

ಜಗತ್ತಿನ ಪ್ರತಿ ಹೆಣ್ಣಿಗೂ ಅಮ್ಮನಾಗುವುದು ಒಂದು ಅನನ್ಯ ಸಂಭ್ರಮ. ತನ್ನದೇ ರಕ್ತ ಮಾಂಸವನ್ನು ಹಂಚಿಕೊಂಡು ರೂಪು ತಳೆದ ಜೀವಕುಡಿಯೊಂದನ್ನು ಸೃಜಿಸುವ ವಿಸ್ಮಯ ಅವಳಿಗೆ ಕೇವಲ ಎರಡು ಗಂಟೆಯ ಹೆರಿಗೆ ನೋವಿನ ನಂತರ ಗರ್ಭದ ಶಿಶುವನ್ನು ಭೂಮಿಗೆ ದೂಡಿ ಮುಗಿಸುವ ಯಾಂತ್ರಿಕ ಕ್ರಿಯೆ ಅಲ್ಲವೇ ಅಲ್ಲ. ಒಂದು ಮಗುವಿಗೆ ಜೀವ ನೀಡುವುದರೊಟ್ಟಿಗೇ ತಾನೂ ಮರುಜನ್ಮ ಪಡೆಯುತ್ತಾಳೆ ತಾಯಿ. 'ಅಮ್ಮತನ'ಕ್ಕೆ ಪರ್ಯಾಯವೊಂದು ಈ ಜಗತ್ತಿನಲ್ಲಿ ಇಲ್ಲವೇ ಇಲ್ಲ.
ಅಮ್ಮನಾಗುವುದೆಂದರೆ ಅದು ತನ್ನ ಗರ್ಭದೊಳಗೆ ಜೀವ ಕಣವೊಂದು ಫಲಿತಗೊಂಡ ಕ್ಷಣದಿಂದ ಒಂಬತ್ತು ತಿಂಗಳ ಕಾಲ ಅದರೆಲ್ಲ ಬೆಳವಣಿಗೆಗಳೊಟ್ಟಿಗೆ ಒಡಲೊಳಗೆ ಜತನದಿಂದ ಕಾಪಿಟ್ಟು, ಹೆತ್ತ ನಂತರವೂ ಹಾಲೂಡಿ ರಕ್ಷಿಸುವ ಅನುದಿನ, ಅನುಕ್ಷಣದ ನಿರಂತರ ಪ್ರಕ್ರಿಯೆ. ಗರ್ಭಿಣಿಯಾಗಿರುವಾಗ ತನ್ನೊಟ್ಟಿಗೆ ತನ್ನೊಳಗಿನ ಕಂದಮ್ಮನನ್ನೂ ಆರೋಗ್ಯವಾಗಿಡುವ ಜವಾಬ್ದಾರಿ ಅವಳ ಮೇಲಿರುತ್ತದೆ.
ಮನೆಯಲ್ಲಿಯೇ ಕೆಲವು ಸರಳ ವ್ಯಾಯಾಮಗಳನ್ನು ಮಾಡುವುದರಿಂದ ಗರ್ಭಿಣಿಯರು ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು.
ವ್ಯಾಯಾಮ ಏಕೆ ಬೇಕು?
ಗರ್ಭಿಣಿಯರು ನಿಗದಿತವಾಗಿ ವ್ಯಾಯಾಮ ಮಾಡುವುದರಿಂದ ಹೃದಯ ಆರೋಗ್ಯಪೂರ್ಣವಾಗಿರುತ್ತದೆ. ಮನಸ್ಸಿಗೆ ಹೊಸ ಚೈತನ್ಯ ಸಿಗುತ್ತದೆ. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬೆನ್ನುನೋವು, ಕಾಲುನೋವುಗಳನ್ನೂ ದೂರಮಾಡಬಹುದು. ಹೆರಿಗೆಯೂ ಸುಸೂತ್ರವಾಗುತ್ತದೆ.
ವ್ಯಾಯಾಮಕ್ಕೂ ಮುನ್ನ...
ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ ನೀವು ಆಯ್ದುಕೊಂಡ ವ್ಯಾಯಾಮಗಳು ಸುರಕ್ಷಿತವೇ ಎಂಬುದನ್ನು ವೈದ್ಯರ ಬಳಿ ಕೇಳಿ ಖಾತ್ರಿಪಡಿಸಿಕೊಳ್ಳಿ. ಹಾಗೆ ಒಪ್ಪಿಗೆ ನೀಡಿದ ವ್ಯಾಯಾಮಗಳನ್ನು ವಾರಕ್ಕೆ 4 ದಿನ, ಕನಿಷ್ಠ 30 ನಿಮಿಷ ಮಾಡಬೇಕು. ಆದರೆ ನೆನಪಿಡಿ. ನೀವು ನಿಮ್ಮ ಮತ್ತು ನಿಮ್ಮ ಕಂದಮ್ಮನ ಆರೋಗ್ಯದ ದೃಷ್ಟಿಯಿಂದ ವ್ಯಾಯಾಮ ಮಾಡುತ್ತಿದ್ದೀರೇ ಹೊರತು ಯಾವುದೋ ರಿಯಾಲಿಟಿ ಶೋನಲ್ಲಿ ಗೆಲ್ಲುವುದಕ್ಕಲ್ಲ. ಗರ್ಭಿಣಿಯರು ಮಾಡಬಹುದಾದ ಸರಳ ವ್ಯಾಯಾಮಗಳು ಇಂತಿವೆ...
ನಡೆಯುವುದು
ನಿಮ್ಮ ಪರಿಸರದಲ್ಲಿ ಸುಮ್ಮನೇ ನಡೆದಾಡಿ. ಇದರಿಂದ ಮೊಣಕಾಲು, ಮಂಡಿ ಮತ್ತು ಹೃದಯಗಳಿಗೆ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಅಲ್ಲದೆ, ಆಹ್ಲಾದಕರ ವಾತಾವರಣ ನಿಮ್ಮ ಮನಸ್ಸಿಗೂ ಹೊಸ ಚೈತನ್ಯ ತುಂಬುತ್ತದೆ. ಈ ವ್ಯಾಯಾಮವನ್ನು ಒಂಬತ್ತು ತಿಂಗಳಲ್ಲಿ ಎಲ್ಲಿ ಯಾವಾಗ ಬೇಕಾದರೂ ಮಾಡಬಹುದು. ಆದರೆ, ನಡೆದಾಡಲು ಸಮತಟ್ಟಾದ ಮೃದು ಹುಲ್ಲುಗಾವಲಿನ ಜಾಗವನ್ನೇ ಆಯ್ದುಕೊಳ್ಳಿ. 3 ತಿಂಗಳು ತುಂಬಿದ ಮೇಲೆ ನಿಮ್ಮ ಪಾದಗಳು ಸ್ವಲ್ಪ ಬಾತುಕೊಳ್ಳಬಹುದು. ಸಾಕಷ್ಟು ಸಡಿಲಾದ ಪಾದರಕ್ಷೆಗಳನ್ನು ಬಳಸಿ.
ಈಜುವುದು
ಇದು ಗರ್ಭಿಣಿಯರಿಗೆ ಅತ್ಯುತ್ತಮ ವ್ಯಾಯಾಮ. ನೀರಿನಲ್ಲಿ ವ್ಯಾಯಾಮ ಮಾಡುವುದರಿಂದ ದೇಹದ ಕೀಲು, ಸಂಧಿಗಳ ಮೇಲೆ ಯಾವುದೇ ಒತ್ತಡ ಬೀಳುವುದಿಲ್ಲ. ಅಲ್ಲದೆ, ಹೊಟ್ಟೆಗೆ ಒತ್ತಡ ಬಿದ್ದು ಮಗುವಿಗೆ ಘಾಸಿಯಾಗುವ ಸಾಧ್ಯತೆಯೂ ಇರುವುದಿಲ್ಲ. ಒಂಬತ್ತನೆಯ ತಿಂಗಳಲ್ಲಿಯೂ ಈ ವ್ಯಾಯಾಮವನ್ನು ಮಾಡಬಹುದು. ಆದರೆ, ಈಜುವಾಗ ನಿಮಗೆ ಕಂಫರ್ಟ್ ಎನಿಸುವ, ಕತ್ತು, ಭುಜ ಮತ್ತು ಬೆನ್ನಿನ ಸ್ನಾಯುಗಳಿಗೆ ನೋವು ಮಾಡದಂಥ ವಿಧಾನವನ್ನೇ ಆರಿಸಿಕೊಳ್ಳಿ. ಎದೆಮುಖವಾಗಿ (ಬ್ರೆಸ್ಟ್‌ಸ್ಟ್ರೋಕ್) ಈಜುವುದು ಹೆಚ್ಚು ಒಳ್ಳೆಯದು. ವಿಪರೀತ ಡೈವ್ ಹೊಡೆಯುವುದು ಅಪಾಯಕಾರಿ. ಅತಿ ಬಿಸಿಯಾದ ನೀರಿನಲ್ಲಿ ಈಜಬೇಡಿ. ಹಬೆಕೋಣೆಯಿಂದ ದೂರವಿದ್ದಷ್ಟೂ ಒಳ್ಳೆಯದು.
ಯೋಗ
ಯೋಗಾಭ್ಯಾಸ ದೇಹದ ಕೀಲು, ಸಂಧಿಗಳನ್ನು ಮೃದುಗೊಳಿಸುತ್ತದೆ. ರಕ್ತ ಸಂಚಾರ ಮತ್ತು ಸ್ನಾಯುವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುತ್ತದೆ. ಅಲ್ಲದೆ, ಹೆರಿಗೆ ನೋವಿನ ಅವಧಿಯೂ ಕಡಿಮೆಯಾಗಿ ಸುಸೂತ್ರವಾಗುತ್ತದೆ. ಆದರೆ, ಗರ್ಭಿಣಿ ಅವಸ್ಥೆಯ ವಿವಿಧ ಹಂತಗಳಿಗೆ ತಕ್ಕಂತೆ ದೇಹದ ಸಮತೋಲನ ತಪ್ಪಿಸುವ ಯೋಗ ಭಂಗಿಗಳನ್ನು ಬಿಡುತ್ತಾ ಬನ್ನಿ. 6 ತಿಂಗಳ ನಂತರ ಅಂಗಾತ ಮಲಗುವ ಭಂಗಿಗಳನ್ನು ಸಂಪೂರ್ಣ ನಿಲ್ಲಿಸಿ. ಕೈಕಾಲುಗಳನ್ನು ಅತಿಯಾಗಿ ಅಗಲಿಸುವ ಭಂಗಿಗಳನ್ನು ಮಾಡಬೇಡಿ.
ತೂಕ ಎತ್ತುವುದು
ಈ ವ್ಯಾಯಾಮ ಮುಂದೆ ನಿಮ್ಮ ಮಗುವನ್ನು ಎತ್ತಿಕೊಳ್ಳಲು ದೇಹವನ್ನು ಹುರಿಗೊಳಿಸುತ್ತದೆ. ಅಲ್ಲದೆ, ಕೀಲುಗಳ ಸುತ್ತಮುತ್ತಲಿನ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ. ಅತಿ ಹೆಚ್ಚು ತೂಕದ ವಸ್ತುವನ್ನು ಎತ್ತುವುದಕ್ಕಿಂತ ಕಡಿಮೆ ತೂಕವನ್ನು ಬಳಸಿ ಹೆಚ್ಚು ಸಮಯ ವ್ಯಾಯಾಮ ಮಾಡುವುದು ಆರೋಗ್ಯಕರ. ಅಂಗಾತ ಮಲಗಿ ತೂಕ ಎತ್ತುವ ವ್ಯಾಯಾಮವನ್ನು ಮಾಡಲೇಬೇಡಿ. ಏದುಸಿರು ಬಂದರೆ ತೂಕ ಕಡಿಮೆಗೊಳಿಸಿ. ಅಸಹಜ ಉಸಿರಾಟದಿಂದ ರಕ್ತದೊತ್ತಡ ಹೆಚ್ಚಬಹುದು. ಗರ್ಭದಲ್ಲಿನ ಮಗುವಿಗೂ ರಕ್ತದ ಹರಿವು ಕಡಿಮೆಯಾಗಬಹುದು. <
ಹೀಗೆಲ್ಲ ಆದ್ರೆ ವೈದ್ಯರನ್ನು ಸಂಪರ್ಕಿಸಿ...