

ವಾಷಿಂಗ್ಟನ್: ಜಗತ್ತಿನಾದ್ಯಂತ ಶೇ.6 ರಷ್ಟು ಜನರು ಇಂಟರ್ನೆಟ್ ದುರ್ವ್ಯಸನಕ್ಕೊಳಗಾಗಿದ್ದು, ಇದರಿಂದ ವ್ಯಕ್ತಿ ಜೀವನದಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಅತಿಯಾದ ಇಂಟರ್ನೆಟ್ ಬಳಕೆಯಿಂದಾಗಿ ಬದುಕು ಮಾತ್ರವಲ್ಲ ಮಾನವೀಯ ಸಂಬಂಧಗಳು, ಆರೋಗ್ಯ ಕೂಡಾ ಹಾಳಾಗುತ್ತಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಪ್ರತಿಯೊಂದು ಪ್ರದೇಶಕ್ಕನುಗುಣವಾಗಿ ಇಂಟರ್ನೆಟ್ ಬಳಕೆದಾರರ ಜನ ಜೀವನದಲ್ಲಿ ಬದಲಾವಣೆಗಳು ಕಾಣಿಸಿಕೊಂಡಿವೆ. 31 ರಾಷ್ಟ್ರಗಳ 89,000 ಜನರ ಜೀವನ ಶೈಲಿಯ ಮೇಲೆ ನಿಗಾ ವಹಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ.
ಈ ಬಗ್ಗೆ ಅಧ್ಯಯನ ನಡೆಸಿದ ಹಾಂಗ್ ಕಾಂಗ್ ವಿಶ್ವ ವಿದ್ಯಾನಿಲಯದ ಸಿಸಿಲಿಯಾ ಚೆಂಗ್ ಮತ್ತು ಏಂಜಲ್ ಯೀ ಲಮ್ ಲೀ ಇಂಟರ್ನೆಟ್‌ನ ಮಿತಿ ಮೀರಿದ ಬಳಕೆ ಶೇ. 6 ಜನರ ಜೀವನವನ್ನು ಬಾಧಿಸಿದೆ ಎಂದಿದ್ದಾರೆ.
ಏಷ್ಯಾದಲ್ಲಿ ಚೈನಾ, ಹಾಂಗ್ ಕಾಂಗ್, ಇಂಡಿಯಾ, ದಕ್ಷಿಣ ಕೊರಿಯಾ, ತೈವಾನ್ ದೇಶಗಳಲ್ಲಿ ಶೇ. 7.1 ಜನರು ಇಂಟರ್ನೆಟ್ ಗೀಳು ಉಳ್ಳವರಾಗಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.