ಉಪಯೋಗ

ಇಂದಿನ ಯಾಂತ್ರಿಕ ಜೀವನ ಹಣವೇನೋ ತರುತ್ತಿದೆ. ಜೊತೆಗೆ ಖಿನ್ನತೆ, ರಕ್ತದೊತ್ತಡ, ದೈಹಿಕ ದೌರ್ಬಲ್ಯ, ಕೊಲೆಸ್ಟೆರಾಲ್...
ಉಪಯೋಗ
Updated on: 

ಇಂದಿನ ಯಾಂತ್ರಿಕ ಜೀವನ ಹಣವೇನೋ ತರುತ್ತಿದೆ. ಜೊತೆಗೆ ಖಿನ್ನತೆ, ರಕ್ತದೊತ್ತಡ, ದೈಹಿಕ ದೌರ್ಬಲ್ಯ, ಕೊಲೆಸ್ಟೆರಾಲ್ ಮುಂತಾದ ಆರೋಗ್ಯ ಸಮಸ್ಯೆಗಳನ್ನೂ ಉಚಿತವಾಗಿ ನೀಡುತ್ತಿದೆ. ಇಂಥ ಸಮಸ್ಯೆಗಳ ನಿವಾರಣೆಗೆ ಅನೇಕರು ವೈದ್ಯರ ಮೊರೆ ಹೋಗುವುದುಂಟು. ಆದರೆ, ಸ್ವಲ್ಪ ಪರಿಶ್ರಮಪಟ್ಟರೆ ಸಾಕು. ಇಂಥ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಇದಕ್ಕೆ 'ಯೋಗ' ರಾಮಬಾಣ. ಎಲ್ಲ ಆಸನಗಳನ್ನು ಮಾಡಬೇಕೆಂದಿಲ್ಲ. ಕೆಲವು ಆಸನಗಳನ್ನು ಕಲಿತು, ಅವುಗಳನ್ನು ನಿತ್ಯ ಅಭ್ಯಾಸ ಮಾಡಿಕೊಳ್ಳಬೇಕಷ್ಟೇ.



ಪಶ್ಚಿಮೋತ್ಥಾಸನ
ಪಿಎಂಎಸ್(ಪ್ರಿ-ಮೆನ್‌ಸ್ಟ್ರುಯಲ್ ಸಿಂಡ್ರೋಮ್)- ಇದು ಹೆಂಗಸರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಪ್ರತಿ ಬಾರಿ ಅವರು ಋತುಮತಿಯಾಗುವ ಮುನ್ನ ಒಂದು ರೀತಿಯ ದೈಹಿಕ ದೌರ್ಬಲ್ಯತೆಯನ್ನು ಅನುಭವಿಸುತ್ತಾರೆ. ಋತುಚಕ್ರ ಪ್ರಾರಂಭವಾಗುವ ಸುಮಾರು 5 ದಿನಗಳ ಹಿಂದಿನಿಂದಲೇ ಹೊಟ್ಟೆ ಹಾಗೂ ಸೊಂಟ ನೋವು ಬಹುವಾಗಿ ಕಾಡುತ್ತದೆ. ಇದಕ್ಕೆ ಪಶ್ಚಿಮೋತ್ತಾಸನ ರಾಮಬಾಣ. ಈ ಆಸನ ಮಾಡಬೇಕಾದರೆ, ಮೊದಲು ನೆಲದ ಮೇಲೆ ಕುಳಿತುಕೊಳ್ಳಬೇಕು. ಆನಂತರ, ಎರಡೂ ಕಾಲುಗಳನ್ನು ಮುಂದಕ್ಕೆ, ನೇರವಾಗಿ ಚಾಚಬೇಕು. ಬೆನ್ನು ನೇರವಾಗಿರಲಿ. ಆನಂತರ, ಬಾಗಿ ಚಾಚಿದ ಕಾಲುಗಳ ಹೆಬ್ಬೆರಳುಗಳನ್ನು ಮುಟ್ಟಬೇಕು. ಈ ಸಂದರ್ಭದಲ್ಲಿ, ತಲೆಯನ್ನೂ ಬಾಗಿಸಬೇಕು. ಆದರೆ, ಮೊಣಕಾಲು ಮಡಚಬಾರದು. ಕೆಲವು ನಿಮಿಷಗಳ ನಂತರ, ಕೊಂಚ ವಿಶ್ರಾಂತಿ ತೆಗೆದುಕೊಂಡು, ನಂತರ ಆಸನವನ್ನು ಪುನರಾವರ್ತಿಸಬೇಕು.


ಚಕ್ರಾಸನ
ಈ ಆಸನ ಮಾಡುವ ಪ್ರಥಮ ಹಂತದಲ್ಲಿ ನೆಲದ ಮೇಲೆ ನೇರವಾಗಿ ನಿಲ್ಲಿ. ನಂತರ, ಬಲಗೈಯನ್ನು ಮೇಲೆತ್ತಿ. ನಿಮ್ಮ ಬಲಗೈ ತೋಳು ನಿಮ್ಮ ಕಿವಿಯನ್ನು ತಾಕುವಂತಿರಲಿ ಹಾಗೂ ಬಲಗೈ ಹಸ್ತ ಎಡಭಾಗದ ಕಡೆ ತಿರುಗಿರಲಿ. ಈಗ, ನಿಧಾನವಾಗಿ ಸೊಂಟವನ್ನು ಎಡಗಡೆಗೆ ಬಾಗಿಸಿ. ಎಡಗೈ ಹಸ್ತ, ಎಡ ತೊಡೆಯ ಮೇಲೆ ಬರಲಿ. ಕೆಲವು ನಿಮಿಷಗಳ ನಂತರ, ಮತ್ತೆ ಮೊದಲ ಸ್ಥಿತಿಗೆ ಬಂದು ಕೆಲವು ನಿಮಿಷ ವಿಶ್ರಾಂತಿ ಪಡೆಯಿರಿ. ನಂತರ, ಎಡಗೈ ನೇರವಾಗಿ ಚಾಚಿ, ಬಲಭಾಗಕ್ಕೆ ಬಾಗುವ ಮೂಲಕ ಆಸನವನ್ನು ಪುನರಾವರ್ತಿಸಿ. ಇದರಿಂದ ಬೆನ್ನು, ಸೊಂಟ ಹಾಗೂ ಮೊಣಕಾಲಿನ ಕೀಲುಗಳು ಬಲಗೊಳ್ಳುತ್ತವೆ ಹಾಗೂ ನಿಧಾನವಾಗಿ ಬೆನ್ನುನೋವು ಉಪಶಮನವಾಗುತ್ತದೆ.



ಪದ್ಮಾಸನ

ಈ ಆಸನ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ನಾವು ನೆಲದ ಮೇಲೆ ಕುಳಿತಾಗ ಚಕ್ಕಳ ಮುಕ್ಕಳ ಹಾಕಿ ಕುಳಿತುಕೊಳ್ಳುತ್ತೇವಲ್ಲ, ಇದೂ ಅದೇ ಮಾದರಿಯ ಆಸನ. ಚಕ್ಕಳ ಮುಕ್ಕಳ ಹಾಕಿ ಕುಳಿತುಕೊಂಡು, ನಂತರ ಬಲಗಾಲಿನ ಪಾದವನ್ನು ಎಡತೊಡೆಯ ಮೇಲೆ ಹಾಗೂ ಎಡಗಾಲಿನ ಪಾದವನ್ನು ಬಲಗಾಲಿನ ತೊಡೆಯ ಮೇಲೆ ಹಾಕಿಕೊಳ್ಳಬೇಕು. ಹೀಗೆ, ಕುಳಿತಾಗ ಬೆನ್ನು ಹಾಗೂ ಕುತ್ತಿಗೆಗಳು ನೆಟ್ಟಗಿರಲಿ. ನಿಮ್ಮ ಎರಡೂ ಅಂಗೈಗಳು ಕಾಲಿನ ಆಯಾ ಹೆಬ್ಬೆರಳುಗಳ ತುದಿಗಳನ್ನು ಮುಚ್ಚಿಕೊಂಡಿರಲಿ. ಈ ಆಸನವನ್ನು ನಿತ್ಯ ಅಭ್ಯಸಿಸುವುದರಿಂದ ವಿಷಯ ಲಂಪಟತನ, ಹ್ಯಾಂಗೋವರ್‌ಗಳಿಂದ ಮುಕ್ತರಾಗಬಹುದು.



ಹಲಾಸನ
ಉದರ ಸಂಬಂಧಿ ಸಮಸ್ಯೆಗಳಿಗೆ ಹಲಾಸನ ಒಳ್ಳೆಯದು. ನೆಲದ ಮೇಲೆ ಅಂಗಾತ ಮಲಗಿ. ನಿಮ್ಮ ಕೈಗಳ ಹಸ್ತಗಳು ನೆಲದ ಮೇಲಿರಲಿ. ಈಗ ಎರಡೂ ಕಾಲುಗಳನ್ನು ಎತ್ತಿ ನೇರವಾಗಿ ಮೇಲಕ್ಕೆ ಚಾಚಿ. ನೆಲಕ್ಕೆ ಲಂಬವಾಗಿ ಕಾಲುಗಳು ಚಾಚಿರಲಿ. ನಂತರ, ಕಾಲುಗಳನ್ನು ತಲೆಯ ಕಡೆಗೆ, ಮುಂಗಾಲುಗಳು ನೆಲವನ್ನು ಮುಟ್ಟುವವರೆಗೂ ಬಾಗಿಸಿ. ಇದೇ ಸ್ಥಿತಿಯಲ್ಲಿ 5 ಸೆಕೆಂಡ್‌ಗಳ ಕಾಲ ಇರಿ.


ಜಾನುಶೀರ್ಷಾಸನ
ನೆಲದ ಮೇಲೆ ಕುಳಿತು ನೇರವಾಗಿ ಕಾಲುಗಳನ್ನು ಚಾಚಿರಿ. ಬೆನ್ನು ನೇರವಾಗಿರಲಿ. ಈಗ, ಬಲಗಾಲನ್ನು ನಿಧಾನವಾಗಿ ಮಡಚಿರಿ. ಬಲಗಾಲಿನ ಹಿಮ್ಮಡಿ ನಿಮ್ಮ ಬಲತೊಡೆಯನ್ನು ಮುಟ್ಟಲಿ. ಆನಂತರ, ಎರಡೂ ಕೈಗಳನ್ನು ಮೇಲೆತ್ತಿ ನೇರವಾಗಿ ಚಾಚಿ. ಹೀಗೆ ಕೈಗಳನ್ನು ಚಾಚುವಾಗ ನಿಧಾನವಾಗಿ ಶ್ವಾಸವನ್ನು ಒಳಗೆಳೆದುಕೊಳ್ಳಿ. ನಂತರ, ಹಣೆಯು ಎಡಮೊಣಕಾಲನ್ನು ಮುಟ್ಟುವಂತೆ ಬಾಗಿ. ಈ ಆಸನದಲ್ಲೇ ಕೆಲ ನಿಮಿಷಗಳನ್ನು ಕಳೆಯಿರಿ. ನಂತರ, ಮರಳಿ ಸಹಜ ಸ್ಥಿತಿಗೆ ಆಗಮಿಸಿ. ಈಗ ಮತ್ತೆ ನಿಮ್ಮ ಎಡಗಾಲನ್ನು ಮಡಚಿ ಈ ಆಸನವನ್ನು ಪುನರಾವರ್ತಿಸಿ. ನಿದ್ರಾಹೀನತೆ ದೂರವಾಗುತ್ತದೆ.



ಸರ್ವಾಂಗಾಸನ
ಖಿನ್ನತೆಗೆ ಸರ್ವಾಂಗಾಸನ ಮದ್ದು. ಮೊದಲಿಗೆ ಹಲಾಸನವನ್ನೇ ಪುನರಾವರ್ತಿಸಿ. ಕಾಲುಗಳನ್ನು ತಲೆಯವರೆಗೂ ಚಾಚಿದ ನಂತರ, ನಿಮ್ಮ ಕೈಗಳನ್ನು ಪೃಷ್ಠದ ಮೇಲೆ ತಂದು ದೀರ್ಘವಾಗಿ ಉಸಿರಾಡಿ.



ಮತ್ಸ್ಯಾಸನ


ಸೈನಸ್ ತೊಂದರೆಗೆ ಮತ್ಸ್ಯಾಸನ ಅತ್ಯುತ್ತಮವಾದದ್ದು. ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಿ. ನಿಧಾನವಾಗಿ ಕಾಲುಗಳನ್ನು ಮೇಲೆತ್ತದೇ ಹಿಂದಕ್ಕೆ ಸಾಧ್ಯವಾದಷ್ಟು ಬಾಗಿ. ಈಗ ಎರಡೂ ಕೈಗಳನ್ನು ಹಿಂದಕ್ಕೆ ತಂದು ಬೆನ್ನ ಹಿಂದೆ ಪರಸ್ಪರ ಸೇರಿಸಿ. ನಂತರ, ಕೈಗಳನ್ನು ಮುಂದಕ್ಕೆ ತಂದು ಮಡಚಿದ ಕಾಲುಗಳ ಹೆಬ್ಬೆರಳುಗಳನ್ನು ಮುಟ್ಟಲು ಪ್ರಯತ್ನಿಸಿ. ಎಡಗೈ ಎಡಗಾಲಿನ ಹೆಬ್ಬೆರಳನ್ನು ಮುಟ್ಟಿದರೆ, ಬಲಗೈ ಬಲಗಾಲಿನ ಹೆಬ್ಬೆರಳನ್ನು ಮುಟ್ಟಲಿ. ನಿಧಾನವಾಗಿ ಉಸಿರಾಡುತ್ತಾ ಇದೇ ಸ್ಥಿತಿಯಲ್ಲಿ ಮುಂದುವರಿಯಿರಿ.



ಪವನಮುಕ್ತಾಸನ
ನೆಲದ ಮೇಲೆ ಅಂಗಾತವಾಗಿ, ನೇರವಾಗಿ ಮಲಗಿ. ಎರಡೂ ಕೈಗಳು ನೇರವಾಗಿರಲಿ ಹಾಗೂ ಹಸ್ತಗಳು ನೆಲವನ್ನು ಸ್ಪರ್ಶಿಸಲಿ. ಈಗ ಎರಡೂ ಕಾಲುಗಳನ್ನು ಮಡಚಿ, ಎದೆಯೆಡೆಗೆ ತನ್ನಿ. ಮಡಚಿದ ಕಾಲುಗಳ ಮೊಣಕಾಲುಗಳು ಎದೆಗೆ ಹತ್ತಿರವಾಗಿರಲಿ. ಈಗ, ತಲೆಯನ್ನು ನಿಧಾನವಾಗಿ ಎತ್ತಿ ಹಣೆಯನ್ನು ಮೊಣಕಾಲುಗಳಿಗೆ ತಾಗಿಸಿ. ಇದೇ ಸ್ಥಿತಿಯಲ್ಲಿ ಸುಮಾರು ಐದು ಸೆಕೆಂಡ್ ಕಳೆಯಿರಿ. ನಂತರ, ಸಹಜ ಸ್ಥಿತಿಗೆ ಬಂದು ವಿಶ್ರಮಿಸಿ. ಹೊಟ್ಟೆ ಉಬ್ಬರ ನಿವಾರಣೆಯಾಗುತ್ತದೆ.

-ಚೇತನ್ ಓ.ಆರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com