

ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ. ಇದು ಮುದುಕಕಾಗುವುದನ್ನೂ ನಿಧಾನಿಸುತ್ತದೆ. ರಕ್ತದ ಕೊಲೆಸ್ಟರಾಲ್ ತಗ್ಗಿಸುವುದು, ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ದೃಢವಾಗಿಸಬಲ್ಲದು ಎಂದು ಅಧ್ಯಯನಗಳು ಹೇಳುತ್ತವೆ.
ಆಫ್ರಿಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ರಕ್ತಧಮನಿಗೆ ಸಂಬಂಧಿಸಿದ ರೋಗ ಕಡಿಮೆ ಮತ್ತು ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಎಂಬುದನ್ನು ಅಧ್ಯಯನ ತಂಡ ವೊಂದು ಪತ್ತೆ ಮಾಡಿತು. ಇವರು ಆಹಾರದಲ್ಲಿ ಮೊಸರನ್ನು ತಪ್ಪದೇ ಸೇವಿಸುತ್ತಾರೆ. ಆದ್ದರಿಂದ ಈ ಜನರ ಆಯಸ್ಸೂ ದೀರ್ಘ ಎಂದೂ ತಂಡ ಕಂಡುಕೊಂಡಿತು.
ಪಚನ ಸುಲಭ
ಹಾಲು ಹುಳಿಯಾಗುವಾಗ ಅದರಲ್ಲಿರುವ ಖನಿಜಾಂಶಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ, ಅದರಲ್ಲಿರುವ ಪ್ರೊಟೀನ್‌ಗಳು, ಶರ್ಕರಗಳು, ವಿಟಮಿನ್‌ಗಳಲ್ಲಿ ಬದಲಾವಣೆಗಳುಂಟಾಗಿ ಮನುಷ್ಯನ ದೇಹದ ಮೇಲೆ ವಿಶಿಷ್ಟ ಪರಿಣಾಮ ಬೀರುತ್ತವೆ. ಹಾಲು, ಬ್ಯಾಕ್ಟೀರಿಯಾಗಳು ಬೆಳೆಯಲು ಪುಷ್ಪಿಕರ ಮಾಧ್ಯಮ. ಆದರೆ, ಮೊಸರಿನಲ್ಲಿ ಹಾನಿಕಾರಿಕ ಬ್ಯಾಕ್ಟೀರಿಯಾಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಇತರೆ ಜೀವರಾಸಾಯನಿಕ ಬದಲಾವಣೆಗಳಿಂದಾಗಿ ಲ್ಯಾಕ್ಟಿಕ್ ಆಮ್ಲ, ಆಲ್ಕೊಹಾಲ್, ಕಾರ್ಬನ್ ಡೈ ಆಕ್ಸೈಡ್, ಆ್ಯಂಟಿ ಬಯೋಟಿಕ್ ಮತ್ತು ವಿಟಮಿನ್‌ಗಳು ರೂಪುಗೊಂಡು ಮೊಸರು ಮನುಷ್ಯನಿಗೆ ಹೆಚ್ಚು ಪುಷ್ಟಿಕರವಾಗಿ ಮತ್ತು ಸುಲಭವಾಗಿ ಪಚನವಾಗುವ ಪದಾರ್ಥವಾಗಿ ಮಾರ್ಪಾಡುಗೊಳ್ಳುತ್ತದೆ. ಅಗತ್ಯ ಅಮೈನೊ ಆಮ್ಲಗಳ ಪರಿಮಾಣವೂ ಹೆಚ್ಚುತ್ತದೆ. ಜಠರ, ಕರುಳು ಬಾಧೆ, ಪಿತ್ತಕೋಶ ಉರಿಯೂತ, ಅತಿಸಾರ, ಕರುಳಿನ ಉರಿಯೂತ, ರಕ್ತಹೀನತೆ ಮುಂತಾದ ತೊಂದರೆಗಳಿಗೆ ಮೊಸರು ಒಳ್ಳೆಯದು. ದುರ್ಮಾಂಸ ಬೆಳೆಯುವುದನ್ನೂ ಮೊಸರು ತಡೆಯುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
- ಎಚ್.ಶಿವರಾಮ ಭಟ್, ಹತ್ತೊಕ್ಕಲು