

ಸಕ್ಕರೆ ಕಾಯಿಲೆ ಇಂದು ಮಕ್ಕಳಿಂದ ಅಬಾಲ ವೃದ್ಧರಾದಿ ಯಾರನ್ನೂ ಬಿಡದೇ ಕಾಡುತ್ತಿದೆ. ಈ ಕಾಯಿಲೆಯಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚು. ಸಕ್ಕರೆ ಕಾಯಿಲೆಯನ್ನು ಪತ್ತೆ ಹಚ್ಚುವಾಗ ಹಾಗೂ ಚಿಕಿತ್ಸೆ ನೀಡುವಾಗ ರಕ್ತದ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕಾಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ 140 ಮಿ.ಗ್ರಾಂ.ಗಿಂತ ಹೆಚ್ಚಿದ್ದಲ್ಲಿ ಸಕ್ಕರೆ ಕಾಯಿಲೆ ಇದೆ ಎನ್ನಬಹುದು. ಕೆಲವೊಮ್ಮೆ ಸಕ್ಕರೆ ಮಟ್ಟ ಸಕ್ಕರೆ ಕಾಯಿಲೆಯಿಂದಲ್ಲದೆ ಬೇರೆ ಕಾರಣಗಳಿಂದಲೂ ಹೆಚ್ಚಿರುವ ಸಾಧ್ಯತೆ ಇರುತ್ತದೆ. ಆಗ ರಕ್ತದಲ್ಲಿ ಸಕ್ಕರೆ ಮಟ್ಟ ಪರೀಕ್ಷಿಸಿದ್ದಾಗ್ಯೂ, ಸಕ್ಕರೆ ಕಾಯಿಲೆ ಇದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆಗ ಗ್ಲುಕೋಸ್ ಟಾಲರನ್ಸ್ ಟೆಸ್ಟ್ ಮಾಡಿಸಲು ಸೂಚಿಸಲಾಗುತ್ತದೆ.
ಮೊದಲು ಖಾಲಿ ಹೊಟ್ಟೆಯಲ್ಲಿ ರಕ್ತದಲ್ಲಿನ ಗ್ಲುಕೋಸ್ ಪ್ರಮಾಣ ಕಂಡುಹಿಡಿಯಲಾಗುವುದು. ನಂತರ ವ್ಯಕ್ತಿಗೆ 50-75 ಗ್ರಾಂ ಸಕ್ಕರೆ ಅಥವಾ ಗ್ಲುಕೋಸ್ ಕೊಟ್ಟು 30 ನಿಮಿಷಗಳ ಅಂತರದಲ್ಲಿ 3-4 ಬಾರಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಂಡು ಹಿಡಿಯಲಾಗುತ್ತದೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟದ ರೇಖಾ ನಕ್ಷೆಯನ್ನು ತೆಗೆದು ಅದನ್ನು ಆರೋಗ್ಯವಂತ ವ್ಯಕ್ತಿಯ ರಕ್ತದ ಸಕ್ಕರೆ ಮಟ್ಟಕ್ಕೆ ಹೋಲಿಸಲಾಗುತ್ತದೆ.
ಈ ವಿಧಾನದಿಂದ ವ್ಯಕ್ತಿಗೆ ಸಕ್ಕರೆ ಕಾಯಿಲೆ ಇದೆಯೇ ಎಂಬುದು ಖಚಿತವಾದರೆ ಪುನಃ ಈ ಪರೀಕ್ಷೆ ಮಾಡುವ ಅಗತ್ಯವಿಲ್ಲ.