

ಅಯ್ಯೋ! ಇದ್ದಕ್ಕಿದ್ದಂತೆ ಎರಡ್ಮೂರು ಲೀಟರ್ನಷ್ಟು ರಕ್ತ ಕಾರಿದ. ನಾಡಿಯೂ ಸಿಗುತ್ತಿಲ್ಲ. ಉಸಿರೇ ನಿಂತು ಹೋಗುತ್ತಿದೆ. ಇನ್ನೇನು ಮುಗಿದೇ ಹೋಯಿತೆಂದು ಆತನ ಬಳಿಯಿದ್ದವರೆಲ್ಲ ಭಾವಿಸಿದ್ದರು.
ಆದರೆ ಹಾಗಾಗಲಿಲ್ಲ. ಕೂಡಲೇ ದೇವರಂತೆ ಬಂದ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅವನ ಪ್ರಾಣ ರಕ್ಷಿಸಿದರು. ಹೇಗೇ ಅಂತೀರಾ?
ಬೆಂಗಳೂರು ಮೂಲದ ರೋಗಿಯೊಬ್ಬರಿಗೆ 43 ವರ್ಷ. ತರಕಾರಿ ವ್ಯಾಪಾರಿ. ದೃಢಕಾಯ ಹೊಂದಿದ್ದ. ನಿತ್ಯ ಜಿಮ್ನಲ್ಲಿ ದೇಹ ದಂಡಿಸುತ್ತಿದ್ದ. ತಾನೆಂದೂ ಆಸ್ಪತ್ರೆ ಮೆಟ್ಟಿಲು ತುಳಿಯುವುದಿಲ್ಲ ಎಂದುಕೊಂಡಿದ್ದ. ಆದರೂ ತನ್ನ ಇರುವಿಕೆಯ ಪೂರ್ವಸೂಚನೆಯಿಲ್ಲದೆಯೇ ರೋಗವೊಂದು ವಕ್ಕರಿಸಿತ್ತು. ಪರಿಣಾಮ ಅರ್ಧ ಲೀಟರ್ಗೂ ಹೆಚ್ಚು ರಕ್ತ ಕಾರಿದ!
ಮನೆಯವರೆಲ್ಲ ಕೂಡಲೇ ಹತ್ತಿರವಿರುವ ಆಸ್ಪತ್ರೆಯೊಂದಕ್ಕೆ ಸಾಗಿಸಿದರೂ ಇರುವ ವೈದ್ಯರಿಂದ ಸೂಕ್ತ ಚಿಕಿತ್ಸೆ ದೊರೆಯಲಿಲ್ಲ. ಹಿರಿಯ ವೈದ್ಯರಿಗಾಗಿ ಕಾಯುವಷ್ಟರಲ್ಲೇ ಮತ್ತೊಮ್ಮೆ ಸುಮಾರು ಒಂದೂವರೆ ಲೀಟರ್ನಷ್ಟು ರಕ್ತ ವಾಂತಿಯಾಯಿತು. ಅಲ್ಲಿಗೆ ಸಂಪೂರ್ಣ ನಿತ್ರಾಣನಾದ. ದೇಹಸ್ಥಿತಿ ವಿಷಮಿಸಿತ್ತು. ಕೂಡಲೇ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪಿತ್ತಜನಕಾಂಗ ಹಾಳು
ಆಗ ರೋಗಿಯ ತಪಾಸಣೆ ನಡೆಸಿದ ಗ್ಯಾಸ್ಟ್ರೋಇಂಟಸ್ಟೈನ್ ಮತ್ತು ಲ್ಯಾಪ್ರೋಸ್ಕೋಪಿಕ್ ತಜ್ಞ ಡಾ. ಚಂದ್ರಮೌಳಿ, ತೀವ್ರ ರಕ್ತದೊತ್ತಡ ಮತ್ತು ನಾಡಿಮಿಡಿತವೂ ಕ್ಷೀಣಿಸುತ್ತಿದ್ದುದರಿಂದ ತುರ್ತು ಚಿಕಿತ್ಸೆ ಅಗತ್ಯವಾಗಿತ್ತು. ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಿ 8 ಯೂನಿಟ್ ರಕ್ತ ಹಾಕಿದರು. ನಂತರ ಆಂತರಿಕ ರಕ್ತಸ್ರಾವವನ್ನು ತಡೆಯಲು ಆತನಿಗೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಹೊಟ್ಟೆ ಮತ್ತು ಅನ್ನನಾಳಗಳ ರಕ್ತನಾಳಗಳಲ್ಲಿ ಉಂಟಾದ ಬಿರುಕಿನಿಂದ ಆಂತರಿಕ ರಕ್ತಸ್ರಾವ ಸಂಭವಿಸಿತ್ತು. ಇದು ಜೀವಕ್ಕೆರವಾಗಬಲ್ಲ ಅತ್ಯಂತ ಅಪಾಯಕಾರಿ ಪರಿಸ್ಥಿತಿ! ಬಾಯಿ ಮತ್ತು ಹೊಟ್ಟೆಯನ್ನು ಸಂಪರ್ಕಿಸುವ ಅನ್ನನಾಳದ ರಕ್ತನಾಳಗಳು ಅಸ್ವಾಭಾವಿಕವಾಗಿದ್ದವು. ನರಗಳು ತಳಭಾಗದಲ್ಲಿ ಹಿಗ್ಗಲ್ಪಟ್ಟಿದ್ದವು. ಜಠರದಲ್ಲಿ ರಕ್ತನಾಳದ ಬಿರುಕಿನಿಂದ ಅಥವಾ ಹೆಪ್ಪುಗಟ್ಟುವಿಕೆಯಿಂದ ಸಾಮಾನ್ಯ ರಕ್ತದ ಹರಿವು ನಿಂತಾಗ ರಕ್ತವು ಸಣ್ಣನಾಳಗಳಲ್ಲಿ ಹರಿಯತೊಡಗುತ್ತದೆ ಇದರಿಂದ ಸೋರಿಕೆ ಸಂಭವಿಸುತ್ತದೆ. ಈ ರೋಗಿಯ ವಿಷಯದಲ್ಲಿ ಹೇಳಬೇಕೆಂದರೆ, ಜಠರವು ಕುಗ್ಗುತ್ತ ಬಂದು ರಕ್ತಸ್ರಾವವನ್ನು ಉಂಟುಮಾಡಿತ್ತು.
ಯಶಸ್ವಿ ಶಸ್ತ್ರಚಿಕಿತ್ಸೆ
ಡಾ. ಚಂದ್ರಮೌಳಿ ಮತ್ತು ಅವರ ವೈದ್ಯರ ತಂಡವು ಮೊದಲು ರಕ್ತನಾಳಗಳಿಂದ ರಕ್ತ ಹರಿಯುವುದನ್ನು ತಡೆಗಟ್ಟಲು ತುರ್ತುಚಿಕಿತ್ಸೆ ನೀಡುವಲ್ಲಿ ಸಫಲವಾಯಿತು. ಎಂಡೋಸ್ಕೋಪ್ ಉಪಕರಣದ ಮೂಲಕ ರಕ್ತನಾಳದಲ್ಲಿ ಸಂಭವಿಸಿದ ಬಿರುಕನ್ನು ಗುರುತಿಸಿ, ಅವುಗಳನ್ನು ಬೇರ್ಪಡಿಸಿ ಎಲಾಸ್ಟಿಕ್ ಬ್ಯಾಂಡ್ ಸುತ್ತುವ ಮೂಲಕ ಸೋರುತ್ತಿದ್ದ ರಕ್ತವನ್ನು ತಡೆಯಿತು. ಶಸ್ತ್ರಚಿಕಿತ್ಸೆಯಾದ 6 ದಿನಗಳ ನಂತರ ರೋಗಿಯನ್ನು ಮನೆಗೆ ಕಳುಹಿಸಲಾಗಿದ್ದು ಈಗ ಆರೋಗ್ಯದಲ್ಲಿ ಉತ್ತಮ ರೀತಿಯ ಸುಧಾರಣೆ ಕಂಡುಬರುತ್ತಿದೆ. ರೋಗಿಯ ಜಠರದ ಸ್ಥಿತಿಯನ್ನು ಅನುಲಕ್ಷಿಸಿ ಔಷಧ ಮುಂದುವರಿಸಲಾಗುತ್ತಿದೆ.
now he is well.