

ಮಹಿಳೆಯರ ಬೆನ್ನು ಹುರಿ ಗಟ್ಟಿ ಇಲ್ಲ!
ಇಂಥದೊಂದು ಆಘಾತಕಾರಿ ಅಂಶ ಅಂತಾರಾಷ್ಟ್ರೀಯ ಅಸ್ತಿರಂಧ್ರತೆ ಫೌಂಡೇಷನ್ (ಐಒಎಫ್)ನಿಂದ ಹೊರ ಬಿದ್ದಿದೆ. 30 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಈ ತೊಂದರೆ ಕಾಣಿಸಿಕೊಂಡಿದ್ದು ಅಗತ್ಯ ಪೌಷ್ಟಿಕಾಂಶ ಕೊರತೆ ಇದಕ್ಕೆ ಕಾರಣ. ಮೂಳೆಯಲ್ಲಿ ಕ್ಯಾಲ್ಷಿಯಂ ಕಡಿಮೆಯಾಗುವುದರಿಂದ ಮುಪ್ಪಿನಲ್ಲಿ ಕಾಣಿಸಿಕೊಳ್ಳುವ ಕಾಯಿಲೆ ಹದಿಹರೆಯದಲ್ಲೇ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಮನೆ, ಮಕ್ಕಳು ಜವಾಬ್ದಾರಿ ಹೊರುವ ಹೆಣ್ಣುಮಕ್ಕಳು ಇತರರಿಗೆ 'ಭಾರ'ವಾಗುತ್ತಿದ್ದಾರೆ.
ಅಸ್ತಿರಂಧ್ರತೆ ಅಂದ್ರೆ ಏನು?
ಅಸ್ತಿರಂಧ್ರತೆ ಎನ್ನುವುದು ವಯಸ್ಸಾದಂತೆ ಹೆಚ್ಚುತ್ತಾ ಹೋಗುವ ಮೂಳೆ ಕಾಯಿಲೆ. ಈ ಸ್ಥಿತಿಯಲ್ಲಿ ಮೂಳೆಗಳ ನಿರ್ಮಾಣ ಘಟಕಾಂಶವಾದ ಕ್ಯಾಲ್ಷಿಯಂ ನಷ್ಟವಾಗುವಿಕೆಯಿಂದ ಮೂಳೆ ರಾಶಿ ಹಾಗೂ ಮೂಳೆಯ ಸಾಂಧ್ರತೆ ಕುಗ್ಗುತ್ತ ಹೋಗುತ್ತದೆ. ಸಾಮಾನ್ಯವಾಗಿ 45ರಿಂದ 50 ವರ್ಷ ದಾಟಿದ ನಂತರ ರಜೋನಿವೃತ್ತಿ ನಂತರ ಈಸ್ಟ್ರೋಜನ್ ಮಟ್ಟಗಳು ಕಡಿಮೆಯಾಗುತ್ತ ಹೋಗುವುದರಿಂದ ಅಂಥ ಮಹಿಳೆಯರಲ್ಲಿ ಅಸ್ತಿರಂಧ್ರತೆ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರಲ್ಲಿ ಮೂಳೆ ಖನಿಜ ಸಾಂಧ್ರತೆ ಇದ್ದಕ್ಕಿದ್ದಂತೆ ಕುಸಿಯುತ್ತದೆ. ಆದರೆ, ಈಗ 30ರ ಹರೆಯದಲ್ಲೇ ಈ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಲವು ಬಗೆಯ ಕ್ಯಾನ್ಸರ್ ಮತ್ತು ದೀರ್ಘಕಾಲ ಕಾಡುವ ಕಾಯಿಲೆಗಳಿಗಿಂತ ಇದು ಹೆಚ್ಚು ವಿಕಲಾಂಗತೆ ಉಂಟುಮಾಡುತ್ತದೆ.
ಲಕ್ಷಣ ಏನು?
ಮೂಳೆಯ ರಾಶಿಯಲ್ಲಿ ಕ್ಯಾಲ್ಷಿಯಂ ಅಂಶ ಶೇ.10ರಷ್ಟು ಇಳಿಕೆ ಉಂಟಾದರೂ ಬೆನ್ನುಹುರಿ ಫ್ರಾಕ್ಚರ್ನ ಅಪಾಯ ಹೆಚ್ಚುತ್ತದೆ. ಬೆನ್ನಿನಲ್ಲಿರುವ ಮೂಳೆ 3 ಸೆಂ.ಮೀ.ಗಿಂತ ಎತ್ತರದಲ್ಲಿ ಕುಗ್ಗುತ್ತದೆ. ಇದ್ದಕ್ಕಿದ್ದಂತೆ ತೀವ್ರ ಅಥವಾ ದೀರ್ಘಕಾಲ ಕಾಡುವ ಬೆನ್ನುನೋವು ಇಲ್ಲವೇ ಬೆನ್ನು ಹುರಿಯ ವಿರೂಪ ಹೆಚ್ಚಾಗುತ್ತದೆ. ಗೂನು ಬೆನ್ನಾಗುವುದೂ ಬೆನ್ನು ಹುರಿ ರೋಗದ ಪ್ರಮುಖ ಲಕ್ಷಣ.
ಚಿಕಿತ್ಸೆ ಹೇಗೆ?
ಬಲೂನ್ ಕೈಫೋಪ್ಲಾಸ್ಟಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದು ಬೆನ್ನು ನೋವನ್ನು ಗಣನೀಯವಾಗಿ ಕಡಿಮೆ ಮಾಡಬಲ್ಲದು ಮತ್ತು ಬೆನ್ನುಹುರಿ ಫ್ರಾಕ್ಚರ್ನ ಮುರಿದ ಮೂಳೆಯನ್ನು ಸರಿಪಡಿಸಬಲ್ಲದು. ಈ ಕಾರ್ಯವಿಧಾನದಲ್ಲಿ ಫ್ರಾಕ್ಚರ್ ಆದ ಮೂಳೆಗಳನ್ನು ಮೇಲೆತ್ತಲು ಮತ್ತು ಸರಿಪಡಿಸಿದ ನಂತರ ಸ್ವಸ್ಥಾನದಲ್ಲಿ ಕೂರಿಸಲು ಅಸ್ತಿರಂಧ್ರತೆ ಬಲೂನ್ಗಳನ್ನು ಬಳಸಲಾಗುತ್ತದೆ. ಇದಕ್ಕೆ ಹೆಚ್ಚೆನೂ ಹೊರೆಯಾಗುವುದಿಲ್ಲ ಎನ್ನುತ್ತಾರೆ ವೈದ್ಯರು.
ಪರಿಹಾರ ಏನು?
ಅಸ್ತಿರಂಧ್ರತೆಯನ್ನು ಸರ್ವವ್ಯಾಪಿ ಕಾಯಿಲೆ ಎಂದೇ ಕರೆಯಲಾಗುತ್ತಿದೆ. ಏಕೆಂದರೆ, ಈ ಕಾಯಿಲೆ ಬಹಳಷ್ಟು ಸಂದರ್ಭದಲ್ಲಿ ಫ್ರಾಕ್ಚರ್ ಘಟಿಸುವ ಮುನ್ನ ಪತ್ತೆಗೆ ಸಿಗದು. ಆದರೆ, ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಷಿಯಂ ಸೇವನೆ, ಮಿತವಾದ ಮದ್ಯಪಾನ, ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಮತ್ತು ಧೂಮಪಾನದಿಂದ ದೂರವಿದ್ದರೆ ಅಸ್ತಿರಂಧ್ರತೆ ಏರ್ಪಡುವುದನ್ನು ತಡೆಗಟ್ಟಲು ಸಾಧ್ಯ. ಕ್ಯಾಲ್ಷಿಯಂ ಭರಿತ ಆರೋಗ್ಯಕರ ಆಹಾರ ಪಾನೀಯಗಳ ಪೂರಕ ಆಹಾರ ಸೇವನೆ, ಕ್ಯಾಲ್ಷಿಯಂ ಬೇಡಿಕೆಯನ್ನು ಸರಿದೂಗಿಸಲು ಸಹಾಯಕವಾಗುತ್ತದೆ.
ರಜೋನಿವೃತ್ತಿ ನಂತರ ಮಹಿಳೆಯರು ನಿತ್ಯ 1300 ಮಿ.ಗ್ರಾಂ.ನಷ್ಟು ಕ್ಯಾಲ್ಷಿಯಂ ಸೇವಿಸಬೇಕು ಎನ್ನುತ್ತದೆ ವೈದ್ಯಲೋಕ. ಏಕೆಂದರೆ, ರಜೋನಿವೃತ್ತಿಯಲ್ಲಿ ಕ್ಯಾಲ್ಷಿಯಂ ಹೀರಿಕೊಳ್ಳುವಿಕೆ ಕುಂಠಿತವಾಗುತ್ತದೆ. ಹೀಗಾಗಿ ಕ್ಯಾಲ್ಷಿಯಂ ಅಧಿಕ ಪ್ರಮಾಣದಲ್ಲಿರುವ ಡೈರಿ ಉತ್ಪನ್ನಗಳನ್ನು ಸೇವಿಸಬೇಕು ಎಂದು ಶಿಫಾರಸು ಮಾಡುತ್ತದೆ. ಆದರೆ ಈಗ 'ಅವಧಿಗೆ ಮುಂಚೆ' ಕಾಣಿಸಿಕೊಳ್ಳುತ್ತಿರುವುದರಿಂದ 30ರ ಹರೆಯದಲ್ಲೇ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಮುಟ್ಟು ನಿಲ್ಲುವ ಮೊದಲೇ ಕ್ರಮ ಕೈಗೊಳ್ಳಬೇಕಾದ ಸ್ಥಿತಿ ಎದುರಾಗಿದೆ. <
22 ಸೆಕೆಂಡ್ಗೆ ಒಬ್ಬರಿಗೆ ಈ ಕಾಯಿಲೆ!
ಇನ್ನೂ ಆಶ್ಚರ್ಯ ಹಾಗೂ ಆಘಾತಕಾರಿ ಸಂಗತಿ ಎಂದರೆ ವಿಶ್ವಾದ್ಯಂತ ಪ್ರತಿ 22 ಸೆಕೆಂಡ್ಗೆ ಒಬ್ಬ ಮಹಿಳೆಗೆ ಬೆನ್ನು ಮೂಳೆ ರೋಗ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಇದೊಂದು ಸಕ್ಕರೆ, ರಕ್ತದೊತ್ತಡ ಕಾಯಿಲೆಯಂತೆ ಸಾಮಾನ್ಯವಾಗಿ ಬಿಟ್ಟಿದೆ.
ಜೀವಕ್ಕೇ ಅಪಾಯ
ಮುಪ್ಪಿನಲ್ಲಿ ಕಾಣಿಸಿಕೊಳ್ಳುವ ಬೆನ್ನು ಹುರಿ ಕಾಯಿಲೆ ಈಗ ಹದಿಹರೆಯದಲ್ಲೇ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಆಹಾರದಲ್ಲಾಗುತ್ತಿರುವ ಏರುಪೇರು, ಕೆಲಸದೊತ್ತಡ ಹಾಗೂ ಕ್ಯಾಲ್ಷಿಯಂ ಕೊರತೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈ ಮೀರಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಯುವತಿಯರಲ್ಲೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿರುವುದು ಆಘಾತಕಾರಿ.
- ಡಾ.ಮಹೇಶ ಬಿಜ್ಜವಾರ್, ಜೈನ್ ಇನ್ಸ್ಟಿಟ್ಯೂಟ್ ಸರ್ಜನ್
ಆಪರೇಶನ್ ಅನಿವಾರ್ಯ
ಮುಟ್ಟು ನಿಲ್ಲುವ ಹೊತ್ತಿಗೆ ಮಹಿಳೆಯರಲ್ಲಿ ಬೆನ್ನು ಹುರಿ ಕಾಯಿಲೆ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಕ್ಯಾಲ್ಷಿಯಂ ಕೊರತೆಯಿಂದ ಈಗ ಯುವತಿಯರನ್ನೂ ಇದು ಕಾಡುತ್ತಿದೆ. ಕ್ಯಾಲ್ಷಿಯಂ ಭರಿತ ಆಹಾರ ಸೇವನೆ ಮೂಳೆ ಸಂರಕ್ಷಣೆಗೆ ಇರುವ ಏಕೈಕ ಮಾರ್ಗ. ಇಲ್ಲದಿದ್ದರೆ ಶಸ್ತ್ರಚಿಕಿತ್ಸೆ ನಡೆಸುವ ಅನಿವಾರ್ಯತೆ ಎದುರಾಗುತ್ತದೆ.
- ಡಾ. ಉಪೇಂದ್ರ ಬಿಂದ್ರೆ, ಜೈನ್ ಇನ್ಸ್ಟಿಟ್ಯೂಟ್ ಸರ್ಜನ್
- ಚನ್ನು ಮೂಲಿಮನಿ