

ಯಾರಾದರೂ ವಿನಾಕಾರಣ ನಿಮ್ಮನ್ನು ಗೇಲಿ ಮಾಡುತ್ತಿದ್ದಾರೆ ಅಥವಾ ಹಂಗಿಸುತ್ತಿದ್ದಾರೆ ಎಂದರೆ ನಿಮ್ಮ ಬಗ್ಗೆ ಅವರಿಗೆ 'ಅಸೂಯೆ' ಹುಟ್ಟಿದೆ ಎಂದರ್ಥ.
ಹೌದು. 'ಅಸೂಯೆ' ಮಾನವನ ಹುಟ್ಟುಗುಣ. ಇಂಥ ಗುಣವುಳ್ಳವರು ತಮ್ಮ ಸಹದ್ಯೋಗಿಗಳೋ, ನೆಂಟರೋ, ಸಂಬಂಧಿಗಳೋ ಸ್ವಲ್ಪ ಮುಂದುವರಿಯುತ್ತಾರೆ ಅಥವಾ ಚೆನ್ನಾಗಿದ್ದಾರೆ ಎಂದೆನಿಸಿದರೆ ಸಾಕು ಅಂಥವರನ್ನು ಹಾಳು ಮಾಡಬೇಕೆಂಬ ದುರಾಲೋಚನೆಯನ್ನು ಒಳಗೊಳಗೇ ಹೂಡುತ್ತಾರೆ.
ಅಸೂಯೆ ಇರುವ ವ್ಯಕ್ತಿಗೆ ಇನ್ನೊಬ್ಬರ ಬೆಳವಣಿಗೆ ಎಂದೂ ಸಹ್ಯವೆನಿಸುವುದಿಲ್ಲ. ಹಾಗಾಗಿ ಅಂಥವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ, ಹಂಗಿಸುವುದು, ಪ್ರತಿ ವಿಚಾರಕ್ಕೂ ಕಾಲೆಳೆಯುವುದು, ಪರೋಕ್ಷವಾಗಿಯಾದರೂ ತೊಂದರೆ ಕೊಡದೆ ಬಿಡುವುದಿಲ್ಲ.
ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲೊಂದಿಷ್ಟು ಅಸೂಯೆಪಟುಗಳು ಇದ್ದೇ ಇರುತ್ತಾರೆ. ನಮ್ಮ ಜೊತೆಗೆ ಇದ್ದು ಪರಮಾಪ್ತರಂತೆ ಕಂಡರೂ, ತೀರಾ ಸಣ್ಣ ತಪ್ಪನ್ನೆ ದೊಡ್ಡದು ಮಾಡಿ ಪ್ರತಿಕ್ಷಣ ಅವಮಾನಿಸಲು, ನಮಗಿರುವ ಅವಕಾಶ ಕಸಿದುಕೊಳ್ಳಲು ಹಂಬಲಿಸುತ್ತಿರುತ್ತಾರೆ. ಅವರ ನಿತ್ಯದ ಬದುಕನ್ನು ಇತರರ ತಪ್ಪುಗಳನ್ನು ಕೆದಕುವುದರಲ್ಲೇ ಕಳೆದು ಮಾನಸಿಕ ರೋಗಿ ಆಗಿಬಿಡುತ್ತಾರೆ.
ನೆನಪಿರಲಿ... ಅಸೂಯೆ ಪಡುವವರಿಂದ ಇತರರಿಗೆ ಬೆರಳೆಣಿಕೆಯ ತೊಂದರೆಯಷ್ಟೇ ಆಗುತ್ತದೆ. ಆದರೆ, ಅಸೂಯೆಪಟುಗಳನ್ನೇ ಅಸೂಯೆ ಸುಡುತ್ತದೆ. ಧೈರ್ಯ, ಸಾಮರ್ಥ್ಯ, ಬುದ್ಧಿವಂತಿಕೆ ಇದ್ದವರು ಹೇಗಿದ್ದರೂ ಮೇಲೆದ್ದೇ ಏಳುತ್ತಾರೆ.
ಅಸೂಯೆ ಬಗ್ಗೆ ಒಂದಿಷ್ಟು...