ಎಣ್ಣೆ ಮಾಸ್ಟರ್ ಸಂಶೋಧನಾ ಪ್ರಬಂಧ

ಎಣ್ಣೆ: ನಿಮ್ಮನ್ನು ಜಾರಿಬೀಳಿಸುವ ಈ ವಸ್ತುವಿನಿಂದ ಹಿಂದೆ ಆದ, ಮುಂದೆ ಆಗಲಿರುವ ವೈಯಕ್ತಿಕ ಹಾಗೂ ಸಾಮಾಜಿಕ ಸತ್ಪರಿಣಾಮಗಳು ಮತ್ತು ದುಷ್ಪರಿಣಾಮಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಸಂಗತಿಗಳನ್ನಾಧರಿಸಿದ ಘಟನೆಗಳ ಹಿನ್ನೆಲೆಯಲ್ಲಿ ಮೂರ್ಖತನ ನಿವಾರಣೆಗಾಗಿ ಒಂದು ಸಮಾಜೋ-ಸಾಂಸ್ಕೃತಿಕ ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ
ವಿ.ಸೂ: ಪ್ರಬಂಧ ರಚಿಸಿದವರು ಕುಡಿತದ ಕಡೆಯ ಘಟ್ಟದಲ್ಲಿರುವುದರಿಂದ ದೀರ್ಘವಾಗಿ ಬರೆಯುವ ತಾಳ್ಮೆ ಕಳೆದುಕೊಂಡಿರುತ್ತಾರೆ. ಹಾಗಾಗಿ 'ಬಿಟ್‌ಬಿಟ್' ಬರೆದಿದ್ದಾರೆ. ಅದನ್ನೇ ಪ್ರಬಂಧದಂತೆ ಓದಿಕೊಳ್ಳುವುದು ಮತ್ತು ಥೇಟ್ ಎಣ್ಣೆ ಏಟಿನಲ್ಲಿರುವಂತೆ ಈ ಪ್ರಬಂಧದ ಸಂಗತಿಗಳು ಕೂಡ ಎಲ್ಲೆಲ್ಲೋ ಅಡ್ಡಾದಿಡ್ಡಿ ಸಂಚರಿಸುತ್ತವೆ. ಅವುಗಳನ್ನು ಹಾಗೇ ಓಲಾಡುತ್ತ ಓದಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು.
ಕಾಲಡಿಗೆ ಬಿದ್ದ ಎಣ್ಣೆಗೆ ಮಾತ್ರ ನಮ್ಮನ್ನು ಜಾರಿಬೀಳಿಸುವ ಶಕ್ತಿಯಿದೆ ಎಂದು ಒಳ್ಳೆಯವರಷ್ಟೆ ನಂಬುತ್ತಾರೆ. ಇತ್ತೀಚೆಗೆ ಬಂದ ಅಧ್ಯಯನದ ಪ್ರಕಾರ ಪ್ರಪಂಚದಲ್ಲಿ ಒಳ್ಳೆಯವರ ಸಂಖ್ಯೆ ಕ್ಷೀಣಿಸುತ್ತಿದೆ. ಒಳ್ಳೆಯವರಿಗಿದು ಕಾಲವಲ್ಲ ಎಂದು ಕಲಿಯುಗದ ನಾನಾ ಘಟ್ಟದಲ್ಲಿ ದೊಡ್ಡ ದೊಡ್ಡ ದಾರ್ಶನಿಕರೆಲ್ಲ ಹೇಳಿದ್ದಾರೆ. ಅವರ ಮಾತನ್ನು ನಂಬದೆ ಇರುವುದು ತಪ್ಪಾಗುತ್ತದೆ.
ಕುಡಿಯುವುದು ಮನುಷ್ಯನ ವಂಶವಾಹಿಯಲ್ಲೇ ಇರುವ ಗುಣ. ಅದು ಜನ್ಮದಾರಭ್ಯ ನಮ್ಮ ಜೊತೆಗೆ ಬಂದಿರುತ್ತದೆ. ನಾವೆಲ್ಲರೂ ಹುಟ್ಟಿದಾಕ್ಷಣ ಏನನ್ನಾದರೂ, ಬಹುಶಃ ಹಾಲನ್ನು, ಕುಡಿದಿರುತ್ತೇವೆ. ಬೆಳೆಯುತ್ತ ಹೋದಹಾಗೆ ಹಳೆಯದನ್ನು ಮರೆಯುವುದು ಒಳ್ಳೆಯ ಲಕ್ಷಣವಲ್ಲ.
ರೂಪ ರಸ ಗಂಧ ಸ್ಪರ್ಶ ಸಂಖ್ಯಾ ಪರಿಮಾಣ ಪೃಥಕ್ತ್ವ ಸಂಯೋಗ ವಿಭಾಗ ಪರತ್ವಾಪರತ್ವ ಗುರುತ್ವ ದ್ರವತ್ವ ಸ್ನೇಹ ಶಬ್ದ... ಇತ್ಯಾದಿ ಕಣಾದರು ಹೇಳಿರುವ ಇಪ್ಪತ್ತನಾಲ್ಕು ಗುಣಗಳಲ್ಲಿ ಎರಡು ಬಾರಿ ಉಲ್ಲೇಖವಿರುವುದು ಪಾನೀಯದ್ದು ಮಾತ್ರ- ರಸ ಮತ್ತು ದ್ರವ. ಈ ಮಹತ್ವವನ್ನು ಎಲ್ಲರೂ, ವಿಶೇಷವಾಗಿ ಕುಡಿಯದವರು, ಗಮನಿಸಬೇಕು.
ಇಲ್ಲದ್ದನ್ನು ಇರುವಂತೆಯೂ, ಇರುವುದನ್ನು ಇಲ್ಲದಂತೆಯೂ ಭ್ರಮೆ ಹುಟ್ಟಿಸುವ ವಿಶೇಷ ಗುಣ ಆಲ್ಕೋಹಾಲಿಗಿದೆ. ಹಾಗಾಗಿ ಏನೂ ಇಲ್ಲದವರಿಗೆ ಕುಡಿತವು ಖುಷಿ ತರುವ ಸಂಗತಿಯಾಗಿಯೂ, ಎಲ್ಲವೂ ಇರುವವರಿಗೆ ಅವರ ಭ್ರಮೆಗಳ ಕಿಕ್ ಇಳಿಸುವ ಸಂಗತಿಯಾಗಿಯೂ ಕೆಲಸ ಮಾಡುತ್ತದೆ. ಆದರೆ ಇದಕ್ಕೆ ಭಿನ್ನವಾದ ಮತ್ತೊಂದು ಅಪಾಯಕಾರಿ ಆಯಾಮದಲ್ಲಿ ಆಲ್ಕೋಹಾಲು ಕೆಲಸ ಮಾಡುವ ಕುಖ್ಯಾತಿ ಪಡೆದಿದೆ. ಹಾಗಾಗಿ ಇನ್ನುಮುಂದಾದರೂ ಎಣ್ಣೆ ಬಾಟಲಿ ಮೇಲೆ ಒಂದು ವಾಕ್ಯ ಮುದ್ರಿಸುವುದನ್ನು ಕಡ್ಡಾಯ ಮಾಡಬೇಕು. 'ಎಚ್ಚರಿಕೆ: ಆಲ್ಕೋಹಾಲಿಗೆ ವಿರುದ್ಧ ಲಿಂಗಿಗಳನ್ನು ಅವರು ಇರುವುದಕ್ಕಿಂತ ಹೆಚ್ಚು ಆಕರ್ಷಕವಾಗಿ ತೋರಿಸುವ ಶಕ್ತಿಯಿದೆ' ಎಂದು. ಇದು ನನ್ನ ಅನುಭವದ ಮಾತೂ ಹೌದು. ನಾನು ಮದುವೆಗೆ ಮುಂಚೆ ನನ್ನ ಹೆಂಡತಿಯನ್ನು ಮೊದಲ ಬಾರಿ ನೋಡಿದಾಗ ಕುಡಿದಿದ್ದೆ. ಅದಕ್ಕಾಗಿ ಇವತ್ತಿಗೂ ಪಶ್ಚಾತ್ತಾಪ ಪಡುತ್ತಿದ್ದೇನೆ. ನನ್ನದು ಲವ್ ಅಟ್ ಫಸ್ಟ್ ಸೈಟ್ ವೈಲ್ ಐ ವಾಸ್ ಟೈಟ್.
ನೋವು ನಿಮ್ಮನ್ನು ಗಟ್ಟಿಯಾಗಿಸುತ್ತದೆ. ಕಣ್ಣೀರು ನಿಮ್ಮನ್ನು ಧೈರ್ಯವಂತನಾಗಿ ಮಾಡುತ್ತದೆ. ಹೃದಯ ಚೂರಾದರೆ ನೀವು ಇನ್ನಷ್ಟು ಜಾಣರಾಗುತ್ತೀರಿ ಎಂದು ಅನುಭವಸ್ಥರು ಹೇಳಿದ್ದಾರೆ. ಎಣ್ಣೆ ಈ ಎಲ್ಲ ಬಕ್ವಾಸು ಸಂಗತಿಗಳನ್ನೂ ಮರೆಸುತ್ತದೆ.
ನೀವು ಯಾರನ್ನಾದ್ರೂ ಪೂರ್ತಿ ಅರ್ಥಮಾಡಿಕೊಳ್ಳಬೇಕು ಎಂದಾದರೆ ಅವರ ಜೊತೆ ಕುಳಿತು ಚೆನ್ನಾಗಿ ಕುಡಿಯಬೇಕು. ಕುಡಿದಾಗ ಫಿಲ್ಟರ್ ಕಿತ್ತುಹೋಗುತ್ತದೆ ಎಂಬ ಸಾರ್ವಕಾಲಿಕ ಸತ್ಯವನ್ನು ಉಪೇಂದ್ರ ಹೇಳಿದ್ದಾರೆ. ಅವರ ಸಿನೆಮಾಗಳು ಯಾವಾಗಲೂ ಹಿಟ್ ಆಗುವುದರಿಂದ ಈ ಮಾತನ್ನು ಪ್ರಜೆಗಳು ನಂಬಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ.
ಯಾವ ಬ್ರ್ಯಾಂಡ್‌ನ ಮದ್ಯವನ್ನಾದರೂ ಕಣ್ಮುಚ್ಚಿ ನಂಬಬಹುದು. ಆದರೆ, ಈ ಸ್ನೇಹಿತರನ್ನು ಮಾತ್ರ ನಂಬಬಾರದು. ಅವರ ಬಗ್ಗೆ ನನಗೆ ಭಾರಿ ಬೇಸರವಿದೆ. ಕುಡಿದಾಗ ಒಬ್ಬರೂ ಕಂಟ್ರೋಲ್‌ನಲ್ಲಿ ಇರುವುದಿಲ್ಲ. ಮೊನ್ನೆ ರಾತ್ರಿ ನನ್ನನ್ನು ಮನೆಗೆ ಹೊತ್ಕೊಂಡು ಬರುವಾಗ ಮೂರು ಸಲ ಬೀಳಿಸಿದರು.
ನಾನೇನಾದರೂ ಕುಡಿದ ಮತ್ತಿನಲ್ಲಿ ಕಳೆದುಹೋದರೆ ನನ್ನ ಫೋಟೋವನ್ನು ಬಸ್‌ಸ್ಟ್ಯಾಂಡಿನಲ್ಲಿ ಅಂಟಿಸಬೇಡಿ, ಬಾರ್‌ಗಳಲ್ಲಿ ಅಂಟಿಸಿ ಎಂದು ಮನೆಯವರಿಗೆಲ್ಲ ಹೇಳಿಟ್ಟಿದ್ದೇನೆ. ಬಾರ್‌ನಲ್ಲಿ ಅಂಟಿಸಿದರೆ ಬಹಳ ಬೇಗ ಸ್ನೇಹಿತರಿಗೆ ನಾನು ನಾಪತ್ತೆಯಾಗಿರುವ ವಿಷಯ ಗೊತ್ತಾಗುತ್ತದೆ. ಅವರ ಬಳಿ ತುಂಬಾ ಸಾಲ ಮಾಡಿರುವುದರಿಂದ ಬೇಗನೆ ಹುಡುಕುತ್ತಾರೆ ಕೂಡ.
ಕುಡಿದು ವಾಹನ ಚಲಾಯಿಸಬಾರದು ಎಂಬುದು ನನ್ನ ಅನುಭವದ ಮಾತು. ರೋಡ್‌ಹಂಪ್‌ನಲ್ಲಿ ಗಾಡಿ ಜಿಗಿದಾಗ ಕುಡಿದಿದ್ದು ತುಳುಕಿ ಹೊರಚೆಲ್ಲುವ ಸಾಧ್ಯತೆಯಿರುತ್ತದೆ.
ಮದ್ಯಪಾನದ ಬಗ್ಗೆ ಬಹಳ ಜನ ಬಹಳ ಒಳ್ಳೆಯ ಮಾತುಗಳನ್ನು ಹೇಳಿದ ದಾಖಲೆಗಳಿವೆ. ಅವುಗಳಲ್ಲಿ ನನಗಿಷ್ಟವಾದ್ದು- ವೈನ್‌ನಲ್ಲಿ ವಿಸ್‌ಡಂ (ಜಾಣತನ) ಇದೆ, ಬಿಯರ್‌ನಲ್ಲಿ ಶಕ್ತಿಯಿದೆ ಮತ್ತು ನೀರಿನಲ್ಲಿ ಬ್ಯಾಕ್ಟೀರಿಯಾ ಇದೆ.
ನೀವು ಕುಡಿತ, ಸಿಗರೇಟು ಹಾಗೂ ಹುಡುಗಿಯರು ಈ ಮೂರನ್ನೂ ಬಿಟ್ಟರೆ ಹೆಚ್ಚು ಕಾಲ ಬದುಕುತ್ತೀರಿ ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಹೀಗೆ ಮಾಡಿದಾಗ ನಾವೇನೂ ಜಾಸ್ತಿ ಬದುಕುವುದಿಲ್ಲ, ಹಾಗೆ ಅನ್ನಿಸುತ್ತದೆ ಅಷ್ಟೆ. 'ಇನ್ನೂ ಬದುಕು ಮುಗಿದಿಲ್ವಾ?'
ಒಬ್ಬ ಬಾರ್‌ಟೆಂಡರ್ ಹೇಳಿದ ಘಟನೆಯಿದು.
ಕುಡುಕನೊಬ್ಬ ಬಾರ್‌ನಿಂದ ಹೊರಬಿದ್ದು ಇಬ್ಬರು ಪೂಜಾರಿಗಳ ಬಳಿ ಹೋದ. ಒಬ್ಬನೆದುರು ನಿಂತು 'ನಾನು ದೇವರು' ಅಂದ. ಪೂಜಾರಿ 'ಅಲ್ಲ, ನಾನು ದೇವರು' ಅಂದ. ಕುಡುಕ ಎರಡನೇ ಪೂಜಾರಿ ಎದುರು ನಿಂತು 'ನಾನು ದೇವರು, ಕೈಮುಗಿ' ಅಂದ. ಪೂಜಾರಿ 'ಅಲ್ಲ, ನಾನು ದೇವರು' ಅಂದ.
ಕುಡುಕನಿಗೆ ಸಿಟ್ಟು ಬಂತು. ಬನ್ನಿ ಪ್ರೂವ್ ಮಾಡ್ತೀನಿ ಎಂದು ಅವರಿಬ್ಬರನ್ನೂ ಬಾರಿಗೆ ಎಳೆದುಕೊಂಡು ಬಂದ.
ಮೂವರೂ ಕೌಂಟರಿನ ಎದುರು ಬರುತ್ತಿದ್ದಂತೆ ಬಾರ್‌ಟೆಂಡರ್ ಕೇಳಿದ, 'ಅಯ್ಯೋ ದೇವರೆ, ನೀನು ಮತ್ತೆ ಬಂದ್ಯಾ?'
ಒಬ್ಬ ಪ್ರೊಫೆಸರ್, ಒಬ್ಬ ಫೋಟೋಗ್ರಾಫರ್ ಹಾಗೂ ಒಬ್ಬ ಮಾರ್ವಾಡಿ ಬಾರ್‌ಗೆ ಹೋಗಿ ಒಂದೊಂದು ಬಿಯರ್ ಆರ್ಡರ್ ಮಾಡಿದರು. ಗ್ಲಾಸು ಭರ್ತಿಯಾಗುತ್ತಿದ್ದಂತೆ ಮೂವರ ಗ್ಲಾಸಿನೊಳಗೂ ಒಂದೊಂದು ನೊಣ ಬಂದು ಬಿತ್ತು.
ಮೊದಲು ಪ್ರೊಫೆಸರ್ ನೊಣ ಎತ್ತಿ ಆಚೆ ಹಾಕಿ ಏನೂ ಆಗಿಲ್ಲ ಎಂಬಂತೆ ಗ್ಲಾಸು ಬಾಯಿಗಿಟ್ಟ. ಫೋಟೋಗ್ರಾಫರ್ ಕೂಡ ಹಾಗೇ ಮಾಡಿದ. ಮಾರ್ವಾಡಿ ಗ್ಲಾಸ್ ಎತ್ತಿಕೊಂಡು ನೊಣ ಕಂಡಾಕ್ಷಣ ಕೆಂಡಾಮಂಡಲನಾದ. ಇವನೇನೋ ಗಲಾಟೆ ಮಾಡ್ತಾನೆ ಅಂತ ಇಬ್ಬರೂ ಹೆದರಿಕೆಯಿಂದ ಅವನನ್ನೇ ನೋಡುತ್ತಿದ್ದರು. ಮಾರ್ವಾಡಿ ನೊಣ ಎತ್ತಿ ಗ್ಲಾಸಿನ ಮೇಲೆ ಹಿಡಿದು ಕಿರುಚತೊಡಗಿದ, 'ಉಗಿ ಮಗನೇ ಉಗಿ, ಕುಡಿದಿದ್ನೆಲ್ಲ ಉಗಿ ಯೂ ಬಾಸ್ಟರ್ಡ್!'
ಬ್ರಿಟನ್‌ನಲ್ಲಿ ಬಿಯರ್ ಫೆಸ್ಟಿವಲ್ ನಡೆಯುತ್ತಿತ್ತು. ಸಂಜೆಯಾಗುತ್ತಿದ್ದಂತೆ ನಾಲ್ವರು ಬಿಯರ್ ಕಂಪನಿಗಳ ಮಾಲಿಕರು ಒಟ್ಟಿಗೇ ಹೋಗಿ ಬಿಯರ್ ಕುಡಿಯಲು ನಿರ್ಧರಿಸಿದರು.
ಸರ್ವರ್ ಬಂದ. ಕರೋನಾ ಬಿಯರ್ ಮಾಲೀಕ ಹೇಳಿದ, 'ನಂಗೆ ಜಗತ್ತಿನ ನಂ.1 ಬಿಯರ್ ಕರೋನಾ ಕೊಡು.'
ಬಡ್‌ವೈಸರ್ ಬಿಯರ್ ಮಾಲೀಕ ಹೇಳಿದ, 'ನಂಗೆ ಜಗತ್ತಿನ ನಂ.1 ಬಿಯರ್ ಬಡ್‌ವೈಸರ್ ಕೊಡು'.
ಫೋಸ್ಟರ್ ಬಿಯರ್ ಮಾಲೀಕ ತಾನೇನು ಕಮ್ಮಿ ಎಂಬಂತೆ, 'ನಂಗೆ ಜಗತ್ತಿನ ನಂ.1 ಬಿಯರ್ ಫೋಸ್ಟರ್ ಕೊಡು' ಎಂದ.
ಅವರ ಜೊತೆಗಿದ್ದ ಕಿಂಗ್‌ಫಿಶರ್ ಮಾಲೀಕ ವಿಜಯ್ ಮಲ್ಯ ಹೇಳಿದರು, 'ನಂಗೊಂದು ಕೋಕ್ ಕೊಡು'. ಸರ್ವರ್‌ಗೆ ಆಶ್ಚರ್ಯವಾಯಿತು. ಆದರೂ ತಂದುಕೊಟ್ಟ.
ಉಳಿದ ಮೂವರು ಕೇಳಿದರು, 'ಯಾಕೆ ಮಿಸ್ಟರ್ ಮಲ್ಯ, ಕೋಕ್ ಕುಡೀತಿದ್ದೀರಿ?'
ಮಲ್ಯ ಹೇಳಿದರು, 'ನೀವ್ಯಾರೂ ಬಿಯರ್ ಕುಡಿಯೋದಿಲ್ಲ ಅಂದ್ರೆ ನಾನೊಬ್ಬ ಯಾಕೆ ಕುಡೀಲಿ ಅಂತ!'
(ಮಲ್ಯರ ಪ್ರಕಾರ ಬಿಯರ್ ಅಂದ್ರೆ ಕಿಂಗ್‌ಫಿಶರ್)
ಬಹಳ ಹಿಂದೆ ನಾನು ಹೈಸ್ಕೂಲ್‌ನಲ್ಲಿ ಕೆಮೆಸ್ಟ್ರಿ ಪಾಠ ಮಾಡುತ್ತಿದ್ದೆ. ಆಗಿನ ಸಿಲಬಸ್‌ನಲ್ಲಿ ಕುಡಿತದ ದುಷ್ಪರಿಣಾಮಗಳ ಬಗ್ಗೆ ಒಂದು ಪಾಠವಿತ್ತು. ನಾನು ಪ್ರಾಕ್ಟಿಕಲ್ ಮನುಷ್ಯ. ಪ್ರಯೋಗದ ಮೂಲಕ ವಿದ್ಯಾರ್ಥಿಗಳಿಗೆ ಹೇಳಲು ಒಂದು ಬಾಟಲ್ ವಿಸ್ಕಿಯನ್ನು ಶಾಲೆಗೆ ತೆಗೆದುಕೊಂಡು ಹೋದೆ.
ಮೊದಲು ಒಂದು ಗಾಜಿನ ಫ್ಲಾಸ್ಕ್‌ನಲ್ಲಿ ನೀರು ಹಾಕಿದೆ. ಅದರೊಳಗೊಂದು ಹುಳು ಹಾಕಿದೆ. ಹುಳು ಹಾಯಾಗಿ ಈಜತೊಡಗಿತು.
ನಂತರ ಮತ್ತೊಂದು ಫ್ಲಾಸ್ಕ್‌ನಲ್ಲಿ ವಿಸ್ಕಿ ಸುರಿದೆ. ಅದರೊಳಗೆ ಇನ್ನೊಂದು ಹುಳು ಹಾಕಿದೆ. ಅದು ಸ್ವಲ್ಪ ಹೊತ್ತು ಒದ್ದಾಡಿ ಪ್ರಾಣ ಬಿಟ್ಟಿತು.
ಮಕ್ಕಳೇ, ನಿಮಗೆ ಇದರಿಂದ ಏನು ತಿಳಿಯಿತು? ಎಂದು ಕೇಳಿದೆ. ಮುಂದಿನ ಬೆಂಚ್‌ನಲ್ಲೇ ಕುಳಿತಿದ್ದ ಒಬ್ಬ ಹೇಳಿದ. 'ಸರ್, ವಿಸ್ಕಿ ಕುಡಿಯೋದ್ರಿಂದ ನಮ್ಮ ಹೊಟ್ಟೆಯಲ್ಲಿ ಹುಳು ಆಗೋದಿಲ್ಲ'.
ಬೆಂಗಳೂರಿನ ಬಾರು. ಅಮೆರಿಕನ್ ಒಬ್ಬ ಬಂದು ಎಲ್ಲರಿಗೂ ಕೇಳುವಂತೆ ಘೋಷಿಸಿದ. 'ಯಾರಾದ್ರೂ ಒಂದಾದ ಮೇಲೊಂದು 10 ಪಿಂಟ್ ಕಿಂಗ್‌ಫಿಶರ್ ಬಿಯರ್ ಕುಡಿದ್ರೆ 500 ಡಾಲರ್ ಕೊಡ್ತೀನಿ. ಯಾರಾದ್ರೂ ಇದ್ದೀರಾ?'
ಯಾರೂ ಮಾತಾಡಲಿಲ್ಲ. ಮೂಲೆಯಲ್ಲಿ ಕುಳಿತಿದ್ದ ಒಬ್ಬ ಪ್ರೊಫೆಷನಲ್ ಕುಡುಕನಂತೂ ಇದನ್ನು ಕೇಳಿ ಎದ್ದುಹೋಗಿಬಿಟ್ಟ. ಆದರೆ ಅರ್ಧ ತಾಸಿನ ನಂತರ ವಾಪಸ್ ಬಂದ. 'ಈಗಲೂ ನಿನ್ನ ಚಾಲೆಂಜ್ ಹಾಗೇ ಇದೆಯಾ?' ಅಮೆರಿಕನ್ನನನ್ನು ಕೇಳಿದ.
'ಇದೆ' ಎಂದ ಅಮೆರಿಕನ್, ಬಾರ್‌ಟೆಂಡರ್‌ಗೆ 10 ಪಿಂಟ್ ತಂದಿಡಲು ಹೇಳಿದ. ಅವನು ಸಾಲಾಗಿ ತಂದಿಟ್ಟ. ಪ್ರೊಫೆಷನಲ್ ಕುಡುಕ ಒಂದಾದ ಮೇಲೊಂದರಂತೆ ಗಟಗಟ ಎಲ್ಲವನ್ನೂ ಕುಡಿದು ಮುಗಿಸಿದ. ಎಲ್ಲರೂ ಅವಾಕ್ಕಾಗಿ ನೋಡಿದರು. ಅಮೆರಿಕದ ಬಿಳಿಯ 500 ಡಾಲರ್ ತೆಗೆದಿಟ್ಟ.
ಹೋಗುವ ಮುನ್ನ ಕೇಳಿದ, 'ಸುಮ್ನೆ ಕುತೂಹಲಕ್ಕೆ ಕೇಳ್ತೀನಿ, ಅದೆಲ್ಲಿಗೋ ಹೋಗಿ ಬಂದ್ರಲ್ಲ, ಎಲ್ಲಿಗೆ?'
'ನಂಗೆ ಡೌಟಿತ್ತು. ಒಂದಾದ ಮೇಲೊಂದು 10 ಪಿಂಟ್ ಕುಡಿಯೋಕಾಗುತ್ತಾ ಅಂತ ಪಕ್ಕದ ಬಾರಿಗೆ ಹೋಗಿ ಟೆಸ್ಟ್ ಮಾಡಿಕೊಂಡು ಬಂದೆ!'
ನಾನು ದಿನಾ ಕೂತು ಕುಡಿಯುವ ಬಾರಿನಲ್ಲಿ ನನ್ನ ಕಣ್ಣೆದುರೇ ನಡೆದ ಘಟನೆಯಿದು.
ಒಂದಿನ ಒಬ್ಬ ಬಂದು ಬಾರ್‌ಟೆಂಡರ್‌ಗೆ 'ನನ್ನ ಲೆಕ್ಕದಲ್ಲಿ ಎಲ್ಲರಿಗೂ ಬಿಯರ್ ಕೊಡು, ನಿಂಗೂ' ಅಂದ. ಬಾರ್‌ಟೆಂಡರ್ ಎಲ್ಲರಿಗೂ ಕುಡಿಸಿದ. ಆದರೆ, ಆ ಕುಡುಕನ ಬಳಿ ದುಡ್ಡೇ ಇರಲಿಲ್ಲ. ಬಾರ್‌ಟೆಂಡರ್ ಚೆನ್ನಾಗಿ ತದುಕಿ ಕಳಿಸಿದ.
ಮರುದಿನ ಮತ್ತೆ ಬಂದ ಆತ, 'ನನ್ನ ಲೆಕ್ಕದಲ್ಲಿ ಎಲ್ಲರಿಗೂ ಬಿಯರ್ ಕೊಡು, ನಿಂಗೂ' ಅಂದ. ಇವತ್ತು ದುಡ್ಡಿರಬಹುದು ಎಂದು ಬಾರ್‌ಟೆಂಡರ್ ಎಲ್ಲರಿಗೂ ಕುಡಿಸಿದ. ಮತ್ತೆ ಅದೇ ಕತೆ. ಅವನ ಬಳಿ ದುಡ್ಡಿರಲಿಲ್ಲ. ತದುಕಿ ಕಳಿಸಿದ.
ಮರುದಿನವೂ ಅವನು ಬಂದ. 'ನನ್ನ ಲೆಕ್ಕದಲ್ಲಿ ಎಲ್ಲರಿಗೂ ಬಿಯರ್ ಕೊಡು. ಆದ್ರೆ ನಿಂಗೆ ಮಾತ್ರ ಇಲ್ಲ' ಅಂದ. ಬಾರ್‌ಟೆಂಡರ್‌ಗೆ ಆಶ್ಚರ್ಯ. 'ಅದ್ಯಾಕೆ?' ಅಂದ.
ಕುಡುಕ ಹೇಳಿದ, 'ನೀನು ಕುಡಿದ್ಮೇಲೆ ಸಿಕ್ಕಾಪಟ್ಟೆ ಗಲಾಟೆ ಮಾಡ್ತೀಯ!'
ನನ್ನ ಪಾಡಿಗೆ ನಾನು ಒಬ್ಬನೇ ಕೂತು ಗುಂಡು ಹಾಕುತ್ತಿದ್ದೆ. ಸಕತ್ ಟೈಟಾಗಿದ್ದ ಆಸಾಮಿಯೊಬ್ಬ ಮುಗ್ಗರಿಸುತ್ತ ಬಂದು ಕೌಂಟರ್ ಎದುರು ನಿಂತು ಒನ್ ಬಿಯರ್ ಪ್ಲೀಸ್ ಅಂದ. ಬಾರ್‌ಟೆಂಡರ್ 'ಇಲ್ಲ ಸರ್, ಈಗಾಗಲೇ ನೀವು ತುಂಬಾ ಕುಡಿದಿದ್ದೀರಿ. ನಾನು ಕೊಡೋಕಾಗಲ್ಲ' ಅಂದ. ಆಸಾಮಿ ಹೋದ. ಹತ್ತು ನಿಮಿಷ ಬಿಟ್ಟು ಸೈಡ್ ಡೋರ್‌ನಲ್ಲಿ ಒಳಗೆ ಬಂದು ಮತ್ತೆ ಕೌಂಟರ್‌ನಲ್ಲಿ ನಿಂತು ಒನ್ ಬಿಯರ್ ಪ್ಲೀಸ್ ಅಂದ. ಬಾರ್‌ಟೆಂಡರ್ ಮೊದಲು ಹೇಳಿದಂತೆ 'ಇಲ್ಲ ಸರ್, ನೀವು ಈಗಾಗಲೇ ತುಂಬಾ ಕುಡಿದಿದ್ದೀರಿ' ಅಂದ. ಹೊರಗೆ ಹೋದ ಆಸಾಮಿ ಮತ್ತೆ ಹತ್ತು ನಿಮಿಷ ಬಿಟ್ಟು ಹಿಂಬಾಗಿಲಿನಲ್ಲಿ ಬಂದು ಕೌಂಟರ್ ಎದುರು ನಿಂತು ಒನ್ ಬಿಯರ್ ಪ್ಲೀಸ್ ಅಂದ. 'ಇಲ್ಲ ಸರ್, ನೀವು ತುಂಬಾ ಟೈಟಾಗಿದ್ದೀರಿ. ನಾನು ಕೊಡೋಕಾಗಲ್ಲ' ಅಂದ ಬಾರ್‌ನವನು. ಕುಡುಕ ಅವನನ್ನು ವಿಚಿತ್ರವಾಗಿ ನೋಡಿ ಕೇಳಿದ, 'ಮೈ ಗಾಡ್, ಎಷ್ಟು ಬಾರ್‌ನಲ್ಲಿ ನೀನು ಕೆಲಸ ಮಾಡ್ತೀಯ?'
ಅನುಭವಾಮೃತ
ಕುಡಿತದ ದುಷ್ಪರಿಣಾಮಗಳ ಬಗ್ಗೆ ತುಂಬಾ ಓದುತ್ತಿದ್ದೆ. ಕ್ರಮೇಣ ಹೆದರಿಕೆಆಗತೊಡಗಿತು. ಕೊನೆಗೂ ಒಂದು ದಿನ ಗಟ್ಟಿ ಮನಸ್ಸು ಮಾಡಿ ಓದುವುದನ್ನು ನಿಲ್ಲಿಸಿಬಿಟ್ಟೆ.
ನನ್ನ ಒಂದು ಭಾಗ 'ಈ ರೀತಿ ಕುಡಿಯೋದು ಒಳ್ಳೇದಲ್ಲ' ಎನ್ನುತ್ತದೆ. ಇನ್ನೊಂದು ಭಾಗ 'ಅವ್ನ ಮಾತು ಕೇಳ್ಬೇಡ, ಟೈಟಾಗಿದಾನೆ' ಎನ್ನುತ್ತದೆ. ಬಡ್ಡೀಮಗಂದು, ಜೀವನಪೂರ್ತಿ ಗೊಂದಲ.
ನಾವೇನೂ ಕುಡುಕರಲ್ಲ. ವೀಕೆಂಡ್‌ನಲ್ಲಿ ಮಾತ್ರ ಕುಡಿಯುತ್ತೇವೆ. ಅದನ್ನು ಬಿಟ್ಟರೆ ವಿಶೇಷ ಸಂದರ್ಭದಲ್ಲಿ, ಖುಷಿಆದಾಗ ಮತ್ತು ಬೇಜಾರಾದಾಗ ಕುಡಿಯುತ್ತೇವೆ. ಸಾಮಾನ್ಯವಾಗಿ ಗುರುವಾರವನ್ನೂ ಇತ್ತೀಚೆಗೆ ವೀಕೆಂಡ್ ಎಂದೇ ಹೇಳಲಾಗುತ್ತಿದೆ.
ನನ್ನ ಗೆಳೆಯನ ಕುಡಿತದ ಚಟ ಹೇಗಾದರೂ ಬಿಡಿಸಬೇಕು. ಅದರ ಬಗ್ಗೆ ಅವನ ಜೊತೆ ಸೀರಿಯಸ್ಸಾಗಿ ಮಾತಾಡಬೇಕಿದೆ. ನಾಳೆ ಸಂಜೆ ಬಾರ್‌ನಲ್ಲಿ ಸಿಗಲು ಹೇಳಿದ್ದೇನೆ.
ಕುಡಿಯುವುದು ಒಳ್ಳೆಯದು. ಏಕೆಂದರೆ ಪ್ರಪಂಚದ ಯಾವುದೇ ಅದ್ಭುತ ಚಿಂತನೆ ಐಸ್‌ಕ್ರೀಂ ತಿನ್ನುವಾಗ ಹೊಳೆದ ಉದಾಹರಣೆಯಿಲ್ಲ.
ಆಲ್ಕೋಹಾಲು ಕುಡಿಯುವುದರಿಂದ ಯಾವುದೇ ಸಮಸ್ಯೆ ಪರಿಹಾರಆಗುವುದಿಲ್ಲ. ಹಾಲನ್ನು ಕುಡಿಯುವುದರಿಂದಲೂ ಆಗುವುದಿಲ್ಲ.
ಆಲ್ಕೋಹಾಲಿನಿಂದ ಕೆಟ್ಟದ್ದಾಗುತ್ತದೆ ಎಂಬುದು ನಂಬಲಸಾಧ್ಯ ಮಾತು. ವಿಜಯ್ ಮಲ್ಯ ಶ್ರೀಮಂತನಾಗಿದ್ದು ಕಿಂಗ್‌ಫಿಶರ್‌ನಿಂದ. ಎಲ್ಲಾ ಲಿಕ್ಕರ್ ದೊರೆಗಳೂ ಶ್ರೀಮಂತರಾಗಿದ್ದು ಮದ್ಯದಿಂದಲೇ.
ಒಂದು ದಿನಕ್ಕೆ 24 ಗಂಟೆ. ಒಂದು ಕೇಸ್‌ನಲ್ಲಿ 24 ಬಿಯರ್ ಟಿನ್. ಇದೇನು ಕಾಕತಾಳೀಯವೇ?
ಕುಡಿದಾಗ ನಾವು ಟೈಟಾಗುತ್ತೇವೆ. ಟೈಟಾದಾಗ ನಿದ್ದೆಗೆ ಜಾರುತ್ತೇವೆ. ನಿದ್ದೆಯಲ್ಲಿರುವಾಗ ಪಾಪ ಮಾಡಲು ಸಾಧ್ಯವಿಲ್ಲ. ಪಾಪ ಮಾಡದೇ ಇರುವುದರಿಂದ ಸ್ವರ್ಗಕ್ಕೆ ಹೋಗುತ್ತೇವೆ. ಹಾಗಾಗಿ ಕುಡಿದು ಸ್ವರ್ಗಕ್ಕೆ ಹೋಗೋಣ.
ವಿನ್‌ಸ್ಟನ್ ಚರ್ಚಿಲ್ ಹೇಳುತ್ತಿದ್ದರು: ಕುಡಿತ ನನ್ನಿಂದ ತೆಗೆದುಕೊಂಡಿರುವುದಕ್ಕಿಂತ ಹೆಚ್ಚಿನದನ್ನು ನಾನು ಕುಡಿತದಿಂದ ತೆಗೆದುಕೊಂಡಿದ್ದೇನೆ. ಇದು ನನ್ನ ಅನುಭವವೂ ಹೌದು.
ವಿಸ್ಕಿಯನ್ನು, ಇನ್ನಷ್ಟು ವಿಸ್ಕಿಯೂ ಸೇರಿದಂತೆ, ಯಾವುದರಲ್ಲಾದರೂ ಮಿಕ್ಸ್ ಮಾಡಿ ಕುಡಿಯಬಹುದು.
ಏಳು ಪೆಗ್ ಆದ ಮೇಲೂ ಹುಡುಗಿ ನಿಮಗೆ ಕೆಟ್ಟದಾಗಿಯೇ ಕಾಣಿಸುತ್ತಿದ್ದರೆ ಅವಳನ್ನು ಬಿಡುವುದು ಒಳ್ಳೆಯದು.
ಯಾವಾಗಲೂ ಇನ್ನೊಂದು ಪೆಗ್, ಇನ್ನೊಂದು ಗ್ಲಾಸು ಅಥವಾ ಇನ್ನೊಂದು ರೌಂಡ್‌ಗೆ ನಿಲ್ಲಿ. ಏನಾದರೂ ಆಗುವುದು ಆಗಲೇ.
ನಮ್ಮ ತಲೆಮಾರಿನ ಹುಡುಗಿಯರಿಗೆ ಅವರಮ್ಮನಂತೆ ರುಚಿಯಾಗಿ ಅಡುಗೆ ಮಾಡಲು ಬರೋದಿಲ್ಲ. ಆದರೆ ಅಪ್ಪನಿಗಿಂತ ಚೆನ್ನಾಗಿ ಕುಡಿಯಲು ಬರುತ್ತದೆ.
ಆಲ್ಕೋಹಾಲು ಜನರನ್ನು ಕೊಲ್ಲುತ್ತದೆ ನಿಜ. ಆದರೆ, ಅದರಿಂದಾಗಿ ಎಷ್ಟು ಜನ ಹುಟ್ಟಿದ್ದಾರೆ ಎಂದು ಯಾರೂ ಮಾತನಾಡುವುದೇ ಇಲ್ಲ!
ಎಣ್ಣೆಯೇ ಉತ್ತರ. ನನಗೆ ಪ್ರಶ್ನೆ ನೆನಪಿಲ್ಲ.
-ಕುಡಿಮಗನ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40063ಗೆ ಭೇಟಿನೀಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


