬೇಕು. ಇದು ಬುಲೆಟ್ ಬಳಸುವ ಸಮಯವಲ್ಲ. ಬದಲಾಗಿ, ಬಟನ್ ಒತ್ತುವ ಸಮಯ. ಸರಿಯಾದ ಗುಂಡಿಯನ್ನೇ ಒತ್ತಿರಿ. ನಮ್ಮ ಸಮುದಾಯವನ್ನು ಅವಮಾನಿಸಿದ, ನಮ್ಮ ಯುವಕರನ್ನು ಕೊಂದವರ ಜತೆ ಕುಳಿತುಕೊಳ್ಳಲು ನಾವು ಬಯಸುತ್ತೇವೆಯೇ? ನೀವು ಮೋದಿಗೆ ಮತ ಹಾಕಿದರೆ, ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆಯಾಗುವುದು ಮಾತ್ರವಲ್ಲ, ಇಲ್ಲಿ ಸಮಾಜವಾದಿ ಸರ್ಕಾರ ಉರುಳಲಿದೆ. ನಿಮ್ಮ ಒಂದು ಮತ ಎರಡು ಉದ್ದೇಶಗಳನ್ನು ಪೂರೈಸಲಿದೆ'.

ಚು. ಆಯೋಗಕ್ಕೆ ಕಾಂಗ್ರೆಸ್ ದೂರು
ಅಮಿತ್ ಶಾ ಅವರ ಹೇಳಿಕೆ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಶಾ ಅವರನ್ನು ಬಂಧಿಸಬೇಕು ಹಾಗೂ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ನಿಷೇಧ ಹೇರಬೇಕು ಎಂದು ಕೋರಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ '2002ರ ಗುಜರಾತ್ ಕೋಮುಗಲಭೆಯ ಆಟ'ವನ್ನುದೇಶಾದ್ಯಂತ ಆಡಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಶಾ, ಬಿಜೆಪಿ ಮತ್ತು ಮೋದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪಕ್ಷದ ಮಾನ್ಯತೆ ರದ್ದು ಮಾಡಬೇಕು ಎಂದೂ ಕಾಂಗ್ರೆಸ್ ಮನವಿ ಸಲ್ಲಿಸಿದೆ.


ಬಿಜೆಪಿ ಸಮರ್ಥನೆ
ಇದೇ ವೇಳೆ, ಶಾ ಹೇಳಿಕೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಶಾ ಅವರು ಮೋದಿ ಹಾಗೂ ಬಿಜೆಪಿಗೆ ಮತ ಹಾಕುವಂತೆ ಜನರಿಗೆ ಕರೆ ನೀಡಿದ್ದಾರೆ. ಅವರ ಹೇಳಿಕೆಯಲ್ಲಿ ವಿವಾದಾತ್ಮಕ ಅಂಶವೇನೂ ಇಲ್ಲ ಎಂದು ಬಿಜೆಪಿ ವಕ್ತಾರರಾದ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದೇ ವೇಳೆ, ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಜನರನ್ನು ಅವಮಾನ ಮಾಡಿದೆ. ಇದಕ್ಕೆ ಪ್ರತೀಕಾರ ತೀರಿಸಲೇಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ 2002ರಲ್ಲಿ ಮಾಡಿದ್ದನ್ನೇ ಇಲ್ಲೂ ಮಾಡಲು ಬಿಜೆಪಿ, ಮೋದಿ, ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. ಶಾ ಮತ್ತು ಸುರೇಶ್ ರಾಣಾಗೆ ಪ್ರಚಾರ ಮಾಡದಂತೆ ನಿಷೇಧ ಹೇರಬೇಕು.
- ರಣದೀಪ್ ಸುರೇಜ್‌ವಾಲಾ, ಕಾಂಗ್ರೆಸ್ ವಕ್ತಾರ

ಮೋದಿ, ಸಹಚರರು ಫ್ಯಾಸಿಸ್ಟ್‌ಗಳೆಂದು ನಾವು ಹೇಳುತ್ತಾ ಬಂದಿದ್ದೇವೆ. ಉ.ಪ್ರದೇಶದ ಫಲಿತಾಂಶ ಬಗ್ಗೆ ಬಿಜೆಪಿಗೆ ಭಯವಿದೆ. ಧೈರ್ಯವಿದ್ದರೆ ಎಸ್ಪಿ ಸರ್ಕಾರವನ್ನು ಉರುಳಿಸಲಿ ನೋಡೋಣ.
- ರಾಮ್‌ಗೋಪಾಲ್ ಯಾದವ್, ಎಸ್ಪಿ ನಾಯಕ


ಅಮಿತ್ ಶಾ ಮೂಲಕ ಮೋದಿ ಅವರು ದೇಶಾದ್ಯಂತ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಅವರು ಇಂತಹ ಭಾಷೆ ಬಳಸಿ ಕೋಮು ಧ್ರುವೀಕರಣದಲ್ಲಿ ತೊಡಗಿದ್ದಾರೆ.
- ಸುಧೀಂದ್ರ ಭಡೋರಿಯಾ,  ಬಿಎಸ್ಪಿ ನಾಯಕ

ಅಮಿತ್ ಶಾ ಹೇಳಿಕೆ ದ್ವೇಷಪೂರಿತ. ಪ್ರಜಾಸತ್ತೆಯಲ್ಲಿ ಮತದ ಮೂಲಕವೇ ಬದಲಾವಣೆ ತರಲು ಸಾಧ್ಯ. ಅಮಿತ್ ಶಾ ಭಾಷೆ ಅವರ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಅವರು ಅಲ್ಪಸಂಖ್ಯಾತರಲ್ಲಿ ಭಯ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.
- ಕೆ.ಸಿ. ತ್ಯಾಗಿ, ಜೆಡಿಯು ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.