

ಭಾರತದಲ್ಲಿ ವೈದ್ಯರೂ ಸೇರಿದಂತೆ ಬಹುಜನರಿಗೆ ಸೈಕೊಥೆರಪಿ ಬಗ್ಗೆ ಗೊತ್ತಿಲ್ಲ. ಏನಿದು ಚಿಕಿತ್ಸೆ? ಯಾವಾಗ ಆರಂಭವಾಯಿತು? ಇದರ ಪ್ರಯೋಗ ಹೇಗೆ ನಡೆಯುತ್ತದೆ?
ಅನಾದಿಯಿಂದಲೂ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹಿರಿಯರೊಡನೆಯೋ, ತಿಳಿದವರೊಡನೆಯೋ ಅಥವಾ ಧರ್ಮಗುರುಗಳೊಡನೆಯೋ ಹೇಳಿಕೊಂಡು ಅವರು ನೀಡಿದ ಸಲಹೆಗಳನ್ನು ಪಾಲಿಸಿ, ಪರಿಹಾರ ಕಂಡುಕೊಳ್ಳುತ್ತಿದ್ದರು. ನಂತರ ಕೌನ್ಸೆಲಿಂಗ್ ಅಥವಾ ಆಪ್ತ ಸಮಾಲೋಚನೆಯ ಹೆಸರಿನಲ್ಲಿ ಇಂಥ ಪರಿಪಾಠ ಮುಂದುವರಿಯಿತು. ರಿಲಿಜಿಯಸ್ ಕೌನ್ಸೆಲಿಂಗ್ ಇವುಗಳಲ್ಲಿ ಪ್ರಮುಖವಾಗಿತ್ತು. ವಿಜ್ಞಾನ ಬೆಳೆದಂತೆ 'ಸೈಕಾಲಜಿಕಲ್ ಕೌನ್ಸೆಲಿಂಗ್' ಆರಂಭವಾಗಿಯಿತು. ಅಲ್ಲಿಂದ ತುಂಬಾ ವೈಜ್ಞಾನಿಕವಾಗಿ ಇದು ಬೆಳೆದು ಬಂದಿದೆ. ಇತ್ತೀಚೆಗೆ ವಿವಿಧ ವಿಭಾಗಗಳ ತಜ್ಞರು ಕೆಲವು ಹೊಸ ಸೈಕೊಥೆರಪಿಗಳನ್ನು ಹೆಸರಿಸಿ ಪ್ರಯೋಗಿಸುತ್ತಿದ್ದಾರೆ. ಹೆಸರುಗಳೇನೇ ಇದ್ದರೂ ಮನುಷ್ಯನ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದೇ ಎಲ್ಲ ವಿಧದ ಥೆರಪಿಗಳ ಉದ್ದೇಶ. ಒಟ್ಟಿನಲ್ಲಿ ಸೈಕೊಥೆರಪಿ ಅಥವಾ ಮಾನಸಿಕ ಸಂಘರ್ಷ ನಿವಾರಣಾ ಚಿಕಿತ್ಸೆಯು ಮನುಷ್ಯನ ಎಲ್ಲ ಥರದ ಮಾನಸಿಕ ಗೊಂದಲಗಳನ್ನು ನಿವಾರಿಸಲು ರಾಮಬಾಣ.
ಸೈಕೋಥೆರಪಿಸ್ಟ್ ಹೇಗಿರಬೇಕು?
ಆಧುನಿಕ ಮಾನಸಿಕ ಸಂಘರ್ಷ ನಿವಾರಣೆ ತಜ್ಞರು (ಸೈಕೊಥೆರಪಿಸ್ಟರು) ಆಯಾ ವ್ಯಕ್ತಿಯ ಆಯಾ ಸಮಸ್ಯೆಗೆ ಯಾವ ವಿಧಾನ ಸೂಕ್ತ ಎಂಬುದನ್ನು ನಿರ್ಧರಿಸಿ ಪ್ರಯೋಗಿಸುತ್ತಾರೆ. ಆದುದರಿಂದ ಎಲ್ಲ ವ್ಯಕ್ತಿಗಳಿಗೂ, ಎಲ್ಲ ಮಾನಸಿಕ ಸಂಘರ್ಷಗಳಿಗೂ ಎಲ್ಲ ವಿಧಾನಗಳು ಸೂಕ್ತವಾಗಲಾರವು. ಸೈಕೊಥೆರಪಿಸ್ಟ್ ಮುಖ್ಯವಾಗಿ ಕೆಲವು ವಿಧದ ಥೆರಪಿಗಳನ್ನು ಅಧ್ಯಯನಿಸಿರಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ವ್ಯಕ್ತಿಯ ಸಮಸ್ಯೆಯ ಮೂಲವನ್ನು ಅರಿತುಕೊಳ್ಳಲು ಟ್ರಾನ್ಸಾಕ್ಷನಲ್ ಅನಾಲಿಸಿಸ್ ವರ್ತನಾ ವಿಜ್ಞಾನವು ಅತ್ಯಂತ ಸೂಕ್ತ. ಇದರಲ್ಲಿ ಬರುವ ರಿಡಿಸಿಶನ್ ಥೆರಪಿ ತುಂಬಾ ಪ್ರಯೋಜನಕಾರಿ. ಇದಲ್ಲದೆ ಗೆಸ್ಟಾಲ್ಡ್ ಥೆರಪಿ, ರ್ಯಾಷನಲ್ ಇಮೋಟಿವ್ ಥೆರಪಿ (ಇತ್ತೀಚೆಗೆ ಇದನ್ನು ರ್ಯಾಷನಲ್ ಇನೋಟಿವ್ ಬಿಹೇವಿಯರಲ್ ಥೆಪಿ ಎಂದು ಹೆಸರು ಬದಲಿಸಲಾಗಿದೆ) ಲೊಗೊ ಥೆರಪಿ, ಇತ್ತೀಚಿನ ವರ್ಷಗಳಲ್ಲಿ ಬ್ಯಾಂಡ್ಲರ್ ಮತ್ತು ಗ್ರೈಂಡರ್ ಅಭಿವೃದ್ಧಿಪಡಿಸಿದ ನ್ಯೂರೊ ಲಿಂಗ್ವೆಸ್ಟಿಕ್ ಪ್ರೊಗ್ರಾಮಿಂಗ್ ಇತ್ಯಾದಿ ವಿಧಾನಗಳನ್ನು ಅಧ್ಯಯನಿಸಿರಬೇಕಾಗುತ್ತದೆ. ಇವೆಲ್ಲವುಗಳನ್ನು ಪ್ರಯೋಗಿಸಲು ಪರ್ಸನ್ ಸೆಂಟರ್ಡ್ ಥೆರಪಿ ವಿಧಾನವನ್ನಾಗಿಯೂ ಕಲಿತಿರಲೇಬೇಕು.
ನಾನಾ ಬಗೆಯ ಥೆರಪಿ
ವಿಕ್ಟರ್ ಫ್ರಾಂಕ್ಸ್ 'ಲೊಗೊ ಥೆರಪಿ' ವಿಧಾನವನ್ನು ಪರಿಚಯಿಸಿದ.
ಆಲ್ಪರ್ಟ್ ಎಲಿಸ್ 'ರ್ಯಾಷನಲ್ ಇಮೋಟಿವ್' ಥೆರಪಿ ತೋರಿಸಿಕೊಟ್ಟರು.
= ಹಳೆಯ ಕೌನ್ಸೆಲಿಂಗ್ ಪದ್ಧತಿಯಲ್ಲಿನ ಡೈರೆಕ್ಟಿವ್ ವಿಧಾನವನ್ನು ಬದಲಿಸಿದ ಆಧುನಿಕ ತಜ್ಞರು ನಾನ್ ಡಿರೆಕ್ಟವ್ ವಿಧಾನವನ್ನು ಬಳಕೆಗೆ ತಂದರು. (ಅಂದರೆ ಕೌನ್ಸೆಲಿಂಗ್ ವಿಧಾನದಲ್ಲಿ ಸಮಸ್ಯೆ ಹೊತ್ತು ತಂದ ವ್ಯಕ್ತಿಯನ್ನು ಅಭ್ಯಸಿಸಿ ಸೂಕ್ತ ಸಲಹೆ ನೀಡುತ್ತಿದ್ದರು. ಸೈಕೊಥೆರಪಿಯಲ್ಲಿ ಇದನ್ನು ಬದಲಾಯಿಸಿ, ಸಮಸ್ಯೆಯನ್ನು ಹೊತ್ತಿರುವ ವ್ಯಕ್ತಿಯೇ ಅದಕ್ಕೆ ಕಾರಣನಾದುದರಿಂದ ಅದನ್ನು ಆ ವ್ಯಕ್ತಿಯ ಮೂಲಕವೇ ನಿವಾರಿಸುವ ನಾನ್- ಡೈರೆಕ್ಟಿವ್ ವಿಧಾನವನ್ನು ರೂಪಿಸಲಾಯಿತು)
ಕಾಲಾ ರೋಜರ್ಸ್ 1950ರ ಸುಮಾರಿನಲ್ಲಿ 'ಕ್ಲೈಂಟ್ ಸೆಂಟರ್ಡ್ ಥೆರಪಿ' ಪರಿಚಯಿಸಿದ. ಇತ್ತೀಚೆಗೆ ಅದನ್ನು ಫರ್ಸನ್ ಸೆಂಡರ್ಡ್ ಥೆರಪಿ ಎಂದು ಬದಲಿಸಲಾಗಿದೆ. (ಕೌನ್ಸೆಲಿಂಗ್ ವಿಧಾನದಲ್ಲಿ ಕೌನ್ಸಲರ್ ಪ್ರಮುಖವಾದರೆ ಪರ್ಸನ್ ಸೆಂಟರ್ಡ್ ಥೆರಪಿ ವಿಧಾನದಲ್ಲಿ ಮಾನಸಿಕ ತೊಳಲಾಟದಿಂದ ಬಳಲುತ್ತಿರುವ ವ್ಯಕ್ತಿ ಪ್ರಮುಖ).
ಸೈಕೋ ಇತಿಹಾಸ
ಮನೋರೋಗ ಎಂದರೆ ದೆವ್ವಗಳ ಕಾಟ ಎಂದು ನಂಬಿದ್ದ ಕಾಲದಲ್ಲೇ ಸಿಗ್ಮಂಡ್ ಫ್ರಾಯ್ಡ್, 'ಸೈಕೊ ಅನಾಲಿಸಿಸ್' ಪರಿಚಯಿಸಿ ಸೈಕಾಲಜಿಯ ಪಿತಾಮಹ ಎನಿಸಿಕೊಂಡರು. ಆದರೆ, ಸಿಗ್ಮಂಡ್ ಫ್ರಾಯ್ಡ್ ಅನ್ನೂ ಖಂಡಾತುಂಡವಾಗಿ ವಿರೋಧಿಸಿದ ಫ್ರಿಟ್ಜ್ ಪರ್ಲ್ಸ್ ಎಂಬ ಮನೋವಿಜ್ಞಾನಿ ಗೆಸ್ಟಾಲ್ಡ್ ಸೈಕಾಲಜಿಯನ್ನು ಆಧರಿಸಿ ಗೆಸ್ಟಾಲ್ಡ್ ಥೆರಪಿಯನ್ನು ಪರಿಚಯಿಸಿದ. ಸಿಗ್ಮಂಡ್ ಫ್ರಾಯ್ಡ್ ಬಗ್ಗೆ ಗೌರವವಿದ್ದರೂ ಆತನ ಸಿದ್ಧಾಂತವಾದ ಸೈಕೊ ಅನಾಲಿಸಿಸ್ನಿಂದ ಪ್ರಯೋಜನ ಸಿಗದಿದ್ದಾಗ ಬಂಡೆದ್ದ ಎರಿಕ್ ಬರ್ನ್ ತನ್ನದೇ ಹೊಸ ಸಿದ್ಧಾಂತ ಟ್ರಾನ್ಸಾಕ್ಷನಲ್ ಅನಾಲಿಸಿಸ್ ಸಾಮಾಜಿಕ ಸೈಕಾಲಜಿಯನ್ನು ಪರಿಚಯಿಸಿದನಲ್ಲದೆ 'ಸೈಕೋ ಥೆರಪಿ'ಗೆ ಹೊಸ ಆಯಾಮ ನೀಡಿದ. ಇದೇ ಎರಿಕ್ಬರ್ಗ್ನ ಶಿಷ್ಯೆ ಜ್ಯಾಕಿ ಶಿಫ್ 'ಟ್ರಾನ್ಸಾಕ್ಷನಲ್ ಅನಾಲಿಸಿಸ್'ನ ಆಪರೇಟಿಂಗ್ ತತ್ವವನ್ನಾಧರಿಸಿ, ಔಷಧಿ ಇಲ್ಲದೆಯೂ ಮನೋರೋಗ ಗುಣಪಡಿಸಲು ಸಾಧ್ಯ ಎಂಬುದನ್ನು ತೋರಿಸಿದಳು.
= ಡಾ. ಮಸ್ಕರೇನಸ್ ಪಿ.ಸಿ.