

ಇಸುಬು ಸಾಮಾನ್ಯ ಚರ್ಮರೋಗ. ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಆದರೂ ಚಿಕ್ಕಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಮತ್ತು ಮತ್ತೊಬ್ಬ ವ್ಯಕ್ತಿಯಲ್ಲಿಯೂ ಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಇಸುಬು, ಒಣಗಿದ ಕೆಂಪು ಕಲೆಯ ರೀತಿಯಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಇದರ ಮುಖ್ಯ ಲಕ್ಷಣ ಎಂದರೆ ಕಡಿತ ಅಥವಾ ತುರಿಕೆ.
ಇಸುಬು ದೇಹದ ಯಾವ ಭಾಗದಲ್ಲಾದರೂ ಆಗಬಹುದು. ಆದರೆ, ಚಿಕ್ಕ ಮಕ್ಕಳಲ್ಲಿ ಇದು ಹಣೆ, ಕೆನ್ನೆ, ಕೈಯ ಮೇಲ್ಭಾಗ, ಕಾಲು, ತಲೆ ಮತ್ತು ಕುತ್ತಿಗೆಯ ಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಸ್ವಲ್ಪ ದೊಡ್ಡ ಮಕ್ಕಳು ಹಾಗೂ ವಯಸ್ಕರಲ್ಲಿ ಇದು ಮುಖ, ಕುತ್ತಿಗೆ, ಮೊಣಕೈಯ ಒಳಭಾಗ, ಮೊಣಕಾಲುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಬಿರುಸಿನ ಅಥವಾ ಒರಟಾದ ವಸ್ತುಗಳು ಚರ್ಮದ ಜೊತೆಗೆ ಸಂಪರ್ಕಕ್ಕೆ ಬಂದಾಗ ಕಡಿತ ಬರಬಹುದು. ಮತ್ತೆ ಕೆಲವರಲ್ಲಿ ಮೈ ಬಿಸಿ ಜಾಸ್ತಿಯಾದಾಗ ಅಥವಾ ದೇಹ ವಿಪರೀತ ಬೆವರಿದಾಗ, ಮತ್ತಿತರ ಕೆಲವರಲ್ಲಿ ಸೋಪ್, ಡಿಟರ್ಜೆಂಟ್‌ಗಳು, ತಾಜಾ ಹಣ್ಣಿನ ರಸದ ಪಾನೀಯಗಳು, ಮಾಂಸ ಪ್ರಾಣಿಗಳ ಜೊಲ್ಲು ಹೀಗೆ ಹಲವು ಭಿನ್ನ ರೀತಿಯ ವಸ್ತುಗಳು ಬೇರೆ ಬೇರೆಯವರಲ್ಲಿ ತುರಿಕೆಗೆ ಕಾರಣವಾಗುತ್ತದೆ. ಮತ್ತೆ ಕೆಲವರಲ್ಲಿ ಶೀತ, ಥಂಡಿ, ಮತ್ತಿತರ ಹಲವರಲ್ಲಿ ವಿವಿಧ ರೀತಿಯ ಮಾನಸಿಕ ಒತ್ತಡಗಳು ಕಡಿತದ ಲಕ್ಷಣವನ್ನು ಉಂಟು ಮಾಡಬಲ್ಲದು.
ಚಿಕಿತ್ಸೆಯುಂಟು...
ಇಸುಬು ಚಿಕಿತ್ಸೆಗೆ ಮೊದಲ ಆದ್ಯತೆ ಎಂದರೆ ಚರ್ಮವನ್ನು ಉಜ್ಜುವುದನ್ನು ನಿಲ್ಲಿಸುವುದು. ಚರ್ಮವನ್ನು ಆದಷ್ಟು ಹಸಿ ಅಥವಾ ಒದ್ದೆಯಾಗಿಸುವ ಕ್ರೀಂ ಅಥವಾ ವ್ಯಕ್ತಿಯ ಮೈ ನೀರಿನಿಂದ ಹಸಿಯಾಗಿರುವುದರಿಂದ, ಸ್ನಾನವಾಗಿ 3 ನಿಮಿಷಗಳ ಒಳಗೆ ಕ್ರೀಂಗಳನ್ನು ಹಚ್ಚಬೇಕು. ಕೆಲವೊಮ್ಮೆ ತಣ್ಣೀರಿನ ಬಟ್ಟೆ ಆ ಜಾಗದ ಮೇಲಿಡುವುದರಿಂದಲೂ ಅನುಕೂಲವಾಗುತ್ತದೆ. ಕಡಿತ ಕಡಿಮೆಗೊಳಿಸುವ ಮತ್ತೊಂದು ಔಷಧ ಎಂದರೆ ಹಿಸ್ಟಮೀನ್ ನಿರೋಧಕಗಳು. ಆ್ಯಂಟಿ ಬಯಾಟಿಕ್‌ಗಳನ್ನು ಕೊಡಬೇಕಾಗುತ್ತದೆ. ಕೆಲವು ರೋಗಿಗಳಲ್ಲಿ ವೈದ್ಯರು ಫೋಟೋ ಥೆರಪಿ ಚಿಕಿತ್ಸೆಯನ್ನೂ ಬಳಸುತ್ತಾರೆ.
-ಡಾ. ಎಚ್.ಎಸ್. ಮೋಹನ್, ಸಾಗರ