ಫಿಫಾ ವಿಶ್ವಕಪ್ 2014

ಗೆಲವೂ ಇಲ್ಲ, ಸೋಲೂ ಇಲ್ಲ

ಗೆಲವೂ ಇಲ್ಲ, ಸೋಲೂ ಇಲ್ಲ
Published On :

ಕ್ಯುಬಾ: ಒತ್ತಡ ಮೈಮೇಲೆ ಬಿದ್ದರೂ ಸಹ ದೃತಿಗೆಡದೇ ಗಂಭೀರ ಹೋರಾಟ ಮುಂದುವರಿಸಿದ ಪರಿಣಾಮ ರಷ್ಯಾ ಆಟಗಾರರು ಸೋಲಿನ ದವಡೆಯಿಂದ ಹೊರಬಂದು ಡ್ರಾ ಫಲಿತಾಂಶದೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಏರೆನಾ ಪಂಟಾನಲ್ ಕ್ರೀಡಾಂಗಣದಲ್ಲಿ ಬುಧವಾರ ಬೆಳಗ್ಗೆ ನಡೆದ 'ಎಚ್‌' ಗುಂಪಿನ ಪಂದ್ಯದಲ್ಲಿ ರಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳು 1-1 ಗೋಲಿನಿಂದ ಸಮಗೌರವ ಸಾಧಿಸಿ ತಲಾ 1 ಅಂಕ ಹಂಚಿಕೆಗೆ ಸಮಾಧಾನಗೊಂಡಿವೆ.
2002ರ ನಂತರ ಮೊದಲ ಬಾರಿಗೆ ವಿಶ್ವಕಪ್ ಫೈನಲ್ಸ್‌ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿರುವ ರಷ್ಯಾ ಪಡೆ ಉತ್ತಮ ಹೋರಾಟ ನಡೆಸಿತು. ಒಂದು ಹಂತದಲ್ಲಿ ಹಿನ್ನಡೆ ಅನುಭವಿಸಿದ್ದರೂ ಸಹ ಛಲದಿಂದ ಮುನ್ನುಗ್ಗಿ ಸೋಲಿನ ದವಡೆಯಿಂದ ಹೊರಬಂದಿತು.
ಪಂದ್ಯದ 68ನೇ ನಿಮಿಷದಲ್ಲಿ ದಕ್ಷಿಣ ಕೊರಿಯಾದ ಬದಲಿ ಆಟಗಾರ ಲೀ ಕ್ಯೂನ್-ಹೋ ಅವರು ಸುಮಾರು 30 ಮೀಟರ್ ದೂರದಿಂದ ಚೆಂಡನ್ನು ಒದ್ದು, ರಷ್ಯಾದ ಗೋಲ್‌ಕೀಪರ್ ಐಗರ್ ಅಕಿನ್‌ಫೀವ್‌ರನ್ನು ವಂಚಿಸಿ ಆಶ್ಚರ್ಯಕರ ರೀತಿಯಲ್ಲಿ ಗುರಿ ಸೇರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು.
ಆದರೆ, ಈ ಮುನ್ನಡೆಯನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳಲು ಕೊರಿಯಾ ಆಟಗಾರರಿಗೆ ಸಾಧ್ಯವಾಗಲಿಲ್ಲ. ಬದಲಾಗಿ, ಕೇವಲ 6 ನಿಮಿಷಗಳ ಅಂತರದಲ್ಲಿಯೇ ರಷ್ಯನ್ನರಿಗೆ ಗೋಲುಬಿಟ್ಟುಕೊಟ್ಟು ನಿಚ್ಚಳ ಗೆಲವಿನಿಂದ ವಂಚಿತವಾಗಿ ನಿರಾಸೆ ಅನುಭವಿಸಿತು.
ರಷ್ಯಾ ತಂಡದಲ್ಲಿ ಬದಲಿ ಆಟಗಾರರಾಗಿ ಮೈದಾನ ಪ್ರವೇಶಿಸಿ ಕೇವಲ ಮೂರು ನಿಮಿಷಗಳು ಕಳೆಯುತ್ತಿದ್ದಂತೆಯೇ ಅಲೆಕ್ಸಾಂಡರ್ ಕರ್ಜ್‌ಕೋವ್ (74ನೇ ನಿಮಿಷ) ಗೋಲು ಬಾರಿಸುವಲ್ಲಿ ಯಶಸ್ವಿಯಾಗಿ ಫಲಿತಾಂಶ ಸಮಸ್ಥಿತಿ ತಲುಪುವಂತೆ ಮಾಡಿದರು. ಕರ್ಜ್‌ಕೋವ್‌ಗೆ ಇದು 26ನೇ ಅಂತಾರಾಷ್ಟ್ರೀಯ ಗೋಲಾಗಿದೆ.  ನಂತರದಲ್ಲಿ ಉಭಯ ತಂಡಗಳು ಮತ್ತೊಂದು ಗೋಲು ಗಳಿಸಿ ನಿಚ್ಚಳ ಗೆಲವಿನ ಆಸೆಯೊಂದಿಗೆ ಹೋರಾಟ ಮತ್ತಷ್ಟು ತೀವ್ರಗೊಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಮೊದಲ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಪರಸ್ಪರರ ನಡುವೆ ದಾಳಿಗೆ ಪ್ರತಿದಾಳಿ, ಬಲಗೊಂಡ ರಕ್ಷಣಾ ವಿಭಾಗ ಮತ್ತು ಸಂಪರ್ಕ ಆಟಗಾರರ ನಡುವೆ ಸಮಬಲದ ಪೈಪೋಟಿ ನಡೆಯುವುದರೊಂದಿಗೆ ಗೋಲಿನ ಖಾತೆ ತೆರೆಯಲು ವಿಫಲವಾದವು. ಕೆಲವೊಮ್ಮೆ ಗೋಲುಗಳಿಸುವ ಅವಕಾಶಗಳು ಒದಗಿಬಂದರೂ ಸಹ ಗುರಿ ಸೇರುವ ಹಾದಿಯಲ್ಲಿ ಯಶಸ್ಸು ಕಾಣದೇ ನಿರಾಸೆಗೊಂಡವು.  ಮುಂದಿನ 2018ರ ವಿಶ್ವಕಪ್ ಫೈನಲ್ಸ್‌ನ್ನು ತನ್ನ ನೆಲದಲ್ಲಿಯೇ ಆಯೋಜಿಸಲಿರುವ ರಷ್ಯಾ ಈ ಟೂರ್ನಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ವಿಶ್ವಾಸ ಹೊಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.