

ಗರ್ಭದಲ್ಲೊಂದು ಜೀವ ಟಿಸಿಲೊಡೆದಾಗಲೇ ಮೆದುಳಿನ ನರಕೋಶಗಳು ಉಳಿದೆಲ್ಲ ನರಕೋಶಗಳಿಗಿಂತ ವೇಗವಾಗಿ ವೃದ್ಧಿಯಾಗುತ್ತವೆ. ಅಲ್ಲದೆ, ಅವನ್ನು ಉತ್ತೇಜಿಸಿದಷ್ಟೂ ಹೆಚ್ಚು ಚುರುಕಾಗುತ್ತವೆ ಎಂದು ವಿಜ್ಞಾನ ಸಾಬೀತು ಮಾಡಿದೆ. ಈಗ ಮಕ್ಕಳು ಚುರುಕಾಗಲು ಇದೇ ಕಾರಣ.
ನ್ಯೂರಾನ್‌ಗಳ ಬಲ
ಹುಟ್ಟಿನ ನಂತರ 3 ವರ್ಷದವರೆಗೆ ಮೆದುಳಿನ ಬೆಳವಣಿಗೆ ತೀವ್ರಗತಿಯಲ್ಲಿರುತ್ತದೆ. ಹುಟ್ಟಿದಾಗ ಮಗುವಿನ ಮೆದುಳಿನ ತೂಕ ಪ್ರೌಢವಯಸ್ಕರ ಮೆದುಳಿನ ಶೇ.25, ಒಂದೇ ವರ್ಷಕ್ಕೆ ಶೇ.50, 2ನೇ ವರ್ಷದ ಹೊತ್ತಿಗೆ ಶೇ.75 ಮತ್ತು ಮೂರನೇ ವರ್ಷಕ್ಕೆ ಶೇ.90 ಬೆಳೆದಿರುತ್ತದೆ. ವಯಸ್ಕರರಲ್ಲಿರುವ 100 ಬಿಲಿಯನ್ ನ್ಯೂರಾನ್‌ಗಳ ಪೈಕಿ ಬಹುತೇಕ ಈ ಬೆಳವಣಿಗೆಯ ಅವಧಿಯಲ್ಲಿ ರೂಪುಗೊಂಡವುಗಳೇ ಆಗಿರುತ್ತವೆ. ನ್ಯೂರಾನ್‌ಗಳೆಂಬ ಮೆದುಳಿನಲ್ಲಿರುವ ಸಂಪರ್ಕ ಕೊಂಡಿಗಳು ಚಟುವಟಿಕೆಯಲ್ಲಿ ಪ್ರಮುಖ ಪಾತ್ರಧಾರಿಗಳು. ಮೆದುಳಿಗೆ ಹೆಚ್ಚು ಪ್ರಚೋದನೆ ಸಿಕ್ಕಿದಷ್ಟೂ ಈ ನ್ಯೂರಾನ್‌ಗಳು ಒಂದಕ್ಕೊಂದು ಬೆಸೆದುಕೊಳ್ಳುವ 'ಸಿನ್ಯಾಪ್ಟಿಕ್ ಕನೆಕ್ಷನ್' ಪ್ರಕ್ರಿಯೆ ಹೆಚ್ಚುತ್ತಾ ಹೋಗುತ್ತದೆ. ಬಾಲ್ಯದಲ್ಲಿ ಹೆಚ್ಚು ಸಿನ್ಯಾಪ್ಟಿಕ್ ಕನೆಕ್ಷನ್‌ಗಳು ರೂಪುಗೊಂಡಷ್ಟೂ ಮಗು ಹೆಚ್ಚು ಚುರುಕಾಗುತ್ತದೆ.
ಪ್ರೂನಿಂಗ್ ಹಂತ
'ನ್ಯೂರಾನ್'ಗಳು ಯಾವುದೇ ವಯಸ್ಸಿನಲ್ಲಾದರೂ ಹೊಸದಾಗಿ ರೂಪುಗೊಳ್ಳಬಲ್ಲವು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿವೆ. ಆದರೂ ನಶಿಸಿದ ನ್ಯೂರಾನ್‌ಗಳ ಜಾಗವನ್ನು ತುಂಬುವಷ್ಟು ಮಾತ್ರ ಹೊಸದು ಹುಟ್ಟಿಕೊಳ್ಳುತ್ತವೆಯೆಂಬುದನ್ನೂ ಇದೇ ಸಂಶೋಧನೆಗಳು ಒತ್ತಿ ಹೇಳುತ್ತಿವೆ. ಎಳೆಯ ಮಕ್ಕಳು ಪ್ರೂನಿಂಗ್ ಹಂತವನ್ನು ದಾಟಿರುವುದಿಲ್ಲವಾದ ಕಾರಣ ಈ ವಯೋವಾನದಲ್ಲಿ ಗರಿಷ್ಠ ಕಲಿಕೆ ಸಾಧ್ಯ. ಹಾಗಂತ ಇಷ್ಟು ಚಿಕ್ಕ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯ ಕೂಡಿ ಹಾಕಿ ಶಿಸ್ತಿನ ಸಂಕೋಲೆಯಲ್ಲಿ ಬಂಧಿಸಿ ಕಲಿಕೆಯನ್ನು ತುರುಕಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ರೀತಿ ನೀತಿಗಳಿವೆ. ಆವಾಗಷ್ಟೆ ನಿರೀಕ್ಷಿತ ಫಲ. ಮೆದುಳಿಗೆ ಹಸಿವು ಜಾಸ್ತಿ. ಕೊಟ್ಟ ಅಷ್ಟೂ ಜ್ಞಾನವನ್ನು ಅರಗಿಸಿಕೊಂಡು ಉಳಿಸಿಕೊಂಡು, ಬೆಳೆಸಿಕೊಳ್ಳುವ ಶಕ್ತಿಯಿರುತ್ತದೆ.
ಬಾಲ್ಯಾವಧಿ ಕೋರ್ಸ್
ಪೂರ್ವ ಬಾಲ್ಯಾವಧಿ ಮತ್ತು ಶಿಕ್ಷಣ ನಿರ್ವಹಣೆ ಸಮಸ್ಯೆಯನ್ನರಿತು ಬೆಂಗಳೂರು ವಿವಿ ವ್ಯಾಪ್ತಿಯಲ್ಲಿರುವ ಶ್ರೀಮತಿ ವಿಎಚ್‌ಡಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ಸ್ ಈ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ. ಇದಕ್ಕಾಗಿ M.Sc. in Early Childhood Education and Administration (ECEA) ಸ್ನಾತಕೋತ್ತರ ಪದವಿಯನ್ನೂ ಆರಂಭಿಸಿದೆ. ವಿಶೇಷವೆಂದರೆ ಇದು ದೇಶದಲ್ಲಿ ಮೊದಲು ಮತ್ತು ಏಕೈಕ ಪದವಿ! ಮಾನವ ವಿಕಾಸ ವಿಭಾಗಕ್ಕೆ ಒಳಪಟ್ಟ ಈ ಪದವಿಯು ಸಾಮಾನ್ಯ ಮಕ್ಕಳೂ ಅಲ್ಲದೇ ವಿಶಿಷ್ಟ ಚೇತನ ಮಕ್ಕಳ ಬಾಲ್ಯ ಶಿಕ್ಷಣ ಮತ್ತು ನಿರ್ವಹಣೆಯ ಸಮಗ್ರ ಪಠ್ಯವನ್ನೊಳಗೊಂಡಿದೆ. ವಿಶೇಷವೆಂದರೆ ಏನೇನೂ ದುಬಾರಿಯಲ್ಲದ, ಯಾರಿಗಾದರೂ ಕೈಗೆಟುಕುವ ಪ್ರವೇಶ ಶುಲ್ಕವಿದ್ದು, ಮಾನ್ಯತೆ ಪಡೆದ ಭಾರತೀಯ ವಿವಿಯಿಂದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಅಥವಾ ಇನ್ನ್ಯಾವುದೇ ಪದವಿ ಪಡೆದವರು ಈ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಪದವಿ ಮುಗಿಸಿದವರಿಗೆ ವಿಫುಲ ಉದ್ಯೋಗಾವಕಾಶಗಳುಂಟು.
ಮಕ್ಕಳ ಬೇಕು ಬೇಡಗಳ ಪೂರೈಕೆಯ ಜತೆಗೇ ಮಕ್ಕಳ ಜತೆಗಿದ್ದು, ಮಕ್ಕಳಿಗಾಗಿ ಕೆಲಸ ಮಾಡುವ ಆಸಕ್ತಿ, ಮಕ್ಕಳಿಗೆ ನವೀನತೆಯ ದಾರಿ ತೋರಿಸುವುದರ ಜತೆ ಸ್ವಾವಲಂಬನೆ, ಆತ್ಮಗೌರವ ಬೆಳೆಸುವ ಶ್ರದ್ಧೆ, ಮಗುವಿನೊಂದಿಗೆ ಮಗುವಾಗಿ ಬೆರೆಯುವ ಹಂಬಲ ಇದ್ದವರಿಗೆ ಪೂರ್ವ ಬಾಲ್ಯಾವಧಿ ಶಿಕ್ಷಣ ಕ್ಷೇತ್ರದಲ್ಲಿ ಪರಿಣತಿ ನೀಡಬಲ್ಲ ಈ ಸ್ನಾತಕೋತ್ತರ ಪದವಿ ಅನನ್ಯ ಆಯ್ಕೆ. ಹೆಚ್ಚಿನ ಮಾಹಿತಿಗೆ ಡಾ. ರಾಜಲಕ್ಷ್ಮಿ (ಮೊ.9845395175), ಡಾ. ಮಧುಮತಿ(9880756346) ಸಂಪರ್ಕಿಸಬಹುದು.
= ಶಮಾ ನಂದಿಬೆಟ್ಟ