

ಎಲ್ಲಿಗೋ ತುರ್ತು ಕೆಲಸದ ನಿಮಿತ್ತ ಅವಸರವಾಗಿ ಹೊರಡಲು ಅಣಿಯಾಗಿರುತ್ತೀರಿ. ದಿಢೀರ್ ಎಂದು ಪಕ್ಕದ ಮನೆಯ ಆಸಾಮಿ ನಿಮ್ಮನೆಗೆ ಬಂದು ಕೂತು ಬಿಡುತ್ತಾನೆ. ನಿಮಗೆ ತುರ್ತು ಕೆಲಸ ಇರುವ ಬಗ್ಗೆ ಅವರಿಗೆ ಹೇಳಿದರೆ ಎಲ್ಲಿ ಬೇಜಾರು ಮಾಡಿಕೊಳ್ಳುತ್ತಾರೋ ಎಂದುಕೊಂಡು ಮನಸ್ಸಲ್ಲೇ ಕೊರಗುತ್ತಾ ನೀವೂ ಕೂತು ಬಿಡುತ್ತಿರಿ.
ಯಾರದೋ ಮನೆಗೆ ಹೋಗಿರುತ್ತೀರಿ. ನಿಮಗೆ ಹಸಿವಾಗಿರುತ್ತದೆ. ಮನೆ ಮಂದಿ ಊಟ ಮಾಡಲು ಕರೆಯುತ್ತಾರೆ. ನಿಮಗೆ ಹಸಿವಿದ್ದರೂ ಅಡುಗೆ ಇದೆಯೋ ಇಲ್ಲವೋ ಎಂಬ ಅನುಮಾನ. ಹೀಗಾಗಿ, 'ನಂಗೆ ಬೇಡ, ನಂದೂಟ ಆಯ್ತು' ಎನ್ನುತ್ತೀರಿ. ಏಕೆಂದರೆ 'ಸಂಕೋಚ'ದ ಪ್ರತಿನಿಧಿ ನೀವು.
ಜೀವನದಲ್ಲಿ ಒಬ್ಬ ವ್ಯಕ್ತಿಗೆ ಏನೇ ಕ್ರಿಯಾಶೀಲತೆ, ಬುದ್ಧಿವಂತಿಕೆ, ಜ್ಞಾನವಿದ್ದು ಅದರ ಜತೆಗೆ ಕೊಂಚ 'ಸಂಕೋಚ'ವಿದ್ದರೆ ಸಾಕು, ಅಷ್ಟೂ ಉತ್ತಮ ಗುಣಗಳನ್ನು ಅದು ಮಕಾಡೆ ಮಲಗಿಸಿ ಬಿಡುತ್ತದೆ. ನಮ್ಮೆಲ್ಲ ಹತಾಶೆ, ಕೊರಗು, ಅಸಹಾಯಕತೆ, ಚಡಪಡಿಕೆ ಹಿಂದೆ 'ಸಂಕೋಚ'ವೆಂಬುದು ಸದ್ದಿಲ್ಲದೆ ಮನೆ ಮಾಡಿರುತ್ತದೆ. ಕೆಲವರಿಗಂತೂ ಸಂಕೋಚದಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ.
ಹಾಗೆಂದ ಮಾತ್ರಕ್ಕೆ ಸಂಕೋಚ ಬೇಡವೇ ಬೇಡವೆಂದಲ್ಲ. ಅದು ಇತಿಮಿತಿಯಲ್ಲಿದ್ದರೆ ಚೆನ್ನ. ಸಂಕೋಚ ಅತಿಯಾದರೆ ಸಮಾಜದಲ್ಲಿ ಇತರರೊಡನೆ ಸಂಪೂರ್ಣ ಬೆರೆಯಲು ಆಗದೆ, ಸಂವಹನ ಸಾಮರ್ಥ್ಯವೂ ಕುಗ್ಗಿ, ಏಕಾಂಗಿಯಾಗುವತ್ತ ಮನಸ್ಸು ವಾಲುತ್ತದೆ. ಸಂಕೋಚದ ಜತೆಗೆ 'ದಾಕ್ಷಿಣ್ಯ'ವಿದ್ದರಂತೂ ಮುಗಿದೇ ಹೋಯ್ತು. ಎಲ್ಲೆಂದರಲ್ಲಿ ಮುಲಾಜಿಗೆ ಸಿಲುಕಿ ನಿಮ್ಮಷ್ಟಕ್ಕೆ ನೀವೇ ಅಥವಾ ಇತರರಿಗೆ ಸಹಾಯ ಮಾಡಲು ಹೋಗಿ ತಾವೇ ಸಮಸ್ಯೆಗೆ ಸಿಲುಕುವಂತೆ ಮಾಡಿಬಿಡುತ್ತವೆ.
ಒಂದೇ ಬಾರಿಗೆ ಈ ಸಂಕೋಚಕ್ಕೆ ಗುಡ್‌ಬೈ ಹೇಳಲು ಸಾಧ್ಯವಾಗದಿದ್ದರೂ ನಮ್ಮ ನಿತ್ಯದ ಜೀವನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಂಡರೆ ಸಂಕೋಚದಿಂದ ಮೈಕೊಡವಿ ಮೇಲೇಳಬಹುದು.
ಅದು ಹೇಗೆಂದರೆ...