

ಸುಮಧುರ ಜೀವನ ಮನಸ್ತಾಪ- ಖಿನ್ನತೆಗಳಿಂದ ದೂರವಿರುತ್ತದೆ. ಖಿನ್ನತೆ ಮನಸ್ಸಿನ ಆಳಕ್ಕೆ ಇಳಿದರೆ ಸಂಬಂಧದಲ್ಲಿ ಸಮರ ತಪ್ಪಿದ್ದಲ್ಲ. ಇದು ಮಾನಸಿಕವಾಗಿಯೂ ಕೊಲ್ಲುತ್ತದೆ. ದೇಹಾರೋಗ್ಯಕ್ಕೆ ಔಷಧ ಲಭ್ಯವಿದ್ದರೆ, ಮಾನಸಿಕ ನೆಮ್ಮದಿಗೆ ಒಳ್ಳೆಯ ಸಂಬಂಧಗಳೇ ಮದ್ದು.
ಆದರೆ ಅದೇ ಸಂಬಂಧಗಳು ಹಳಸಿದಾಗ, ಮನಸ್ಸಿಗೆ ಹತ್ತಿರವಾದವರೊಂದಿಗೆ ಮನಸ್ತಾಪವಾದರೆ ಪಡುವ ನೋವು ಅಷ್ಟಿಷ್ಟಲ್ಲ. ಅದಕ್ಕಾಗಿ ನಮ್ಮ ಬಾಂಧವ್ಯ ಹಸನಾಗಿರಲು ಕೆಲವು ಎಚ್ಚರಿಕೆ ಅಗತ್ಯ. ನಮ್ಮ ಅಮೂಲ್ಯವಾದ ಸಂಬಂಧಗಳಲ್ಲಿ ಖಿನ್ನತೆ ಸೃಷ್ಟಿಸುವ ಕೆಲವು ಅಂಶಗಳು ಇಲ್ಲಿವೆ...
ಒತ್ತಡ ಸ್ಫೋಟ
ಜೀವನದಲ್ಲಿ ಒತ್ತಡಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಯಾವಾಗಲೂ ಸಂಭವಿಸಿದರೆ ತಾಳ್ಮೆ ಕಳೆಗುಂದುತ್ತದೆ. ಆಗ ಕೋಪದ ಕೈಗೆ ಬುದ್ಧಿ ಕೊಟ್ಟರೆ ಬೇರೊಬ್ಬರ ಮೇಲೆ ಸ್ಫೋಟಗೊಳ್ಳುತ್ತದೆ. ಅದು ಸಂಬಂಧ ಹಳಸಲು ಕಾರಣವಾಗುತ್ತೆ. ಅದಕ್ಕಾಗಿ ಕೋಪವನ್ನು ಹಿಡಿತದಲ್ಲಿ ಇಟ್ಟುಕೊಂಡರೆ ಒಳಿತು.
ಪೊಸೆಸಿವ್ ಮತ್ತು ಕಂಟ್ರೋಲ್
ಇತರರನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಸೂಕ್ತವಲ್ಲ. ನಿಮ್ಮ ಪೊಸೆಸಿವ್ ಗುಣದಿಂದಾಗಿ ಅವರಿಗೆ ಉಸಿರು ಗಟ್ಟಿಸುವಂತೆ ಆಗಬಾರದು. ನಿಮ್ಮ ಅತಿಯಾದ ಕಾಳಜಿ ಹಿಂಸೆಯಾಗುತ್ತದೆ. ಬೇರೆಯವರ ಸ್ನೇಹದಿಂದ ಬೇರ್ಪಡಿಸಲು ಯತ್ನಸುವುದು ಸರಿಯಲ್ಲ. ಸ್ವತಂತ್ರ ಯೋಚಿಸುವ ಬದುಕಲು ಅವಕಾಶ ಮಾಡಿಕೊಡಿ.
ಟೀಕಿಸುವುದು
ಸಂಗಾತಿಯೊಂದಿಗೆ ಬೆರೆಯದೆ ಬರೀ ಅವರಲ್ಲಿ ತಪ್ಪು ಕಾಣುತ್ತ ಬೇರೆಯವರೊಂದಿಗೆ ಹೋಲಿಕೆ ಮಾಡುತ್ತ ಹೀಯಾಳಿಸುವುದು ಸರಿಯಲ್ಲ. ಇದು ಮನಸ್ಸುಗಳಲ್ಲಿ ಒಡಕನ್ನುಂಟು ಮಾಡುತ್ತದೆ. ಅಲ್ಲದೆ, ನಡೆ- ನುಡಿ, ಜೀವನ ಶೈಲಿ, ಆಸಕ್ತಿ ಇತ್ಯಾದಿಗಳ ಮೇಲೆ ಪರಿಣಾಮ ಬೀರಲು ಆರಂಭವಾಗುತ್ತದೆ.
ಹೊಟ್ಟೆಕಿಚ್ಚು ಮತ್ತು ನಂಬಿಕೆ
ಸಂಬಂಧ ಗಟ್ಟಿಯಾಗಿ ಉಳಿಯಲು ನಂಬಿಕೆ ಮುಖ್ಯ. ಹೊಟ್ಟೆಕಿಚ್ಚಿನಿಂದ ನಮ್ಮ ಸಂಗಾತಿಗೆ ಕಡಿವಾಣ ಹಾಕಲು ಹೊರಟರೆ ಬಿರುಕು ಸಹಜ. ನಂಬಿಕೆ ಇಲ್ಲದಿದ್ದರೆ ಸಂಬಂಧಕ್ಕೆ ಯಾವ ಅರ್ಥವೂ ಇರುವುದಿಲ್ಲ. ಹೊಟ್ಟೆಕಿಚ್ಚು ಮತ್ತು ಅಪನಂಬಿಕೆಗಳಿಂದ ಸಂಗಾತಿಯ ಉದ್ಯೋಗ ಹಾಗೂ ಸಾಮಾಜಿಕ ಜೀವನಕ್ಕೆ ಧಕ್ಕೆಯಾಗುತ್ತದೆ.
ವಿಮರ್ಶಾತ್ಮಕ ಗುಣ
ಮನುಷ್ಯ ಸಮಾಜ ಜೀವಿ. ಯಾವತ್ತೂ ಒಡನಾಡಿಗಳಿಂದ ದೂರವಾಗಬಾಗದು. ನಮ್ಮ ಸಂಗಾತಿಯನ್ನು ಪ್ರೀತಿಸುವುದರ ಜೊತೆಗೆ ಅವರ ಬಂಧುಮಿತ್ರರ ಜತೆಗೆ ಸ್ನೇಹ ಬೆಳೆಸಿಕೊಂಡಿರಲಿ. ಸಂಗಾತಿಯ ಬಂಧು ಮಿತ್ರರ ಬಗೆಗೆ ವಿಮರ್ಶೆ ಮಾಡಿದರೆ ಪರಸ್ಪರ ಮಧ್ಯೆ ಅಲ್ಲೂ ವೈರುಧ್ಯ ಬರುತ್ತದೆ.
ಸಮರ್ಥನೆ
ಅನಿಷ್ಟಕ್ಕೆಲ್ಲ ಶನೈಶ್ಚರ ಕಾರಣ ಎನ್ನುವ ಹಾಗೆ ಜೀವನದಲ್ಲಿ ನಡೆಯುವುದಕ್ಕೆಲ್ಲ ನಮ್ಮ ಸಂಗಾತಿ ಕಾರಣ ಆಗುವುದಿಲ್ಲ. ಮತ್ತೆ ತಾವು ಮಾಡಿದ ತಪ್ಪನ್ನೇ ಸರಿ ಎಂದು ಸಮರ್ಥಿಸುತ್ತಾ ಹೊರಟರೆ ಎಂದಿಗೂ ಸಂಬಂಧದಲ್ಲಿ ಸಿಹಿ ಸುಳಿಯದು. ನಮ್ಮ ಸರಿ ತಪ್ಪುಗಳಿಗೆ ನಾವೇ ಹೊಣೆಯಾಗುತ್ತೇವೆ.
ಲಿಂಗ ಭೇದ
ಇದು ಹೆಂಗಸರಿಗೆ ಸಂಬಂಧಪಟ್ಟಿದ್ದು. ಗಂಡಸರು ಹೆಣ್ಣಿಗೆ ಮರ್ಯಾದೆ ಕೊಡಬೇಕು. ಅವರ ಸ್ಥಾನಮಾನ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿಂದ ಹೊರ ಬರಬೇಕು. ಯಾವ ಸಂಬಂಧದಲ್ಲೂ ನಮ್ಮತನ ಬಿಟ್ಟು ಕೊಡಬಾರದು. ಇದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ.
ಸಂಗಾತಿ ಸಂರಕ್ಷಿಸುವುದು...
ನಮ್ಮ ಬಗ್ಗೆ ಚೆನ್ನಾಗಿ ಅರಿತವರು, ಬಂಧು ಮಿತ್ರರು ಜೀವನದಲ್ಲಿ ಸರಿಯಾದುದನ್ನು ಆಯ್ಕೆಮಾಡಲು ಸಲಹೆ ನೀಡುತ್ತಾರೆ. ನಮ್ಮ ಸಂಬಂಧ ಸೂಕ್ತವಲ್ಲ, ಹೋಲುವ ಸಂಗಾತಿಯನ್ನು ಆಯ್ದುಕೊಂಡಿಲ್ಲ ಎಂದಾಗ, ಅದರ ಬಗ್ಗೆ ಎಚ್ಚರ ವಹಿಸಿ ಸಂಗಾತಿಯಲ್ಲಿರುವ ಅಲ್ಪಾಂಶಗಳನ್ನು ಸರಿಪಡಿಸಲೆತ್ನಿಸಬೇಕು.
ಸಂಬಂಧ ಸುಮಧುರವಾಗಿರಲಿ
ಸಂಬಂಧದ ಬಗ್ಗೆ ಅನುಮಾನಿಸುವುದು ಒಳಿತಲ್ಲ. ಸಂಬಂಧದಲ್ಲಿ ಒಬ್ಬರಿಂದ ಮಾತ್ರ ಪ್ರೀತಿ, ವಾತ್ಸಲ್ಯ, ಸಮಯ, ಗೌರವ, ನಂಬಿಕೆ ಇತ್ಯಾದಿಗಳು ಹರಿದುಬಂದರೆ ಪ್ರಯೋಜನವಿಲ್ಲ. ಒಬ್ಬರಿಗೊಬ್ಬರು ಎಲ್ಲ ಭಾವನೆಗಳನ್ನು ಹಂಚಿಕೊಂಡು ಮುನ್ನಡೆಯಬೇಕು.
ಸುಳ್ಳು ಹೇಳಿಕೆ
ಸಂದರ್ಭಕ್ಕೆ ಅನುಗುಣವಾಗಿ ಬರೀ ಸುಳ್ಳು ಹೇಳುತ್ತಾ ಸಾಗಿದರೆ ಒಂದು ಅವಮಾನಕ್ಕೆ ಒಳಗಾಗುವುದು ನಿಶ್ಚಿತ. ಕೊನೆಗೆ ಯಾರ ನಂಬಿಕೆಯೂ ಗಳಿಸಲಾಗದು. ಇದನ್ನೇ ತೀರಾ ಹತ್ತಿದವರೂ ನಂಬಿದರೆ ಅದೆಷ್ಟೋ ವರ್ಷಗಳ ಸ್ನೇಹ ಸಂಬಂಧ ಹಾಳಾಗುತ್ತದೆ. ಆಗ ಖಿನ್ನತೆಗೆ ಒಳಗಾಗುವುದರಲ್ಲಿ ಅನುಮಾನವಿಲ್ಲ.
= ತೇಜಸ್ವಿನಿ