

ಕಾರಣಗಳು ಏನೇ ಇರಲಿ, ಸೊಂಟ ನೋವು ಎಲ್ಲರನ್ನೂ ಕಾಡುತ್ತೆ. ನಿಮಿಷವೂ ಕೂರದೇ ಕೆಲಸ ಮಾಡುವ ಹೆಣ್ಣು ಮಕ್ಕಳೆಂದರೆ ಈ ನೋವಿಗೆ ಪ್ರೀತಿ. ಬಸುರಿ, ಬಾಣಂತನದಲ್ಲೂ ಇದರ ಕಾಟ ತಪ್ಪದು. ಇದಕ್ಕೆ ಕಾರಣಗಳೇನು? ಏನು ಮಾಡಿದರೆ ಒಳಿತು? ಏನು ಮಾಡಬಾರದು? ಹೀಗೊಂದಿಷ್ಟು ಸಲಹೆ...
ಇವೆಲ್ಲ ಬೇಡ...
ಅವರೆ ಕಾಳುಗಳು, ಬಟಾಣಿ, ಆಲೂಗಡ್ಡೆ, ಅಲಸಂದೆ, ಹುರುಳಿಗಳನ್ನು ಹೆಚ್ಚು ತಿನ್ನುವುದು.
ಹೆಚ್ಚು ಏರಿಳಿತಗಳಿರುವಂಥ ಪ್ರದೇಶದಲ್ಲಿ ನಡೆದಾಡುವುದು.
ಅತಿ ಭಾರ ಎತ್ತುವುದು.
ಅತಿ ವ್ಯಾಯಾಮ ಹಾಗೂ ಮೈಥುನ.
ನಿರಂತರವಾಗಿ ರಾತ್ರಿ ನಿದ್ರೆಗೆಡುವುದು.
ದೇಹದ ತೂಕ ಹೆಚ್ಚುವುದರಿಂದ...
ಹೆಚ್ಚಾಗಿ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡುವುದು.
ಹೇಗಿರುತ್ತೆ ನೋವು?
ಕೂತು ಏಳುವಾಗ ಮತ್ತು ಮಲಗಿ ಏಳುವಾಗ ನೋವು.
ದೇಹವನ್ನು ಬಗ್ಗಿಸಲು ಕಷ್ಟವಾಗುತ್ತದೆ.
ಹಿಡಿದಿರುವ ಹಾಗೆ ಮತ್ತು ಚುಚ್ಚಿದ ಹಾಗೆ ನೋವಿರುತ್ತದೆ.
ಕೆಲವೊಮ್ಮೆ ಮುಟ್ಟಿದರೂ ನೋವು ಹೆಚ್ಚಾಗುತ್ತದೆ.
ವಿಶೇಷವಾಗಿ 40-50 ವರ್ಷದ ನಂತರ ಮಹಿಳೆಯರನ್ನು ಇದು ಕಾಡುತ್ತದೆ.
ಏನು ಮಾಡಿದರೆ ಒಳಿತು?
50 ಗ್ರಾಂ ಎಳ್ಳೆಣ್ಣೆಗೆ 5 ಗ್ರಾಂ ಪಚ್ಚಕರ್ಪೂರ ಸೇರಿಸಿ ನಾಲ್ಕು ಬೆಳ್ಳುಳ್ಳಿ ಪಲುಕುಗಳನ್ನು ಜಜ್ಜಿ ಹಾಕಿ ಬಿಸಿಮಾಡಿ. ತುಸು ಬೆಚ್ಚಗಿರುವಾಗ ಸೊಂಟದ ಮೇಲೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ಸ್ನಾನ ಮಾಡಿ. ಈ ರೀತಿ 5 ದಿನಗಳು ಮಾಡಿ.
ತುಂಬೆ ಬೇರಿನ ಕಷಾಯದಲ್ಲಿ ಹಿಪ್ಪಲಿ ಚೂರ್ಣ ಜೇನುತುಪ್ಪ ಒಂದು ಚಮಚ ಸೇರಿಸಿ ಸೇವಿಸುವುದರಿಂದ ಸೊಂಟ ನೋವು ಕಡಿಮೆಯಾಗುತ್ತದೆ. ಈ ರೀತಿಯಾಗಿ ದಿನಕ್ಕೆ 2 ಹೊತ್ತು, 2 ವಾರಗಳವರೆಗೆ ಮಾಡಬೇಕು.
ಸಾಕಷ್ಟು ಅಳಲೆಕಾಯಿ ಸಿಪ್ಪೆಯ ಕಷಾಯಕ್ಕೆ ನಾಲ್ಕು ಮಿ.ಲೀ. ಹಸಿ ಶುಂಠಿ ರಸ, 8 ಮಿ.ಲೀ. ಹರಳೆಣ್ಣೆಯನ್ನು ಸೇರಿಸಿ ದಿನಕ್ಕೆರಡು ಬಾರಿ 3-5 ದಿನಗಳವರೆಗೆ ಸೇವಿಸಿ.
ಒಂದು ಚಮಚ ಒಣಶುಂಠಿ ಚೂರ್ಣದ ಕಾಲು ಲೋಟ ಕಷಾಯ ಮಾಡಿ ಅದಕ್ಕೆ 15 ಮಿ.ಲೀ. ಶುದ್ಧ ಹರಳೆಣ್ಣೆ ಸೇರಿಸಿ ಕುಡಿಯಿರಿ. ಈ ರೀತಿಯಾಗಿ ದಿನಕ್ಕೊಂದು ಬಾರಿಯಂತೆ 3-4 ವಾರ ತೆಗೆದುಕೊಳ್ಳಿ.
ಸೊಂಟ ನೋವಿದ್ದರೆ ಮಲಗಲು ಚಾಪೆ ಅಥವಾ ಜಮಖಾನವನ್ನು ಮಾತ್ರ ಬಳಸಿ. ಗಟ್ಟಿ ಹಾಸಿಗೆ ಇದ್ದರೂ ನೋವು ಶಮನವಾಗುತ್ತದೆ.
ಮಿತ ವ್ಯಾಯಾಮ
ದೇಹಕ್ಕೆ ಹೆಚ್ಚು ಆಯಾಸವಾಗದಂತೆ ಮಿತ ವ್ಯಾಯಾಮ ಮಾಡಿ.
ಚೆನ್ನಾಗಿ ವಾಕ್ ಮಾಡಿ.
ಹೆಚ್ಚು ಭಾರ ಹೊರಬೇಡಿ.
ಸರಿಯಾದ ಭಂಗಿಯಲ್ಲಿ ಕೂರುವುದು ಹಾಗೂ ಮಲಗುವುದನ್ನು ರೂಢಿಸಿಕೊಳ್ಳಿ.
ಏನು ವರ್ಜ್ಯ?
ಹುರಿದ, ಕರಿದ ಪದಾರ್ಥಗಳು ಸೇವನೆ.
ಅತಿ ಮೆತ್ತಗಿನ ಹಾಸಿಗೆಯಲ್ಲಿ ಮಲಗುವುದು.
ಹೆಚ್ಚಾಗಿ ಬಗ್ಗಿ ಕೆಲಸ ಮಾಡುವುದು ಬೇಡ.