ಕೊಬ್ಬು ನೋಡು!

Updated on: 

ಕೊಬ್ಬು ಮತ್ತು ಮಧುಮೇಹಕ್ಕೆ ನಮ್ಮ ಜೀವನಶೈಲಿಯೇ ಪ್ರಮುಖ ಕಾರಣ. ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಆರೋಗ್ಯಪೂರ್ಣ ಜೀವನ ಸಾಗಿಸಬಹುದು.
ನವ ನಾಗರಿಕತೆ ಎಂದು ನಾವು ಬಿಂಬಿಸುವ ಈಗಿನ ಜೀವನ ಶೈಲಿ ಮಧುಮೇಹದಂಥ ಮೇದಸ್ಸಿನ ವಿಕಾರಗಳಿಗೆ ಮೂಲ ಕಾರಣವಾಗಿದೆ. ಅತಿಯಾದ ಸಿಹಿ, ಹುಳಿ, ಖಾರ ಮತ್ತು ಕ್ಷಾರೀಯ ಗುಣವುಳ್ಳ ಆಹಾರ (ಜಂಕ್ ಫುಡ್) ಸೇವನೆ ಹಾಗೂ ಸಂಸ್ಕರಿಸಿದ ಆಹಾರ, ಆಹಾರದ ಅನಿಯಮಿತ ಸೇವನೆ ಮತ್ತು ದಿನನಿತ್ಯದ ಮಾನಸಿಕ ಒತ್ತಡ, ಚಿಂತೆಗಳಿಂದ ಶರೀರದಲ್ಲಿರುವ ಮೇದಸ್ಸು ಕೊಬ್ಬನ್ನು ಹೆಚ್ಚಿಸುತ್ತದೆ.
ಚರಕ ಸಂಹಿತೆಯಲ್ಲಿ ಮೇದೋರೋಗ, ಹೃದ್ರೋಗ, ರಕ್ತದೊತ್ತಡ, ಮಧುಮೇಹಗಳ ನಡುವಿನ ಸ್ಪಷ್ಟ ಚಿತ್ರಣ ನೀಡಲಾಗಿದೆ. ಶರೀರದಲ್ಲಿರುವ ಧಾತುಗಳ ಮಾಂಸ ಮತ್ತು ಮೇದಸ್ಸಿನ ಅತೀವ ಹೆಚ್ಚಳದಿಂದ ಮನುಷ್ಯ ಉಬ್ಬಿದ ಹೊಟ್ಟೆ, ಎದೆ ಮತ್ತು ನಿತಂಬಗಳನ್ನು ಹೊಂದಿದ್ದರೆ ಅಂಥವರನ್ನು ಸ್ಥೂಲದೇಹಿಗಳು ಎನ್ನಬಹುದು.
ದೇಹದಲ್ಲಿ ಬದ್ಧ ಮೇದಸ್ಸಿನಿಂದ ಸ್ಥೂಲತೆ ಹಾಗೂ ಅಬದ್ಧ ಮೇದಸ್ಸಿನಿಂದ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಕೊಲೆಸ್ಟರಾಲ್ ಹೆಚ್ಚಳ, ಅಧಿಕ ರಕ್ತದೊತ್ತಡ, ಹೃದ್ರೋಗ ಇವೆಲ್ಲವೂ ಕೊಬ್ಬಿನ ಪರಿಣಾಮವೇ ಆಗಿದೆ.
ಶಾರೀರಿಕ ಬೊಜ್ಜು
ವ್ಯಯಿಸುವುದಕ್ಕಿಂತ ಹೆಚ್ಚಿನ ಶಕ್ತಿ ದೇಹದಲ್ಲಿ ಕೊಬ್ಬಾಗಿ ಪರಿವರ್ತನೆಗೊಂಡು ಕೆಲ ಸ್ಥಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಕೆಲವರಲ್ಲಿ ಹೆಚ್ಚಿನ ಕೊಬ್ಬಿನಾಂಶ ರಕ್ತದೊಂದಿಗೆ ಸೇರಿ ಧಮನಿಗಳಲ್ಲಿ ಸಂಚರಿಸುತ್ತಿರುತ್ತದೆ. ಇದರಿಂದ ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಹೆಚ್ಚಾಗುತ್ತದೆ. ಹೀಗೆ ಧಮನಿಗಳಲ್ಲಿ ಉಂಟಾಗುವ ಮೇದಸ್ಸಿನ ಸಂಚಯ ರಕ್ತನಾಳಗಳ ಗಾತ್ರ ಕುಗ್ಗಿಸಿ ರಕ್ತದ ಪೂರೈಕೆಯಲ್ಲಿ ವ್ಯತ್ಯಯವನ್ನುಂಟು ಮಾಡಿ ವಿವಿಧ ಹೃದ್ರೋಗಗಳಿಗೆ ಕಾರಣವಾಗುತ್ತದೆ. ರಕ್ತನಾಳಗಳಲ್ಲಿ ಶೇಖರವಾಗುವ ಕೊಬ್ಬು ರಕ್ತದ ಒತ್ತಡ ಹೆಚ್ಚಿಸುತ್ತದೆ.
ಕಾರಣ ನೂರು
ಮುಖ್ಯವಾಗಿ ಅತಿಯಾದ ಜಿಡ್ಡಿನಂಶದ ಸೇವನೆ, ದೈಹಿಕ ಚಟುವಟಿಕೆಗಳಿರದ ದಿನಚರಿ, ಅತಿಯಾದ ಮಾನಸಿಕ ಚಿಂತೆ ಹಾಗೂ ಅನುವಂಶೀಯತೆ ಬೊಜ್ಜಿಗೆ ಕಾರಣ.
ಮಧುಮೇಹ ಹಾಗೂ ಅತಿಸ್ಥೌಲ್ಯದ ಪೂರ್ವ ರೂಪಗಳು ಒಂದೇ ಅಗಿವೆ ಎಂದು ಆಯುರ್ವೇದ ಗ್ರಂಥಗಳು ಸ್ಪಷ್ಟಪಡಿಸುತ್ತದೆ. ಆಧುನಿಕ ವಿಜ್ಞಾನವೂ ಬೊಜ್ಜು ಮತ್ತು ಮಧುಮೇಹಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುತ್ತದೆ. ಸ್ಥೌಲ್ಯದಿಂದ ಆಲಸ್ಯ, ಅತಿಯಾದ ಬೆವರುವಿಕೆ, ದುರ್ಗಂಧ, ಶರೀರದ ದುರ್ಗಂಧ, ಹಸಿವು-ಬಾಯಾರಿಕೆಯ ಹೆಚ್ಚಳ, ಲೈಂಗಿಕ ನಿಶ್ಯಕ್ತಿಗಳಿಂದ ಜೀವಿತ ಕಾಲಾವಧಿಯೂ ಕುಂಠಿತವಾಗಬಹುದು.
ಕೊಬ್ಬಿಗೆ ಕೊನೆಯುಂಟು
ಯಾವುದೇ ಕಾಯಿಲೆಯ ಚಿಕಿತ್ಸೆಯ ಪ್ರಥಮ ಹಂತ ಕಾರಣಗಳ ವರ್ಜನೆ. ಹಾಗಾಗಿ ಯಾವುದೇ ಮೇದೋರೋಗಿಗಳು ಆಹಾರದಲ್ಲಿ ಸಿಹಿ, ಹುಳಿ ಮತ್ತು ಉಪ್ಪಿನಂಶ ನಿಯಂತ್ರಿಸಬೇಕು. ಪಿಷ್ಟ (ಖಡಿಝ್ಠ್ಛ) ಮೂಲದ ಪದಾರ್ಥಗಳಾದ ಅಕ್ಕಿ, ಮೈದಾ, ಗಡ್ಡೆ ಗೆಣಸುಗಳು, ಕರಿದ ತಿಂಡಿಗಳು, ಕೊಬ್ಬಿನಂಶದ ಮಾಂಸ (ಹಂದಿ, ಕುರಿ ಇತ್ಯಾದಿ), ಹೆಚ್ಚಿನ ಕ್ಯಾಲೋರಿ ಇರುವ ಆಹಾರಗಳನ್ನು ವರ್ಜಿಸಿದರೆ ಒಳಿತು. ಹಾಗಂತ ತಿನ್ನೋದೇ ಬಿಡಬೇಡಿ. ಅದು ಮತ್ತೊಂದು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಜೀವನ ಶೈಲಿಯ ಬದಲಾವಣೆ ಕೊಬ್ಬಿನಿಂದಾಗುವ ವಿಷವರ್ತುಲಗಳಿಂದ ಹೊರಬರಲು ಸಹಕಾರಿ. ಒತ್ತಡ ಮತ್ತು ಚಿಂತೆಯಿಂದ ಪಾರಾಗಲು, ಧ್ಯಾನ, ಯೋಗ, ಪ್ರಾಣಾಯಾಮ ಹಾಗೂ ಮುಂಜಾನೆಯ ಬಿರುಸು ನಡಿಗೆ ಉತ್ತಮ. ರಾಗಿ, ಗೋದಿ, ಜೋಳ ಹಾಗೂ ಬಾರ್ಲಿಗಳನ್ನು ಹೆಚ್ಚು ಬಳಸಿ. <
ಮನೆಯಲ್ಲೂ ಇದೆ ಮದ್ದು
=     ಮುಂಜಾನೆ ಬಿಸಿನೀರಿನಲ್ಲಿ ಒಂದು ಚಮಚ ಮೆಂತೆಪುಡಿ ಸೇವಿಸಿ.
=     ಕುಡಿಯುವ ನೀರು ಬೆಚ್ಚಗಿರಲಿ.
=     ಎರಡರಿಂದ ನಾಲ್ಕು ಬೆಳ್ಳುಳ್ಳಿ ಎಸಳನ್ನು ಕೆಂಡದಲ್ಲಿ ಸುಟ್ಟು ಊಟದ ಜತೆ ಸೇವಿಸಿ.
=     ಅಡಿಗೆಯಲ್ಲಿ ಇಂಗು, ಕರಿಬೇವು, ಶುಂಠಿ, ಅರಿಶಿನ ಧಾರಾಳವಾಗಿ ಬಳಸಿ.


ದೇಹದ ವಿಕಾರಗಳ ಸ್ಥೂಲನೋಟ
ಬೊಜ್ಜಿನ ತೊಂದರೆಗೆ ವೈದ್ಯರು ಸೂಚಿಸಬಹುದಾದ  ಚಿಕಿತ್ಸೆ
ವನಸ್ಪತಿ    ಶಮನ್‌ಷದಿ    ಪಂಚಕರ್ಮ
ಕಹಿಬೇವು     ತ್ರಿಫಲಾ ಚೂರ್ಣ    ಉದ್ವರ್ತನ
ಆಡುಸೋಗೆ    ನಾವಕಗುಗ್ಗುಲು    ಸ್ವೇದನ    
ಜೇಕಿನಗಡ್ಡೆ (ಮುಸ್ತ)    ದಶಾಂಗ ಗುಗ್ಗುಲು    ವಮನ
ಅರಿಶಿನ    ಪುನರ್ನವ ಗುಗ್ಗುಲು    ವಿರೇಚನ              
ಬೆಳ್ಳುಳ್ಳಿ     ಅಮೃತಾದಿ ಗಗ್ಗುಲು    ಬಸ್ತಿ
ಶುಂಠಿ    ಚಂದ್ರಪ್ರಭಾವಟಿ  
ಇಂಗು    ಅಯಸ್ಕೃತಿ
ಕರಿಬೇವು     ವರಣಾದಿ ಕಷಾಯ
ನೇರಳೆ    ಅಸನಾದಿ ಕಷಾಯ
ಪುನರ್ಪುಳಿ    ರಸೋನಾದಿ ಕಷಾಯ  
ಈರುಳ್ಳಿ    ನಿಶಾಮಲಕ ಚೂರ್ಣ
ಹುರುಳಿ
ಮೆಂತೆ
ಅಮೃತಬಳ್ಳಿ

-ಡಾ.ಜಗದೀಶ್ ಮೈಯ್ಯ
-ಡಾ.ನಿರಂಜನ್ ವೈ

(ಲೇಖಕರು ಕೊಪ್ಪದ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಆಯುರ್ವೇದ ಮಹಾವಿದ್ಯಾಲದ ಉಪನ್ಯಾಸಕರು. ಸಂಪರ್ಕ: ಡಾ. ಮಯ್ಯ 9448525235 ಮತ್ತು
ಡಾ. ನಿರಂಜನ್ 9448982866)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com