ಝಗಮಗ ಜೆರ್ಸಿ

ಉಡುಗೆ ಮಾನವನ ವ್ಯಕ್ತಿತ್ವದ ಪ್ರತಿಬಿಂಬ. ಫಿಫಾ ಫುಟ್ಬಾಲ್ ಮಟ್ಟಿಗೆ ಅದು ಪ್ರತಿಷ್ಠೆಯ ವಿಷಯ. ಇಲ್ಲಿ ಆಟದಷ್ಟೇ ಉಡುಗೆ ತೊಡುಗೆ ಮಹತ್ವ ಪಡೆಯುತ್ತವೆ. ಜೆರ್ಸಿ, ಟ್ರೌಸರ್, ಸಾಕ್ಸ್, ಶೂಗಳೆಲ್ಲದರಲ್ಲೂ ಸ್ಪರ್ಧೆ ಇದೆ. ಇದರ ವಿನ್ಯಾಸಕ್ಕೆಂದೇ ಕೋಟಿಗಟ್ಟಲೆ ಹಣ ಸುರಿಯುತ್ತಾರೆ. ಆಟದೊಂದಿಗೆ ಮೈದಾನದಲ್ಲೂ ಗಮನಸೆಳೆಯುವುದು ಇದರ ಹಿಂದಿರುವ ಉದ್ದೇಶ. ವಿಶ್ವಕಪ್ಗೆ ಕೆಲವೇ ದಿನಗಳು ಉಳಿದಿರುವಾಗ, ಎಲ್ಲ ತಂಡಗಳ ಕಿಟ್ಗಳ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಯಾವುದು ಶ್ರೇಷ್ಠ, ಯಾವುದು ಕಳಪೆ ವಿನ್ಯಾಸ, ಯಾವುದು ಮನೋಹರ, ಯಾವುದು ಕಿರಿಕಿರಿ ಎಂಬೆಲ್ಲಾ ವಿಚಾರಗಳು ಫುಟ್ಬಾಲ್ ಪ್ರೇಮಿಗಳ ಬಾಯಲ್ಲಿ ಎಲೆಯಡಿಕೆಯಾಗುತ್ತಿವೆ. ಇದರಲ್ಲಿ ಟಾಪ್ 5 ಉತ್ತಮ ಮತ್ತು ಕೆಟ್ಟ ವಿನ್ಯಾಸದ ಜೆರ್ಸಿಗಳ ಬಗ್ಗೆ ಇಣುಕು ನೋಟ.
5 ಅತ್ಯುತ್ತಮ ಜೆರ್ಸಿಗಳು
1. ಕ್ಯಾಮೆರೂನ್
ಈ ಬಾರಿ ನಂ.1 ಸ್ಥಾನದಲ್ಲಿ ಕುಳಿತಿರುವುದು ಕ್ಯಾಮೆರೂನ್ ಜೆರ್ಸಿ. ಸ್ಲೀವ್ಲೆಸ್ನಿಂದ ಫುಲ್ ಸ್ಲೀವ್ವರೆಗೆ ವಿವಿಧ ವಿನ್ಯಾಸ, ಅಳೆದು ತೂಗಿ ನೋಡಿರುವ ಈ ದೇಶದಲ್ಲಿ ಫುಟ್ಬಾಲ್ ಅಂದರೆ ಕ್ರೇಜ್. ಗುಹಾಚಿತ್ರಗಳನ್ನೊಳಗೊಂಡಿರುವ ಈ ತಂಡದ ಹಸಿರು ಜೆರ್ಸಿ ಎಲ್ಲರ ಕಣ್ಣು ಕುಕ್ಕಿಸಿದೆ. ಅತ್ಯಾಕರ್ಷಕವಾಗಿ ವಿನ್ಯಾಸಗೊಂಡಿರುವ ಜೆರ್ಸಿಯಲ್ಲಿ ಸಿಂಹದ ಆಕೃತಿಯೂ ಇದೆ. ಇದರೊಂದಿಗೆ ಲೆಸ್ ಲಯನ್ಸ್ ಇಂಡೋಪ್ಟೇಬಲ್ ಸಿಂಹಗಳು ಅದಮ್ಯ ಎಂಬ ಒಕ್ಕಣೆಯಂತೂ ಬಹಳ ಪವರ್ಫುಲ್.
2. ರಷ್ಯಾ
ಗೋಲ್ಡನ್ ಅಡಿಡಾಸ್ ಪಟ್ಟೆ ಹೊಂದಿರುವ ಕಡುಗೆಂಪು ಬಣ್ಣದ ರಷ್ಯಾ ತಂಡದ ಜೆರ್ಸಿ ಎರಡನೇ ಸ್ಥಾನದಲ್ಲಿದೆ. ಹುರುಪು ಹೆಚ್ಚಿಸುವ ಇದು 'ಗೇಮ್ ಫಾರ್ ಎನಿಥಿಂಗ್' ಎಂಬ ಸಂದೇಶ ಸಾರುತ್ತಿದೆ. ಇದರ ಹಿಂಬದಿಯಲ್ಲಿ ಚೇತೋಹಾರಿ ಲೆಟ್ಸ್ ಗೋ ಎಂಬ ಒಕ್ಕಣೆ ಇದೆ. 1961ರಲ್ಲಿ ಮೊತ್ತಮೊದಲ ಬಾರಿಗೆ ಅಂತರಿಕ್ಷ ಪ್ರವೇಶಿಸಿದ್ದ ಮಾನವ ಯೂರಿ ಗಗಾರಿನ್ ಈ ಮಾತನ್ನು ಬಳಸಿದ್ದ.
3. ಬ್ರೆಜಿಲ್
ಫುಟ್ಬಾಲ್ ಆಡಲೆಂದೇ ಸೃಷ್ಟಿಯಾಗಿರುವ ದೇಶ ಬ್ರೆಜಿಲ್ ಜೆರ್ಸಿ ಈ ಬಾರಿ 3ನೇ ಸ್ಥಾನದಲ್ಲಿದೆ. ಹಸಿರು ಬಾರ್ಡರ್ನಿಂದ ಕೂಡಿದ ಹಳದಿ ಬಣ್ಣದ ಜೆರ್ಸಿಗಳು ಗಮನ ಸೆಳೆಯುತ್ತಿವೆ. ಕಠಿಣ ಪರಿಶ್ರಮದ ಸಂದೇಶ ಸಾರುವ ಈ ಜೆರ್ಸಿ ಪ್ರತಿಕ್ಷಣವೂ ಫಿಫಾ ಫುಟ್ಬಾಲ್ ಗುಂಗಿಗೆ ಆಟಗಾರನನ್ನು ಎಳೆದೊಯ್ಯುತ್ತದೆ ಎಂಬುದು ವಿನ್ಯಾಸಕರ ಅಂಬೋಣ.
4. ಅರ್ಜೆಂಟಿನಾ
ಫುಟ್ಬಾಲ್ ಕ್ರೇಜ್ಗಾಗಿ ಬ್ರೆಜಿಲ್ನಷ್ಟೇ ಗುರುತಿಸಲ್ಪಡುವ ಮತ್ತೊಂದು ತಂಡವಿದ್ದರೆ ಅದು ಖಂಡಿತವಾಗಿಯೂ ಅರ್ಜೆಂಟಿನಾ. ನೀಲಿ ಪಟ್ಟೆಗಳನ್ನೊಳಗೊಂಡಿರುವ ಬಿಳಿ ಬಣ್ಣದ ಜೆರ್ಸಿ ಆ ತಂಡಕ್ಕೆ ಹೊಸ ಲುಕ್ ಕೊಟ್ಟಿದೆ. ಡಿಗೋ ಮರಡೋನಾಗಿಂತಲೂ ಚಾಣಾಕ್ಷ ಆಟಗಾರ ಎಂದೇ ಪ್ರಸಿದ್ಧನಾಗಿರುವ ಲಿಯೋನೆಲ್ ಮೆಸ್ಸಿ ಈ ಉಡುಗೆಯಲ್ಲಿ ವಿಶ್ವಕಪ್ ಕಬಳಿಸುತ್ತಾನೆ ಎಂಬುದೇ ಅರ್ಜೆಂಟಿನಾ ಅಭಿಮಾನಿಗಳ ನಂಬಿಕೆ.
5. ಜರ್ಮನಿ
ಜರ್ಮನಿ ಜೆರ್ಸಿಗಳು ಯಾವತ್ತಿದ್ದರೂ ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗಣವಾಗಿಯೇ ವಿನ್ಯಾಸಗೊಂಡಿರುತ್ತದೆ. ಈ ಬಾರಿಯೂ ಅದಕ್ಕೆ ಹೊರತಲ್ಲ. ಈ ವಿಶ್ವ ಸರಣಿಯಲ್ಲಿ ಅದ್ಭುತ ಯಶಸ್ಸು ಸಾಧಿಸಲಿ ಎಂಬ ಸಂದೇಶವನ್ನು ಸಾರುತ್ತಿರುವ ಜರ್ಮನಿಯ ಜೆರ್ಸಿ 5ನೇ ಸ್ಥಾನದಲ್ಲಿದೆ. ಬಿಳಿ ಬಣ್ಣದ ಜೆರ್ಸಿಯ ಮೇಲ್ಗಡೆ ಕೆಂಪು ಮತ್ತು ಕಪ್ಪು ಬಣ್ಣದ ಪಟ್ಟೆಗಳು ವಿಶ್ವಚಾಂಪಿಯನ್ ಪಟ್ಟದ ಕಡೆಗೆ ತಂಡವನ್ನು ಉತ್ತೇಜಿಸುವಂತಿದೆ.
ಟಾಪ್ 5 ಕೆಟ್ಟ ಜೆರ್ಸಿಗಳು
1. ಇಟಲಿ
ವಿಶ್ವದ ಪ್ರಬಲ ತಂಡಗಳಲ್ಲೊಂದಾಗಿರುವ ಇಟಲಿ ಜೆರ್ಸಿ ವಿನ್ಯಾಸ ತಂಡಕ್ಕೆ ಸ್ಫೂರ್ತಿ ಒದಗಿಸಬಲ್ಲ ಯಾವ ಅಂಶವನ್ನೂ ಒಳಗೊಂಡಿಲ್ಲ ಎಂಬುದು ಫುಟ್ಬಾಲ್ ಪ್ರೇಮಿಗಳ ಅಭಿಪ್ರಾಯ.
2. ಯುಎಸ್ಎ
ಪ್ರಪಂಚದಲ್ಲಿ ತಾನೇ ಎಲ್ಲರಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸುವ ಅಮೆರಿಕ ಜೆರ್ಸಿ ವಿಷಯದಲ್ಲಿ ಹಿಂದೆ ಬಿದ್ದಿದೆ. ಬಿಳಿ ಬಣ್ಣದ ಬಟ್ಟೆಯಲ್ಲಿ ಸ್ಟಾರ್ಗಳನ್ನೊಳಗೊಂಡ ಲೋಗೋವನ್ನು ಚಿತ್ರಿಸಿದ್ದಾರೆ. ಇದು ಯಾವ ರೀತಿಯಲ್ಲೂ ಗಮನ ಸೆಳೆಯುತ್ತಿಲ್ಲ.
3. ಇಂಗ್ಲೆಂಡ್
ಪ್ರತಿಬಾರಿಯೂ ಕ್ಲಾಸ್ಸಿಕ್ ಎಂದು ಕರೆಸಿಕೊಳ್ಳುತ್ತಿದ್ದ ಇಂಗ್ಲೆಂಡ್ ತಂಡದ ಜೆರ್ಸಿಗಳು ಈ ಬಾರಿ ಮಂಕಾಗಿವೆ. ಸಾದಾ ಬಿಳಿ ಬಣ್ಣದ ವಿನ್ಯಾಸ ಹೊಂದಿರುವ ಈ ಜೆರ್ಸಿ ವಿಮರ್ಶಕರ ಟೀಕೆಗೆ ಒಳಗಾಗಿದೆ.
4. ಇರಾನ್
ಮಧ್ಯಪ್ರಾಚ್ಯದ ಪ್ರಬಲ ತಂಡ ಇರಾನ್ ಜೆರ್ಸಿ ಚಿರತೆಯ ಚಿತ್ರ ಹೊಂದಿದ್ದರೂ ಚಿತ್ತಾಕರ್ಷಕವಾಗಿಲ್ಲ ಎನ್ನಲಾಗಿದೆ.
5. ಹೊಂಡುರಸ್
ಉತ್ತರ ಅಮೆರಿಕದಿಂದ ವಿಶ್ವಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೊಂಡುರಸ್ ತನ್ನ ಜೆರ್ಸಿಯಲ್ಲಿ ಆ ಚಾರ್ಮ್ ಅನ್ನು ಉಳಿಸಿಕೊಳ್ಳುವಲ್ಲಿ ಎಡವಿದೆ.
- ಗಣಪ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


