ಫಿಫಾ ವಿಶ್ವಕಪ್ 2014

ಜರ್ಮನಿಗೆ ಅಂಜಿದ ಅಲ್ಜೀರಿಯಾ

ಜರ್ಮನಿಗೆ ಅಂಜಿದ ಅಲ್ಜೀರಿಯಾ
Published On :

ಪೊರ್ಟ್ ಅಲೆಗ್ರ: ಪಂದ್ಯದ ಅಧಿಕ ಸಮಯದಲ್ಲಿ ಆ್ಯಂಡ್ರೆ ಶೂರ್ಲ್ ಮತ್ತು ಮೆಸುಟ್ ಒಜಿಲ್ ಅವರು ಗಳಿಸಿದ ಅಮೂಲ್ಯ ಗೋಲಿನ ನೆರವಿನಿಂದ ಜರ್ಮನಿ ತಂಡ ಅಲ್ಜೀರಿಯಾ ವಿರುದ್ಧ ಗೆಲವು ದಾಖಲಿಸಿದ್ದು, ಫಿಫಾ ವಿಶ್ವಕಪ್‌ನ ಎಂಟರ ಘಟ್ಟಕ್ಕೆ ಪ್ರವೇಶಿಸಿದೆ.
ಮಂಗಳವಾರ ನಸುಕಿನ ಸಮಯದಲ್ಲಿ ನಡೆದ ಪಂದ್ಯದಲ್ಲಿ ಜರ್ಮನಿ 2-1 ಗೋಲುಗಳ ಅಂತರದಲ್ಲಿ ಅಲ್ಜೀರಿಯಾ ತಂಡವನ್ನು ಮಣಿಸಿದೆ.
ಪಂದ್ಯ ನಿಗದಿತ ಅವಧಿಯಲ್ಲಿ ಯಾವುದೇ ತಂಡ ಗೋಲು ದಾಖಲಿಸದೇ 0-0 ಅಂತರದ ಸಮಬಲ ಸಾಧಿಸಿತು, ಪರಿಣಾಮ ಪಂದ್ಯ ಹೆಚ್ಚುವರಿ ಸಮಯಕ್ಕೆ ಜಾರಿತು. ಪಂದ್ಯದ ನಿಗದಿತ ಸಮಯದ ಎರಡನೇ ಅವಧಿಯಲ್ಲಿ ಜರ್ಮನಿ ತಂಡದ ಕೋಚ್ ಜೋಚಿಮ್ ಲೊವ್, ಮಾರಿಯೊ ಗೊಟ್ಜೆ ಬದಲಿಗೆ ಆ್ಯಂಡ್ರೆ ಶೂರ್ಲ್ ಅವರನ್ನು ಕಣಕ್ಕಿಳಿಸಿದರು. ನಂತರ ಶೂರ್ಲ್ 48ನೇ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ಪಡೆದರಾದರೂ, ಚೆಂಡು ಸ್ವಲ್ಪ ಅಂತರದಲ್ಲಿ ಗೋಲಿನ ಪೆಟ್ಟಿಗೆಯಿಂದ ಹೊರಗೆ ಸಾಗಿತ್ತು.
ನಂತರ ಹೆಚ್ಚುವರಿ ಸಮಯದ ಆರಂಭದಲ್ಲೇ ಜರ್ಮನಿ ಪರ ಅಬ್ಬರಿಸಿದ ಆ್ಯಂಡ್ರೆ ಶೂರ್ಲ್ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಸೇರಿಸುವ ಮೂಲಕ ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ಈ ಮೂಲಕ ಜರ್ಮನಿ ತಂಡ ಹೆಚ್ಚುವರಿ ಸಮಯದ ಮೊದಲ ಅವಧಿಯಲ್ಲಿ 1-0 ಗೋಲುಗಳ ಅಂತರದಲ್ಲಿ ಮುನ್ನಡೆ ಸಾಧಿಸಿತು.
ನಂತರ ಹೆಚ್ಚುವರಿ ಸಮಯದ ಎರಡನೇ ಅವಧಿಯಲ್ಲೂ ಜರ್ಮನಿ ತಂಡ ಸಂಘಟಿತ ಪ್ರದರ್ಶನ ನೀಡಿತು. 120ನೇ ನಿಮಿಷದಲ್ಲಿ ಮೆಸುಟ್ ಒಜಿಲ್ ಗಳಿಸಿದ ಗೋಲಿನಿಂದ ಜರ್ಮನಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.
ಈ ವೇಳೆ ಸೋಲಿನ ಸುಳಿಯಲ್ಲಿ ಸಿಲುಕುವ ಭಯದಲ್ಲಿದ್ದ ಅಲ್ಜೀರಿಯಾ ತಂಡದ ಆಟಗಾರರು ಹೋರಾಟದ ಪ್ರದರ್ಶನ ನೀಡಿದರು. 120೤1ನೇ ನಿಮಿಷದಲ್ಲಿ ಅಲ್ಜೀರಿಯಾ ತಂಡದ ಅಬ್ದೆಲ್‌ಮೌಮೆನೆ ಜಬೌ ಗಳಿಸಿದ ಗೋಲು ತಂಡದ ಅಂತರವನ್ನು ಕಡಿಮೆ ಮಾಡಲಾಯಿತಾದರೂ, ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಮತ್ತೊಮ್ಮೆ ಅಂತಿಮ ರೋಚಕತೆ: ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಾವಳಿಯ ಬಹುತೇಕ ಪ್ರಿಕ್ವಾರ್ಟರ್‌ಫೈನಲ್ ಪಂದ್ಯಗಳು ಕಡೇಯ ಹಂತದಲ್ಲಿ ಹೆಚ್ಚು ತಿರುವು ಪಡೆಯುತ್ತಿದೆ. ಅಲ್ಲದೆ ಪಂದ್ಯದ ನಿಗದಿತ ಅವಧಿಗಿಂತ ಹೆಚ್ಚುವರಿ ಸಮಯ ಹಾಗೂ ಅಂತಿಮ ಕ್ಷಣಗಳು ಅಭಿಮಾನಿಗಳನ್ನು ಹುಚ್ಚೆಬ್ಬಿಸುವಷ್ಟರ ಮಟ್ಟಿಗೆ ರೋಚಕವಾಗಿ ಕೂಡಿದೆ. ಈ ಪಂದ್ಯವೂ ಸಹ ಅದೇ ರೀತಿಯಲ್ಲಿ ಅಭಿಮಾನಿಗಳನ್ನು ರಂಜಿಸಿದೆ.
ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಪ್ರಬಲ ಹಣಾಹಣಿ ನಡೆಸಿತಾದರೂ, ಪಂದ್ಯದ ಮೊದಲ ಅವಧಿಯಲ್ಲಿ. ಯಾವುದೇ ತಂಡ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. 42ನೇ ನಿಮಿಷದಲ್ಲಿ ಅಲ್ಜೀರಿಯಾದ ರಫಿಕ್ ಅಲಿಜೆ ಹಳದಿ ಕಾರ್ಡ್ ಪಡೆದರೆ, 107ನೇ ನಿಮಿಷದಲ್ಲಿ ಜರ್ಮನಿಯ ಫಿಲಿಪ್ ಲಹ್ಮ್ ಹಳದಿ ಕಾರ್ಡ್ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.