

ಜೀವನವನ್ನು ನೀವು ಆಸ್ವಾದಿಸಬೇಕಾ? ಹಾಗಿದ್ದರೆ, ಸಕ್ಕರೆ ಕಡಿಮೆ ಸೇವಿಸಿ!
ನಮ್ಮ ಆಹಾರದಲ್ಲಿ ಸಕ್ಕರೆ ಹೆಚ್ಚು ಇದ್ದರೆ ದೇಹದ ತೂಕ ಹೆಚ್ಚುತ್ತೆ ಮತ್ತು ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಜಾಸ್ತಿ. ಇವೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಉಪ್ಪು ಮತ್ತು ಸಿಹಿ ಗ್ರಹಿಕೆ ನಾಲಗೆಯ ತುದಿಯಲ್ಲೇ ಇರುತ್ತದೆ. ಅದಕ್ಕೆ ಎಲ್ಲರಿಗೂ ಸಿಹಿ ತಿನಿಸು ಮತ್ತು ಉಪ್ಪಿನ ತಿಂಡಿಗಳು ಹೆಚ್ಚು ಇಷ್ಟವಾಗುತ್ತವೆ. ಸಮಾರಂಭ, ಪಾರ್ಟಿಗಳಲ್ಲಿ ಸಿಹಿ ತಿನಿಸು ಇದ್ದರೇನೆ ಕಳೆ. ಸಕ್ಕರೆ ತಿಂದ ತಕ್ಷಣ ದೇಹದ ಶಕ್ತಿಯ ಮಟ್ಟ ಬಹುಬೇಗನೆ ಏರಿಬಿಡುತ್ತದೆ. ಅದಕ್ಕೆ ಸಮಾರಂಭಗಳಲ್ಲಿ ಖುಷಿಯಿಂದ ಭಾಗಿಯಾಗಲು ಹಿಂದಿನ ಕಾಲದಿಂದ ಸಿಹಿತಿನಿಸುಗಳು ಶುರುವಾಯಿತೇನೊ! ಮಾದಕ ವಸ್ತು ಮೆದುಳಿನ ಯಾವ ಭಾಗವನ್ನು ಉತ್ತೇಜಿಸುತ್ತೋ, ಸಕ್ಕರೆ ಕೂಡ ಅದೇ ಭಾಗದ ಮೇಲೆ ಕೆಲಸ ಮಾಡುತ್ತದೆ. ಹಾಗಾಗಿ, ಸಿಹಿ ತಿನಿಸು ತಿಂದಷ್ಟೂ ಇನ್ನೂ ತಿನ್ನಬೇಕೆಂಬ ಆಸೆ.
ಎರಡು ಬಗೆಯ ಸಕ್ಕರೆ
1. ಹಣ್ಣು, ಕಬ್ಬು, ಜೇನುತುಪ್ಪ, ಮತ್ತು ಹಾಲಿನಲ್ಲಿ ಸಿಗುವ ಸ್ವಾಭಾವಿಕ ಸಕ್ಕರೆ. ದೇಹದ ಕೆಲಸ ಮಾಡುವ ಜೀವಕೋಶಗಳಿಗೆ ಮತ್ತು ಮೆದುಳಿಗೆ ನಿತ್ಯದ ಕೆಲಸ ಮಾಡಲು ಸಕ್ಕರೆ ಅತ್ಯಗತ್ಯ. ಅಕ್ಕಿ, ಗೋದಿ, ರಾಗಿ ಇವುಗಳಲ್ಲೂ ದೇಹಕ್ಕೆ ಬೇಕಾಗುವಷ್ಟು ಪ್ರಮಾಣದಲ್ಲಿ ಸಕ್ಕರೆ ಅಂಶ ಇರುತ್ತದೆ. ಇವುಗಳಿಂದ ಸಿಗುವ ಸಕ್ಕರೆಯೇ ದೇಹಕ್ಕೆ ಸಾಕೋ ಸಾಕು.
2. ಇನ್ನೊಂದು ಸಂಸ್ಕರಿಸಿದ ಸಕ್ಕರೆ. ಟೇಬಲ್ ಶುಗರ್ ಅಥವಾ ಸುಕ್ರೋಸ್. ಎರಡನೆಯದು ದೇಹಕ್ಕೆ ಖಾಲಿ ಕ್ಯಾಲೊರೀಸ್ ಒದಗಿಸುತ್ತದೆಯೆ ಹೊರತು ಅದರಿಂದ ಬೇರೆ ಯಾವ ರೀತಿಯ ಪೌಷ್ಟಿಕಾಂಶಗಳು ಅಥವಾ ಖನಿಜಾಂಶ ಸಿಗುವುದಿಲ್ಲ. ತೊಂದರೆ ಇರುವುದು ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ. ಕಾಫಿ, ಟೀ, ಸಿಹಿ ತಿನಿಸು, ಬಿಸ್ಕತ್ತು, ಚಾಕ್ಲೇಟ್, ಕೇಕ್, ತಂಪು ಪಾನೀಯ. ಇವೆಲ್ಲದರಲ್ಲಿರುವ 'ಸುಕ್ರೋಸ್' ಎಂಬ ಸಕ್ಕರೆ ಸೇವಿಸಿದರೆ ತೂಕ ತಾನಾಗಿಯೇ ಹೆಚ್ಚುತ್ತದೆ.
ಸುಕ್ರೋಸ್ ಏಕೆ ಹಾನಿಕಾರಕ?
ಇದನ್ನು ಸೇವಿಸಿದ ಕೂಡಲೇ ದೇಹದಲ್ಲಿ ಅರಗಿ, ಗ್ಲೂಕೋಸ್ ಆಗಿ ತಕ್ಷಣ ಪರಿವರ್ತನೆಗೊಂಡು, ರಕ್ತದ ಸಕ್ಕರೆ ಅಂಶವನ್ನು ಬಹಳ ಬೇಗ ಏರಿಸಿಬಿಡುತ್ತದೆ. ಆದ್ರೆ ನೈಸರ್ಗಿಕವಾಗಿ ಸಿಗುವ ಹಣ್ಣುಗಳಲ್ಲಿನ ಫ್ರಕ್ಟೋಸ್, ಹಾಲಿನಲ್ಲಿರುವ ಲ್ಯಾಕ್ಟೋಸ್ ಸಕ್ಕರೆಗಳು ನಿಧಾನವಾಗಿ ಗ್ಲೂಕೊಸ್ ಆಗಿ ಪರಿವರ್ತನೆಗೊಂಡು ರಕ್ತದ ಸಕ್ಕರೆ ಅಂಶವನ್ನು ಸಮತೋಲನದಲ್ಲಿಟ್ಟಿರುತ್ತದೆ. ಜಗತ್ತಿನ ಬೇರೆಲ್ಲೆಡೆಗಿಂತ ಭಾರತದಲ್ಲಿ ಸಂಸ್ಕರಿಸಿದ ಮತ್ತು ಪ್ಯಾಕೇಟ್ ಮಾಡಿದ ಪದಾರ್ಥಗಳು ಕಮ್ಮಿ ಬಳಕೆಯಲ್ಲಿದೆಯಾದರೂ ಇತ್ತೀಚೆಗೆ ಇವುಗಳ ಹಾವಳಿ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಏನನ್ನೇ ಕೊಳ್ಳಬೇಕಾದರೂ ಪ್ಯಾಕೆಟ್ ಮೇಲೆ ಯಾವುದು ಎಷ್ಟಿದೆ ಎಂದು ಓದಿದರೆ ಪ್ರಯೋಜನಕಾರಿ. ಸೂಪ್ಸ್, ಸೀರಿಯಲ್ಸ್, ಬಿಸ್ಕೆಟ್, ಚಾಕ್ಲೇಟ್ ಇವುಗಳ ಪ್ಯಾಕೇಟ್ ಮೇಲೆ ನ್ಯೂಟ್ರಿಶನ್ ಎಂಬ ಮಾಹಿತಿಯಲ್ಲಿ ಓಸ್ ಇಂದ ಕೊನೆಗೊಳ್ಳುವ ಎಲ್ಲ ಪದಾರ್ಥಗಳೂ ಸಂಸ್ಕರಿಸಿದ ಸಕ್ಕರೆಯೇ! ಇವುಗಳು ಹೆಚ್ಚಾಗಿ ಇದ್ದಷ್ಟು ದೇಹಕ್ಕೆ ಹಾನಿಕಾರಕ. ಮುಖ್ಯವಾಗಿ ಮಕ್ಕಳಿಗೆ ಮತ್ತು ಡಯಾಬಿಟೀಸ್ ಇರುವವರಿಗೆ ಕೊಡುವ ಆಹಾರವನ್ನು ನೋಡಿ ಪರಿಶೀಲಿಸಿ ಪಡೆದರೆ ವಾಸಿ.
ತಂಪು ಪಾನೀಯಗಳು
ಎಲ್ಲ ತಂಪು ಪಾನೀಯಗಳಲ್ಲಿ ರುಚಿಗೋಸ್ಕರ ಅಧಿಕ ಪ್ರಮಾಣದಲ್ಲಿ ಸಕ್ಕರೆ ಸೇರಿಸಿರುತ್ತಾರೆ. ಅದಕ್ಕೆ ಅವುಗಳನ್ನು ಕುಡಿದಷ್ಟೂ ಇನ್ನು ಹೆಚ್ಚು ಕುಡಿಯಬೇಕು ಎಂದೆನಿಸುತ್ತದೆ. ಇಂಥ ಪಾನೀಯಗಳಲ್ಲಿ ಒಂದು ಗ್ಲಾಸ್ಗೆ 7ರಿಂದ 8 ಚಮದಷ್ಟು ಸಕ್ಕರೆ ಇರುತ್ತದೆ. ಒಂದು ದಿನಕ್ಕೆ ಸೇವಿಸಬೇಕಾದ ಸಕ್ಕರೆ ಒಂದೇ ಗ್ಲಾಸ್ನಲ್ಲಿರುತ್ತದೆ! ಅಮೆರಿಕನ್ ಹಾರ್ಟ್ ಅಸ್ಸೋಸಿಯೆಶನ್ ಪ್ರಕಾರ, ಗಂಡಸರು 9 ಟೀ ಚಮಚ ಮತ್ತು ಹೆಂಗಸರು 6 ಟೀ ಚಮಚದಷ್ಟು ಸಕ್ಕರೆ ದಿನಕ್ಕೆ ಸೇವಿಸಬಹುದು. ಟೀ ಚಮಚವೆಂದರೆ ಚಿಕ್ಕ ಚಮಚ.
ಬೆಲ್ಲಕ್ಕಿಂತ ರುಚಿಯಿಲ್ಲ!
ಸಕ್ಕರೆಗಿಂತ ಬೆಲ್ಲ ಒಳ್ಳೆಯದು. ಮನೆಯಲ್ಲಿ ಸಿಹಿತಿನಿಸು ಮಾಡಬೇಕಿದ್ದರೆ ಬೆಲ್ಲದಲ್ಲಿ ಮಾಡಿ. ಬೆಲ್ಲವನ್ನು ಕಬ್ಬಿಣದ ಬಾಂಡಲೆಗಳಲ್ಲಿ ತಯಾರಿಸುವ ಕಾರಣ, ಇದರಲ್ಲಿ ಕಬ್ಬಿಣಾಂಶ ಹೆಚ್ಚಿರುತ್ತದೆ. ಹಣ್ಣಿನ ರಸಕ್ಕಿಂತ ಹಣ್ಣು ತಿನ್ನೋದೆ ಉತ್ತಮ. ಯಾಕೆ ಅಂದ್ರೆ ಜ್ಯೂಸ್ ಮಾಡುವಾಗ ಅಗತ್ಯಕ್ಕೆ ಬೇಕಿಲ್ಲದ ಸಕ್ಕರೆ ಹಾಕ್ತೀವಿ. ಹಣ್ಣಿನ ನಾರಿನ ಅಂಶವನ್ನು ಶೋಧಿಸಿ ಹೊರಗೆ ಬಿಸಾಡ್ತೀವಿ. ಈ ನಾರಿನ ಜೊತೆ ಹಣ್ಣನ್ನು ಸೇವಿಸಿಬೇಕು.
= ಡಾ. ರೂಪಾ ಶ್ರೀನಿವಾಸನ್