

ಎಲ್ಲರಿಗೂ ಸೌಂದರ್ಯದ ಬಗ್ಗೆ ಕಾಳಜಿ ಹೆಚ್ಚು. ಮುಖದ ಆಕರ್ಷಣೆಯೇ ಮುಖ್ಯ ಎಂದು ಭಾವಿಸುತ್ತಾರೆ. ಈ ಮುಖಕ್ಕೆ ಅಂದ ಕೊಡುವುದು ಸುಂದರ ದಂತಪಕ್ತಿ. ಹಲ್ಲುಗಳ ಆಕಾರ, ರಚನೆ, ಅದರ ಬಿಳುಪು -ಹೊಳಪು ಮುಖದ ಸೌಂದರ್ಯಕ್ಕೆ ಬೋನಸ್.
ಹಲ್ಲುಗಳ ಆರೈಕೆ - ಆರೋಗ್ಯದ ಕಡೆಗೆ ಗಮನಹರಿಸಲೇಬೇಕು. ಹೊಳೆಯುವ ಹಲ್ಲುಗಳು ಸೌಂದರ್ಯದ ಸೂಚಕವಷ್ಟೇ ಅಲ್ಲ, ಆರೋಗ್ಯದ ಲಕ್ಷಣವೂ ಹೌದು. ಬಹಳಷ್ಟು ಜನರು ಹಲ್ಲುಗಳನ್ನು ಎಷ್ಟೇ ಉಜ್ಜಿದರೂ, ತಿಕ್ಕಿದರೂ ಅದು ಹಳದಿಯಾಗಿಯೇ ಗೋಚರಿಸುತ್ತದೆ.
ಕೊಳೆ ಏಕಾಗುತ್ತದೆ?
ಆಹಾರವನ್ನು ಜಗಿಯುವಾಗ, ನುಂಗಿದ ನಂತರ ಉಳಿಯುವ ಕಣಗಳು, ಲಾಲಾರಸದಿಂದ ಬರುವ ಸಲೈವರಿ ಪ್ರೋಟೀನ್ ಮುಂತಾದವುಗಳಿಂದ 'ದಂತಮಲ' (ಪ್ಲಾಕ್) ಉತ್ಪತ್ತಿಯಾಗುತ್ತದೆ. ಅದು ಹಲ್ಲಿನ ಮೇಲೆ ಶೇಖರಗೊಳ್ಳುತ್ತದೆ. ನಿತ್ಯ 2 ಬಾರಿ ಹಲ್ಲುಜ್ಜಬೇಕು. ಪ್ಲಾಕ್ ಪಾರದರ್ಶಕವಾಗಿದ್ದು ಹಲ್ಲಿನ ಮೇಲ್ಪದರದಲ್ಲಿ ವಸಡಿನ ಅಂಚಿನಲ್ಲಿ ಜಮೆಗೊಂಡಿರುತ್ತದೆ. ಇದು ಸ್ವಚ್ಛತೆ ಕೊರತೆಯಿದ್ದಾಗ ಮತ್ತಷ್ಟು ಹೆಚ್ಚುತ್ತದೆ. ಅಲ್ಲದೆ ಸೇವಿಸುವ ಕಾಫಿ, ಟೀ, ಎಲೆ-ಅಡಕೆಗಳಿಂದಲೂ ಹಲ್ಲಿನ ಕಲೆ ಹೆಚ್ಚುತ್ತದೆ. ಈ ಕೊಳೆ ವಸಡಿನೊಳಗೆ ಸೇರಿದರೆ ವಸಡಿನ ಊತ, ವಸಡಿನ ರಕ್ತಸ್ರಾವವಾಗುತ್ತದೆ.
ಹೊಳಪು ಆರೋಗ್ಯದಾಯಕ
ಆರೋಗ್ಯವಂತ ಹಲ್ಲುಗಳೆಲ್ಲವೂ ಹೊಳೆಯಲೇಬೇಕೆಂಬ ನಿಯಮವಿಲ್ಲ. ಆದರೂ ಹೊಳೆಯುವ ಹಲ್ಲುಗಳು ಆರೋಗ್ಯದ ಲಕ್ಷಣ. ದಂತ ವೈದ್ಯರಿಂದ ಪ್ರತಿ ವರ್ಷ ತಪ್ಪದೇ ಹಲ್ಲು ಸ್ವಚ್ಛತೆ ಮಾಡಿಸುವುದರಿಂದ ಸೂಕ್ಷ್ಮಾತಿ ಕಲೆಗಳು, ಹಲ್ಲುಗಳ ನಡುವೆ ಬೆಳೆಯುವ ಪಾಚಿ, ಗಾರೆಯನ್ನು ತಡೆಗಟ್ಟಬಹುದು. ಇದು ಸಾಮಾನ್ಯ ಬ್ರಷ್ನಿಂದ ಸಾಧ್ಯವಾಗದು. ಇದರೊಂದಿಗೆ ಪಾಲಿಷಿಂಗ್ ಕೂಡ ಪರಿಣಾಮಕಾರಿ. ಇದರಲ್ಲಿ ಸೂಕ್ಷ್ಮ ಖನಿಜಾಂಶದ ಹರಳು (ಮೈಕ್ರೋ ಕ್ರಿಸ್ಟಲ್)ಗಳಿದ್ದು, ಅವು ಹಲ್ಲುಗಳ ಮೇಲ್ಭಾಗದ ಹುರುಕು (ರಫ್ ಭಾಗ) ಅಂಶವನ್ನು ಸಮತಟ್ಟು ಮಾಡುವುದರಿಂದ ಕೊಳೆ-ಕಲೆ ಹಲ್ಲಿನ ಮೇಲೆ ನೆಲೆಗಟ್ಟದೇ ಜೊಲ್ಲಿನೊಂದಿಗೆ ಜಾರುತ್ತದೆ.
ಇದರೊಂದಿಗೆ ನಿತ್ಯ ಬಳಕೆಯಿಂದಾಗಿ ಹಲ್ಲಿನ ಮೇಲ್ಮೈ ಸ್ವಲ್ಪವಾದರೂ ಕರಗುತ್ತಿರುತ್ತದೆ (ವರ್ಷಗಟ್ಟಲೆ ಬಳಕೆಯಿಂದಾಗಿ). ಆದ್ದರಿಂದ ಸತತ ನಿರ್ವಹಣೆಯೇ ಹಲ್ಲು ಹೊಳೆಯಲು ಮುಖ್ಯ ಕಾರಣ.
ಟೂತ್ ಪಾಯಿಂಟ್
ಹಲ್ಲಿನ ಬಣ್ಣ ಜನ್ಮದಿಂದ ಬರುವಂಥದ್ದು. ಚರ್ಮದ ಬಣ್ಣದ ರೀತಿ. ಅದನ್ನು ಬದಲಿಸಲಾಗದು. ಕೇವಲ ಸ್ವಚ್ಛತೆಯಿಂದ ಹೊಳೆಯುವಂತೆ ಮಾಡಬಹುದಷ್ಟೇ.
ಹಲ್ಲಿನ ಹೊಳಪಿಗೆ ಪ್ರಮುಖ ಅಡಚಣೆಯಾದ ಪ್ಲೋರೋಸಿಸ್ ಕಲೆ (ನೀರಿನಿಂದ ಬರುವ ಹಳದಿ ಕಲೆ)ಯನ್ನು ಬ್ಲೀಚಿಂಗ್ನಿಂದ ತೆಗೆಯಬಹುದು.
ವಯೋಸಹಜ ಎನಾಮೆಲ್ ಸವೆತ ಕಡಿಮೆಯಾಗಿ, ಹಲ್ಲಿನ ಕಳೆಗುಂದುತ್ತದೆ.
ಬಹಳಷ್ಟು ಕಳೆಗುಂದಿದ ಹಲ್ಲಿಗೆ ಕ್ಯಾಪ್/ ವಿನೆರ್ ಚಿಕಿತ್ಸೆ ಪರಿಣಾಮಕಾರಿ.
ಸಾಮಾನ್ಯ/ಸಮಸ್ಯೆರಹಿತ ಹಲ್ಲುಗಳಿಗೆ ಹಲ್ಲಿನ ಸ್ವಚ್ಛತೆಯೇ ಸಾಕು.
ದಿನಕ್ಕೆರಡು ಬಾರಿ ಬ್ರಷ್ ಮಾಡುವುದರಿಂದ ಹಲ್ಲಿನ ಮೇಲೆ ಪ್ಲ್ಯಾಕ್ ಜಮಾವಣೆ ತಪ್ಪಿಸಬಹುದು.
ಕಲೆ ಕೂರದಂತಿರಲು ಹೆಚ್ಚು ಕಲೆ ಹಚ್ಚುವ ಆಹಾರ, ಪಾನೀಯಗಳನ್ನು ಕಡಿಮೆ ಬಳಸಿ. ಪ್ರತಿಸಾರಿ ಬಳಕೆ ನಂತರ ನೀರಿನಿಂದ ಬಾಯಿ ಮುಕ್ಕಳಿಸಿ.
ಹೆಚ್ಚು ಕಲೆ ಕೂರುವಂತೆ ಮಾಡುವ ಧೂಮಪಾನ, ಗುಟ್ಕಾಗಳಿಂದ ದೂರವಿರಿ.
ಆರೋಗ್ಯವಾಗಿರುವ ಹಲ್ಲುಗಳನ್ನು ಮತ್ತಷ್ಟು ಬಿಳುಪಾಗಿಸಲು ಅಡ್ಡ ಮಾರ್ಗ ಅನುಸರಿಸದಿರಿ.
ಹಲ್ಲಿನ ಸ್ವಚ್ಛತೆ ವೈದ್ಯರಿಂದ ವರ್ಷಕ್ಕೊಮ್ಮೆ ಸಾಕು. ಬದಲಿಗೆ ತಿಂಗಳಿಗೆ/ 2-3 ತಿಂಗಳಿಗೆ ಪದೇ-ಪದೇ ಮಾಡಿಸುವುದು ಹುಚ್ಚು ಭ್ರಮೆ.
ಹೆಚ್ಚು ಹೊತ್ತು ಬ್ರಷ್ ಮಾಡುವುದರಿಂದಾಗಲಿ, ಹೆಚ್ಚು ಒತ್ತಿ ಬ್ರಷ್ ಮಾಡುವುದರಿಂದಾಗಲಿ, ಹೆಚ್ಚು ಪೇಸ್ಟ್ ಬಳಸುವುದರಿಂದಾಗಲಿ ಹಲ್ಲು ಹೊಳೆಯೋಲ್ಲ. ಬದಲಿಗೆ ಹಲ್ಲು ಸವೆಯುತ್ತದೆ.
ಎಷ್ಟೇ ಬ್ರಷ್ ಮಾಡಿದರೂ ಹಲ್ಲಿನ ಕಲೆ ಹೋಗದಿದ್ದಲ್ಲಿ ದಂತ ವೈದ್ಯರನ್ನು ಕಂಡು ಸಮಸ್ಯೆಗೆ ಸೂಕ್ತ ಚಿಕಿತ್ಸೆ ಪಡೆಯಬಹುದು.
- ಡಾ.ಕೆ.ವಿ. ಸಂತೋಷ್ ಹೊಳಲ್ಕೆರೆ