ವ್ಯಾಯಾಮ ಮಾರ್ಗ

ಈ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿಯೇ ಕುಗ್ಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು ...
ವ್ಯಾಯಾಮ ಮಾರ್ಗ
Updated on: 

ಈ ಒತ್ತಡದ ಬದುಕಿನಲ್ಲಿ ಆರೋಗ್ಯದ ಬಗ್ಗೆ ಕಾಳಜಿಯೇ ಕುಗ್ಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಫಿಟ್ನೆಸ್ ಬಗ್ಗೆ ಗಮನ ಹರಿಸುವುದು ಕಡಿಮೆ. ಆದರೆ, ಯಾರಾದರೂ ಸಪೂರಾ ಹೆಂಗಸು ಕಣ್ಮುಂದೆ ಬಂದರೆ ನಮ್ಮೊಳಗೆ ಹೊಟ್ಟೆಕಿಚ್ಚು ನುಸುಳುತ್ತದೆ. ನಾನೇನು ಕಡಿಮೆ ಇದ್ದೇನೆಯೇ? ಸ್ವಲ್ಪ ತೂಕ ಜಾಸ್ತಿ ಅಷ್ಟೇ ಅನ್ಕೊಂಡು ನಾಳೆಯಿಂದಲೇ ಜಿಮ್‌ಗೋ, ಪಾರ್ಕ್‌ಗೋ ಹೋಗಿ ವ್ಯಾಯಾಮ ಮಾಡೋಣ ಎಂದು ಕೊಳ್ಳುತ್ತಾರೆ. ಆದರೆ, ಮರುದಿನ ಯಥಾಪ್ರಕಾರ ಅದೇ ರೂಟಿನ್ ಬದುಕು ಶುರು. ಮನೆ ಮತ್ತು ಕಚೇರಿ ಕೆಲಸದಲ್ಲಿ ಮುಳುಗಿ ಬಿಡುತ್ತಾರೆ. ವ್ಯಾಯಾಮ ಪ್ರತಿಜ್ಞೆ ತನ್ನಷ್ಟಕ್ಕೆ ತಾನೇ ಸುಮ್ಮನಾಗುತ್ತದೆ. ಹಾಗಾದರೆ, ಏನು ಮಾಡಬೇಕು? ಮನೆಯಲ್ಲಿದ್ದಾಗಲೇ ಸಿಂಪಲ್ ಆಗಿರುವ ವ್ಯಾಯಾಮ ಮಾಡಿದರೂ ಸಾಕು. ನಿಮ್ಮ ದೇಹ ನಿಮ್ಮ ಮಾತು ಕೇಳುತ್ತದೆ. ಇದಕ್ಕಾಗಿ ಇಲ್ಲಿವೆ ಒಂದಿಷ್ಟು ಸಿಂಪಲ್ಲಾಗಿರುವ ಮಾರ್ಗಗಳು...
ಸಾಮಾನ್ಯವಾಗಿ ಅಟ್ಟದ ಮೇಲೆ ಹೋಗಲು ಮೆಟ್ಟಿಲು ಇದ್ದೇ ಇರುತ್ತವೆ. ಇವೇ ನಿಮ್ಮ ವ್ಯಾಯಾಮ ಸಲಕರಣೆ ಅಂದುಕೊಳ್ಳಿ. ಒಂದು ಮೆಟ್ಟಿಲು ಹತ್ತಿ. ಮತ್ತೆ ಕೆಳಗಿಳಿಯಿರಿ. ಮತ್ತೆ ಹತ್ತಿ, ಮತ್ತೆ ಇಳಿರಿ. ಹೀಗೆ ಸುಮಾರು ಸಲ ಮಾಡಿ. ಎರಡನೇ ಮೆಟ್ಟಿಲು ಹತ್ತಿ ಅಲ್ಲಿಂದ ಮೊದಲ ಮೆಟ್ಟಿಲಿಗೆ ಇಳಿಯಿರಿ. ಇದನ್ನೇ ಪುನರಾವರ್ತಿಸಿ. ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ, ಇಳಿಯುತ್ತಾ ಇರಿ. ನಿಮಗೆ ದಣಿವಾದರೆ ಸ್ವಲ್ಪ ಸುಧಾರಿಸಿಕೊಂಡು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪುನರಾವರ್ತಿಸಿ. ಇದರಿಂದ ದೇಹದ ಅನಗತ್ಯ ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು.
ಬಕೆಟ್ ಅನ್ನೂ ನೀವು ವ್ಯಾಯಾಮ ಸಾಧನವಾಗಿಸಿಕೊಳ್ಳಬಹುದು! ಆದರೆ, ಅದು ಬಟ್ಟೆಯಿಂದ ತುಂಬಿರಬೇಕು. ಮನೆಯಲ್ಲಿ ವಾಷಿಂಗ್ ಮಷೀನ್ ಇರಲಿ ಬಿಡಲಿ. ಹೇಗಿದ್ದರೂ ತೊಳೆಯೋ ಬಟ್ಟೆಗಳನ್ನು ಬಕೆಟ್‌ಗೆ ಹಾಕಲೇಬೇಕು ಮತ್ತು ಆ ಬಕೆಟ್ ತೂಕದ್ದಾಗಿರುತ್ತದೆ. ಇದರಿಂದ ಯಾವ ರೀತಿ ವ್ಯಾಯಾಮ ಮಾಡಬಹುದು ಅಂದರೆ, ಬಟ್ಟೆಗಳಿಂದ ತುಂಬಿರುವ ಬಕೆಟ್ ಅನ್ನು ನಿಮ್ಮ ತಲೆಯ ಮೇಲೆ ಹಿಡಿದುಕೊಂಡು ಮೇಲೆ ಕೆಳಗೆ ಮಾಡಿ. ಕನಿಷ್ಠ ಮೂರು ಸಲ ಮಾಡಬೇಕು. ಬಕೆಟ್ ತೂಕ ಹೆಚ್ಚೆನಿಸಿದರೆ ಅದರೊಳಗಿನ ಸ್ವಲ್ಪ ಬಟ್ಟೆ ತೆಗೆಯಬಹುದು. ಮತ್ತೆ ಕೈಗೆ ಶಕ್ತಿ ನೀಡುವ ಈ ವ್ಯಾಯಾಮವನ್ನು ನಿರಂತರವಾಗಿ ಮಾಡಿದರೆ ಒಳ್ಳೆಯದು.
ನಿಮ್ಮ ನೆಚ್ಚಿನ ಧಾರಾವಾಹಿ ನೋಡವಾಗಲೂ ವ್ಯಾಯಾಮ ಮಾಡಬಹುದು ಗೊತ್ತಾ? ಧಾರಾವಾಹಿ ಅಂದ ಮೇಲೆ ಮಧ್ಯ ಜಾಹೀರಾತಿನ ವಿರಾಮ ಇದ್ದೇ ಇರುತ್ತೆ ಅಲ್ವಾ? ಆ ವೇಳೆ ಒಂದಿಷ್ಟು ವ್ಯಾಯಾಮ ಮಾಡಿದ್ರೂ ಆಯಿತು. ಆಗ ಕೂತೇಳುವುದು, ಪುಶ್‌ಅಪ್ಸ್, ಜಂಪಿಂಗ್ಸ್ ಜಾಕ್ಸ್ ಥರ ಸಿಂಪಲ್ಲಾಗಿರುವ ವ್ಯಾಯಾಮ ಮಾಡಬಹುದು. ಬ್ರೆಕ್ ಬಂದಾಗಲೆಲ್ಲ ಹೀಗೆ ಮಾಡಿದರೆ ನಿಮ್ಮ ವ್ಯಾಯಾಮ ಆಯಿತು, ನೆಚ್ಚಿನ ಧಾರಾವಾಹಿ ನೋಡಿದಂಗೂ ಆಯಿತು!
ಎಂಥ ಚಿಕ್ಕ ಮನೆಯಾದ್ರೂ ಸ್ವಲ್ಪವಾದರೂ ಜಾಗ ಇದ್ದೇ ಇರುತ್ತದೆ. ಇನ್ನೂ ದೊಡ್ಡ ಮನೆಯಾದ್ರೆ ತೊಂದರೆ ಇಲ್ಲ. ಬೆಳಗ್ಗೆ ನಿಮಗೆ ಜಾಗಿಂಗ್ ಅಥವಾ ವಾಕ್ ಮಾಡುವುದು ಸಾಧ್ಯವಾಗದಿದ್ದರೆ ಮನೆಯಲ್ಲಿ ವಾಕ್ ಥರ ಮಾಡಬಹುದು. ಒಂದಿಷ್ಟು ಹೊತ್ತು ನಡೆದಾಡಬಹುದು. ಇದು ಕೂಡಾ ನಿಮ್ಮ ಆರೋಗ್ಯಕ್ಕೆ ಒಂದಿಷ್ಟು ಲಾಭ ತಂದುಕೊಡಬಲ್ಲದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com