ಗುಜರಾತ್ ಬೇಹುಗಾರಿಕೆ: ಮೇ16ರ ಒಳಗೆ ನ್ಯಾಯಾಂಗ ಆಯೋಗ ನೇಮಕ

ಶಿಮ್ಲಾ/ನವದೆಹಲಿ: ಮಹಿಳೆಯೊಬ್ಬಳ ವಿರುದ್ಧ ಗುಜರಾತ್ ಸರ್ಕಾರ ನಡೆಸಿದ ಬೇಹುಗಾರಿಕೆಗೆ ಸಂಬಂಧಿಸಿದ ತನಿಖೆಗೆ ಮೇ 16ರೊಳಗೆ ನ್ಯಾಯಾಂಗ ಆಯೋಗ ರಚಿಸುವುದಾಗಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆನ್ನಲಾದ ಈ ಬೇಹುಗಾರಿಕೆ ವಿವಾದ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.
16ರ ಒಳಗೆ: ಗುಜರಾತ್ ಮಹಿಳೆ ವಿರುದ್ಧ ಬೇಹುಗಾರಿಕೆ ನಡೆಸಿರುವ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಂಗ ಆಯೋಗ ರಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಮೇ 16ರ ಒಳಗೆ ಆಯೋಗಕ್ಕೆ ನ್ಯಾಯಮೂರ್ತಿ ಒಬ್ಬರನ್ನು ನೇಮಿಸುತ್ತೇವೆ ಎಂದು ಶಿಂದೆ ಶಿಮ್ಲಾದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ ಆಗಲ್ಲ: ಚುನಾವಣೆ ಸಂದರ್ಭದಲ್ಲೇ ಗುಜರಾತ್ ಬೇಹುಗಾರಿಕೆಗೆ ಸಂಬಂಧಿಸಿದ ನ್ಯಾಯಾಂಗ ಆಯೋಗಕ್ಕೆ ನ್ಯಾಯಮೂರ್ತಿಅವರನ್ನು ನೇಮಿಸುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಲ್ಲ. ಇದು ಈಗ ತೆಗೆದುಕೊಂಡ ನಿರ್ಧಾರವೇನಲ್ಲ. ನಾಲ್ಕು ತಿಂಗಳ ಹಿಂದೆಯೇ ಕೇಂದ್ರ ಸಚಿವ ಸಂಪುಟ ಈ ನಿರ್ಧಾರ ತೆಗೆದುಕೊಂಡಿತ್ತು.
ಮಹಿಳೆಯೊಬ್ಬಳ ಕುರಿತು ಗುಜರಾತ್ ಮುಖ್ಯಮಂತ್ರಿ ಮೋದಿ ಬೇಹುಗಾರಿಕೆ ನಡೆಸಿದ ರೀತಿಯಿಂದ ಚಿಂತೆಗೊಳಗಾಗಿದ್ದೇನೆ. ಒಂದು ವೇಳೆ ಅವರೇನಾದರೂ ಪ್ರಧಾನಿಯಾದರೆ ದೇಶದ ಮಹಿಳೆಯರ ಗತಿ ಏನಾಗಬಹುದು ಎನ್ನುವ ಚಿಂತೆ ನನ್ನನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ ಶಿಂದೆ.
ಯಾರು ಮುಂದೆ ಬರುತ್ತಾರೆ?: ಚುನಾವಣೆ ಈ ಸಂದರ್ಭದಲ್ಲಿ ಜನರ ಗಮನವನ್ನು ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಬೇರೆಡೆ ವರ್ಗಾಯಿಸಲು ಯುಪಿಎ ಸರ್ಕಾರ ಗುಜರಾತ್ ಬೇಹುಗಾರಿಕೆಗೆ ಸಂಬಂಧಿಸಿ ತುರ್ತು ತನಿಖೆಗೆ ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಬೇಹುಗಾರಿಕೆ ತನಿಖೆ ನಡೆಸುವ ನ್ಯಾಯಾಂಗ ಆಯೋಗಕ್ಕೆ ಹೇಗಾದರೂ ಮಾಡಿ ನಿವೃತ್ತ ನ್ಯಾಯಮೂರ್ತಿ ಅವರೊಬ್ಬರನ್ನು ನೇಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಸರ್ಕಾರದ ಇಂಥ ಪ್ರಯತ್ನಕ್ಕೆ ಯಶ ಸಿಗುತ್ತದೆ ಎನ್ನುವ ಕುರಿತು ನನಗೆ ಅನುಮಾನ ಇದೆ. ಒಂದು ವೇಳೆ ಯುಪಿಎ ಸರ್ಕಾರ ಆಯೋಗ ರಚಿಸಿದರೂ ಮುಂದೆ ಅಧಿಕಾರಕ್ಕೆ ಬರಲಿರುವ ಸರ್ಕಾರಕ್ಕೆ ಈ ಕೊನೆ ಕ್ಷಣದ ನಿರ್ಧಾರವನ್ನು ಬದಲಿಸುವ ಅಧಿಕಾರ ಇರಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಅರುಣ್ ಜೇಟ್ಲಿ ಹೇಳಿದ್ದಾರೆ.
ಇದು ಸ್ನೂಪ್ ಗೇಟ್(ಬೇಹುಗಾರಿಕೆ ಹಗರಣವಲ್ಲ) ಸ್ಟೂಪ್ ಗೇಟ್(ನೀಚಹಗರಣ). ಗೃಹ ಸಚಿವರು ನೀಚ ಕೆಲಸಕ್ಕೆ ಕೈ ಹಾಕಿದ್ದಾರೆ. ಇದು ಸರ್ಕಾರದ ಹತಾಶೆಯನ್ನು ಎತ್ತಿ ತೋರಿಸುತ್ತದೆ. ಯಾವುದೇ ನ್ಯಾಯಾಧೀಶರು ಆಯೋಗದ ನೇತೃತ್ವ ವಹಿಸಲು ಮುಂದೆ ಬರುವುದಿಲ್ಲ. ಆದರೂ ಒತ್ತಾಯ ಮಾಡುತ್ತಿದ್ದಾರೆ. ನಾವು ಇದಕ್ಕೆ ಹೆದರುವುದಿಲ್ಲ.
- ರವಿಶಂಕರ್ ಪ್ರಸಾದ್ ಬಿಜೆಪಿ ಮುಖಂಡ
ಜೇಟ್ಲಿ ಹೇಳಿಕೆಗೆ ಟೀಕೆ
ಬೇಹುಗಾರಿಕೆ ಹಗರಣದ ತನಿಖೆಗೆ ನೇಮಿಸಲಾಗುತ್ತಿರುವ ಸಮಿತಿ ನೇತೃತ್ವ ವಹಿಸಲು ಯಾವುದೇ ನ್ಯಾಯಾಧೀಶರು ಮುಂದೆ ಬರುವುದಿಲ್ಲ ಎನ್ನುವ ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಹೇಳಿಕೆಗೆ ಕಾನೂನು ಸಚಿವ ಕಪಿಲ್ ಸಿಬಲ್ ಕಿಡಿಕಾರಿದ್ದಾರೆ. ಬೇಹುಗಾರಿಕೆ ಹಗರಣದ ತನಿಖೆಗೆ ನೇಮಿಸಲಾಗಿರುವ ಸಮಿತಿಗೆ ಮೇ 16ರೊಳಗೆ ನ್ಯಾಯಾಧೀಶರ ಆಯ್ಕೆ ಮಾಡಲಾಗುವುದು. ಬಿಜೆಪಿಯವರು ಈ ವಿಚಾರಕ್ಕೆ ಸಂಬಂಧಿಸಿ ಯಾಕೆ ತಲೆಕೆಡಿಸಿಕೊಂಡಿದ್ದಾರೆ? ಯಾವ ನ್ಯಾಯಾಧೀಶನೂ ತನಿಖೆಯ ನೇತೃತ್ವವಹಿಸಲು ಮುಂದೆ ಬರುವುದಿಲ್ಲ ಎಂದು ಬಿಜೆಪಿ ಮುಖಂಡರು ಯಾಕೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿಬಲ್ ಪ್ರಶ್ನಿಸಿದ್ದಾರೆ. ಒಮ್ಮೆ ಸಮಿತಿ ನೇಮಕವಾದರೆ ಮೋದಿ ಅವರನ್ನು ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲ ಎನ್ನುವ ಸತ್ಯ ಬಿಜೆಪಿ ಮುಖಂಡರಿಗೆ ಅರ್ಥವಾಗಿದೆ ಎಂದಿದ್ದಾರೆ ಸಿಬಲ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


