

ಇಂದು ಎಲ್ಲರೂ ಫಾಸ್ಟ್ಫುಡ್ಗೆ ಮಾರು ಹೋಗುವವರೇ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದು ಗೊತ್ತಿದ್ದರೂ ದೇಹಕ್ಕೆ ಬೇಕಾದಂಥ ಆಹಾರ ತಯಾರಿಸಿಕೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಆದರೆ, ಬಹುತೇಕ ಸಣ್ಣಪುಟ್ಟ ಕಾಯಿಲೆಗಳಿಗೆ ಡಾಕ್ಟರ್ ಅನ್ನು ಮೀಟ್ ಮಾಡೋ ಬದಲು ಅಡುಗೆ ಮನೆಯಲ್ಲಿರುವ ಅನೇಕ ಪದಾರ್ಥಗಳಿಂದ ದಿವ್ಯೌಷಧಿಗಳನ್ನು ತಯಾರಿಸಿಕೊಳ್ಳಬಹುದು. ಅವುಗಳಲ್ಲಿ ಕೆಲವು ಇಲ್ಲ್ಲಿವೆ...
ಕಾಳುಮೆಣಸು
ಬಸಳೆ, ಒಂದಲಗ, ಮಂಚಿಕುಡಿ ಮುಂತಾದ ಸೊಪ್ಪಿನ ತಂಬುಳಿ ತಯಾರಿಸುವಾಗ ಎರಡು ಮೆಣಸಿನ ಕಾಳು ಬಳಸಿದರೆ ಅಜೀರ್ಣ, ಹಸಿವಾಗದಿರುವಿಕೆಗೆ ತುಂಬಾ ಒಳ್ಳೆಯದು. ಇದು ಸ್ವಲ್ಪ ಉಷ್ಣವಾಗಿದ್ದು ದೀಪನ ಹಾಗೂ ವಾತನಾಶಕ.
ಹಸಿವೆಯಾಗದಿದ್ದರೆ ಕಾಳು ಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ದಿನಕ್ಕೆರಡು ಸಲ ಒಂದು ವಾರ ಸೇವಿಸಿದರೆ ಪಚನಶಕ್ತಿ ಸರಿಯಾಗುತ್ತದೆ. ಶೀತ ಕೆಮ್ಮಿಗೆ, ನಾಲ್ಕು ಮೆಣಸಿನಕಾಳಿನ ಪುಡಿ ಬಿಸಿನೀರಿನಲ್ಲಿ ಸ್ವಲ್ಪ ಬೆಲ್ಲ ಹಾಕಿ ಕುದಿಸಿ ಕಷಾಯ ಮಾಡಿ ಸೇವಿಸಬಹುದು. ಹೊಟ್ಟೆಶೂಲೆಗೆ ಆಲದ ಬೀಜ ಹಾಗೂ ಲಿಂಬೆ ರಸದೊಂದಿಗೆ ಇದರ ಪುಡಿ ತಿಂದರೆ ಒಳ್ಳೆಯದು.
ಏಲಕ್ಕಿ
ಹೊಟ್ಟೆ ಮುರಿಯುವುದು, ಹೊಟ್ಟೆಶೂಲೆ, ಹೊಟ್ಟೆ ಉಬ್ಬುವುದಕ್ಕೆ ನಾಲ್ಕು ಬೀಜ ಏಲಕ್ಕಿ ಅಗೆದು ತಿಂದರೆ ಹಿತವೆನಿಸುವುದು. ಮೇಲಿಂದ ಮೇಲೆ ಅತಿಯಾಗಿ ಬೇಧಿಯಾಗುತ್ತಿದ್ದರೆ ಏಲಕ್ಕಿ ಅರೆದು ಬೆಣ್ಣೆಯೊಂದಿಗೆ ತಿನ್ನಿ.
ಒಂದೆರಡು ಸಲ ವಾಂತಿಯಾದರೆ ಹೆದರಲೇಬಾರದು. ಅಪಚನದಲ್ಲಿ ವಾಂತಿ ಹಾಗೂ ಡಿಸೆಂಟರಿ ಆಗೋದು ಕಾಮನ್. ಇದಕ್ಕೆ ಏಲಕ್ಕಿ ಕಷಾಯವನ್ನು ಆಗಾಗ ಕೊಡುತ್ತಿದ್ದರೆ ಒಳ್ಳೆಯದು.
ಲವಂಗ
ಕಫನಾಶಕ ಔಷಧವಾಗಿ ಲವಂಗವನ್ನು ಬಳಸಲಾಗುತ್ತದೆ. ಸಾಧಾರಣ ಕೆಮ್ಮಿದ್ದಲ್ಲಿ ತುಸು ಕಲ್ಲು ಸಕ್ಕರೆ ಹರಳಿನೊಂದಿಗೆ ಲವಂಗವನ್ನು ಬಾಯಲ್ಲಿಟ್ಟುಕೊಂಡು ಅದರ ರಸ ನುಂಗಬೇಕು. ಗರ್ಭಿಣಿಯರಿಗೆ ಅತಿಯಾದ ವಾಂತಿಯಾಗುತ್ತಿದ್ದರೆ, ಲವಂಗದ ಚೂರ್ಣವನ್ನು ದಾಳಿಂಬೆ ರಸದೊಂದಿಗೆ ದಿನಕ್ಕೆ ಒಂದೆರಡು ಬಾರಿ ನೀಡಿದರೆ ಕಂಟ್ರೋಲ್ಗೆ ಬರುತ್ತದೆ.
ಮೈ ಬೆಚ್ಚಗಿದ್ಯಾ? ಹೆದರಬೇಡಿ. ಸಣ್ಣ ಜ್ವರವಿರಬಹುದು. ಆಗಲೂ ಲವಂಗದ ಕಷಾಯ ಒಳ್ಳೆಯ ಕೆಲಸ ಮಾಡುತ್ತದೆ. ಹಲ್ಲು ನೋವಿರುವ ಭಾಗಕ್ಕೆ ಲವಂಗದ ಸಣ್ಣ ಚೂರನ್ನು ಒತ್ತಿ ಹಿಡಿಯುವುದರಿಂದ ಕಡಿಮೆಯಾಗುತ್ತದೆ. ಮೂರ್ಛೆ ಕಾಣಿಸಿಕೊಂಡರೆ ಲವಂಗವನ್ನು ಮೂಗಿನ ಬಳಿ ಹಿಡಿದರೆ ಒಳ್ಳೆಯದು.
ಶುಂಠಿ
ಆಮ್ಲವಾತವನ್ನು ಕಡಿಮೆ ಮಾಡುವ ಶುಂಠಿ ಕಫ ಮತ್ತು ವಾತ ಕಡಿಮೆ ಮಾಡಲು ಸಹಕಾರಿ. ಸ್ವಲ್ಪ ಉಷ್ಣ, ಪಿತ್ತವನ್ನು ಹೆಚ್ಚಿಸುತ್ತದೆ. ಕೆಮ್ಮು, ದಮ್ಮು, ವಾಂತಿ, ಹೃದ್ರೋಗ, ಹೊಟ್ಟೆಶೂಲೆ, ಗ್ಯಾಸ್ ಇವುಗಳಿಗೆ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಕಷಾಯ ಮಾಡಿ ಕುಡಿಯಬಹುದು. ಒಣಶುಂಠಿ ಚೂರ್ಣವನ್ನು ಅರ್ಧ ಚಮಚ ಜೇನುತುಪ್ಪ ಇಲ್ಲವೇ ಕಷಾಯ ರೂಪದಲ್ಲಿ ಸೇವಿಸಿದರೆ ಫಲಕಾರಿ. ಸೈಂದವ ಲವಣದೊಂದಿಗೆ ಶುಂಠಿ ಬಿಸಿ ನೀರು ಕುಡಿದರೂ ಸಣ್ಣ ಪುಟ್ಟ ತೊಂದರೆಗಳು ನಿವಾರಣೆಯಾಗುವುದು.ತಲೆನೋವಿಗೆ ಶುಂಠಿ ರಸ ತೇದು ಹಣೆಗೆ ಲೇಪಿಸಿ. ಕೈಕಾಲು ತಣ್ಣಗಾದಾಗ ಶುಂಠಿ ಚೂರ್ಣ ಹಚ್ಚಿ ತಿಕ್ಕಬೇಕು.
ಸಾಸಿವೆ
ಬಹುತೇಕ ಔಷಧಿ ಗುಣವುಳ್ಳ ಇದನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ವಾಂತಿಯಾಗುತ್ತದೆ. ನೋವಿದ್ದ ಜಾಗಕ್ಕೆ ಸಾಸಿವೆ ಅರೆದು ಹಚ್ಚಬೇಕು. ಲೇಪನವನ್ನು ತುಸು ಸಮಯದ ನಂತರ ತೆಗೆದು ಬಿಡಬೇಕು. ಇಲ್ಲವಾದಲ್ಲಿ ಚರ್ಮ ಸುಡುತ್ತದೆ. ಪುಪ್ಪುಸಬಾವು, ಯಕೃತ್, ಶ್ವಾಸ ನಳಿಕೆಯಲ್ಲಿ ಬಾವು ಬಂದಾಗಲೂ ಇದರ ಲೇಪನವನ್ನು 5-10 ನಿಮಿಷದವರೆಗೆ ಇಟ್ಟು ನಂತರ ಎಣ್ಣೆ ಅಥವಾ ಬೆಣ್ಣೆ ಹಚ್ಚಬೇಕು.
ಯಾವುದೇ ತರಹದ ವಿಷ ಹೊಟ್ಟೆಗೆ ಹೋದಲ್ಲಿ, ಒಂದು ಚಮಚ ಸಾಸಿವೆ ಅರೆದು ನೀರಲ್ಲಿ ಕದಡಿ ಕುಡಿಸಬೇಕು. ಇದರಿಂದ ವಿಷ ವಾಂತಿ ರೂಪದಲ್ಲಿ ಹೊರಬೀಳುತ್ತದೆ. ಸಂಧಿವಾತ ಮತ್ತು ಕಫವಿದ್ದಲ್ಲಿ ಸಾಸಿವೆ ಎಣ್ಣೆಯೊಡನೆ ಸಮಾನಾಗಿ ಎಳ್ಳೆಣ್ಣೆ ಸೇರಿಸಿ ತಿಕ್ಕಿ, ಬಿಸಿನೀರಿನ ಶಾಖ ನೀಡಿ.
ಸಾಸಿವೆ ಎಣ್ಣೆ, ಕೊಬ್ಬರಿ ಎಣ್ಣೆಯನ್ನು ಸಮಾನವಾಗಿ ಸೇರಿಸಿ ವಾತದ ನೋವಿರುವ ಭಾಗಕ್ಕೆ ಹಚ್ಚಬೇಕು. ಚಳಿಗಾಲದಲ್ಲಿ ಅಂಗೈ, ಅಂಗಾಲು, ಹಿಮ್ಮಡಿ ಬೆರಳ ಸಂದು ಒಡೆದು ನೋವಾಗುತ್ತಿದ್ದರೆ ಮಂದಾಗ್ನಿಯಲ್ಲಿ ಸಾಸಿವೆ ಹಾಕಿ ನಂತರ ಅರೆದು ನೋವಿರುವ ಭಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ಬಿಸಿನೀರಿನಲ್ಲಿ ತೊಳೆಯಿರಿ.
ಕೆಮ್ಮು, ದಮ್ಮಿಗೆ ಕೊತ್ತಂಬರಿ
ಇದೊಂದು ಮಧುರ ಶೀತವೀರ್ಯ ಔಷಧಿ. ಮೂತ್ರ ಮಾಡಿಸುವ ಗುಣ ಇದರಲ್ಲಿದೆ. ಕೊತ್ತಂಬರಿಯನ್ನು ಅರೆದು ತಣ್ಣೀರಲ್ಲಿ ನೆನೆಸಿ ಅದರ ನೀರು ಕುಡಿದರೆ ಉಷ್ಣತೆ (ಮೈಯಲ್ಲಿ ಬಿಸಿ ಬಿಸಿಯಾಗುವ) ನಿವಾರಣೆಯಾಗುತ್ತದೆ. ಕಣ್ಣು ನೋವಾದಾಗ ಇದರ ನೀರಿನಿಂದ ತೊಳೆಯಬೇಕು.
ಪಿತ್ತವಿಕಾರದಲ್ಲಿ ದಾಲ್ಚಿನ್ನಿ, ಕೊತ್ತಂಬರಿ ಕಲ್ಲು ಸಕ್ಕರೆಯ ಕಷಾಯ ಸೇವಿಸಿ. ಹಸಿವು ಸರಿಯಾಗದಿದ್ದರೆ ಕೆಲವು ದಿನಗಳವರೆಗೆ ಇದರ ಕಷಾಯ ಸೇವಿಸಬಹುದು.
ಕೆಮ್ಮು, ದಮ್ಮುಗಳಿಗೂ ಇದರ ಕಷಾಯ ಒಳ್ಳೆಯದು. ತ್ವಚೆ ತುರಿಕೆಗೆ ಇದನ್ನು ಅರೆದು ಲೇಪಿಸಿ. ಪ್ರತಿದಿನ ಆಹಾರದಲ್ಲಿ ಕೊತ್ತಂಬರಿಯನ್ನು ಉಪಯೋಗಿಸಿ. ಗಂಟಲುಕೆರೆತ, ಉರಿ ಇದ್ದರೆ, ಕೊತ್ತಂಬರಿಯನ್ನು ಚೆನ್ನಾಗಿ ಅರೆದು ಅದರ ರಸ ಸೇವಿಸಿದರೆ ಒಳಿತು. ಜ್ವರಕ್ಕೆ ಕೊತ್ತಂಬರಿ ಕಷಾಯವೂ ಒಳ್ಳೆಯ ಕೆಲಸ ಮಾಡುತ್ತದೆ.
ನಾಟಿ ವೈದ್ಯೆಯಾಗಿರುವ ಲೇಖಕಿಯ ಸಂಪರ್ಕ: (08384) 279625
-ಶೋಭಾ ಸು. ಹೆಗಡೆ