

ನನ್ನ ಗಂಡ ನನ್ನ ಮಾತು ಕೇಳಲ್ಲ. ನನ್ನ ಹೆಂಡತಿ ನನ್ನಿಷ್ಟದಂತೆ ನಡೆಯುತ್ತಿಲ್ಲ. ನನ್ನ ಮಕ್ಕಳು, ನನ್ನನ್ನು ಕಡೆಗಣಿಸಲಾಗುತ್ತಿದೆ. ನನ್ನ ಕಚೇರಿಯಲ್ಲಿ ನಾನು ಯಾರಿಗೂ ಇಷ್ಟವಾಗುವುದಿಲ್ಲ... ಇತ್ಯಾದಿ... ಇತ್ಯಾದಿ. ಇವು ನಿಮ್ಮ ನಿತ್ಯದ ಸಮಸ್ಯೆಗಳಿರಬಹುದು. ನನ್ನನ್ನು ಬಿಟ್ಟು ಉಳಿದವರೆಲ್ಲರೂ ನನ್ನ ಸಮಸ್ಯೆಗಳಿಗೆ ಕಾರಣರು ಎಂದು ನಾವು ಇತರರನ್ನು ದೂಷಿಸುತ್ತಲೇ ನಮ್ಮ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ಈ ಸಮಸ್ಯೆಗೆ ಪರಿಹಾರವಿದೆ ಗೊತ್ತಾ?
ಅದುವೇ ಸೈಕೋಥೆರಪಿ. ಹಾಗಂತ ಈ ಚಿಕಿತ್ಸೆ ಕೇವಲ ಹುಚ್ಚರಿಗೆ ಅಥವಾ ಮಾನಸಿಕ ಅಸ್ವಸ್ಥರಿಗೆ ಮಾತ್ರ ಎಂದು ತೀರ್ಮಾನಿಸಿಬಿಡಬೇಡಿ. ಆದರೆ, ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದಲ್ಲ ಒಂದು ಹಂತದಲ್ಲಿ ತಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಮಾನಸಿಕ ಸ್ಥಿಮಿತವಿರುವ ವ್ಯಕ್ತಿ ತುಸು ವಿಚಲಿತನಾದವನನ್ನು 'ಹುಚ್ಚ' ಅಥವಾ 'ಮೆಂಟಲ್' ಎಂದು ಹಣೆಪಟ್ಟಿ ಕಟ್ಟಿ, ತಾವು ಸಭ್ಯರು ಎಂದು ಭಾವಿಸಬಹುದು (!). ಆದರೆ, ನಮಗೂ ಅಂಥದ್ದೇ ದುರ್ಗತಿ ಒಂದಲ್ಲ ಒಂದು ದಿನ ಬಂದುಬಿಡಬಹುದು ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು.
ಒಟ್ಟಿನಲ್ಲಿ ಈ ಜಗತ್ತೇ 'ಹುಚ್ಚರ ಸಂತೆ'. ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡೋಣ ಎಂದಾಗ ಮಾತ್ರ ನಮ್ಮೊಂದಿಗೆ ಸಾಮಾಜಿಕ ಸ್ವಾಸ್ಥ್ಯವೂ ಸುಧಾರಿಸುವಲ್ಲಿ ಅನುಮಾನವೇ ಇಲ್ಲ.
ಏನಿದು ಸೈಕೋಥೆರಪಿ?
ಕನ್ನಡದಲ್ಲಿ ಹೇಳುವುದಾದರೆ, ಮಾನಸಿಕ ಸಂಘರ್ಷ ನಿವಾರಣೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಅನುಭವಿಸುತ್ತಿರುವ ನೋವು, ಹತಾಶೆ, ತೊಳಲಾಟ, ಚಿಂತೆ, ಮುಂದೆ ತೊಂದರೆಗಳಾಗಲಿವೆ ಎಂದು ಗೊತ್ತಿದ್ದೂ ಅವುಗಳಿಗೆ ಆಹ್ವಾನಿಸುವುದು, ಇಲ್ಲ ಅಥವಾ ಆಗುವುದಿಲ್ಲ ಎಂದು ಹೇಳಲು ಸಂಕೋಚಪಟ್ಟು ನಂತರ ಪಶ್ಚಾತ್ತಾಪ ಪಡುವುದು... ಇತ್ಯಾದಿಗಳಿಗೆ ಸಾಧಾರಣವಾಗಿ ನಾವು ಬೇರೆಯವರನ್ನು ದೂಷಿಸುತ್ತೇವೆಯೇ ಹೊರತು ಇಂಥ ತೊಂದರೆಗಳಿಂದ ಹೊರಬರಲೊಂದು ದಾರಿಯಿದೆ ಎಂದು ನಮಗೇ ಗೊತ್ತಿಲ್ಲ. ಈ ಸಮಸ್ಯೆಗಳನ್ನು ರೂಢಿಸಿಕೊಂಡ ರೀತಿ ಗುರುತಿಸಿ ಅದರಿಂದ ಕಳಚಿಕೊಳ್ಳುವಂತೆ ಮಾಡುವ ಚಿಕಿತ್ಸೆಯೇ ಸೈಕೋಥೆರಪಿ.
ಚಿಕಿತ್ಸೆ ಅಂದ್ರೆ ಔಷಧಿ ನೀಡುವುದೇ?
ಅಲ್ಲ. ಸೈಕೋಥೆರಪಿ ಎಂದರೆ ಔಷಧಿರಹಿತ ಚಿಕಿತ್ಸಾ ವಿಧಾನ. ಆಧುನಿಕ ವರ್ತನಾ ವಿಜ್ಞಾನ (ಸೈಕಾಲಜಿಯ) ಪ್ರಯೋಗದ ಮೂಲಕ ನಾವು ತೊಳಲಾಡುತ್ತಿರುವ ಸಂಕಟಗಳ ಮೂಲವನ್ನು ಪತ್ತೆ ಹಚ್ಚಿ ಅದನ್ನು ನಿರ್ಮೂಲನ ಮಾಡುವ ವಿಧಾನವೇ ಸೈಕೋಥೆರಪಿ. ಔಷಧಿ ನೀಡುವುದಿಲ್ಲ ಎಂದರೆ ಇದು ಕೌನ್ಸಿಲಿಂಗ್ ಇರಬಹುದು ಎಂದೆನಿಸುತ್ತದೆ. ಆದರೆ, ಕೌನ್ಸಿಲಿಂಗ್ ಅಥವಾ ಆಪ್ತ ಸಲಹೆಯಿಂದ ತಾತ್ಕಾಲಿಕ ಪರಿಹಾರ ದೊರಕಬಹುದೇ ಹೊರತು ಸಂಪೂರ್ಣ ಗುಣ ಸಿಗಲಾರದು.
ಔಷಧಿಗಳಿಂದ ಮನೋವೇದನೆ ಗುಣಮುಖವಾಗದೆ ಕೌನ್ಸಿಲಿಂಗ್ನಿಂದಲೂ ಪರಿಹಾರ ಸಾಧ್ಯವಿಲ್ಲದಿದ್ದಾಗ ಹುಟ್ಟಿಕೊಂಡ ವಿಧಾನವೇ ಸೈಕೋಥೆರಪಿ. ಇದರಲ್ಲಿ ಕೆಲವು ವಿಧದ ಚಿಕಿತ್ಸಾ ವಿಧಾನ ಅಂದರೆ ಥೆರಪಿಗಳಿದ್ದು, ಆಯಾ ವ್ಯಕ್ತಿ ಮತ್ತು ಅವರು ಅನುಭವಿಸುತ್ತಿರುವ ತೊಂದರೆಗಳನ್ನು ಗಮನಿಸಿ ಯಾವ ಚಿಕಿತ್ಸಾ ವಿಧಾನ ಸೂಕ್ತ ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ. ಭಾರತದಲ್ಲಿ ಸೈಕೋಥೆರಪಿ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು ಸೂಕ್ತ ತರಬೇತಿ ಸಂಸ್ಥೆಗಳು ಇಲ್ಲದಿರುವುದರಿಂದ ಸದ್ಯಕ್ಕೆ ವಿದೇಶಿ ಸಂಸ್ಥೆಗಳ ಮೂಲಕವೇ ತರಬೇತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಆದುದರಿಂದ ಭಾರತದಲ್ಲಿರುವ ಸೈಕೋಥೆರಪಿಸ್ಟ್ ಸಂಖ್ಯೆ ತುಂಬಾ ಕಡಿಮೆ ಇದೆ.
(ಸೈಕೋಥೆರಪಿಸ್ಟ್ ಆದ ಲೇಖಕರನ್ನು 080- 26860159, 2686 0160ರಲ್ಲಿ ಸಂಪರ್ಕಿಸಬಹುದು.)
- ಡಾ. ಮಸ್ಕರೇನಸ್ ಪಿ.ಸಿ.