

ನೀವೂ ನೋಡಿರಬಹುದು... 'ಶ್ರೀಕ್ಷೇತ್ರ ಆದಿಚುಂಚನಗಿರಿ' ಎಂಬ ಭಕ್ತಿಪ್ರಧಾನ ಚಿತ್ರವನ್ನು. ಸಾಯಿಪ್ರಕಾಶ್ ನಿರ್ದೇಶಿಸಿದ ಈ ಚಿತ್ರ ಆದಿಚುಂಚನಗಿರಿಯ ಭೈರವೇಶ್ವರನ ಪುರಾಣ ಮತ್ತು ಅಲ್ಲಿ ನಡೆದ ಕಥೆಗಳನ್ನೊಳಗೊಂಡಿದೆ. ಈ ಚಿತ್ರದ ಕೆಲವೊಂದು ದೃಶ್ಯಗಳು ದೊಡ್ಡಟ್ಟಿ (ದೊಡ್ಡಮನೆ)ಯಲ್ಲಿ ಚಿತ್ರೀಕರಣಗೊಂಡಿವೆ. ಚಿತ್ರದಲ್ಲಿ ಕಾಲಭೈರವ ಭಿಕ್ಷೆ ಬೇಡಿಕೊಂಡು ಬರುವ ಸನ್ನಿವೇಶದ ಶೂಟಿಂಗ್ಗೆ ನೆರವಾದ ದೊಡ್ಡಟ್ಟಿ ಮನೆ ಮಂಡ್ಯದ ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಯ ಎಚ್. ಬೊಮ್ಮನಹಳ್ಳಿಯಲ್ಲಿದೆ.
ಈ ದೊಡ್ಡಟ್ಟಿ ನಿರ್ಮಾಣಗೊಂಡಿದ್ದು 114 ವರ್ಷಗಳ ಹಿಂದೆ. ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ನ್ಯಾಯ ಪಂಚಾಯ್ತಿ ನಡೆಸುತ್ತಿದ್ದ ದಿ. ಮಾಯಣ್ಣಗೌಡ ಈ ಮನೆಯ ನಿರ್ಮಾತೃ. 100- 100 ಅಡಿ ವಿಸ್ತೀರ್ಣವುಳ್ಳ ಮನೆಯ ಒಳ ಮತ್ತು ಹೊರ ಆವರಣದಲ್ಲಿ 60 ಮರದ ಬೃಹತ್ ಕಂಬಗಳಿವೆ.
ಮನೆಯ ಮುಖ್ಯದ್ವಾರದ ಬಾಗಿಲು ಮತ್ತು ಬೇವಿನ ಮರದ ಕಂಬಗಳಲ್ಲಿ ಕುಸುರಿ ಕೆಲಸ ಅತ್ಯಾಕರ್ಷಕ. ಒಳಾಂಗಣದಲ್ಲಿ 20- 30 ಅಡಿ ವಿಸ್ತೀರ್ಣದ ತೊಟ್ಟಿಯಿದೆ. ಧಾನ್ಯ ತುಂಬುವ ಕಣಜಗಳು, ದೊಡ್ಡ ದೊಡ್ಡ ಗೋದಾಮುಗಳು, ತೊಟ್ಟಿಲುಗಳನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ.
ಮಾಳಿಗೆ ಮನೆಯ ವೈಶಿಷ್ಟ್ಯ
ಎಚ್. ಬೊಮ್ಮನಹಳ್ಳಿ ಮಾಯಣ್ಣಗೌಡರ ಮಗ ಕೆಂಪೇಗೌಡ ಇಲ್ಲಿ ವಾಸವಿದ್ದರು. ನಂತರ ಮಕ್ಕಳು ಮತ್ತು ಮೊಮ್ಮಕ್ಕಳು ವಿದೇಶ ಸೇರಿದರು. ಹೀಗಾಗಿ ಜನರೇ ಇಲ್ಲದೇ ಮನೆ ಪಾಳು ಬಿದ್ದಿತ್ತು. ನಂತರ ದೊಡ್ಡಟ್ಟಿಯನ್ನು ಇಬ್ಭಾಗ ಮಾಡುವ ಪ್ರಯತ್ನಗಳೂ ನಡೆದವು. ಆದರೆ, ಈಗ ರು. 20 ಲಕ್ಷಕ್ಕೂ ಹೆಚ್ಚು ಹಣ ವೆಚ್ಚ ಮಾಡಿ ಆಧುನಿಕ ಜಗತ್ತು ನಾಚಿಸುವಂತೆ ನವೀಕರಣಗೊಳಿಸಿದ್ದಾರೆ.
ಹೆಂಚು ಹಾಗೂ ಕಲ್ಲುಗಳನ್ನು ಬಳಸಿ ನಿರ್ಮಿಸಿರುವ ಮನೆಯ ಹೊರಭಾಗದ ಮೂಲ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮನೆಯೊಳಗೆ ನೆಲಕ್ಕೆ ಕೆಂಪುಗಾರೆ ಹಾಕಿಸಿದ್ದು, ಕೊಳಾಯಿ ಸಂಪರ್ಕ ಪಡೆದಿದ್ದು ಹೊರತುಪಡಿಸಿದರೆ ಯಾವೊಂದು ವಸ್ತುವೂ ಹಾನಿಯಾಗದಂತೆ ಸಂರಕ್ಷಿಸಲಾಗಿದೆ.
ನಾಗಮಂಗಲ ಪಟ್ಟಣದಿಂದ ದೇವಲಾಪುರ ಮಾರ್ಗವಾಗಿ ಕೋಟೆಬೆಟ್ಟ ರಸ್ತೆಯಲ್ಲಿ 10 ಕಿ.ಮೀ. ದೂರದಲ್ಲಿ ಎಚ್. ಬೊಮ್ಮನಹಳ್ಳಿ ಸಿಗುತ್ತದೆ. ಮಾಹಿತಿಗಾಗಿ ಅಶೋಕ್, ಮೊ.9845024911 ಸಂಪರ್ಕಿಸಬಹುದು.
- ಎಂ.ಅಫ್ರೋಜ್ ಖಾನ್
ಚಿತ್ರಗಳು - ಸಿ.ಎನ್. ಸೀತಾರಾಮ್