ಬೆಲ್ಜಿಯಂಗೆ ಬಲಿಯಾದ ಕೊರಿಯಾ

ಸಾವೊ ಪೌಲೊ: ಈ ಬಾರಿಯ ವಿಶ್ವಕಪ್ ಅಖಾಡದಲ್ಲಿ ಡಾರ್ಕ್ ಹಾರ್ಸ್ ಎನಿಸಿರುವ ಬೆಲ್ಜಿಯಂ ತಂಡದ ಆಟಗಾರರು ಮತ್ತೊಂದು ಅಭೂತಪೂರ್ವ ಪ್ರದರ್ಶನ ನೀಡುವ ಮೂಲಕ ರೋಚಕ ಗೆಲವು ದಾಖಲಿಸಿ ತನ್ನ ಗುಂಪಿನಲ್ಲಿ ಸೋಲರಿಯದ ತಂಡವಾಗಿ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಎರೆನಾ ಕೋರಿಂಥಿಯನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಸುಕಿನಲ್ಲಿ ನಡೆದ 'ಎಚ್' ಗುಂಪಿನ ಪಂದ್ಯದಲ್ಲಿ ಬೆಲ್ಜಿಯಂ ತಂಡ 1-0 ಗೋಲಿನಿಂದ ದಕ್ಷಿಣ ಕೊರಿಯಾ ತಂಡವನ್ನು ಪರಾಭವಗೊಳಿಸಿತು. ಈ ಗೆಲವಿನೊಂದಿಗೆ ಬೆಲ್ಜಿಯಂ ಪಡೆ ತನ್ನ ಗುಂಪಿನಲ್ಲಿ ಆಡಿದ ಎಲ್ಲ ಮೂರೂ ಲೀಗ್ ಪಂದ್ಯಗಳಲ್ಲಿ ಜಯಭೇರಿ ಬಾರಿಸುವುದರೊಂದಿಗೆ ಒಟ್ಟು 9 ಅಂಕಗಳ ಸಂಪಾದನೆಯೊಂದಿಗೆ ಅಗ್ರ ತಂಡವಾಗಿ ನಾಕೌಟ್ ತಲುಪಿತು.
ಆಟ ಮುಗಿಯಲು ಕೇವಲ 12 ನಿಮಿಷಗಳಿದ್ದಾಗ ರಕ್ಷಣಾ ಆಟಗಾರ ಜಾನ್ ವೆರ್ಟಾಂಗೇನ್ ಆಕರ್ಷಕ ಗೋಲು ಬಾರಿಸಿ ಬೆಲ್ಜಿಯಂ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು. ಮತ್ತೊಂದೆಡೆ ದಕ್ಷಿಣ ಕೊರಿಯಾ ಗೋಲ್ಕೀಪರ್ ಕಿಮ್ ಸ್ಯೂಂಗ್-ಗ್ಯು ಪ್ರಾರಂಭದಲ್ಲಿ ಎದುರಾಳಿಯ ಗೋಲಾಗುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರೂ ಸಹ ರಿಬೌಂಡ್ ಆದ ಚೆಂಡು ಅವರನ್ನು ವಂಚಿಸಿತು. ಬೆಲ್ಜಿಯಂ ತಂಡದ ಬದಲಿ ಆಟಗಾರ ಡಿವೋಕ್ ಓರಿಜಿ ಬಾರಿಸಿದ ಚೆಂಡು ರಿಬೌಂಡ್ ಆದ ನಂತರ ಗೋಲುಬಲೆಯ ಸಮೀಪವೇ ಇದ್ದ ಜಾನ್ ವೆರ್ಟಾಂಗೇನ್ ಚಾಣಾಕ್ಷತನದಿಂದ ಅದನ್ನು ಪುನಃ ಬಲೆಯೊಳಕ್ಕೆ ಬಾರಿಸಿ ತಮ್ಮ ತಂಡದ ಪರ ಗೋಲಿನ ಖಾತೆ ತೆರೆದರು. ಈ ಸೋಲಿನೊಂದಿಗೆ ದಕ್ಷಿಣ ಕೊರಿಯಾ ಕೂಡ ಗುಂಪು ಸೆಣಸಿನಲ್ಲಿಯೇ ತನ್ನ ಮುಂದಿನ ಹೋರಾಟಕ್ಕೆ ತೆರೆ ಎಳೆದುಕೊಂಡಿತು. ಒಂದು ವೇಳೆ ನಾಕೌಟ್ ಸುತ್ತು ತಲುಪುವ ಆಸೆ ಹೊಂದಬೇಕಿದ್ದರೆ, ದಕ್ಷಿಣ ಕೊರಿಯಾ ಆಟಗಾರರಿಗೆ ಈ ಪಂದ್ಯದಲ್ಲಿ ಭಾರಿ ಅಂತರದ ಗೆಲುವು ಅಗತ್ಯವಾಗಿತ್ತು. ಆದರೆ, ಸೋಲು ಕಾಣುವುದರೊಂದಿಗೆ ಕೇವಲ 1 ಅಂಕದಲ್ಲಿಯೇ ಉಳಿದು ಕೊನೆಯ ನಾಲ್ಕನೇ ಸ್ಥಾನಕ್ಕೆ ಸಮಾಧಾನಗೊಂಡರು.
ಈ ಮಧ್ಯೆ ಪಂದ್ಯದ 45ನೇ ನಿಮಿಷದ ಆಟದಲ್ಲಿ ಬೆಲ್ಜಿಯಂನ ಸ್ಟೀವನ್ ಡೀಪೋರ್ ಅಂಕಣದಲ್ಲಿ ಎದುರಾಳಿ ಆಟಗಾರರ ಜೊತೆ ತಪ್ಪೆಸಗಿದ ಕಾರಣಕ್ಕೆ ಕೆಂಪು ಕಾರ್ಡ್ ಪಡೆದು ಹೊರನಡೆದರು. ಹಾಗಾಗಿ, ಎರಡನೇ ಅವಧಿಯ ಪೂರ್ಣ ಆಟದಲ್ಲಿ ಬೆಲ್ಜಿಯಂ ತಂಡ 10 ಆಟಗಾರರೊಂದಿಗೆ ತನ್ನ ಹೋರಾಟ ಮುಂದುವರಿಸುವ ಕಠಿಣ ಪರಿಸ್ಥಿತಿ ತಂದುಕೊಂಡಿತು. ಆದರೆ, ಎದುರಾಳಿ ತಂಡದ ಒಬ್ಬ ಆಟಗಾರನ ಕೊರತೆಯ ಲಾಭ ಪಡೆದುಕೊಳ್ಳುವಲ್ಲಿ ದಕ್ಷಿಣ ಕೊರಿಯಾ ಆಟಗಾರರು ವಿಫಲರಾದರು. ಬೆಲ್ಜಿಯಂ ಮೇಲೆ ನಿರಂತರ ದಂಡೆತ್ತಿ ಹೋಗುವ ಮೂಲಕ ಅವಕಾಶಗಳನ್ನು ಕಂಡುಕೊಳ್ಳುವಲ್ಲಿ ದಕ್ಷಿಣ ಕೊರಿಯಾಕ್ಕೆ ಸಾಧ್ಯವಾಗಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


