ದೇಶ

ಮುಸ್ಲಿಮರಿಗೆ ಒಳಮೀಸಲು: ವಿವಾದ ಸೃಷ್ಟಿಸಿದ ಕಾಂಗ್ರೆಸ್‌ನ ಪೂರಕ ಪ್ರಣಾಳಿಕೆ

ಮುಸ್ಲಿಮರಿಗೆ ಒಳಮೀಸಲು: ವಿವಾದ ಸೃಷ್ಟಿಸಿದ ಕಾಂಗ್ರೆಸ್‌ನ ಪೂರಕ ಪ್ರಣಾಳಿಕೆ
Published On :

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹಿಂದುತ್ವದ ಓಲೈಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪೂರಕ ಪ್ರಣಾಳಿಕೆ ಹೊಸ ವಿವಾದ ಸೃಷ್ಟಿಸಿದೆ. ಹಿಂದುಳಿದ ಮುಸ್ಲಿಮರಿಗೆ ಒಳಮೀಸಲು, ದಲಿತ ಅಲ್ಪಸಂಖ್ಯಾತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂಥ ವಿವಾದಾತ್ಮಕ ಭರವಸೆಗಳನ್ನು ಈ ಪ್ರಣಾಳಿಕೆ ಒಳಗೊಂಡಿದೆ.
ಮಾ. 26ರಂದು ಪಕ್ಷ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಹಿಂದುಳಿದ ಮುಸ್ಲಿಮರಿಗೆ ಮೀಸಲು ಕಲ್ಪಿಸುವುದಾಗಿ ಹೇಳಲಾಗಿತ್ತು. ಈಗ ಇತರೆ ಹಿಂದುಳಿದ ವರ್ಗಗಳ ಮೀಸಲಿನಲ್ಲೇ ಅವರಿಗೆ ಶೇ.4.5ರಷ್ಟು ಒಳಮೀಸಲು ಕಲ್ಪಿಸುವ ಭರವಸೆಯನ್ನು ಪಕ್ಷ ನೀಡಿದೆ. ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿ 2 ವಾರಗಳ ಹಿಂದೆ ಅಪ್‌ಲೋಡ್ ಮಾಡಲಾಗಿರುವ ಈ ಪೂರಕ ಪ್ರಣಾಳಿಕೆ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ಒಳ ಮೀಸಲಿಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಲೇ ಬಂದಿರುವ ಬಿಜೆಪಿ, ಇದು ಜನರ ಮನವೊಲಿಕೆ ನಿಟ್ಟಿನಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ನ ಕೊನೆಯ ಪ್ರಯತ್ನ ಎಂದು ಆರೋಪಿಸಿದೆ.
ಪೂರಕ ಪ್ರಣಾಳಿಕೆ ಅಲ್ಲ: ಕಾಂಗ್ರೆಸ್ ಸ್ಪಷ್ಟನೆ
ಹಿಂದುಳಿದ ಮುಸ್ಲಿಮರಿಗೆ ಒಳಮೀಸಲು ಕಲ್ಪಿಸುವ ಭರವಸೆಗೆ ಬಿಜೆಪಿಯಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಇದು ಪೂರಕ ಪ್ರಣಾಳಿಕೆ ಅಲ್ಲ ಎಂದು ಸ್ಪಷ್ಟನೆ ನೀಡಿದೆ. ಇದು ಸಾರ್ವಜನಿಕರಿಂದ ಅಭಿಪ್ರಾಯದಂತೆ ಪ್ರಕಟಿಸಲಾದ ಭರವಸೆಗಳು. ನಾವು ಇದನ್ನು ಜನರ ಮುಂದಿಟ್ಟಿದ್ದೇವೆ. ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದರೆ ನಾವು ಈ ವಿಚಾರದ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ಇದರಲ್ಲಿ ಯಾರನ್ನೋ ಓಲೈಸುವ ಪ್ರಯತ್ನವಿಲ್ಲ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ. ಮುಸ್ಲಿಮರಿಗೆ ಒಳ ಮೀಸಲು ಕಲ್ಪಿಸುವ ವಿಚಾರ ಸುಪ್ರೀಂಕೋರ್ಟ್‌ನಲ್ಲಿದೆ. ನ್ಯಾಯಾಲಯದಲ್ಲಿ ಈ ವಿಚಾರ ಇತ್ಯರ್ಥವಾಗುವವರೆಗೆ ಪಕ್ಷ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸಿಬಲ್ ತಿಳಿಸಿದ್ದಾರೆ. ಅಲ್ಲದೆ, ಇದೇನು ಹೊಸ ವಿಚಾರವೂ ಅಲ್ಲ. ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆಗೆ ಒಳಮೀಸಲು ವಿಚಾರವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿತ್ತು ಎಂದು ಸಿಬಲ್ ಮಾಹಿತಿ ನೀಡಿದ್ದಾರೆ.
ಜನ ಇದನ್ನು ನಂಬಲ್ಲ: ಬಿಜೆಪಿ
ಇದು ಕಾಂಗ್ರೆಸ್‌ನ ಕೊನೆಯ ಆಟ. ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ತನ್ನ ಕೊನೆಯ ಪ್ರಯತ್ನವಾಗಿ ಈ ಪೂರಕ ಪ್ರಣಾಳಿಕೆ ಅನ್ನು ಬಿಡುಗಡೆ ಮಾಡಿದೆ. ಸೋಲುವ ಪಕ್ಷದ ಈ ಪೂರಕ ಪ್ರಣಾಳಿಕೆಯನ್ನು ಜನ ನಂಬಲ್ಲ ಎಂದಿದೆ ಬಿಜೆಪಿ. ಕಾಂಗ್ರೆಸ್ ನಾಳೆ ಚಂದ್ರನನ್ನು ನೀಡುವ ಭರವಸೆಯನ್ನೂ ನೀಡಬಹುದು. ಆದರೆ, ಕಳೆದ 10 ವರ್ಷಗಳ ಯುಪಿಎ ಆಡಳಿತದಲ್ಲಿ ಜನ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ್ದಾರೆ. ಈ ಕುರಿತು ಚರ್ಚಿಸಲು ಯಾರಿಗೂ ಕಿಂಚಿತ್ ಆಸಕ್ತಿಯೂ ಇಲ್ಲ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಸ್ಲಿಮರಿಗೆ ಮೀಸಲು: ರೆಹಮಾನ್ ಸಮರ್ಥನೆ
ಲಖನೌ:
ಹಿಂದುಳಿದ ಮುಸ್ಲಿಮರಿಗೆ ಶೇ. 4.5ರಷ್ಟು ಒಳ ಮೀಸಲು ಕಲ್ಪಿಸುವ ಭರವಸೆಯನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ. ರೆಹಮಾನ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಈ ಭರವಸೆಯನ್ನು ಓಲೈಕೆಯಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.
ಇದೊಂದು ರಾಜಕೀಯ ಆಟವಾಗಲಿ ಅಥವಾ ಓಲೈಕೆಯಾಗಲಿ ಅಲ್ಲ. 2009ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲೇ ನಾವು ಈ ಕುರಿತು ಭರವಸೆ ನೀಡಿದ್ದೆವು. ಯುಪಿಎ ಏನಾದರೂ ಅಧಿಕಾರಕ್ಕೆ ಬಂದರೆ ಕರ್ನಾಟಕ ಮೀಸಲು ಮಾದರಿಯನ್ನು ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿದ್ದೆವು ಎಂದಿದ್ದಾರೆ ಖಾನ್. ಮುಸ್ಲಿಮರಿಗೆ ಒಳ ಮೀಸಲು ಕಲ್ಪಿಸುವ ವಿಚಾರ ಆಂಧ್ರ ಹೈಕೋರ್ಟ್‌ನಲ್ಲಿ ರದ್ದಾಗಿರುವುದು, ಈಗ ಆ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವುದು ದುರದೃಷ್ಟಕರ. ಇನ್ನು ದಲಿತ ಮುಸ್ಲಿಮರಿಗೆ ಮೀಸಲು ಕಲ್ಪಿಸುವ ವಿಚಾರವೂ  ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ ಎಂದು ಖಾನ್ ಹೇಳಿದ್ದಾರೆ.
ಮುಸ್ಲಿಮರಿಗಾಗಿ ಒಳ ಮೀಸಲು ಕಲ್ಪಿಸಲಾಗಿದೆಯೇ? ಈ ವಿಚಾರಕ್ಕೆ ಸಂಬಂಧಿಸಿ ಎಸ್ಪಿ, ಬಿಎಸ್ಪಿಯವರು ಮತ್ತು ನಿತೀಶ್ ಕುಮಾರ್ ಏನು ಹೇಳುತ್ತಾರೆ? ಇದು ಕಾಂಗ್ರೆಸ್‌ನ ಕೋಮುವಾದಿ ಮತ್ತು ರಾಜಕೀಯವಾಗಿ ಅನೈತಿಕ ಪ್ರಯತ್ನವಾಗಿದೆ.
- ರವಿಶಂಕರ್ ಪ್ರಸಾದ್, ಬಿಜೆಪಿ ವಕ್ತಾರ
ಕಾಂಗ್ರೆಸ್‌ಗೆ ನಿಜವಾಗಿಯೂ ಮುಸ್ಲಿಮರಿಗೆ ಒಳ್ಳೆಯದೇನಾದರೂ ಮಾಡಬೇಕಿದ್ದರೆ ನಮ್ಮಂತೆ 1995ರಲ್ಲೇ ಏನಾದರೂ ಕ್ರಮ ಕೈಗೊಳ್ಳುತ್ತಿತ್ತು. ಮುಸ್ಲಿಮರ ವಿಚಾರಕ್ಕೆ ಬಂದಾಗ ಕಾಂಗ್ರೆಸ್ ಹೇಳುವುದೊಂದು ಮಾಡುವುದು ಇನ್ನೊಂದು.
- ಮಾಯಾವತಿ, ಬಿಎಸ್ಪಿ ನಾಯಕಿ

ಪ್ರಧಾನಿ ಸಂಬಂಧಿ ಬಿಜೆಪಿಗೆ
ನವದೆಹಲಿ:
ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಮುಜುಗರವಾಗುವ ಘಟನೆ ಶುಕ್ರವಾರ ನಡೆದಿದೆ. ಪ್ರಧಾನಿ ಸೋದರ ಸಂಬಂಧಿ ದಲ್ಜೀತ್ ಸಿಂಗ್ ಕೋಹ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಮೃತಸರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದಾರೆ. 'ದಲ್ಜೀತ್ ಸಿಂಗ್ ಕೋಹ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಅವರನ್ನು ನಾನು ಸ್ವಾಗತಿಸುತ್ತೇನೆ. ನಮ್ಮ ಪಕ್ಷ ಸಂಬಂಧಗಳನ್ನು ಬೆಳೆಸುವ ಪಕ್ಷ' ಎಂದು ಮೋದಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.